ಉದ್ಘಾಟನೆಗೆ ಸಿದ್ಧಗೊಳ್ಳುತ್ತಿದೆ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ನೂತನ ಸಭಾಭವನ, ಅನ್ನಛತ್ರ – ಫೆ. 23 ಪ್ರತಿಷ್ಠಾ ದಿನದಂದು ಲೋಕಾರ್ಪಣೆ

0

ಫೆ. 19 ಭಾನುವಾರ ಶ್ರಮದಾನ

ಬೆಟ್ಟಂಪಾಡಿ: ಭಕ್ತವರಪ್ರದಾಯಕ,‌ ನಂಬಿ ಬಂದವರ ಪಾಲಿನ ಅಭಯದಾತ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಸುಮಾರು ರೂ. 1.5 ಕೋಟಿ ವೆಚ್ಚದ ಸುಸಜ್ಜಿತ ನೂತನ ಸಭಾಭವನ, ಅನ್ನಛತ್ರ ನಿರ್ಮಾಣ ಕಾಮಗಾರಿ ಅಂತಿಮ ಸ್ಪರ್ಶ ಹಂತದಲ್ಲಿದ್ದು, ಫೆ. 23 ದೇವಾಲಯದ ಪ್ರತಿಷ್ಠಾ ದಿನದ ಶುಭ ಮುಹೂರ್ತದಂದು ಲೋಕಾರ್ಪಣೆಗೊಳ್ಳಲಿದೆ.

ದೇವಾಲಯದಲ್ಲಿ ನಡೆಯುವ ವಿವಾಹಾದಿ ಕಾರ್ಯಕ್ರಮಗಳಿಗೆ, ವಾರ್ಷಿಕ ಕಾರ್ಯಕ್ರಮಗಳಿಗಾಗಿ ಸಭಾಂಗಣ ಮತ್ತು ಸುಸಜ್ಜಿತ ಅನ್ನಛತ್ರ, ಪಾಕಶಾಲೆ ನಿರ್ಮಾಣ ಕಾರ್ಯಗಳನ್ನು ದೇವಾಲಯದ ಎರಡನೇ ಹಂತದ ಅಭಿವೃದ್ಧಿ ಪ್ರಕ್ರಿಯೆಗಳಾಗಿ ಕೈಗೆತ್ತಿಕೊಳ್ಳಲಾಗಿತ್ತು. ಊರ ಪರವೂರ ಭಕ್ತರ ಸರ್ವರೀತಿಯ ಸಹಕಾರದಿಂದ ಈಗಾಗಲೇ ಪಾಕಶಾಲೆ ಲೋಕಾರ್ಪಣೆಗೊಂಡಿದೆ. ನಂತರ ವಿಶಾಲವಾದ ಸಭಾಂಗಣ ಮತ್ತು ಅನ್ನಛತ್ರ ನಿರ್ಮಾಣ ಕಾಮಗಾರಿ ಆರಂಭಿಸಲಾಗಿತ್ತು‌. ಸ್ಥಳದ ಕೊರತೆ ಎದ್ದುಕಾಣುತ್ತಿದ್ದ ದೇವಾಲಯದಲ್ಲಿ ದೇವಳಕ್ಕೆ ಹೊಂದಿಕೊಂಡು ಉತ್ತರಾಭಿಮುಖವಾಗಿ ಅತ್ಯಾಕರ್ಷಕವಾಗಿ ನೂತನ ಸಭಾಭವನ ನಿರ್ಮಾಣಗೊಂಡಿದೆ. ಮೇಲ್ಭಾಗದಲ್ಲಿ ವೇದಿಕೆ ಮತ್ತು ಸಭಾಂಗಣ, ಕೆಳಭಾಗದಲ್ಲಿ ವಿಶಾಲ ಅನ್ನಛತ್ರ ಕಾಮಗಾರಿ ನಡೆದಿದೆ.

ಫೆ. 23: ಉದ್ಘಾಟನೆ

ಫೆ. 23 ಶ್ರೀ ದೇವರ ಪ್ರತಿಷ್ಠೆಯ ದಿನ. 2013 ನೇ ಇಸವಿಯಲ್ಲಿ ದೇವಳದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆದು 10 ವರ್ಷಗಳು ಸಲ್ಲುತ್ತಿವೆ. ಈ ಬಾರಿ 10 ನೇ ವರ್ಷದ ಪ್ರತಿಷ್ಠಾ ಮಹೋತ್ಸವದ ಶುಭ ದಿನವೇ ದಶ ವರುಷದ ಸವಿನೆನಪಿಗೆ ಎಂಬಂತೆ ನೂತನ ಸಭಾಭವನ, ಅನ್ನಛತ್ರ ನಿರ್ಮಾಣ ಕಾಮಗಾರಿ ಪೂರ್ಣಗೊಂಡು ಫೆ. 23 ರಂದೇ ಲೋಕಾರ್ಪಣೆಗೊಳ್ಳಲಿದೆ.

ಇದೇ ವೇಳೆ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ದ್ವಾದಶ ನಾರಿಕೇಳ ಗಣಪತಿ ಹವನ, ಏಕಾದಶ ರುದ್ರಾಭಿಷೇಕ ಮತ್ತು ಸಾಮೂಹಿಕ ಆಶ್ಲೇಷ ಬಲಿ ಸೇವೆಯು ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ.

ಉದ್ಘಾಟನಾ ಸಮಾರಂಭ
ನಿಟ್ಟೆ ವಿಶ್ವವಿದ್ಯಾನಿಲಯದ ಕುಲಾಧಿಪತಿ ವಿನಯ್ ಹೆಗ್ಡೆಯವರು ನೂತನ ಸಭಾಭವನವನ್ನು ಉದ್ಘಾಟಿಸಲಿದ್ದಾರೆ.‌ ಶಾಸಕ ಸಂಜೀವ ಮಠಂದೂರುವರು ಅನ್ನಛತ್ರವನ್ನು ಉದ್ಘಾಟಿಸಲಿದ್ದಾರೆ. ಅಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷ ಉದ್ಯಮಿ ಅಶೋಕ್ ಕುಮಾರ್ ರೈ ಅಧ್ಯಕ್ಷತೆ ವಹಿಸಲಿದ್ದಾರೆ. ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮುಂಬೈ ದೀಪಕ್ ಹಾಸ್ಪಿಟಲ್ ನ ಡಾ. ಭಾಸ್ಕರ ಶೆಟ್ಟಿ, ಪದ್ಮಶ್ರೀ ಅಮೈ ಮಹಾಲಿಂಗ ನಾಯ್ಕ್, ಎಸ್.ಕೆ.ಆರ್.ಡಿ.ಪಿ. ಬಿಸಿ ಟ್ರಸ್ಟ್ ಮುಖ್ಯ‌ಕಾರ್ಯನಿರ್ವಹಕಾಧಿಕಾರಿ ಅನಿಲ್ ಕುಮಾರ್ ಎಸ್.ಎಸ್., ಪ್ರಗತಿಪರ ಕೃಷಿಕ ಮಿತ್ತೂರು ಪುರುಷೋತ್ತಮ ಭಟ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ವಿಠಲ ನಾಯಕ್ ಕಲ್ಲಡ್ಕ ಬಳಗದಿಂದ ಗೀತಾ ಸಾಹಿತ್ಯ
ಅಪರಾಹ್ನ ಗೀತೆ, ಸಾಹಿತ್ಯದ ಮೂಲಕ ವಿನೂತನ ರೀತಿಯಲ್ಲಿ ಸಮಾಜಕ್ಕೆ ಸಂದೇಶ, ಜಾಗೃತಿ ಮೂಡಿಸುವ ಜನಮನ್ನಣೆಯ ಕಾರ್ಯಕ್ರಮ ವಿಠಲ ನಾಯಕ್ ಮತ್ತು ಬಳಗದವರಿಂದ ‘ಗೀತಾ ಸಾಹಿತ್ಯ ಸಂಭ್ರಮ’ ನಡೆಯಲಿದೆ.

ಫೆ. 19: ಶ್ರಮದಾನ
ಲೋಕಾರ್ಪಣೆಗೊಳ್ಳಲಿರುವ ನೂತನ ಸಭಾಂಗಣ ಮತ್ತು ಅನ್ನಛತ್ರ ಹಾಗೂ ದೇವಾಲಯದ ಪರಿಸರದಲ್ಲಿ ಸ್ವಚ್ಛತೆ ಮಾಡುವ ನಿಟ್ಟಿ‌ನಲ್ಲಿ ಭಕ್ತಾಭಿಮಾನಿಗಳಿಂದ ಶ್ರಮದಾನ ನಡೆಯಲಿದೆ.‌ ಊರ ಪರವೂರ ಭಕ್ತಾಭಿಮಾನಿಗಳು ಶ್ರೀದೇವರ ಶ್ರಮಸೇವೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೇವಳದ ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ಬಲ್ಲಾಳ್ ವಿನಂತಿಸಿಕೊಂಡಿದ್ದಾರೆ.

ದೇಣಿಗೆ ನೀಡುವವರ ಗಮನಕ್ಕೆ
ಈಗಾಗಲೇ ಊರ ಪರವೂರ ಭಕ್ತಾಭಿಮಾನಿಗಳು ನೂತನ ಸಭಾಂಗಣ ಅನ್ನಛತ್ರ ಕಾಮಗಾರಿಗಳಿಗೆ ನಗದು ರೂಪದ ದೇಣಿಗೆಗಳನ್ನು ನೀಡಿ ಸಹಕರಿಸಿರುತ್ತಾರೆ. ದೇಣಿಗೆ ನೀಡುವವರು ಜೀರ್ಣೋದ್ದಾರ ಸಮಿತಿಯ ಬ್ಯಾಂಕ್ ಖಾತೆಗೆ ಅಥವಾ ದೇವಳದ ಕಚೇರಿಯಲ್ಲಿಯೂ ನೀಡಿ ಸಹಕರಿಸಿ ದೇವರ ಕೃಪೆಗೆ ಪಾತ್ರರಾಗುವಂತೆ ವಿನಂತಿಸಲಾಗಿದೆ.
ದೇಣಿಗೆಯನ್ನು ನೀಡುವ ಭಗವದ್ಭಕ್ತರು ಜೀರ್ಣೋದ್ದಾರ ಸಮಿತಿಯ ಬ್ಯಾಂಕ್ ಖಾತೆ ಸಂಖ್ಯೆ : 70750100006429 (IFSC : BARB0VJBEPA – BANK OF BARODA Bettampady Branch) ಜಮೆ ಮಾಡಬಹುದಾಗಿದೆ.

LEAVE A REPLY

Please enter your comment!
Please enter your name here