ಪುತ್ತೂರು:ತೆಂಕುತಿಟ್ಟು ಯಕ್ಷಗಾನದ ಹಿರಿಯ ‘ಭಾಗವತ ಬ್ರಹ್ಮ’ ಎಂದೇ ಖ್ಯಾತರಾಗಿರುವ ಬಲಿಪ ನಾರಾಯಣ ಭಾಗವತ(85ವ) ಅವರು ಫೆ.16ರಂದು ಸ್ವಗೃಹದಲ್ಲಿ ನಿಧನರಾದರು.
ಬಲಿಪ ಪರಂಪರೆಯ ಕಂಠಸಿರಿ ಮೂಲಕ ಬಲಿಪ ನಾರಾಯಣ ಭಾಗವತರು ಸುಮಾರು 6 ದಶಕಗಳ ಕಾಲ ಭಾಗವತರಾಗಿ ಜನಮಾನಸದಲ್ಲಿ ತಳವೂರಿದ್ದರು. ಸಾಂಪ್ರದಾಯಿಕ ಭಾಗವತಿಕೆಗೆ ಪರ್ಯಾಯ ಹೆಸರೇ ಬಲಿಪ ಭಾಗವತರು ಎಂಬ ಖ್ಯಾತಿ ಗಳಿಸಿದ್ದರು. ಕಟೀಲು ಮೇಳದಲ್ಲಿ ಸುದೀರ್ಘ ಕಾಲ ಭಾಗವತರಾಗಿ ಸೇವೆ ಸಲ್ಲಿಸಿದ್ದರು.
ಬೊಳುವಾರು ಶ್ರೀ ಆಂಜನೇಯ ಯಕ್ಷಗಾನ ಕಲಾಸಂಘ ಮುಂದಿನ ಡಿಸೆಂಬರ್ನಲ್ಲಿ ಆಚರಿಸಲಿರುವ ‘ಶ್ರೀ ಆಂಜನೇಯ 55’ (ಸ್ವರ್ಣಪಂಚಮಿ)ಹಿನ್ನೆಲೆಯಲ್ಲಿ ಬಲಿಪ ನಾರಾಯಣ ಭಾಗವತ ಅವರನ್ನು ಫೆ.15ರಂದು ಅವರ ಮೂಡಬಿದ್ರೆ ನೂಯಿ ಸ್ವಗೃಹದಲ್ಲಿ ಸನ್ಮಾನಿಸಿ ಗೌರವಿಸಲಾಗಿತ್ತು.
ಆಂಜನೇಯ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಭಾಸ್ಕರ್ ಬಾರ್ಯ, ಪದ್ಯಾಣ ಶಂಕರನಾರಾಯಣ ಭಟ್, ಲಕ್ಷ್ಮೀನಾರಾಯಣ ಭಟ್, ಅಚ್ಚುತ ಪಾಂಗಣ್ಣಾಯ ಕೋಡಿಬೈಲು, ಬಲಿಪರ ಪುತ್ರರಾದ ಮಾಧವ, ಗಿರಿಧರ ಅವರು ಜೊತೆಗೂಡಿ ಸನ್ಮಾನಿಸಿದ್ದರು. ಯಕ್ಷಗಾನದ ಹವ್ಯಾಸಿ ಚೆಂಡೆ ಕಲಾವಿದರಾಗಿರುವ ನಗರಸಭಾ ಸದಸ್ಯ ಪಿ.ಜಿ.ಜಗನ್ನಿವಾಸ್ ರಾವ್ ಸೇರಿದಂತೆ ಪುತ್ತೂರಿನಿಂದ ಹಲವು ಕಲಾವಿದರು ಬಲಿಪರ ಮನೆಗೆ ಭೇಟಿ ನೀಡಿ ಸಂತಾಪ ಸೂಚಿಸಿದರು.