ಪುತ್ತೂರು:ಮನ್ವ ಋಷಿಗಳ ತಪೋಭೂಮಿಯಾಗಿದ್ದ ನರಿಮೊಗರು ಗ್ರಾಮದ ಪುರುಷರಕಟ್ಟೆ ಇಂದಿರಾನಗರದಲ್ಲಿರುವ ಶ್ರೀ ವನದುರ್ಗಾಂಬಿಕಾ ಶ್ರೀರಕ್ತೇಶ್ವರಿ ಹಾಗೂ ಪರಿವಾರ ದೈವಗಳ ಕ್ಷೇತ್ರದಲ್ಲಿ ವರ್ಷಾವಧಿ ನೇಮೋತ್ಸವವು ಫೆ.೧೪ರಿಂದ ಪ್ರಾರಂಭಗೊಂಡು ೧೫ರ ತನಕ ನಡೆಯಲಿದೆ.
ಶ್ರೀ ರಕ್ತೇಶ್ವರಿ, ವರ್ಣರ ಪಂಜುರ್ಲಿ, ಕಲ್ಲುರ್ಟಿ ಹಾಗೂ ಗುಳಿಗ ದೈವೀ ಶಕ್ತಿಗಳು ನೆಲೆನಿಂತಿರುವ ಈ ಕಾರಣಿಕ ಕ್ಷೇತ್ರಕ್ಕೆ ರಾಜರುಗಳ ಕಾಲದ ಇತಿಹಾಸವಿದೆ. ಸುಮಾರು ೭೫ ವರ್ಷಗಳಿಂದ ಈಚೆಗೆ ಇಲ್ಲಿಗೆ ಬಂದವರಿಗೆ ಪುರಾತನ ಕಾಲದಲ್ಲಿ ಇಲ್ಲಿದ್ದ ವೃಕ್ಷ ಹಾಗೂ ಅದಕ್ಕೆ ಸಂಬಂಧಿಸಿದ ಕಟ್ಟೆ, ಮಣ್ಣಿನ ಮೂರ್ತಿಗಳು ಮೊದಲಾದ ಕುರುಹುಗಳು ದೊರೆತಿದ್ದು ಸಾನಿಧ್ಯ ಜೀರ್ಣೋದ್ಧಾರ ನಡೆಸಿ ಆರಾಧಿಸಿಕೊಂಡು ಬರಲಾಗಿತ್ತು. ಇಲ್ಲಿ ಮೂಲಶಕ್ತಿಯಾದ ದೇವಿ ಹಾಗೂ ನಾಗ ಸಾನಿಧ್ಯವನ್ನು ಬಿಟ್ಟಿರುವುದು ಜೀರ್ಣೋದ್ಧಾರ ಸಂದರ್ಭದಲ್ಲಿ ನಡೆದ ಅಷ್ಟಮಂಗಲ ಪ್ರಶ್ನಾಚಿಂತನೆಯಲ್ಲಿ ಕಂಡುಬಂದಿದೆ. ಈ ಕ್ಷೇತ್ರದ ನೈರುತ್ಯ ಭಾಗದಲ್ಲಿ ಮೂಲಸ್ಥಳ ಇದ್ದುದಾಗಿಯೂ, ಇಲ್ಲಿಯೇ ದೇವಿ ಪ್ರತ್ಯಕ್ಷವಾದ ಸ್ಥಳವೆಂದು ಹೇಳಲಾಗುತ್ತಿದೆ. ಆದುದರಿಂದ ಇಲ್ಲಿಗೆ ಮಾಯಂಗಳ ಎಂಬ ಹೆಸರು ಬಂದಿರುವುದಾಗಿ ಹೇಳಲಾಗುತ್ತಿದೆ. ಈ ಸ್ಥಳವು ಹಿಂದೆ ಕಾಡು ಪ್ರದೇಶವಾಗಿದ್ದು ಮನ್ವ ಋಷಿಗಳ ತಪೋಭೂಮಿಯಾಗಿದ್ದು ಋಷಿಗಳಿಗೆ ಒಲಿದ ದೇವಿಶಕ್ತಿಯನ್ನು ಮುಂದಕ್ಕೆ ಭಕ್ತರು ವನದೇವತೆಯಾಗಿ ಭಕ್ತ ಜನಪ್ರಿಯೆ ವನದುರ್ಗಾಂಬಿಕಾ ಎಂಬ ನಾಮಾಂಕಿತದಿಂದ ಈ ಕ್ಷೇತ್ರದಲ್ಲಿ ೨೦೨೧ರ ಪೆಬ್ರವರಿಯಲ್ಲಿ ಪ್ರತಿಷ್ಠೆ ಬ್ರಹ್ಮಕಲಶಾಭಿಷೇಕಗಳು ನೆರವೇರಿದ್ದು ಇದೀಗ ಮೂರನೇ ವರ್ಷದ ನೇಮೋತ್ಸವಗಳು ನಡೆಯುತ್ತಿದೆ.
ನೇಮೋತ್ಸವ:
ಬೆಳಿಗ್ಗೆ ಸ್ಥಳಶುದ್ದಿ, ಗಣಪತಿ ಹೋಮ, ನಾಗದೇವರಿಗೆ ತಂಬಿಲ ಸೇವೆ, ಸಾರ್ವಜನಿಕ ಶ್ರೀಸತ್ಯನಾರಾಯಣ ಪೂಜೆ, ವನದುರ್ಗಾಂಬಿಕೆಗೆ ಮಹಾಪೂಜೆ, ದೈವಗಳಿಗೆ ತಂಬಿಲ, ಮಧ್ಯಾಹ್ನ ಮಹಾ ಮಂಗಳಾರತಿ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ಜರುಗಲಿದೆ.
ಸಂಜೆ ಶ್ರೀ ವನದುರ್ಗಾಂಬಿಕ ಭಜನ ಮಂಡಳಿಯವರಿಂದ ಭಜನೆ, ದೈವಗಳ ಭಂಡಾರ ತೆಗೆಯುವು, ರಾತ್ರಿ ಅನ್ನಸಂತರ್ಪಣೆ, ರಕ್ತೇಶ್ವರಿ, ಕಲ್ಲುರ್ಟಿ, ಪಂಜುರ್ಲಿ ಹಾಗೂ ಗುಳಿಗ ದೈವಗಳ ನೇಮೋತ್ಸವ ಜರುಗಲಿದೆ ಎಂದು ಅಧ್ಯಕ್ಷ ಉಮೇಶ್ ಎಂ ಇಂದಿರಾನಗೆ, ಗೌರವಾಧ್ಯಕ್ಷ ರವಿ ಎಂ ಮಣಿಯ, ಕಾರ್ಯದರ್ಶಿ ಯೋಗಾನಂದ ಹೆಗ್ಡೆ ಇಂದಿರಾನಗರ, ಉಪಾಧ್ಯಕ್ಷ ಅನಿಲ್ ಕುಮಾರ್ ಶೆಟ್ಟಿ ಇಂದಿರಾನಗರ ಹಾಗೂ ಕೋಶಾಧಿಕಾರಿ ಸುಬ್ರಹ್ಮಣ್ಯ ಪೂಜಾರಿ ಪುರುಷರಕಟ್ಟೆ ತಿಳಿಸಿದ್ದಾರೆ.