ಮಾಡನ್ನೂರು ಸ್ವಲಾತ್ ಮಜ್ಲಿಸ್ ವಾರ್ಷಿಕೋತ್ಸವ, ಮೂರು ದಿನಗಳ ಮತ ಪ್ರಭಾಷಣ ಸಮಾರೋಪ
ಆಧ್ಯಾತ್ಮಿಕ ಮಜ್ಲಿಸ್‌ಗಳಿಂದ ಮನಪರಿವರ್ತನೆ ಸಾಧ್ಯ-ಪುತ್ತೂರು ತಂಙಳ್

0

ಪುತ್ತೂರು: ಮಾಡನ್ನೂರು ಮಸೀದಿಯಲ್ಲಿ ವಾರಕ್ಕೊಮ್ಮೆ ನಡೆಸಿಕೊಂಡು ಬರುವ ಸ್ವಲಾತ್ ಮಜ್ಲಿಸ್‌ನ ವಾರ್ಷಿಕೋತ್ಸವ ಫೆ.7ರಿಂದ ಫೆ.9ರ ವರೆಗೆ ಧಾರ್ಮಿಕ ಪ್ರವಚನದೊಂದಿಗೆ ಮಾಡನ್ನೂರು ಶಹೀದಿಯಾ ನಗರದಲ್ಲಿ ನಡೆಯಿತು.

ಫೆ.9ರಂದು ಮಗ್ರಿಬ್ ನಮಾಜಿನ ಬಳಿಕ ಪುತ್ತೂರು ಕೇಂದ್ರ ಜುಮಾ ಮಸೀದಿ ಖತೀಬ್ ಸಯ್ಯದ್ ಅಹ್ಮದ್ ಪೂಕೋಯ ತಂಙಳ್ ಪುತ್ತೂರು ನೇತೃತ್ವದಲ್ಲಿ ಸ್ವಲಾತ್ ವಾರ್ಷಿಕ ಮಜ್ಲಿಸ್ ಹಾಗೂ ಪ್ರಾರ್ಥನೆ ನಡೆಯಿತು. ನೂರಾರು ಮಂದಿ ಮಜ್ಲಿಸ್‌ನಲ್ಲಿ ಭಾಗಿಯಾಗಿದ್ದರು.

ನಂತರ ನಡೆದ ಧಾರ್ಮಿಕ ಮತ ಪ್ರಭಾಷಣ ವೇದಿಕೆಯಲ್ಲಿ ಮಾತನಾಡಿದ ಸಯ್ಯದ್ ಅಹ್ಮದ್ ಪೂಕೋಯ ತಂಙಳ್ ಮಾತನಾಡಿ ಆಧ್ಯಾತ್ಮಿಕ ಮಜ್ಲಿಸ್‌ಗಳು ನಮ್ಮ ಆತ್ಮಕ್ಕೆ ಬಲ ನೀಡುವ ಮಜ್ಲಿಸ್‌ಗಳಾಗಿದ್ದು ಇದರಲ್ಲಿ ಹೆಚ್ಚು ಭಾಗವಹಿಸುವ ಮೂಲಕ ಮನಶಾಂತಿ ಪಡೆಯಬಹುದು ಎಂದು ಹೇಳಿದರು. ಆಧುನಿಕತೆಯ ಗುಂಗಿನಲ್ಲಿ ಮುಳುಗಿರುವ ಮನುಷ್ಯರು ಸುಖವನ್ನೇ ಬಯಸಿ ಹೋಗುತ್ತಿದ್ದು ಕುಟುಂಬ ಸಂಬಂಧ, ಆತ್ಮೀಯತೆ ದೂರವಾಗುತ್ತಿದೆ, ಇಂತಹ ಸಂದರ್ಭದಲ್ಲಿ ಇಂತಹ ಮಜ್ಲಿಸ್‌ಗಳಲ್ಲಿ ಭಾಗವಹಿಸಿದರೆ ಮನ ಪರಿವರ್ತನೆ ಆಗಿ ನಮ್ಮ ಜೀವನವನ್ನು ನೈತಿಕತೆಯೊಂದಿಗೆ ಜೀವಿಸಲು ಸಾಧ್ಯ ಎಂದು ಅವರು ಹೇಳಿದರು.

ಕುಟುಂಬ ಜೀವನ ಚೆನ್ನಾಗಿದ್ದರೆ ನೆಮ್ಮದಿ-ಸಲೀಂ ವಾಫಿ
ಖ್ಯಾತ ಮೋಟಿವೇಶನ್ ಭಾಷಣಗಾರ ಅಬ್ದುಲ್ ಸಲೀಂ ವಾಫಿ ಕೋಝಿಕ್ಕೋಡ್ ಮಾತನಾಡಿ ಕುಟುಂಬ ಜೀವನ ಚೆನ್ನಾಗಿದ್ದರೆ ಮಾತ್ರ ನೆಮ್ಮದಿ ಸಿಗಲು ಸಾಧ್ಯ. ಕುಟುಂಬ ಜೀವನ ಚೆನ್ನಾಗಿರಬೇಕಾದರೆ ಕುಟುಂಬದ ಸದಸ್ಯರು ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಬೇಕು, ಪತಿ-ಪತ್ನಿ, ಹೆತ್ತವರು-ಮಕ್ಕಳು ಹೀಗೆ ಕುಟುಂಬದಲ್ಲಿ ಸಂಬಂಧ ಚೆನ್ನಾಗಿದ್ದರೆ ಎಲ್ಲವೂ ಚೆನ್ನಾಗಿರಲು ಸಾಧ್ಯ ಎಂದು ಹೇಳಿದರು.

ಮಾಡನ್ನೂರಿನಲ್ಲಿ ಧಾರ್ಮಿಕ ಚೈತನ್ಯ ಬಲಗೊಂಡಿದೆ-ಹನೀಫ್ ಹುದವಿ
ನೂರುಲ್ ಹುದಾದ ಪ್ರಾಂಶುಪಾಲ ಅಡ್ವೊಕೇಟ್ ಹನೀಫ್ ಹುದವಿ ಮಾತನಾಡಿ ಮಾಡನ್ನೂರಿನಲ್ಲಿ ಧಾರ್ಮಿಕ ಚೈತನ್ಯ ಬಲಗೊಂಡಿದ್ದು ಇಲ್ಲಿನ ಜನತೆಯ ಆವೇಶವೇ ಯಶಸ್ಸಿನ ಗುಟ್ಟಾಗಿದೆ. ಮುಂದಕ್ಕೂ ಇದೇ ರೀತಿ ಮುಂದುವರಿಯಬೇಕು ಎಂದು ಅವರು ಹೇಳಿದರು.

ಸಹಕಾರವೇ ಯಶಸ್ಸಿಗೆ ಕಾರಣ-ಸಿರಾಜುದ್ದೀನ್ ಫೈಝಿ
ಮಾಡನ್ನೂರು ಜುಮಾ ಮಸೀದಿಯ ಖತೀಬ್ ಸಿರಾಜುದ್ದೀನ್ ಫೈಝಿ ಮಾತನಾಡಿ ಜಮಾಅತ್ ಕಮಿಟಿಯವರ ಪರಿಶ್ರಮ, ಜಮಾಅತರ, ಊರಿನ ಜನತೆಯ ಸಹಕಾರ ಫಲವಾಗಿ ಮಾಡನ್ನೂರಿನಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳು ಯಶಸ್ಸು ಕಾಣುತ್ತದೆ ಎಂದು ಹೇಳಿದರು.

ಮಾಡನ್ನೂರು ಮಸೀದಿಯ ಅಧ್ಯಕ್ಷ ಇಸ್ಮಾಯಿಲ್ ಹಾಜಿ ನೆಕ್ಕರೆ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಸಯ್ಯದ್ ಬುರ್ಹಾನ್ ಅಲೀ ತಂಙಳ್, ನೂರುಲ್ ಹುದಾದ ಅಧ್ಯಕ್ಷ ಬುಶ್ರಾ ಅಬ್ದುಲ್ ಅಝೀಝ್, ಮಾಡನ್ನೂರು ಮಸೀದಿಯ ಪ್ರ.ಕಾರ್ಯದರ್ಶಿ ಎಂ.ಡಿ ಹಸೈನಾರ್, ಉಪಾಧ್ಯಕ್ಷ ಬಿ.ಎಂ ಖಾಲಿದ್, ಕೋಶಾಧಿಕಾರಿ ಎಂ.ಡಿ ಮೊಯಿದು, ನಿವೃತ್ತ ಎಎಸ್ಸೈ ಎಂ.ಡಿ ಹಸೈನಾರ್, ಉದ್ಯಮಿ ಹಾಜಿ ಅಬೂಬಕ್ಕರ್ ಮಂಗಳಾ, ಮಹಮೂದ್ ಮುಸ್ಲಿಯಾರ್, ಅಮೀರ್ ಅರ್ಶದಿ, ಇಬ್ರಾಹಿಂ ಝುಹ್‌ರಿ, ಇಬ್ರಾಹಿಂ ಸಅದಿ, ಶಾಹುಲ್ ಹಮೀದ್ ಫೈಝಿ, ಅಬೂಬಕ್ಕರ್ ಮುಸ್ಲಿಯಾರ್, ಶುಕೂರ್ ದಾರಿಮಿ, ನಿಝಾರ್ ಯಮಾನಿ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು. ಮಾಡನ್ನೂರು ನೂರುಲ್ ಹುದಾದ ಮ್ಯಾನೇಜರ್ ಖಲೀಲುರ್ರಹ್ಮಾನ್ ಅರ್ಶದಿ ಕೋಲ್ಪೆ ಸ್ವಾಗತಿಸಿ ವಂದಿಸಿದರು.

ಅನ್ನದಾನ ವ್ಯವಸ್ಥೆ:
ಜಮಾಅತಿನ ಎಲ್ಲ ಮನೆಗಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮಾಡಲಾಯಿತು. ಅದೇ ರೀತಿ ರಾತ್ರಿ ಸಾರ್ವಜನಿಕ ಅನ್ನದಾನ ನಡೆಯಿತು.

ದಫ್, ಬುರ್ದಾ, ಫ್ಲವರ್ ಶೋ:
ಹಿರಿಯರ ವಿಭಾಗದಿಂದ ದಫ್ ನಡೆಯಿತು. ಮದರಸ ವಿದ್ಯಾರ್ಥಿಗಳಿಂದ ಸ್ಕೌಟ್, ಬುರ್ದಾ ಮಜ್ಲಿಸ್ ಹಾಗೂ ಫ್ಲವರ್ ಶೋ ನಡೆಯಿತು.

ಉದ್ಘಾಟನಾ ಸಮಾರಂಭ:
ಫೆ.7ರಂದು ಮಗ್ರಿಬ್ ನಮಾಜಿನ ಬಳಿಕ ದರ್ಗಾ ಝಿಯಾರತ್‌ನೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು. ದರ್ಗಾ ಝಿಯಾರತ್‌ಗೆ ನೇತೃತ್ವ ನೀಡಿದ ನೂರುಲ್ ಹುದಾ ಅಕಾಡೆಮಿಯ ಉಪಪ್ರಾಂಶುಪಾಲರಾದ ಸಯ್ಯದ್ ಬುರ್ಹಾನ್ ತಂಙಳ್ ಅವರು ಮತ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ದುವಾ ನೆರವೇರಿಸಿದರು. ನೂರುಲ್ ಹುದಾದ ಅಧ್ಯಕ್ಷ ಬುಶ್ರಾ ಅಬ್ದುಲ್ ಅಝೀಝ್ ಅಧ್ಯಕ್ಷತೆ ವಹಿಸಿದ್ದರು. ಸ್ಥಳೀಯ ಖತೀಬ್ ಸಿರಾಜುದ್ದೀನ್ ಫೈಝಿ ಪ್ರಾಸ್ತಾವಿಕ ಭಾಷಣ ಮಾಡಿದರು. ಖ್ಯಾತ ವಾಗ್ಮಿ ಇಸ್ಮಾಯಿಲ್ ವಾಫಿ ಧಾರ್ಮಿಕ ಪ್ರಭಾಷಣ ನಡೆಸಿದರು. ಅರೆಯಲಡಿ ಮಸೀದಿ ಇಮಾಮ್ ಮಹ್‌ಮೂದ್ ಮುಸ್ಲಿಯಾರ್ ಸ್ವಾಗತಿಸಿ ವಂದಿಸಿದರು.

ಫೆ.8ರಂದು ಸ್ಥಳೀಯ ಮದ್ರಸದ ಮುಖ್ಯೋಪಾಧ್ಯಾಯರು, ಮಸೀದಿಯ ಸಹಾಯಕ ಖತೀಬರೂ ಆದ ಅಮೀರ್ ಅರ್ಶದಿ ಪ್ರಾಸ್ತಾವಿಕ ಭಾಷಣ ನಡೆಸಿದರು. ಖ್ಯಾತ ಪ್ರಭಾಷಣಗಾರ ಅಬ್ದುಲ್ ಅಝೀಝ್ ದಾರಿಮಿ ಚೆರುಪ ಮುಖ್ಯ ಪ್ರಭಾಷಣ ನಡೆಸಿದರು. ಕಾವು ಮಸೀದಿ ಖತೀಬ್ ಶುಕೂರ್ ದಾರಿಮಿ ಸ್ವಾಗತಿಸಿ ವಂದಿಸಿದರು.

ಅಲ್ಲಾಹನ ತೀರ್ಮಾನವೇ ಅಂತಿಮ:
ಟರ್ಕಿ, ಸಿರಿಯಾ ಭೂಕಂಪಕ್ಕೆ ನಲುಗಿ ಹೋಗಿದ್ದು ವಿಶ್ವಕ್ಕೆ ಬಂದೊದಗಿದ ದೊಡ್ಡ ಅವಘಡವಾಗಿದೆ. ಇಲ್ಲಿ ಮನುಷ್ಯ ನಿಮಿತ್ತ ಮಾತ್ರವಾಗಿದ್ದು ಅಲ್ಲಾಹನ ತೀರ್ಮಾನ ಮಾತ್ರ ಇಲ್ಲಿ ಅಂತಿಮವಾಗಿದೆ. ನಾವಿರುವ ಭೂಮಿಯೇ ಕುಸಿತಗೊಂಡರೆ ಅದಕ್ಕೆ ಪರಿಹಾರವಿಲ್ಲ. ಅಲ್ಲಾಹನು ವಿವಿಧ ರೀತಿಯಲ್ಲಿ ನಮ್ಮನ್ನು ಪರೀಕ್ಷಿಸುತ್ತಿದ್ದು ಭೂಲೋಕದ ಜೀವನ ಕ್ಷಣಿಕ ಎನ್ನುವ ವಾಸ್ತವ ನಮಗೆ ಸದಾ ನೆನಪಲ್ಲಿರಬೇಕು. ಹಾಗಾಗಿ ಅಲ್ಲಾಹು ಆಜ್ಞಾಪಿಸಿದ ರೀತಿಯಲ್ಲಿ ಜೀವನ ನಡೆಸುವುದು ಅಗತ್ಯ.
-ಸಯ್ಯದ್ ಅಹ್ಮದ್ ಪೂಕೋಯ ತಂಙಳ್, ಪುತ್ತೂರು

ಹೆಣ್ಮಕ್ಕಳ ವಿವಾಹ, ವೈದ್ಯಕೀಯ ನೆರವಿನ ಯೋಜನೆ:
ಮಾಡನ್ನೂರಿನಲ್ಲಿ ನಡೆಯುವ ಸ್ವಲಾತ್ ಮಜ್ಲಿಸ್, ಉರೂಸ್ ಕಾರ್ಯಕ್ರಮ ಸೇರಿದಂತೆ ಎಲ್ಲವೂ ಯಶಸ್ವಿಯಾಗಿ ನಡೆಯುತ್ತಿದ್ದು ಇದು ಇಲ್ಲಿನ ವಿಜಯದ ಸಂಕೇತವಾಗಿದೆ. ಸಾಮಾಜಿಕವಾಗಿಯೂ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳುವ ಇರಾದೆ ನಮಗಿದ್ದು ಮುಂದಿನ ದಿನಗಳಲ್ಲಿ ಸ್ವಲಾತ್ ವಾರ್ಷಿಕೋತ್ಸವಕ್ಕೆ ಸಂಬಂಧಿಸಿ ಜಮಾಅತಿನ ಬಡ ಹೆಣ್ಮಕ್ಕಳ ವಿವಾಹ, ವೈದ್ಯಕೀಯ ನೆರವು ಸೇರಿದಂತೆ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಯೋಚನೆ ಇದೆ.
-ಸಿರಾಜುದ್ದೀನ್ ಫೈಝಿ, ಖತೀಬರು ಜೆ.ಎಂ ಮಾಡನ್ನೂರು

LEAVE A REPLY

Please enter your comment!
Please enter your name here