ತಾ|ಸರಕಾರಿ ನೌಕರರ ಸಂಘದ ವಾರ್ಷಿಕ ಕ್ರೀಡಾಕೂಟ

0

ಸರಕಾರಿ ನೌಕರರಿಗೆ ಏಳನೇ ವೇತನ ಆಯೋಗದ ಪ್ರಯೋಜನ ಸಿಗುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು- ಶಾಸಕ ಮಠಂದೂರು

ಪುತ್ತೂರು: 7 ನೇ ವೇತನ ಆಯೋಗದ ಪ್ರಯೋಜನ ಸಿಗುವ ನಿಟ್ಟಿನಲ್ಲಿ ಪ್ರಯತ್ನಿಸಲಾಗವುದು. ಸರಕಾರಿ ನೌಕರರಿಗೆ ಮಧ್ಯಂತರ ಪರಿಹಾರವನ್ನು ಕೊಡುವ ನಿಟ್ಟಿನಲ್ಲಿ ಸರಕಾರದ ಆರ್ಥಿಕ ಪರಿಸ್ಥಿತಿ ನೋಡಿಕೊಂಡು ಎಲ್ಲಾ ನೌಕರರಿಗೆ ನ್ಯಾಯಕೊಡಬೇಕಾದ ಅವಶ್ಯಕತೆಯಿದೆ. ಬಜೆಟ್ ಕುರಿತು ಮತ್ತೊಮ್ಮೆ ಚರ್ಚೆ ನಡೆಯಲಿದೆ. ಈ ಕುರಿತು ಮುಖ್ಯಮಂತ್ರಿಯವರ ಗಮನಕ್ಕೆ ತರಲಾಗುವುದು ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ಚಿತ್ರ: ಕ್ಲಾಸಿಕ್ಲಿಕ್ಸ್ ಪುತ್ತೂರು


ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಬೆಂಗಳೂರು ಇದರ ಪುತ್ತೂರು ತಾಲೂಕು ಘಟಕದ ವತಿಯಿಂದ ಫೆ.19 ರಂದು ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆದ ತಾಲೂಕು ಸರಕಾರಿ ನೌಕರರ ವಾರ್ಷಿಕ ಕ್ರೀಡಾಕೂಟ-2023 ಅನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಶಾರೀರಿಕವಾಗಿ ದೇಹ ಸೌಂದರ್ಯ ವೃದ್ಧಿಸುವ ಜೊತೆಗೆ ದೈಹಿಕ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಕ್ರೀಡೆ ಸಹಕಾರಿಯಾಗಲಿದ್ದು, ಸರಕಾರಿ ನೌಕರರು ಈ ಹಿನ್ನಲೆಯಲ್ಲಿ ವೃತ್ತಿಯನ್ನು ಬದಿಗಿಟ್ಟು ಈ ಕ್ರೀಡಾಕೂಟವನ್ನು ಆಯೋಜಿಸಿದೆ. ಸರಕಾರಿ ನೌಕರರ ಕ್ರೀಡಾಕೂಟಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳನ್ನು ಕ್ರೀಡಾ ಇಲಾಖೆಯಲ್ಲಿ ನೇಮಕಾತಿ ಮಾಡುತ್ತಿದೆ. ಈ ಮೂಲಕ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಲು ಅವಕಾಶವಿದೆ. ಅತ್ಯಧಿಕ ಮಾನವ ಸಂಪನ್ಮೂಲ ಇರುವ ನಮ್ಮ ದೇಶ ಪ್ರಸ್ತುತ ಆರ್ಥಿಕ, ವೈಜ್ಞಾನಿಕವಾಗಿ ಮುಂದುವರಿದಿದ್ದು, ಕ್ರೀಡೆಯಲ್ಲೂ ಮುಂದಿದ್ದೇವೆ ಎಂಬುದನ್ನು ತೋರಿಸಿಕೊಡುವ ಅಗತ್ಯವಿದೆ ಎಂದರು.


ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಮಾತನಾಡಿ, ಆಯಾ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವ ನೌಕರರಿಗೆ ಕೆಲಸದ ಒತ್ತಡ ಇದ್ದೇ ಇದೆ. ಇದೀಗ ಸರಕಾರಿ ನೌಕರರ ಸಂಘವು ವಾರ್ಷಿಕ ಕ್ರೀಡಾಕೂಟವನ್ನು ಏರ್ಪಡಿಸಿದ್ದು, ಸರಕಾರಿ ನೌಕರರು ಒಂದೇ ಕುಟುಂಬದವರಂತೆ ಈ ಕ್ರೀಡಾಕೂಟದಲ್ಲಿ ಭಾಗವಹಿಸಿರುತ್ತಾರೆ. ಕ್ರೀಡಾಕೂಟದಲ್ಲಿ ಭಾಗವಹಿಸುವ ಮೂಲಕ ದಿನನಿತ್ಯದ ಒತ್ತಡವನ್ನು ನಿಭಾಯಿಸುವಲ್ಲಿ ಹಾಗೂ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಸಹಕಾರಿ ಎನಿಸಲಿದೆ. ಸರಕಾರಿ ನೌಕರರ ಬೇಡಿಕೆ ಏನಿದೆಯೋ ಅದು ಶೀಘ್ರದಲ್ಲಿ ಬಗೆ ಹರಿಯುವ ಬಗ್ಗೆ ಭರವಸೆಯಿದೆ ಎಂದರು.


ಮುಖ್ಯ ಅತಿಥಿ ಪುತ್ತೂರು ಉಪವಿಭಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವಿ.ಪಿ.ಕಾರ್ಯಪ್ಪ ಮಾತನಾಡಿ, ಕೆಲಸದಲ್ಲಿ ಒತ್ತಡ ಎಂಬುದು ಇದ್ದೇ ಇರುತ್ತದೆ. ಇದರ ನಡುವೆ ಆರೋಗ್ಯವನ್ನು ಕಾಯ್ದಿಟ್ಟುಕೊಳ್ಳುವುದು ಕೂಡ ಅತೀ ಮುಖ್ಯವೆನಿಸುತ್ತದೆ. ಸರಕಾರಿ ನೌಕರರು ಯಾವುದೇ ಒಂದು ಕ್ರೀಡೆಯನ್ನು ಚಟವನ್ನಾಗಿ ಅಳವಡಿಸಿಕೊಂಡು ದಿನದ ಒಂದು ಗಂಟೆ ಮೀಸಲಿಟ್ಟರೆ ದೇಹ ಆರೋಗ್ಯವಾಗಿರಲು ಸಾಧ್ಯ. ಕ್ರೀಡೆಯಲ್ಲಿ ಭಾಗವಹಿಸುವ ಎಲ್ಲಾ ಕ್ರೀಡಾಪಟುಗಳನ್ನು ನಾವು ಗೌರವದಿಂದ ಕಾಣಬೇಕು ಜೊತೆಗೆ ನೌಕರರು ತಮ್ಮ ಸೇವೆಯನ್ನು ಉತ್ತಮವಾಗಿ ನಿರ್ವಹಿಸಿದಾಗ ಕರ್ನಾಟಕವು ಅಗ್ರಸ್ಥಾನದಲ್ಲಿ ನಿಲ್ಲುತ್ತದೆ ಎಂದರು.


ವೇದಿಕೆಯಲ್ಲಿ ತಾಲೂಕು ಸರಕಾರಿ ನೌಕರರ ಸಂಘದ ನಿಕಟಪೂರ್ವ ಅಧ್ಯಕ್ಷ ಮೌರಿಸ್ ಮಸ್ಕರೇನಸ್, ಮಾಜಿ ರಾಜ್ಯ ಪರಿಷತ್ ಸದಸ್ಯ ಕೃಷ್ಣಪ್ಪ ಕೆ, ಖಜಾಂಚಿ ಕೃಷ್ಣ ಬಿ., ಹಿರಿಯ ಉಪಾಧ್ಯಕ್ಷ ಹರಿಪ್ರಕಾಶ್ ಬೈಲಾಡಿ, ಗೌರವಾಧ್ಯಕ್ಷ ರಾಮಚಂದ್ರ, ತಾಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ನವೀನ್ ರೈ, ತಾಲೂಕು ಸರಕಾರಿ ವಾಹನ ಚಾಲಕದ ಸಂಘದ ಅಧ್ಯಕ್ಷ ಗಿರಿಧರ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇತ್ತೀಚೆಗೆ ದರ್ಬೆ ಆಫೀಸರ್ಸ್ ಕ್ಲಬ್‌ನಲ್ಲಿ ನಡೆದ ನೌಕರರ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಸಂಘದ ಕಾರ್ಯದರ್ಶಿ ಅಬ್ರಹಾಂ ಎಸ್.ಎ. ಸ್ವಾಗತಿಸಿ, ರಾಜ್ಯ ಪರಿಷತ್ ಸದಸ್ಯ ಪುರುಷೋತ್ತಮ ಬಿ. ವಂದಿಸಿದರು. ಕ್ರೀಡಾ ಜತೆ ಕಾರ್ಯದರ್ಶಿ ವಿನೋದ್ ಕುಮಾರ್ ಕೆ.ಎಸ್. ವಂದಿಸಿದರು.

ಬಜೆಟ್‌ನಲ್ಲಿ ಸಿಎಂ ಸರಕಾರಿ ನೌಕರರ ಬಗ್ಗೆ ಮಾತನಾಡದೇ ಇರುವುದು ಬೇಸರ ತಂದಿದೆ…
ಸರಕಾರಿ ನೌಕರರ ಕ್ರೀಡಾಕೂಟಕ್ಕೆ ಯಾವುದೇ ಅನುದಾನ ಸಿಗ್ತಾ ಇಲ್ಲ. ಸರಕಾರಿ ನೌಕರರ ಕ್ರೀಡಾಕೂಟಕ್ಕೆ ಸರಕಾರದ ವತಿಯಿಂದ ಅನುದಾನ ನೀಡಲು ಕ್ರಮ ಕೈಗೊಳ್ಳಬೇಕು. ಈಗಾಗಲೇ ಎನ್‌ಪಿಎಸ್‌ಗೆ 2006 ರಿಂದ ಸರಕಾರಿ ನೌಕರರು ಒಳಗೊಂಡಿರುತ್ತಾರೆ. ಮೂಲ ವೇತನದಿಂದ ಶೇ.10 ರಷ್ಟು ಕಟ್‌ಅಪ್ ಮಾಡಲಾಗುತ್ತಿದೆ. ಈ ಕುರಿತು ಕಳೆದ ಬಾರಿ ನೌಕರರು 15 ದಿನಗಳ ಹೋರಾಟ ಮಾಡಿದ್ದು ಬೇಡಿಕೆ ಈಡೇರಿಕೆಯ ಭರವಸೆ ದೊರೆತಿದೆ. ಆದರೆ ಈ ಬಾರಿಯ ಬಜೆಟ್‌ನಲ್ಲಿ ದೊಡ್ಡ ನಿರೀಕ್ಷೆ ಇಟ್ಟಿದ್ದೆವು. ಈ ಕುರಿತು ಮುಖ್ಯಮಂತ್ರಿಗಳು ಸರಕಾರಿ ನೌಕರರ ಬಗ್ಗೆ ಮಾತನಾಡದೇ ಇರುವುದು ಬೇಸರ ತಂದಿದೆ. ಮುಂದಿನ ಚುನಾವಣೆ ಮೊದಲು ಸರಕಾರಿ ನೌಕರರನ್ನು ಸಮಾಧಾನಪಡಿಸುವ ಕೆಲಸ ನಡೆಯಬೇಕಾಗಿದೆ. ಸರಕಾರಿ ನೌಕರರನ್ನು ಸಮಧಾನಪಡಿಸಿದಾಗ ಎಲ್ಲವೂ ಒಳ್ಳೆಯದಾಗುತ್ತದೆ.
-ಶಿವಾನಂದ ಆಚಾರ್ಯ, ಅಧ್ಯಕ್ಷರು, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕು ಘಟಕ

ಒಂದು ಇಂಕ್ರಿಮೆಂಟ್ ಹೆಚ್ಚಳಕ್ಕೆ ಮನವಿ..
ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ಸಾಧನೆ ಮಾಡಿದ ಮುಕ್ವೆ ಶಾಲಾ ಶಿಕ್ಷಕಿ ವೇದಾವತಿ ಎ.ರವರನ್ನು ಈ ಸಂದರ್ಭದಲ್ಲಿ ಶಾಲು ಹೊದಿಸಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿಕ್ಷಕಿ ವೇದಾವತಿರವರು, ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ಸರಕಾರಿ ನೌಕರರಿಗೆ ಹೆಚ್ಚುವರಿ ಇಂಕ್ರಿಮೆಂಟ್ ಕೊಡುವ ಸೌಲಭ್ಯವನ್ನು ನಿಲ್ಲಿಸಿರುತ್ತಾರೆ. ಆದ್ದರಿಂದ ಶಾಸಕರು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ಸರಕಾರಿ ನೌಕರರಿಗೆ ಒಂದು ಹೆಚ್ಚುವರಿ ಇಂಕ್ರಿಮೆಂಟ್ ಕೊಡಿಸುವ ಕುರಿತು ಸದನದಲ್ಲಿ ಮಾತನಾಡಬೇಕು ಎಂದು ಶಾಸಕರಲ್ಲಿ ಮನವಿ ಮಾಡಿದರು.
ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಸೇರ ಕೋಟಿಯಪ್ಪ ಪೂಜಾರಿ

LEAVE A REPLY

Please enter your comment!
Please enter your name here