ಪಾಣಾಜೆ ಪ್ರಾಥಮಿಕ ಆರೋಗ್ಯ ಕೇಂದ್ರ ಅವ್ಯವಸ್ಥೆಗಳ ಆಗರವಾಗುತ್ತಿದೆ
ಸಾಮಾಜಿಕ ಅರಣ್ಯ ಇಲಾಖೆ ಜನಸ್ನೇಹಿಯಾಗುತ್ತಿಲ್ಲ – ಆರೋಪ

0

ಪಾಣಾಜೆ ಗ್ರಾಮ ಸಭೆ

ಪಾಣಾಜೆ: ಒಂದು ಕಾಲದಲ್ಲಿ ಅತ್ಯಂತ ಅಚ್ಚುಕಟ್ಟಿನ ಆರೋಗ್ಯ ಸೇವೆ ನೀಡುತ್ತಾ ತಾಲೂಕಿನಲ್ಲಿ ಹೆಸರು ಪಡೆದಿದ್ದ ಪಾಣಾಜೆ ಪ್ರಾಥಮಿಕ ಆರೋಗ್ಯ ಕೇಂದ್ರ ಈಗ ಅವ್ಯವಸ್ಥೆಗಳ ಆಗರವಾಗುತ್ತಿದೆ. ಇಲ್ಲಿ ಯಾರೂ ಹೇಳುವವರು ಕೇಳುವವರು ಇಲ್ಲ ಎಂಬಂತಾಗಿದೆ. ಸರಿಯಾಗಿ ಪೂರ್ಣಕಾಲಿಕ ವೈದ್ಯಾಧಿಕಾರಿಯ ನೇಮಕವೂ ನಡೆಯುತ್ತಿಲ್ಲ. ಹೀಗೆ ಆದಲ್ಲಿ ತಾಲೂಕು ಕೇಂದ್ರದಿಂದ ಅತೀ ದೂರದಲ್ಲಿರುವ ಕೇರಳಕ್ಕೆ ಗಡಿಭಾಗದಲ್ಲಿರುವ ಪಾಣಾಜೆಯ ಗ್ರಾಮಸ್ಥರು ಆರೋಗ್ಯ ವ್ಯವಸ್ಥೆಯಲ್ಲಿ ತೀರಾ ತೊಂದರೆಗೊಳಗಾಗಲಿದ್ದಾರೆ ಎಂದು ಗ್ರಾಮಸ್ಥರು ತೀವ್ರ ವಿಷಾದ ವ್ಯಕ್ತಪಡಿಸಿದಲ್ಲದೇ ಸರಕಾರ ಶೀಘ್ರ ಪೂರ್ಣಕಾಲಿಕ ವೈದ್ಯಾಧಿಕಾರಿ ನೇಮಕ ಮಾಡದೇ ಹೋದಲ್ಲಿ ಪ್ರತಿಭಟನೆಯನ್ನೂ ನಡೆಸಬೇಕಾದಿತು ಎಂಬ ಗಂಭೀರ ಆಗ್ರಹ ಪಾಣಾಜೆ ಗ್ರಾಮ ಸಭೆಯಲ್ಲಿ ನಡೆದಿದೆ.

ಸಭೆಯು ಫೆ.8 ರಂದು ಪಂಚಾಯತ್ ಅಧ್ಯಕ್ಷೆ ಭಾರತೀ ಭಟ್ ರವರ ಅಧ್ಯಕ್ಷತೆಯಲ್ಲಿ ಪಾಣಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆಯಿತು. ವಲಯ ಅರಣ್ಯಾಧಿಕಾರಿ ಬಿ.ಎಂ. ಕಿರಣ್‌ರವರು ನೋಡಲ್ ಅಧಿಕಾರಿಯಾಗಿದ್ದರು. ಸಭೆಯಲ್ಲಿ ಉಪಾಧ್ಯಕ್ಷ ಅಬೂಬಕ್ಕರ್ ಇಬ್ರಾಹಿಂ, ಸದಸ್ಯರಾದ ಸುಭಾಸ್ ರೈ, ಮೋಹನ ನಾಯ್ಕ್, ಕೃಷ್ಣಪ್ಪ ಪೂಜಾರಿ, ಮೈಮೂನತ್ತುಲ್ ಮೆಹ್ರಾ, ವಿಮಲ, ಜಯಶ್ರೀ, ಸುಲೋಚನಾ, ವಿವಿಧ ಇಲಾಖಾಽಕಾರಿಗಳು, ಪಿಡಿಒ ಚಂದ್ರಮತಿ, ಕಾರ್ಯದರ್ಶಿ ಆಶಾ ಉಪಸ್ಥಿತರಿದ್ದರು.

ಶುಗರ್ ಟೆಸ್ಟಿಂಗ್ ಉಪಕರಣ ಸರಿಯಿಲ್ಲ: ಆರೋಗ್ಯ ಇಲಾಖೆಯ ಬಗ್ಗೆ ಪಾಣಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಜ್ಯೋತಿ ಬಿ.ಎಂ. ಮಾಹಿತಿ ನೀಡಿದರು. ಪಾಣಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇರುವ ಶುಗರ್ ಟೆಸ್ಟ್ ಉಪಕರಣ ಸರಿಯಿಲ್ಲ. ರಿಪೋರ್ಟ್ ವ್ಯತ್ಯಾಸವುಂಟಾಗುತ್ತಿದೆ. ಈ ಮೂಲಕ ಬಲವಂತವಾಗಿ ಶುಗರ್ ಗೆ ಎಡಿಕ್ಟ್ ಮಾಡಲಾಗುತ್ತಿದೆ ಎಂದು ಗ್ರಾಮಸ್ಥ ಕೆ.ಎ. ಅಲಿ ಆರೋಪಿಸಿದರು. ಉತ್ತರಿಸಿದ ಜ್ಯೋತಿಯವರು ಶುಗರ್ ಹೈ, ಲೋ ಬಂದಾಗ ನಾವು ಒಮ್ಮೇಲೆ ಮೆಡಿಸಿನ್ ಗೆ ಸಲಹೆ ನೀಡುವುದಿಲ್ಲ. ಮರುದಿವಸ ಖಾಲಿ ಹೊಟ್ಟೆಗೆ ಮತ್ತೊಮ್ಮೆ ಟೆಸ್ಟ್ ಮಾಡಿಸಿ ಆಮೇಲೆ ಸಲಹೆ ಕೊಡುತ್ತೇವೆ ಎಂದು ಹೇಳಿದರು. ಈಗ ಇರುವ ಮೆಷಿನ್ ಸರಿಯಿಲ್ಲ. ಹಳೆಯದಾಗಿದೆ. ಹೆಮಟಾಲಜಿ ಮೆಷಿನ್ ಬೇಕು. ಅದಕ್ಕೆ ಪಂಚಾಯತ್ ನಿಂದ ನಿರ್ಣಯ ಕೈಗೊಂಡು ಇಲಾಖೆಗೆ ಬರೆಯಬಹುದಾಗಿದೆ. ಆರೋಗ್ಯ ಇಲಾಖೆಯಲ್ಲಿನ ಅವ್ಯವಸ್ಥೆಯ ಬಗ್ಗೆ ಪಂಚಾಯತ್ ಆಡಳಿತ ಮಂಡಳಿ ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹ ವ್ಯಕ್ತವಾಯಿತು.

ವೈದ್ಯಾಧಿಕಾರಿ ನೇಮಕಕ್ಕೆ ಆಗ್ರಹ: ಪಾಣಾಜೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಪೂರ್ಣಕಾಲಿಕ ವೈದ್ಯಾಧಿಕಾರಿಯ ನೇಮಕಕ್ಕೆ ಗ್ರಾಮಸ್ಥರು ಪಟ್ಟು ಹಿಡಿದರು. ಒಂದು ವಾರದಲ್ಲಿ ಪ್ರತಿಭಟನೆಯ ಎಚ್ಚರಿಕೆಯನ್ನೂ ನೀಡಲಾಯಿತು. ಸಭೆಯಿಂದಲೇ ಟಿಎಚ್‌ಒ ರವರಿಗೆ ನೋಡಲ್ ಅಽಕಾರಿ ಕಿರಣ್ ರವರು ಕರೆ ಮಾಡಿ ಮಾಹಿತಿ ಪಡೆದರು. ಈ ಬಗ್ಗೆ ಡಿಎಚ್‌ಒರವರಲ್ಲಿ ಚರ್ಚಿಸುತ್ತೇನೆ ಎಂದು ಕಿರಣ್ ಹೇಳಿದರು.

ಪಂ. ಸಿಬಂದಿಗಳಿಗೂ ವರ್ಗಾವಣೆ ಪ್ರಕ್ರಿಯೆ ನಡೆಯಬೇಕು: ಪಿಡಿಒ ಚಂದ್ರಮತಿಯವರು ವರದಿ ಮತ್ತು ಆಯವ್ಯಯ ಮಂಡಿಸಿದ ವೇಳೆ ವರದಿಯ ಮೇಲೆ ಸಾರ್ವಜನಿಕರು ಹಲವು ಪ್ರಶ್ನೆಗಳನ್ನು ಮುಂದಿಟ್ಟರು. ನರೇಗಾದಂತಹ ಯೋಜನೆಗಳಲ್ಲಿ ಫಲಾನುಭವಿಗಳ ಹೆಸರು ತಪ್ಪು ಬರೆದು ಸೌಲಭ್ಯ ಸಿಗದಂತೆ ಆಗುತ್ತಿದೆ. ತೊಂದರೆಗಳಿಗೆ ಯಾರು ಜವಾಬ್ದಾರಿ. ತಪ್ಪು ಮಾಡುವ ಸಿಬಂದಿಗಳು ಬೇಕಾ ? ನಮ್ಮ ಗ್ರಾಮಸ್ಥರಿಗೆ ಸರಿಯಾದ ಮಾಹಿತಿ ನೀಡುವಂತಹ ಸಿಬಂದಿಗಳು ಬೇಕು. ಮಿಸ್ಟೇಕ್ ಮಾಡಿದ ಸಿಬಂದಿಗಳಿಗೆ ನೋಟೀಸ್ ಜಾರಿ ಮಾಡಿ ಅವರ ವೇತನದಲ್ಲಿ ಕಡಿತಗೊಳಿಸಿ. ಪಂಚಾಯತ್ ಸಿಬಂದಿಗಳಿಗೂ ವರ್ಗಾವಣೆ ಪ್ರಕ್ರಿಯೆ ಆಗಬೇಕೆಂದು ನಿರ್ಣಯ ಮಾಡಿ ಎಂದು ಕೆಎಂಎಫ್ ನಿರ್ದೇಶಕ, ಗ್ರಾಮಸ್ಥ ನಾರಾಯಣ ಪ್ರಕಾಶ್ ಹೇಳಿದರು. ಗತ ಗ್ರಾಮ ಸಭೆಯಲ್ಲಿ ಆಗಿರುವ ನಿರ್ಣಯಗಳು ಅನುಷ್ಠಾನ ಆಗಿದೆಯಾ ? ಎಂದು ಪ್ರಶ್ನೆ ವ್ಯಕ್ತವಾಗಿ ಗತ ಸಭೆಯಲ್ಲಿ ನಿರ್ಣಯವಾಗಿದ್ದ ರೋಡ್ ಮಾರ್ಜಿನ್ ಅಕ್ರಮ ಕಟ್ಟಡಗಳ ತೆರವಿಗೆ ಇನ್ನೂ ಅನುಷ್ಠಾನಗೊಳ್ಳದಿರಲು ಕಾರಣವೇನು ? ಎಂದು ಸಾರ್ವಜನಿಕರು ಕೇಳಿದರು. ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಸಾಧಕ ಬಾಧಕಗಳನ್ನು ನೋಡಿ ನಿರ್ಣಯ ಕೈಗೊಳ್ಳಬೇಕೆಂದು ನಿಯಮವಿದೆ. ಹಾಗಾಗಿ ಬಡವರ ಮೇಲಿನ ಹಿತಾಸಕ್ತಿಯಿಂದಾಗಿ ಕೆಲವೊಂದು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಲಿಲ್ಲ ಎಂದು ಅಧ್ಯಕ್ಷೆ ಭಾರತಿ ಭಟ್ ಹೇಳಿದರು. ಬಡವರಿಗೆ ತೊಂದರೆಯಾಗುವುದರಿಂದ ಈ ಬಗ್ಗೆ ಪಂಚಾಯತ್ ನಿರ್ಣಯ ಮಾಡಿಲ್ಲ ಎಂದು ಕಾರ್ಯದರ್ಶಿ ಆಶಾ ಹೇಳಿದಾಗ ಅಕ್ರಮಗಳಿಗೆ ನೀವು ಸಪೋರ್ಟಾ ಗ್ರಾಮಸಭೆಯಲ್ಲಿನ ನಿರ್ಣಯ ತಿದ್ದುಪಡಿ ಮಾಡುವುದು ಯಾಕೆ ? ನಿರ್ಣಯ ಮೇಲಾ ? ನಿಮ್ಮ ಕಾನೂನು ಮೇಲಾ ? ಎಂದು ಗ್ರಾಮಸ್ಥ ಗಣಪತಿ ಬಲ್ಯಾಯ ಪ್ರಶ್ನಿಸಿದರು.‌

ನರೇಗಾ ಯೋಜನೆಯಲ್ಲಿ ಹಣ ಬಾಕಿ ಇರುವುದಕ್ಕೆ ಪಂಚಾಯತ್ ಏನು ಕ್ರಮ ಕೈಗೊಂಡಿದೆ. ಇಂಜಿನಿಯರ್ ಮೋಸ ಮಾಡುತ್ತಿದ್ದಾರೆ ಎಂದು ನಾರಾಯಣ ಪ್ರಕಾಶ್ ಆರೋಪಿಸಿದರು. ನೈಜ ವಾಲ್ಯುವೇಷನ್ ಆಧಾರದಲ್ಲಿ ಪಾವತಿಯಾಗಿದೆ ಎಂದು ಪಿಡಿಒ ಚಂದ್ರಮತಿ ಹೇಳಿದರು.
ಆಧಾರ್ ತಿದ್ದುಪಡಿ, ದೃಢೀಕರಣ, ನಿರಾಕ್ಷೇಪಾಣಾ ಪತ್ರಗಳಿಗೆ ಹೆಚ್ಚು ಶುಲ್ಕ ವಿಽಧಿಸುತ್ತಿರುವುದರ ಬಗ್ಗೆ ಚರ್ಚೆ ನಡೆಯಿತು.

ಗುತ್ತಿಗೆದಾರರಿಗೆ ಬಿಲ್ ಪಾವತಿ ವಿಳಂಬ: ಕ್ರಿಯಾಯೋಜನೆಯ ಕಾಮಗಾರಿಗಳನ್ನು ನಡೆಸಿದ ಗುತ್ತಿಗೆದಾರರು ಬಿಲ್ ಪಾವತಿಗಾಗಿ ಅಲ್ಲಿಗೆ ಇಲ್ಲಿಗೆ ನಾಲ್ಕೈದು ಸಲ ಅಲೆದಾಡಬೇಕಾಗಿದೆ. ಯಾಕೆ ನೇರ ಪಾವತಿ ವ್ಯವಸ್ಥೆ ಮಾಡಲಾಗುವುದಿಲ್ಲ. ಇದು ಯಾವ ನಿಯಮದಲ್ಲಿದೆ ? ಎಂದು ನಾರಾಯಣ ಪ್ರಕಾಶ್ ಪ್ರಶ್ನಿಸಿದರು. 4-5 ತಿಂಗಳಾಗುತ್ತದೆ ಪಾವತಿಗೆ ಎಂದು ಪಿಡಿಒ ಚಂದ್ರಮತಿ ಹೇಳಿದರು. ಸಿಎಸ್ ಗೆ ನಿರ್ಣಯ ಮಾಡಿ ಸಿಎಸ್‌ಗೆ ಬರೆಯಿರಿ ? ಉತ್ತರ ಬರಲಿ ? ಪ್ರಶ್ನಿಸಿದ ನಾರಾಯಣ ಪ್ರಕಾಶ್ ಎಂದೇ ಹೆಸರು ಬರೆಯಿರಿ. ನಾನು ಪ್ರಶ್ನಿಸಲು ರೆಡಿ ಇದ್ದೇನೆ? ಎಂದರು.

ಜೆಜೆಎಂ ಬಳಕೆ ಮಾಡಬಹುದಲ್ವಾ ?: 20 ವರ್ಷಗಳ ಹಳೆಯ ಕುಡಿಯುವ ನೀರಿನ ಪಂಪು, ಪೈಪ್‌ಲೈನ್ ದುರಸ್ತಿಗೆ ಖರ್ಚು ಹಾಕುವುದಕ್ಕಿಂತ ಜೆಜೆಎಂ ನಲ್ಲಿ ಹೊಸ ಯೋಜನೆ ಮಾಡಬಹುದಿತ್ತಲ್ವಾ. ಸರಕಾರ ಅನುದಾನ ಕೊಡುತ್ತದಲ್ವಾ ? ಯಾಕೆ ಅದನ್ನು ಉಪಯೋಗಿಸಲಾಗುತ್ತಿಲ್ಲ ಎಂದು ಪ್ರಶ್ನಿಸಲಾಯಿತು. ಇಂಜಿನಿಯರ್ ಮತ್ತು ಗುತ್ತಿಗೆದಾರರನ್ನು ಹೊಂದಾಣಿಕೆ ಮಾಡಿಸಿಕೊಂಡು ಜೆಜೆಎಂ ನಲ್ಲಿ ಒಂದು ಯೋಜನೆಯಲ್ಲಿ ಉಳಿದ ಪೈಪ್ ಗಳನ್ನು ಇತರ ಕಡೆ ಸಾಮಾನ್ಯ ನೀರಿನ ವ್ಯವಸ್ಥೆಗೆ ಪೈಪ್ ಲೈನ್ ಗೆ ಬಳಸಿಕೊಳ್ಳಬಹುದಾಗಿದೆ ಎಂದು ಗುತ್ತಿಗೆದಾರ ಸದಾಶಿವ ರೈ ಸೂರಂಬೈಲು ಹೇಳಿದರು. ಕಳೆದ ಬಾರಿ ಈ ರೀತಿ ಮಾಡಲಾಗಿದೆ. ಆದರೆ ಸಂಪೂರ್ಣವಾಗಿ ಜೆಜೆಎಂ ಅನುದಾನಗಳನ್ನು ಇತರ ಪೈಪ್‌ಲೈನ್‌ಗಳಿಗೆ ಬಳಸಿಕೊಳ್ಳಲು ನಿಯಮವಿಲ್ಲ ಎಂದು ಅಧ್ಯಕ್ಷೆ ಭಾರತಿ ಭಟ್ ಹೇಳಿದರು.

ಕುಡಿಯುವ ನೀರಿಲ್ಲ: 4 ನೇ ವಾರ್ಡ್ ನಲ್ಲಿ ಬೋರ್ ಇದೆ. ಪಂಪ್ ಇಳಿಸಿದ್ದಾರೆ. ಆದರೆ 1 ವರ್ಷದಿಂದ ಕುಡಿಯುವ ನೀರು ಇಲ್ಲ. ಯಾಕೆ ಪಂಚಾಯತ್ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಗ್ರಾಮಸ್ಥರೋರ್ವರು ಪ್ರಶ್ನಿಸಿದರು. ಸೂರಂಬೈಲುನಲ್ಲಿ ಪೈಪ್ ಲೈನ್ ದುರಸ್ತಿ ಇದೆ. ಹಾಗಾಗಿ ಸ್ವಲ್ಪ ಬಾಕಿಯಾಗಿದೆ. ಪ್ರತಿಭಟನೆಗೆ ಹೋಗಿರುವ ಪಂಚಾಯತ್ ಸಿಬಂದಿಗಳು ಬಂದ ತಕ್ಷಣ ದುರಸ್ತಿ ಮಾಡಿ ನೀರಿನ ವ್ಯವಸ್ಥೆ ಮಾಡಲಿದ್ದೇವೆ ಎಂದು ಆ ವಾರ್ಡ್‌ನ ಸದಸ್ಯ ಮೋಹನ ನಾಯ್ಕ್ ಹೇಳಿದರು.

ಎಷ್ಟು ನಾಯಿ ಸತ್ತಿದೆ ? : ಖರ್ಚು ವೆಚ್ಚದಲ್ಲಿ ರೂ. 10150 ನಾಯಿ ಸತ್ತ ಬಗ್ಗೆ ಬಿಲ್ ಹಾಕಲಾಗಿದೆ. ಎಷ್ಟು ನಾಯಿಗಳು ಸತ್ತಿವೆ ಎಂದು ಉಲ್ಲೇಖಿಸಲಾಗಿಲ್ಲ ಎಂದು ಕೆ.ಎ. ಅಲಿ ಪ್ರಶ್ನಿಸಿದರು. ಅದರಲ್ಲಿ ರೇಬೀಸ್ ಲಸಿಕೆ ಹಾಕಿದ ಕಾರ್ಯಕ್ರಮದ ಖರ್ಚು ಕೂಡಾ ಸೇರಿದೆ ಎಂದು ಪಿಡಿಒ ಹೇಳಿದರು.

ಪ್ರತಿ ಭೇಟಿಗೆ ರೂ. 360 ಖರ್ಚು: ಉದ್ಯೋಗ ಖಾತ್ರಿ ಜಿಯೋ ಟ್ಯಾಗ್ ಮಾಡಲು ಪ್ರತಿ ಕಾಮಗಾರಿಗೆ ಭೇಟಿ ಮಾಡಲು ರೂ. 360 ಖರ್ಚಾಗುತ್ತಿದೆ. ಇದು ದುಂದುವೆಚ್ಚಕ್ಕೆ ದಾರಿ ಮಾಡಿಕೊಡುತ್ತಿದೆ ಎಂದು ನಾರಾಯಣ ಪ್ರಕಾಶ್ ಆರೋಪಿಸಿದರು. ಅಟೋ ವೆಚ್ಚ ಜಾಸ್ತಿಯಾಗುತ್ತದೆ. ಈ ಬಗ್ಗೆ ಪಂಚಾಯತ್ ಗೆ ವಾಹನ ಕೊಡಬೇಕೆಂದು ಸರಕಾರಕ್ಕೆ ಬರೆಯಲಾಗಿದೆ ಎಂದು ಉಪಾಧ್ಯಕ್ಷ ಅಬೂಬಕ್ಕರ್ ಪ್ರತಿಕ್ರಿಯಿಸಿದರು.

ಸೋಲಾರ್ ದುಬಾರಿ.. ವಿದ್ಯುತ್ ಅಗ್ಗ: ಸೋಲಾರ್ ಬೀದಿದೀಪ ದುರಸ್ತಿ ದುಬಾರಿಯಾಗುತ್ತಿದೆ. ಅದಕ್ಕಿಂತ ವಿದ್ಯುತ್ ಲೈನ್‌ನಿಂದ ಬೀದಿದೀಪ ಮಾಡಿದರೂ ವಿದ್ಯುತ್ ಬಿಲ್ ಕಡಿಮೆ ಬರುತ್ತದೆ. ಯಾವುದು ಸೂಕ್ತ ? ಎಂದು ಪಂಚಾಯತ್ ಪರಿಶೀಲಿಸಿ ಕ್ರಮ ಕೈಗೊಳ್ಳುವುದು ಉತ್ತಮ ಎಂದು ಅಭಿಪ್ರಾಯ ಬಂತು.

ಟ್ಯಾಂಕ್ ವಿತರಣೆಯಲ್ಲಿ ತಾರತಮ್ಯ: ನೀರಿನ ಟ್ಯಾಂಕ್ ವಿತರಣೆಯಲ್ಲಿ ತಾರತಮ್ಯ ಮಾಡಲಾಗಿದೆ ಎಂದು ರಮೇಶ್ ಗುರಿಕ್ಕೇಲು ಆರೋಪಿಸಿದರು. ನಿಜವಾದ ಫಲಾನುಭವಿ ನೋಡಿಕೊಂಡು ಪಾರದರ್ಶಕವಾಗಿ ಅಗತ್ಯ ಇದ್ದವರಿಗೆ ಕೊಟ್ಟಿದ್ದೇವೆ ಎಂದು ಅಧ್ಯಕ್ಷರು ಹೇಳಿದರು. ಬಾಕಿಯಿದ್ದವರಿಗೆ ಮುಂದಿನ ಹಂತದಲ್ಲಿ ಕೊಡುವ ಪ್ರಯತ್ನ ಮಾಡುತ್ತೇವೆ ಎಂದು ಉಪಾಧ್ಯಕ್ಷ ಅಬೂಬಕ್ಕರ್ ಮತ್ತು ಸದಸ್ಯ ಮೋಹನ ನಾಯ್ಕ್ ಹೇಳಿದರು.

ಲೋಕೋಪಯೋಗಿ ಇಲಾಖೆ ಆತ್ಮಶುದ್ದಿಯಿಂದಿಲ್ಲ: ಗತಸಭೆಯಲ್ಲಿ ಲೋಕೋಪಯೋಗಿ ಇಲಾಖೆಯವರಿಗೆ ಹಲವು ಪ್ರಶ್ನೆಗಳನ್ನು ಹಾಕಲಾಗಿತ್ತು. ಇದುವರೆಗೆ ಯಾವುದೇ ಸ್ಪಂದನೆ ದೊರೆತಿಲ್ಲ. ಈ ಬಾರಿ ಗ್ರಾಮ ಸಭೆಗೂ ಬರದೇ ಓಡಿ ಹೋಗಿದ್ದಾರೆ. ಇತ್ಯರ್ಥವಾಗದ ಸಮಸ್ಯೆಗೆ ಉತ್ತರಿಸಲು ಅವರಿಂದ ಆಗುವುದಿಲ್ಲ ಅವರು ಗ್ರಾಮಸಭೆಗೆ ಬರದೇ ಇರುವುದು ಎಷ್ಟು ಸರಿ ? ಎಂದು ನಾರಾಯಣ್ ಪ್ರಕಾಶ್ ಪ್ರಶ್ನಿಸಿದರು.

ಪಶು ವೈದ್ಯಕೀಯ ಇಲಾಖೆಯಿಂದ ಸೇವೆ ಸಿಗುತ್ತಿಲ್ಲ: ಪಶು ವೈದ್ಯಕೀಯ ಇಲಾಖೆಯ ಬಗ್ಗೆ ಜಾನುವಾರು ಅಧಿಕಾರಿ ಪುಷ್ಪರಾಜ್ ಶೆಟ್ಟಿ ಮಾಹಿತಿ ನೀಡಿದರು. ಇಲಾಖೆ ಸರ್ವೀಸ್ ಬಗ್ಗೆ ತೀರಾ ಆರೋಪಗಳು ದೂರುಗಳು ಬರುತ್ತಿವೆ. ಚಿಕಿತ್ಸೆಯಲ್ಲಿಯೂ ಲೋಪಗಳು ಉಂಟಾಗುತ್ತಿವೆ. ಔಷಧಿಗಳು ಸಿಗುತ್ತಿಲ್ಲ. ಎಲ್‌ಎಸ್ಡಿ ವ್ಯಾಕ್ಸಿನೇಷನ್ ಸ್ಕೀಮ್‌ನಲ್ಲಿ ಸರಕಾರಿ ಸೇವೆಗಳು ಜನರಿಗೆ ಉಚಿತವಾಗಿ ಸಿಗುತ್ತಿಲ್ಲ. ಒಕ್ಕೂಟವೂ ಈ ಬಗ್ಗೆ ಈಗಾಗಲೇ ಅನೇಕ ಬಾರಿ ಎಚ್ಚರಿಕೆ ನೀಡಿದೆ. ಎಲ್‌ಎಸ್ಡಿ ವ್ಯಾಕ್ಸಿನೇಷನ್ ನಲ್ಲಿ ಇಲಾಖೆ ಸನ್ನದ್ದಾಗಿದೆ ಎಂದು ಹೇಳ್ತಾರೆ ಆದರೆ ಇಲ್ಲಿ ರೈತರು ಜೆಸಿಬಿ ಭರಿಸಿ ಗುಂಡಿ ತೆಗೆಯಲು ಸನ್ನದ್ದರಾಗಿದ್ದಾರೆ ಎಂದು ಕಟುವಾಗಿ ಹೇಳಿದ ನಾರಾಯಣ ಪ್ರಕಾಶ್ ಇಲಾಖೆಯ ಔಷಧಿಗಿಂತ ಹೋಮಿಯೋಪತಿ ಔಷಧಿ ಹೆಚ್ಚು ಪರಿಣಾಮಕಾರಿಯಾಗಿದೆ ಎಂದರು. ಈ ವೇಳೆ ತಮ್ಮ ಇಲಾಖೆಯಲ್ಲಿನ ಸಿಬಂದಿಗಳ ಕೊರತೆಯನ್ನು ಪುಷ್ಪರಾಜ್‌ರವರು ಹೇಳಿದಾಗ, ಮೇಲಾಧಿಕಾರಿಗೆ ಬರೆಯಿರಿ. ಇಲ್ಲ ಪ್ರತಿಭಟನೆ ನಡೆಸಿ. ನಿಮ್ಮ ಜೊತೆ ನಾವಿದ್ದೇವೆ. ನಾವು ನಿಮಗೆ ಬೆಂಬಲ ನೀಡುತ್ತೇವೆ? ಎಂದು ನಾರಾಯಣ ಪ್ರಕಾಶ್ ಹೇಳಿದರು.

ಪಾಣಾಜೆ ಶಾಲೆ ಎಸ್ಡಿಎಂಸಿ.. ಚರ್ವಿತ ಚರ್ವಣ..: ಶೈಕ್ಷಣಿಕ ಅವಧಿ ಮುಗಿಯುತ್ತಾ ಬಂದರೂ ಇನ್ನೂ ಇತ್ಯರ್ಥಗೊಳ್ಳದ ಪಾಣಾಜೆ ಮಾದರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಎಸ್ಡಿಎಂಸಿ ಸಮಸ್ಯೆಯು ಈ ಸಭೆಯಲ್ಲಿಯೂ ಚರ್ವಿತ ಚರ್ವಣಗೊಂಡಿತು. ಎಸ್ಡಿಎಂಸಿ ಸಮಸ್ಯೆ ಇತ್ಯರ್ಥಗೊಂಡಿಲ್ಲ. ಇತ್ತೀಚೆಗಿನ ಸಭೆಯ ಬಳಿಕ ಒಂದು ವಾರದೊಳಗೆ ಉತ್ತರ ಹೇಳುತ್ತೇನೆ ಎಂದ ನಿಮ್ಮಿಂದ ಇನ್ನೂ ಉತ್ತರ ಬಂದಿಲ್ಲ ಎಂದು ಹರೀಶ್ ಕಡಮ್ಮಾಜೆ ಸಿಆರ್‌ಪಿಯವರನ್ನು ಪ್ರಶ್ನಿಸಿದರು. ಸ್ಟೇ ಆರ್ಡರ್ ವಾಪಾಸ್ ತೆಗೆಯುವ ಪ್ರಕ್ರಿಯೆ ಮುಗಿದ ತಕ್ಷಣ ಎಸ್ಡಿಎಂಸಿ ಸಮಸ್ಯೆ ಇತ್ಯರ್ಥವಾಗಲಿದೆ. ಆ ಪ್ರಕ್ರಿಯೆ ವಿಳಂಬಗೊಳ್ಳುತ್ತಿದೆ ಎಂದು ಸಿಆರ್‌ಪಿ ಹೇಳಿದರು. ಶಾಲೆಯಿಂದ ಹೋಗುವ ಮಾಹಿತಿಗಳು, ಲೆಟರ್ ಗಳು ತಪ್ಪಾಗಿ ಹೋಗುತ್ತಿದೆ ಎಂದು ಎಸ್ಡಿಎಂಸಿ ರಚನೆಗೆ ನ್ಯಾಯಾಲಯದಲ್ಲಿ ಸ್ಟೇ ಆರ್ಡರ್ ತಂದಿರುವ ಸೀತಾ ಭಟ್ ಆರೋಪಿಸಿದರು. ಇಲಾಖಾಧಿಕಾರಿಗಳಲ್ಲಿ ಇಚ್ಛಾಶಕ್ತಿ ಇಲ್ಲ. ಮಕ್ಕಳ ಹಿತಾಸಕ್ತಿ ತೆಗೆದುಕೊಂಡು ಇಲಾಖಾ ಫೈಲ್ ವರ್ಕ್‌ಗಳನ್ನು ಶೀಘ್ರವಾಗಿ ಮಾಡಿದರೆ ಶಾಲೆ ಅವಧಿ ಮುಗಿಯುವ ಮೊದಲಾದರೂ ಸಮಸ್ಯೆ ಇತ್ಯರ್ಥಗೊಳ್ಳಬಹುದು ಎಂದು ಅಭಿಪ್ರಾಯ ವ್ಯಕ್ತವಾಯಿತು.

ಕೊರಿಂಗಿಲದಲ್ಲಿ 33 ಕೆವಿ ಸ್ಟೇಷನ್: ಮೆಸ್ಕಾಂ ಇಲಾಖೆ ಜ್ಯೂನಿಯರ್ ಇಂಜಿನಿಯರ್ ಪುತ್ತು ಜೆ. ರವರು ಮಾಹಿತಿ ನೀಡಿದರು. ಕೈಕಾರ 33 ಕೆವಿ ಸ್ಟೇಷನ್ ಪ್ರಕ್ರಿಯೆ ಇನ್ನೂ ಪೂರ್ಣಗೊಳ್ಳದಿರುವುದರಿಂದ ಪಾಣಾಜೆ ಭಾಗದಲ್ಲಿ ವಿದ್ಯುತ್ ಸಮಸ್ಯೆ ಇರುವ ಬಗ್ಗೆ ಚರ್ಚೆ ನಡೆಯಿತು. ಸಮಸ್ಯೆ ಪರಿಹಾರಕ್ಕಾಗಿ ಕೊರಿಂಗಿಲ ಎಂಬಲ್ಲಿ 33 ಕೆವಿ ಸ್ಟೇಷನ್‌ಗಾಗಿ 1 ಎಕ್ರೆ ಜಾಗ ಮಂಜೂರಾತಿಗೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ’ ಎಂದು ಪುತ್ತುರುವರು ಹೇಳಿದರು.

ಸಾಮಾಜಿಕ ಅರಣ್ಯ ಇಲಾಖೆ ಅಭಿವೃದ್ಧಿಗೆ ಮಾರಕ: ಸಾಮಾಜಿಕ ಅರಣ್ಯ ಇಲಾಖೆಯ ಬಗ್ಗೆ ಕೃಷ್ಣ ಜೋಗಿ ಮಾಹಿತಿ ನೀಡಿದರು. ಸರಕಾರಿ ಜಮೀನಿನಲ್ಲಿ ಸಾಮಾಜಿಕ ಅರಣ್ಯ ಇಲಾಖೆಗೆ ಸೇರಿದೆ ಎನ್ನಲಾದ ಜಮೀನಿನ ಬಗ್ಗೆ ನಮಗೆ ಸಂದೇಹವಿದೆ. ಆರ್‌ಟಿಸಿಯಲ್ಲಿ ದಾಖಲಾಗದ ಜಾಗವನ್ನೂ ನಿಮ್ಮದೆಂದು ಹೇಳುತ್ತಿದ್ದೀರಿ. ಒಂದು ಅಭಿವೃದ್ಧಿ ಕಾರ್ಯ ಆಗುತ್ತಿಲ್ಲ. ಸಾಮಾಜಿಕ ಅರಣ್ಯ ಇಲಾಖೆ ಅಭಿವೃದ್ಧಿಗೆ ಮಾರಕವಾಗಿದೆ. ಜನಸ್ನೇಹಿ ಕೆಲಸ ಮಾಡುತ್ತಿಲ್ಲ. ಅವರ ಇಚ್ಛೆಯಂತೆ ಗಿಡಗಳನ್ನು ಎಲ್ಲಿ ಬೇಕಾದರೂ ನೆಡಬಹುದಾ ? ಅವರು ನಾಲ್ಕು ಗಿಡ ನೆಟ್ಟ ಕೂಡಲೇ ಜಾಗ ಅವರದ್ದಾಗುತ್ತದಾ ? ಎಂದು ನಾರಾಯಣ ಪ್ರಕಾಶ್ ಪ್ರಶ್ನಿಸಿದರು. ಆರ್‌ಟಿಸಿ ಎಂಟ್ರಿ ಪೆಂಡಿಂಗ್ ಇದೆ. ಹಂತ ಹಂತವಾಗಿ ಮಾಡುತ್ತಿದ್ದೇವೆ ಎಂದು ಕೃಷ್ಣ ಜೋಗಿ ಹೇಳಿದರು. ಈ ವೇಳೆ ತುಸು ಏರುಧ್ವನಿಯಲ್ಲಿ ಮಾತನಾಡಿದ ಕೃಷ್ಣ ಜೋಗಿಯವರನ್ನು ತರಾಟೆಗೆತ್ತಿಕೊಂಡ ನಾರಾಯಣ ಪ್ರಕಾಶ್‌ರವರು ಕಾನೂನು ಬಿಟ್ಟು ಇಲಾಖೆ ಹೋಗಿಲ್ಲ. ಅಂದರೆ ಸರಿಯಾದ ದಾಖಲೆ ಕೊಡಿ ಎಂದು ಛಾಲೆಂಜ್ ಹಾಕಿದರು. ಸಾರ್ವಜನಿಕ ಉಪಯೋಗಕ್ಕಾಗಿ ನಾವು ಮಾತನಾಡುವುದು ನಮ್ಮ ಮನೆಯ ವಿಷಯಕ್ಕಲ್ಲ. ಎಂದು ಅವರೂ ಏರು ಧ್ವನಿಯಲ್ಲಿಯೇ ಮಾತನಾಡಿದಾಗ ಚರ್ಚಾ ನಿಯಂತ್ರಣಾಧಿಕಾರಿ ಕಿರಣ್‌ರವರು ಮಧ್ಯೆ ಬಂದು ಅಧಿಕಾರಿಯನ್ನು ಸುಮ್ಮನಿರುವಂತೆ ಸೂಚಿಸಿ ಈ ಬಗ್ಗೆ ಸ್ಪಷ್ಟನೆ ನೀಡಿದರು. ಹಿಂದೆ ಸರಕಾರಿ ಖಾಲಿ ಜಾಗದಲ್ಲಿ ನೆಡುತೋಪು ಮಾಡಲಾಗಿತ್ತು. ಆದರೆ ಇತ್ತೀಚೆಗಿನ ಸರಕಾರ ನಿಯಮದಂತೆ ಕೆಲವೊಂದು ಅಕೇಶಿಯಾ ನೆಡುತೋಪುಗಳನ್ನು ಅನುಮತಿ ಇದ್ದು ಕಟಾವು ಮಾಡಬೇಕಾಗುತ್ತದೆ. ಆ ಲಿಸ್ಟ್ ನಲ್ಲಿ ಬರುವ ಪ್ರದೇಶಗಳನ್ನು ಕಟಾವು ಮಾಡಿದ ಬಳಿಕ ಆ ಜಾಗವನ್ನು ಸಾಮಾಜಿಕ ಅರಣ್ಯ ಇಲಾಖೆಯಿಂದ ತೆಗೆದು ಇತರ ಸಾಮಾಜಿಕ ಉದ್ದೇಶಗಳಿಗೆ ಬಳಸಿಕೊಳ್ಳಬಹುದಾಗಿದೆ ಎಂದು ವಲಯ ಅರಣ್ಯಾಧಿಕಾರಿ ಕಿರಣ್ ಹೇಳಿದರು.

ಕಂದಾಯದಿಂದ ಮೀಸಲು ಅರಣ್ಯ ಇಲಾಖೆಗೆ ಹೋದದ್ದು ಹೇಗೆ ?: ಕಂದಾಯ ಇಲಾಖೆಯಲ್ಲಿದ್ದ ಜಮೀನು 1996 ರ ಅವಧಿಯಲ್ಲಿ ಏಕಾಏಕಿ ಮೀಸಲು ಅರಣ್ಯ ಇಲಾಖೆಗೆ ಹೋದದ್ದು ಹೇಗೆ ? ಆಗ ವ್ಯಕ್ತಿಯಿಂದ ಸರ್ಕಾರಕ್ಕೆ ನೀಡಲಾಗಿದೆ ಎಂದು ಅದರಲ್ಲಿ ಉಲ್ಲೇಖಿಸಲಾಗಿದೆ. ಮೀಸಲು ಅರಣ್ಯ ಇಲಾಖೆಗೆ ಕೊಡುವುದಕ್ಕಿಂತ ಎಷ್ಟೋ ನಿವೇಶನ ರಹಿತ ಜನರಿಗೆ ಅದನ್ನು ವಿತರಣೆ ಮಾಡಬಹುದಲ್ವಾ ? ಎಂದು ಗ್ರಾಮಸ್ಥ ರಮೇಶ್ ಗುರಿಕ್ಕೇಲು ಕೇಳಿದರು. ಮದ್ರಾಸ್ ಸರಕಾರ ಅವಧಿಯಲ್ಲಿ ಈ ನಿಯಮ ಇತ್ತು. ಆ ಅವಧಿಯಲ್ಲಿ ಆಗಿರುವ ಜಮೀನುಗಳು ಮ್ಯುಟೇಶನ್ ಆಗುವ ಸಮಯದಲ್ಲಿ ಪಹಣಿ ಪತ್ರದಲ್ಲಿ ಬದಲಾವಣೆಗಳು ಆಗಿರಬಹುದೆಂದು ಕಿರಣ್ ಹೇಳಿದರು. ಸಂಶಯವಿರುವ ನಿರ್ದಿಷ್ಟ ಸರ್ವೆ ನಂ. ನ್ನು ಇಲಾಖಾ ಮಟ್ಟದಲ್ಲಿ ಪರಿಶೀಲಿಸಿ ಉತ್ತರ ನೀಡುತ್ತೇನೆ ಎಂದರು.

ಒಡ್ಯ ಅಂಗನವಾಡಿಗೆ ನೀರು ಇಲ್ಲ: ಒಡ್ಯ ಅಂಗನವಾಡಿ ಶಾಲೆಯ ಮಕ್ಕಳಿಗೆ ನೀರಿನ ವ್ಯವಸ್ಥೆಯಲ್ಲಿ ಸಮಸ್ಯೆಯುಂಟಾಗಿರುವುದರ ಬಗ್ಗೆ ಸಭೆಯಲ್ಲಿ ಚರ್ಚೆಗೆ ಬಂತು. ಒಡ್ಯ ಅಂಗನವಾಡಿಗೆ 15 ವರ್ಷಗಳಿಂದ ಸ್ಥಳೀಯ ಸರಕಾರಿ ಪ್ರಾಥಮಿಕ ಶಾಲೆಯಿಂದ ನೀರು ಕೊಡುತ್ತಿದ್ದಾರೆ. ಆದರೆ ಇತ್ತೀಚೆಗೆ ಬಂದಿರುವ ಮುಖ್ಯಗುರುಗಳು ಅಂಗನವಾಡಿಗೆ ಬಹಳ ಕಷ್ಟದಿಂದ ನೀರು ಕೊಡುತ್ತಿದ್ದಾರೆ. ಇದರಿಂದ ಅಂಗನವಾಡಿಗೆ ತೊಂದರೆಯಾಗಿದೆ ಎಂದು ಅಂಗನವಾಡಿ ಕಾರ್ಯಕರ್ತೆ ಅಳಲು ತೋಡಿಕೊಂಡರು. ಅಂಗನವಾಡಿ ಮಕ್ಕಳಿಗೆ ನೀರು ಕೊಡುತ್ತಿಲ್ಲವಾದರೆ ಮನುಷ್ಯತ್ವ ಇಲ್ವಾ ? ಪಂಚಾಯತ್ ನಿಂದ ಕ್ರಮ ಕೈಗೊಳ್ಳಿ . ಶಾಲೆಯಿಂದ ಲಿಖಿತವಾಗಿ ಬರೆದುಕೊಡಲಿ. ಪಂಚಾಯತ್ ಆಡಳಿತಾತ್ಮಕವಾಗಿ ಕ್ರಮ ಕೈಗೊಳ್ಳುವ ಬಗ್ಗೆ ನಿರ್ಣಯವಾಗಲಿ ಎಂದು ನಾರಾಯಣ ಪ್ರಕಾಶ್ ಒತ್ತಾಯಿಸಿದರು. ಪ್ರತಿಕ್ರಿಯಿಸಿದ ಗ್ರಾ.ಪಂ. ಅಧ್ಯಕ್ಷೆ ಭಾರತೀರವರು ಈ ಬಗ್ಗೆ ಈಗಾಗಲೇ ಅಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಶಾಲಾ ಮುಖ್ಯಗುರುಗಳಿಗೆ ಸೂಚನೆ ನೀಡಿದ್ದೇವೆ? ಎಂದು ಹೇಳಿ ಸಭೆಯಿಂದಲೇ ಮುಖ್ಯಗುರುಗಳ ಮೊಬೈಲ್‌ಗೆ ಕರೆ ಮಾಡಿ ವಿಚಾರಿಸಿದರು. ಮಾಹಿತಿ ಪಡೆದ ನೋಡಲ್ ಅಧಿಕಾರಿ ಕಿರಣ್‌ರವರು ಪೈಪ್‌ಲೈನ್ ಮತ್ತು ಗೇಟ್‌ವಾಲ್ ಅಳವಡಿಸಿದರೆ ಸಮಸ್ಯೆ ಇತ್ಯರ್ಥಗೊಳ್ಳಲಿದೆ ಎಂದು ಸಭೆಗೆ ಸ್ಪಷ್ಟಪಡಿಸಿದರು.

ತೋಟಗಾರಿಕಾ ಇಲಾಖೆಯ ಶಿವಪ್ರಕಾಶ್ ಎಂ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಜಲಜಾಕ್ಷಿ ವಿ., ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿ ಸುನೀತಾ ಕುಮಾರಿ ಕೆ., ಸಮಾಜ ಕಲ್ಯಾಣ ಇಲಾಖೆಯ ಬಗ್ಗೆ ವಾರ್ಡನ್ ಲೋಕೇಶ್, ಪಾಣಾಜೆ ಉಪ ವಲಯ ಅರಣ್ಯಾಧಿಕಾರಿ ಪ್ರಕಾಶ್ ರೈ ಅರಣ್ಯ ಇಲಾಖೆಯ ಮಾಹಿತಿ ನೀಡಿದರು.

ಅಕ್ಷರ ದಾಸೋಹ ಅಕ್ಕಿ ಮಾಫಿಯಾ..!?
ಶಿಕ್ಷಣ ಇಲಾಖೆಯ ಬಗ್ಗೆ ಸಿಆರ್‌ಪಿ ಪರಮೇಶ್ವರಿ ಮಾಹಿತಿ ನೀಡಿದರು. ಅಕ್ಷರ ದಾಸೋಹ ಅಕ್ಕಿ ಗುಣಮಟ್ಟ ಇಲ್ಲ ಎಂದು ಕೇಳಿ ಬಂದಿದೆ. ನಿಮ್ಮ ಗಮನಕ್ಕೆ ಬಂದಿದೆಯಾ ಎಂದು ಗ್ರಾಮಸ್ಥ ಹರೀಶ್ ಕಡಮ್ಮಾಜೆ ಪ್ರಶ್ನಿಸಿದರು. ಅನ್ನ ದುರ್ವಾಸನೆ ಬರುತ್ತಿತ್ತು ಎಂದು ಮಕ್ಕಳಿಂದ ದೂರು ಬಂದಿದೆ ಎಂದರು. ಒಂದು ಚೀಲ ಅಕ್ಕಿ ಕಳಪೆ ಗುಣಮಟ್ಟದಿಂದ ಕೂಡಿತ್ತು. ಉಳಿದೆಲ್ಲಾ ಚೀಲಗಳನ್ನು ಪರಿಶೀಲಿಸಲಾಗಿ ಸರಿಯಾಗಿರುವುದನ್ನು ದೃಢಪಡಿಸಿದ್ದೇವೆ. ಹಾಗಿದ್ದರೂ ಊಟವನ್ನು ಮೊದಲು ಅಡುಗೆ ಸಿಬ್ಬಂದಿ ಮತ್ತು ಶಿಕ್ಷಕರು ಪರೀಕ್ಷಿಸಿ ಬಳಿಕ ಮಕ್ಕಳಿಗೆ ಕೊಡಲಾಗುತ್ತದೆ ಎಂದು ಪರಮೇಶ್ವರಿ ಹೇಳಿದರು. ಆಗ ಪ್ರತಿಕ್ರಿಯಿಸಿದ ಗ್ರಾಮಸ್ಥ ನಾರಾಯಣ ಪ್ರಕಾಶ್‌ರವರು ಇದೆಂತಾ ನ್ಯಾಯ ಶಿಕ್ಷಕರು, ಸಿಬ್ಬಂದಿಗಳನ್ನು ಪ್ರಯೋಗದ ಪ್ರಾಣಿಗಳನ್ನಾಗಿ ಮಾಡಬೇಡಿ. ಆ ಬ್ಯಾಚ್‌ನ ಎಲ್ಲಾ ಚೀಲಗಳನ್ನು ರಿಜೆಕ್ಟ್ ಮಾಡಿ ವಾಪಾಸ್ ಕಳುಹಿಸಿ. 3 ತಿಂಗಳಿಗೆ ಅಕ್ಕಿ ಸ್ಟಾಕ್ ಇಟ್ಟರೆ ಅಕ್ಕಿ ಹಾಳಾಗದೆ ಇರುತ್ತದಾ 15-20 ದಿವಸಕ್ಕೆ ಬೇಕಾಗುವಷ್ಟು ಮಾತ್ರ ಅಕ್ಕಿ ಕೊಡ್ಲಿ. ಇದು ದೊಡ್ಡ ಮಾಫಿಯಾ. ಎಲ್ಲಾ ಶಾಲೆಗಳಲ್ಲಿ ಈ ಸಮಸ್ಯೆ ಇದೆ. ಅಕ್ಕಿಯನ್ನು ಇಲ್ಲಿನ ವಾತಾವರಣದಲ್ಲಿ ಎಷ್ಟು ದಿನ ಸ್ಟಾಕ್ ಇಡಬಹುದು. ವೈಜ್ಞಾನಿಕವಾಗಿ ಇಲ್ಲಿನ ಹವಾಮಾನ ನೋಡಿಕೊಂಡು ಅಕ್ಕಿ ಸಂಗ್ರಹ ಮಾಡಬೇಕಾದದ್ದು ಇಲಾಖೆಯ ಜವಾಬ್ದಾರಿಯಾಗಿದೆ ಎಂದು ನಾರಾಯಣ ಪ್ರಕಾಶ್ ಹೇಳಿದರು.

LEAVE A REPLY

Please enter your comment!
Please enter your name here