ಪುತ್ತೂರು:ಫೆ.14ರ ರಾತ್ರಿ ಸೆಂಟ್ಯಾರ್ ಬಳಕ್ಕ ಬಳಿ ಕಾರೊಂದು ಎರಡು ವಿದ್ಯುತ್ ಕಂಬಗಳಿಗೆ ಡಿಕ್ಕಿಯಾಗಿ ತೋಟಕ್ಕೆ ಬಿದ್ದ ಅವಘಡದಲ್ಲಿ ಓರ್ವ ಮೃತ ಪಟ್ಟ ಘಟನೆಗೆ ಸಂಬಂಧಿಸಿದಂತೆ ಇದೀಗ ಗಾಯಾಳುಗಳು ಪೊಲೀಸರಿಗೆ ಮರು ಹೇಳಿಕೆ ನೀಡಿ, ಮೃತ ಮುರಳೀಕೃಷ್ಣ ಭಟ್ ಅವರು ಕಾರು ಚಲಾಯಿಸುತ್ತಿರಲಿಲ್ಲ ಎಂದು ತಿಳಿಸಿದ್ದಾರೆ.
ಅಪಘಾತದಲ್ಲಿ ನಿಡ್ಪಳ್ಳಿ ಗ್ರಾ.ಪಂ.ಸದಸ್ಯ ಮುರಳೀಕೃಷ್ಣ ಭಟ್ ಅವರು ಮೃತಪಟ್ಟು ಕಾರಲ್ಲಿದ್ದ ಇತರ ಮೂವರು ಗಾಯಗೊಂಡಿದ್ದರು.ಗಾಯಾಳು ಶಶಿಕುಮಾರ್ ಎಂಬವರು ನೀಡಿದ್ದ ದೂರಿನ ಮೇರೆಗೆ ಮೃತ ಮುರಳೀಕೃಷ್ಣ ಭಟ್ ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.ಕಾರು ಚಲಾಯಿಸುತ್ತಿದ್ದ ಮುರಳೀಕೃಷ್ಣ ಭಟ್ ಅವರು ಕಾರನ್ನು ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿ ಎರಡು ವಿದ್ಯುತ್ ಕಂಬಗಳಿಗೆ ಡಿಕ್ಕಿ ಹೊಡೆದು ರಸ್ತೆ ಬದಿಯ ಆಳಕ್ಕೆ ಬಿದ್ದಿತ್ತು ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.ಆದರೆ ಇದೀಗ ಪೊಲೀಸರಿಗೆ ಮರು ಹೇಳಿಕೆ ನೀಡಲಾಗಿದ್ದು, ಮುರಳೀಕೃಷ್ಣ ಭಟ್ ಅವರು ಕಾರು ಚಲಾಯಿಸುತ್ತಿರಲಿಲ್ಲ ಎಂದು ತಿಳಿಸಲಾಗಿದೆ.ಘಟನೆಗೆ ಸಂಬಂಧಿಸಿ ಪೊಲೀಸರು ಗಾಯಾಳುಗಳನ್ನು ಮರು ವಿಚಾರಿಸಿದಾಗ, ಅಪಘಾತ ಸಂದರ್ಭ ನವನೀತ್ ಎಂಬವರು ಕಾರು ಚಲಾಯಿಸುತ್ತಿದ್ದರು. ಮುರಳೀಕೃಷ್ಣ ಭಟ್ ಅವರು ಮುಂದಿನ ಸೀಟಿನಲ್ಲಿ ಕುಳಿತುಕೊಂಡಿದ್ದರು ಎಂದು ಗಾಯಾಳು ಫೆ.16ರಂದು ಪೊಲೀಸರಿಗೆ ಹೇಳಿಕೆ ನೀಡಿರುವುದಾಗಿ ತಿಳಿದು ಬಂದಿದೆ.ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದಾರೆ.