ಐತ್ತೂರು ಗ್ರಾ.ಪಂ. ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ ಪ್ರಕರಣ

0

ಬಿಜೆಪಿಯ ಕುಟಿಲ ರಾಜಕಾರಣ ನಾಚಿಕೆಗೇಡು: ಕಾಂಗ್ರೆಸ್ ಬ್ಲಾಕ್‌


ಇನ್ನಿಬ್ಬರು ಕಾಂಗ್ರೆಸ್ ಬೆಂಬಲಿತ ಸದಸ್ಯರ ಉಚ್ಚಾಟನೆ: ಸುಧೀರ್‌ ಕುಮಾರ್‌ ಶೆಟ್ಟಿ

ಕಡಬ: ಐತ್ತೂರು ಗ್ರಾ.ಪಂ.ನ ಅಧ್ಯಕ್ಷಯಾಗಿದ್ದ ಶ್ಯಾಮಲಾ ಅವರನ್ನು ಅವಿಶ್ವಾಸ ನಿರ್ಣಯದ ಮೂಲಕ ಪದಚ್ಯುತಿಗೊಳಿಸಿದ ಬಿಜೆಪಿಯ ಮಹಿಳಾ ವಿರೋಧಿ ಕುಟಿಲ ರಾಜಕಾರಣ ನಾಚಿಕೆಗೇಡು ಎಂದು ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಹೇಳಿದ್ದಾರೆ.


ಅವರು ಗುರುವಾರ ಕಡಬದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿದ್ದ ತನ್ನ ಅಪರೇಶನ್ ಕಮಲ ಕಾರ್ಯಾಚರಣೆಯನ್ನು ಗ್ರಾಮ ಮಟ್ಟಕ್ಕೂ ಇಳಿಸಿರುವ ಬಿಜೆಪಿ ಪಕ್ಷವು ಕಾಂಗ್ರೆಸ್ ಬೆಂಬಲಿತರನ್ನು ಆಮಿಷ ನೀಡಿ ಸೆಳೆದುಕೊಂಡು ಹಿಂದುಳಿದ ಬಿ ವರ್ಗದ ಮೀಸಲಾತಿಯಲ್ಲಿ ಗೆದ್ದು ಗ್ರಾ.ಪಂ.ನಲ್ಲಿ ಸಾಂವಿಧಾನಿಕವಾಗಿ ಅಧ್ಯಕ್ಷ ಸ್ಥಾನವನ್ನು ಪಡೆದಿದ್ದ ಮಹಿಳೆಯನ್ನು ಒಳಸಂಚು ನಡೆಸಿ ಕೆಳಗಿಳಿಸಿ ತನ್ನ ನೀಚ ರಾಜಕೀಯವನ್ನು ತೋರಿಸಿದೆ. ಮಹಿಳೆಯರನ್ನು ಮಾತೆ ಎಂದು ವೇದಿಕೆಯಲ್ಲಿ ಕರೆಯುವ ಬಿಜೆಪಿಯವರು ತನ್ನ ರಾಜಕೀಯ ತೀಟೆ ತೀರಿಸಲು ಅವಧಿ ಮುಗಿಯಲು ಕೇವಲ 4 ತಿಂಗಳು ಇರುವ ಸಂದರ್ಭದಲ್ಲಿ ಹಿಂದುಳಿದ ವರ್ಗದ ಮಹಿಳೆಯನ್ನು ಅಧ್ಯಕ್ಷ ಸ್ಥಾನದಿಂದ ವಂಚಿತಗೊಳಿಸುವ ಮೂಲಕ ಮಹಿಳೆಯರಿಗೆ ಘೋರ ಅಪಮಾನ ಮಾಡಿದೆ ಎಂದು ಅವರು ದೂರಿದರು. ಐತ್ತೂರು ಗ್ರಾ.ಪಂ.ಗೆ ಕಾಂಗ್ರೆಸ್ ಬೆಂಬಲಿತರಾಗಿ ಸರ್ಧಿಸಿ ಜಯಗಳಿಸಿದ್ದ ಮನಮೋಹನ ಗೋಳ್ಯಾಡಿ, ಈರೇಶ್ ಗೌಡ ಹಾಗೂ ಪ್ರೇಮಾ ಅವರು ಅಧ್ಯಕ್ಷರ ಪದಚ್ಯುತಿ ಪ್ರಕರಣದಲ್ಲಿ ಪಕ್ಷದ ಸೂಚನೆಯನ್ನು ದಿಕ್ಕರಿಸಿ ಪಕ್ಷಕ್ಕೆ ದ್ರೋಹ ಎಸಗಿದ್ದಾರೆ. ಅವರು ಸಾಧ್ಯವಿದ್ದರೆ ತಮ್ಮ ಗ್ರಾ.ಪಂ. ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಬಿಜೆಪಿ ಜೊತೆ ಗುರುತಿಸಿಕೊಂಡು ಗ್ರಾ.ಪಂ.ಗೆ ಸ್ಪರ್ಧಿಸಿ ತಮ್ಮ ತಾಕತ್ತು ತೋರಿಸಬೇಕಿತ್ತು. ಅದನ್ನು ಬಿಟ್ಟು 30 ತಿಂಗಳ ಅಧಿಕಾರಾವಧಿಯಲ್ಲಿ 26 ತಿಂಗಳು ಈಗಾಗಲೇ ಕಳೆದಿದ್ದು, ಕೊನೆಯ 4 ತಿಂಗಳು ಇರಬೇಕಾದರೆ ಬಿಜೆಪಿಯವರ ಜೊತೆ ಸೇರಿಕೊಂಡು ಮಹಿಳೆಯೊಬ್ಬರನ್ನು ಅಧಿಕಾರದಿಂದ ಕೆಳಗಿಳಿಸಿರುವುದನ್ನು ಖಂಡಿತವಾಗಿಯೂ ಗ್ರಾಮದ ಜನರು ಕ್ಷಮಿಸುವುದಿಲ್ಲ. ಪಕ್ಷ ವಿರೋಧಿ ಚಟುವಟಿಕೆಯ ಹಿನ್ನೆಲೆಯಲ್ಲಿ ಮನಮೋಹನ ಗೋಳ್ಯಾಡಿ ಅವರನ್ನು ಈ ಹಿಂದೆಯೇ ಕಾಂಗ್ರೆಸ್‌ನಿಂದ ಉಚ್ಚಾಟಿಸಲಾಗಿದೆ. ಅವಿಶ್ವಾಸ ಗೊತ್ತುವಳಿಯ ಸಂದರ್ಭ ಪಕ್ಷದ ಸೂಚನೆಯನ್ನು ದಿಕ್ಕರಿಸಿರುವ ಕಾಂಗ್ರೆಸ್ ಬೆಂಬಲಿತ ಗ್ರಾ.ಪಂ. ಸದಸ್ಯರಾದ ಈರೇಶ್ ಗೌಡ ಹಾಗೂ ಪ್ರೇಮಾ ಅವರನ್ನು ಮುಂದಿನ 6 ವರ್ಷಗಳ ಅವಧಿಗೆ ಉಚ್ಚಾಟಿಸಲಾಗುವುದು ಎಂದು ಸುಧೀರ್‌ಕುಮಾರ್ ಶೆಟ್ಟಿ ತಿಳಿಸಿದರು.

ಡಿಸಿಸಿ ಸದಸ್ಯ ಬಾಲಕೃಷ್ಣ ಗೌಡ ಬಳ್ಳೇರಿ ಅವರು ಮಾತನಾಡಿ ಈ ಹಿಂದೆ ಐತ್ತೂರು ಗ್ರಾ.ಪಂ.ನಲ್ಲಿ ಬಿಜೆಪಿ ಬೆಂಬಲಿತ ಆಡಳಿತ ಮಂಡಳಿ ನಡೆಸಿದ ಅವ್ಯವಹಾರಗಳ ವಿರುದ್ಧ ಲೋಕಾಯುಕ್ತ ಸೇರಿದಂತೆ ಹಲವು ಕಡೆ ತನಿಖೆಗಳು ನಡೆಯುತ್ತಿದ್ದು, ಅವ್ಯವಹಾರ ನಡೆಸಿದವರ ಪರವಾಗಿ ತೀರ್ಪು ಬರಲು ಗ್ರಾ.ಪಂ. ಅಧ್ಯಕ್ಷೆ ಶ್ಯಾಮಲಾ ಸಹಕರಿಸದ ಕಾರಣದಿಂದಾಗಿ ಅವರನ್ನು ಪದಚ್ಯುತಿಗೊಳಿಸಲಾಗಿದೆ ಎಂದು ಆರೋಪಿಸಿದರು. ಡಿಸಿಸಿ ಕಾರ್ಯದರ್ಶಿ ಸೈಮನ್ ಸಿ.ಜೆ. ಮಾತನಾಡಿ ಕಳಂಕರಹಿತ ಆಡಳಿತ ನೀಡಿರುವ ಶ್ಯಾಮಲಾ ಅವರನ್ನು ಪದಚ್ಯುತಿಗೊಳಿಸುವ ಮೂಲಕ ಬಿಜೆಪಿ ತಾನು ಭ್ರಷ್ಟಚಾರಿಗಳ ಪರ ಎಂದು ಒಪ್ಪಿಕೊಂಡಂತಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಪ್ರಮುಖರಾದ ಸುಧೀರ್ ದೇವಾಡಿಗ ದೇರಾಜೆ, ಸುಬ್ರಹ್ಮಣ್ಯ ಐತ್ತೂರು ಉಪಸ್ಥಿತರಿದ್ದರು.


LEAVE A REPLY

Please enter your comment!
Please enter your name here