ಕಡಬ: ರೆಂಜಿಲಾಡಿ ಗ್ರಾಮದ ನೈಲ ಎಂಬಲ್ಲಿ ಇಂದು ಮುಂಜಾನೆ ನಡೆದ ಆನೆ ದಾಳಿ ಪ್ರಕರಣದಲ್ಲಿ ಯುವತಿ ಹಾಗೂ ವ್ಯಕ್ತಿಯೋರ್ವರು ಆನೆ ದಾಳಿಗೊಳಗಾಗಿ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ದ.ಕ ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ವೀಕ್ಷಣೆ ನಡೆಸಿ, ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಮೃತ ರಂಜಿತಾ ಅವರ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ರಂಜಿತಾ ಅವರ ಮನೆಯವರು ಜಿಲ್ಲಾಧಿಕಾರಿಯವರಲ್ಲಿ ತನ್ನ ನೋವನ್ನು ಹೇಳಿಕೊಂಡರು. ಈ ಸಂದರ್ಭದಲ್ಲಿ ದುಃಖತ್ತಪ್ತರನ್ನು ಸಂತೈಸಿದ ಜಿಲ್ಲಾಧಿಕಾರಿಯವರು ಮೃತರಿಗೆ ತಲಾ 15 ಲಕ್ಚ ಪರಿಹಾರ ಹಾಗೂ ರಂಜಿತಾ ಅವರ ಸಹೋದರಿಗೆ ಉದ್ಯೋಗ ಕೊಡಿಸುವ ಭರವಸೆ ನೀಡಿದರು. ಬಳಿಕ ಆಕ್ರೋಶಗೊಂಡಿದ್ದ ಸ್ಥಳೀಯರ ಜತೆ ಕೂಡ ಮಾತುಕತೆ ನಡೆಸಿದರು.
ಐತ್ತೂರು ಪಿಡಿಒ ಸುಜಾತ ವಿರುದ್ದ ಸಾರ್ವಜನಿಕರ ಆಕ್ರೋಶ
ಇದೇ ಸಂದರ್ಭದಲ್ಲಿ ಆನೆ ಹಾವಳಿ ಬಗ್ಗೆ ಯೂಟ್ಯೂಬ್ ವರದಿ ಮಾಡಿದ್ದ ವ್ಯಕ್ತಿಯ ವಿರುದ್ದ ಕಡಬ ಪೋಲಿಸರಿಗೆ ದೂರು ನೀಡಿದ್ದ ಐತ್ತೂರು ಪಂಚಾಯತ್ ಪಿಡಿಒ ಸುಜಾತ ಅವರ ವಿರುದ್ದ ಆಕ್ರೋಶ ವ್ಯಕ್ತವಾಗಿ ಡಿಸಿಯವರ ಗಮನಕ್ಕೂ ಬಂತು. ಬಳಿಕ ಡಿಸಿಯವರು ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದು ಪೋಲಿಸರು ಪ್ರಕರಣ ದಾಖಲಿಸಿದ್ದರೆ ಅದನ್ನು ಹಿಂಪಡೆಯಲು ಆದೇಶ ನೀಡಿದರು.
ಇಂದೆ ಕಾರ್ಯಚರಣೆ ಪ್ರಾರಂಭ
ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾ ಅರಣ್ಯಾಧಿಕಾರಿಯವರು ಮಾತನಾಡಿ, ಇಂದೇ ಆನೆಯನ್ನು ಹಿಡಿಯಲು ಕಾರ್ಯಾಚರಣೆ ಮಾಡಲಾಗುವುದು. ಇದಕ್ಕೆ ಬೇಕಾದ ಎಲ್ಲಾ ತಯಾರಿಗಳಿಗೆ ಸಿದ್ದತೆ ನಡೆಸಲಾಗುತ್ತದೆ ಎಂದು ಹೇಳಿದರು.
ಸಾರ್ವಜನಿಕರ ತೀವ್ರ ಆಕ್ರೋಶ
ಮುಂಜಾನೆಯಿಂದ ಬಹು ಸಂಖ್ಯೆಯಲ್ಲಿ ಜಮಾಯಿಸಿದ ಸಾರ್ವಜನಿಕರು ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.