ಪುತ್ತೂರು: ವಿಧಾನಸಭಾ ಚುನಾವಣೆಯ ಕಾವು ರಂಗೇರತೊಡಗಿದೆ. ಎಲ್ಲಾ ಪಕ್ಷದಲ್ಲೂ ಬಿರುಸಿನ ರಾಜಕೀಯ ಚಟುವಟಿಕೆ ಆರಂಭಗೊಂಡಿದೆ. ಅದರಂತೆ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಎಸ್‌ಡಿಪಿಐ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯ ಸಭೆ ನಡೆದಿದ್ದು, ಶಾಫಿ ಬೆಳ್ಳಾರೆ ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಪುತ್ತೂರಿನಲ್ಲಿ ಎಸ್‌ಡಿಪಿಐ ಶಕ್ತಿ ನಿರ್ಣಾಯಕ ಹಂತದಲ್ಲಿದೆ. ಅಭ್ಯರ್ಥಿ ಆಯ್ಕೆಯಾಗಿರುವ ಶಾಫಿ ಬೆಳ್ಳಾರೆ ಸಧ್ಯ ಬಿಜೆಪಿ ನಾಯಕ ಪ್ರವೀಣ್ ನೆಟ್ಟಾರ್ ಹತ್ಯೆಯ ಪ್ರಕರಣದಲ್ಲಿ ಬಂಧಿತರಾಗಿ ಜೈಲಿನಲ್ಲಿದ್ದು, ಆ ಬಳಿಕ ಆದ ಬೆಳವಣಿಗೆ ಎಸ್‌ಡಿಪಿಐ ಪಕ್ಷದ ಚಟುವಟಿಕೆಗೆ ಹಿನ್ನಡೆಯಾಗಿದೆ ಎಂಬ ಮಾತು ಕೇಳಿ ಬಂದಿದೆ.
ಜೈಲಿನಿಂದಲೇ ಸ್ಪರ್ಧೆ! :
ಶಾಫಿ ಬೆಳ್ಳಾರೆ ಜೈಲಿನಿಂದಲೇ ಸ್ಪರ್ಧಿಸಲಿದ್ದಾರೆ. ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜೈಲಿನಿಂದಲೂ ನಾಮಪತ್ರ ಸಲ್ಲಿಸಲು ಅವಕಾಶವಿರುವುದರಿಂದ ಅಲ್ಲಿಂದಲೇ ಸ್ಪರ್ಧೆಯ ಉಮೇದುವಾರಿಕೆ ಸಲ್ಲಿಸಲಿದ್ದಾರೆ.
ಅಧಿಕೃತವಾಗಿ ಈ ಆಯ್ಕೆ ಕುರಿತಂತೆ ಎಸ್ಡಿಪಿಐ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ ಫೈಜಿ ಬೆಂಗಳೂರಿನಲ್ಲಿ ಅಧಿಕೃತವಾಗಿ ಘೋಷಿಸಲಿದ್ದಾರೆ.