ಕೋಲ್ಪೆ ಮಖಾಂ ಉರೂಸ್; ಸೌಹಾರ್ದ ಸಮಾರಂಭ

0

  • ರಾಜಕೀಯ ಚಿಂತನೆಯಿಂದ ಸೌಹಾರ್ದತೆ ಕೆಡುತ್ತಿದೆ- ಫಾ| ಪಿ.ಕೆ.ಅಬ್ರಹಾಂ
  • ಎಲ್ಲಾ ಧರ್ಮವೂ ಸದುದ್ದೇಶದ ಸಂದೇಶ ಸಾರುತ್ತವೆ- ಬಿ.ಎಂ.ಭಟ್
  • ಧರ್ಮಗಳು ಸಾರುವ ವಿಚಾರ ಕೆಟ್ಟದಲ್ಲ-ಅಝೀಝ್ ದಾರಿಮಿ
  • ಬಡವರಿಗೂ ಗುಣಮಟ್ಟದ ಶಿಕ್ಷಣ, ಆರೋಗ್ಯ ಸೇವೆ ಸಿಗಬೇಕು-ರಾ.ಚಿಂತನ್

ನೆಲ್ಯಾಡಿ: ಕಡಬ ತಾಲೂಕಿನ ನೆಲ್ಯಾಡಿ ಸಮೀಪದ ಕೊಣಾಲು ಗ್ರಾಮದ ಕೋಲ್ಪೆಯಲ್ಲಿರುವ ಸೈಯ್ಯದ್ ಮಲ್ಹರ್ ವಲಿಯುಲ್ಲಾಹಿ ದರ್ಗಾ ಶರೀಫ್‌ನಲ್ಲಿ ನಡೆದ ಕೋಲ್ಪೆ ಮಖಾಂ ಉರೂಸ್ ಹಾಗೂ ಸೌಹಾರ್ದ ಸಮಾರಂಭ ಫೆ.19ರಂದು ರಾತ್ರಿ ನಡೆಯಿತು.

ಸೌಹಾರ್ದ ಸಮಾರಂಭವನ್ನು ಕೋಲ್ಪೆ ಬಿಜೆಎಂ ಮುದರ್ರೀಸ್ ಮುಹಮ್ಮದ್ ಶರೀಫ್ ದಾರಿಮಿ ಅಲ್‌ಹೈತಮಿ ಅವರು ಉದ್ಘಾಟಿಸಿ ಶುಭಹಾರೈಸಿದರು. ಸೌಹಾರ್ದ ಸಂದೇಶ ನೀಡಿದ ಕೊಣಾಲು ಸೈಂಟ್ ತೋಮಸ್ ಸಿರಿಯನ್ ಚರ್ಚ್‌ನ ಧರ್ಮಗುರು ಪಿ.ಕೆ.ಅಬ್ರಹಾಂರವರು, ನಾವು ಧರ್ಮದ ಹೆಸರಿನಲ್ಲಿ ಗುರುತಿಸಿಕೊಳ್ಳುತ್ತಿದ್ದೇವೆ. ಮನುಷ್ಯನಾಗಿ ಗುರುತಿಸಿಕೊಳ್ಳುತ್ತಿಲ್ಲ. ರಾಜಕೀಯ ಚಿಂತನೆಗಳಿಂದಾಗಿ ಮನುಷ್ಯನಿಗಿಂತ ದೊಡ್ಡದಾಗಿ ಧರ್ಮ ಬಂತು. ಇದರಿಂದ ಸೌಹಾರ್ದತೆ ಕೆಡಿಸುವ ಚಿಂತನೆ ಬಂತು ಎಂದು ಹೆಳಿದರು. ಕಾಣದ ದೇವರ ಪ್ರೀತಿ ಸಂಪಾದನೆಗೆ ಲಕ್ಷಾಂತರ ರೂ.ಖರ್ಚು ಮಾಡುವ ಬದಲು ಬಡವರ ಕಣ್ಣೀರೊರೆಸುವ ಕೆಲಸ ಮಾಡುವುದು ದೇವರಿಗೆ ಅರ್ಪಣೆಯಾದಂತೆ. ಇಲ್ಲಿ ಹುಟ್ಟಿದವರೆಲ್ಲರೂ ಭಾರತ ಮಾತೆಯ ಮಕ್ಕಳು. ಒಂದೇ ತಾಯಿಯ ಮಕ್ಕಳೆಂಬ ಭಾವನೆ ಬೆಳೆಯಬೇಕು ಎಂದು ಪಿ.ಕೆ.ಅಬ್ರಹಾಂ ಹೇಳಿದರು.

ಕಾರ್ಮಿಕ ಮುಖಂಡ, ಬೆಳ್ತಂಗಡಿಯ ನ್ಯಾಯವಾದಿ ಬಿ.ಎಂ.ಭಟ್‌ರವರು ಮಾತನಾಡಿ, ಜನವಿರೋಧಿಯಾಗಿ ಯಾವ ಧರ್ಮವೂ ಇಲ್ಲ. ಸತ್ಯ, ನ್ಯಾಯದ ಸದುದ್ದೇಶದ ಸಂದೇಶ ಸಾರುತ್ತವೆ. ಇದನ್ನು ಅರಿತು ಬದುಕುವುದರಿಂದ ಸೌಹಾರ್ದತೆ ಬೆಳೆಯುತ್ತದೆ. ಧರ್ಮ ವಿರೋಧಿ ಕೆಲಸದಿಂದ ಸೌಹಾರ್ದತೆ ಕೆಡುತ್ತಿದೆ. ಧರ್ಮ ವಿರೋಧಿಗಳನ್ನೂ ದೂರವಿಡಬೇಕೆಂದು ಹೇಳಿದರು. ದುಡಿದು ಬದುಕುವವನ್ನಲ್ಲಿ ಇರುವ ಪ್ರಾಮಾಣಿಕತೆ, ಸಾಹಾರ್ದತೆ ಬೇರೆ ಯಾರಲ್ಲೂ ಕಾಣಲು ಸಾಧ್ಯವಿಲ್ಲ. ನಮ್ಮ ಧರ್ಮದ ಆಚರಣೆಯೊಂದಿಗೆ ಇನ್ನೊಬ್ಬರ ಧರ್ಮವನ್ನು ಗೌರವಿಸುವುದರಿಂದ ಭಾವೈಕ್ಯತೆ, ಸೌಹಾರ್ದತೆ ಕಾಣಲು ಸಾಧ್ಯವಿದೆ. ಈ ರೀತಿ ಬದುಕುವುದರೊಂದಿಗೆ ದೇಶದಲ್ಲಿ ಸೌಹಾರ್ದತೆ ಕಾಣಬಹುದು ಎಂದು ಬಿ.ಎಂ.ಭಟ್ ಹೇಳಿದರು.

ಚೊಕ್ಕಬೆಟ್ಟು ಜುಮಾ ಮಸೀದಿ ಖತೀಬರಾದ ಅಝೀಝ್ ದಾರಿಮಿ ಮಾತನಾಡಿ, ಮಾನವೀಯ ಮೌಲ್ಯಗಳ ವಿಚಾರಗಳ ಕಡೆಗಳಿಗೆ ಸಾಗುತ್ತಿರುವ ಸಂದರ್ಭದಲ್ಲಿ ಇನ್ನೊಬ್ಬರ ದೂಷಿಸುವ ಬದಲು ಸಾಮಾಜಿಕ ಸುಭದ್ರತೆ ಮಾಡಿಕೊಳ್ಳುವುದು ಬುದ್ಧಿವಂತಿಕೆಯಾಗಿದೆ. ಎಲ್ಲಾ ಧರ್ಮಗಳು ಸಾರುವ ವಿಚಾರ ಕೆಟ್ಟದಲ್ಲ, ಇದರ ಮಧ್ಯದಲ್ಲಿನ ವಿಚಾರಧಾರೆಗಳು ಮನುಷ್ಯನ ಸಂಬಂಧವನ್ನು ಕಡಿದುಹಾಕುತ್ತಿವೆ. ಭಾರತ ಪುಣ್ಯ ಭೂಮಿ. ಇಲ್ಲಿ ಹಿಂದೂ, ಮುಸ್ಲಿ, ಕ್ರೈಸ್ತರು ಒಂದೇ ರೀತಿಯ ಹೆಜ್ಜೆ ಇಡಬೇಕು. ಇದರಿಂದ ಸೌಹಾರ್ದತೆ ಬೆಳೆಯಲಿದೆ ಎಂದು ಹೇಳಿದರು.

ವಿಶೇಷ ಆಹ್ವಾನಿತರಾಗಿದ್ದ ಚಿಂತಕ, ಬೆಂಗಳೂರಿನ ಪತ್ರಕರ್ತ ರಾ.ಚಿಂತನ್ ಮಾತನಾಡಿ, ಉಚಿತ ಕೊಡುಗೆಗಳು ಸಿಗುವ ಬದಲು ಅಂಬಾನಿಯ ಮಗನಿಗೆ ಸಿಗುವಂತಹ ಉನ್ನತ ಗುಣಮಟ್ಟದ ಶಿಕ್ಷಣ ಸರಕಾರಿ ಶಾಲೆಗಳಲ್ಲಿ ದೇಶದ ಬಡಮಕ್ಕಳಿಗೂ ಸಿಗಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ಸಿಗುವ ಗುಣಮಟ್ಟದ ಚಿಕಿತ್ಸೆ ಹಳ್ಳಿ ಹಳ್ಳಿಯ ಸರಕಾರಿ ಆಸ್ಪತ್ರೆಗಳಲ್ಲೂ ಸಿಗಬೇಕು. ಆದರೆ ಅಭಿವೃದ್ಧಿ, ಮೂಲಸೌಕರ್ಯದ ಬಗ್ಗೆ ಮಾತನಾಡುವ ಬದಲು ಲವ್ ಜಿಹಾದ್ ಬಗ್ಗೆ ಮಾತನಾಡುವಂತೆ ರಾಜಕಾರಣಿಗಳು ಕರೆ ಕೊಡುತ್ತಾರೆ. ಪ್ರೀತಿಗೆ ಧರ್ಮ, ಜಾತಿ ಇಲ್ಲ. ಆದರೆ ಅದರ ಹೆಸರಿನಲ್ಲಿ ನಡೆಯುವ ರಾಜಕಾರಣದ ಮಸಲತ್ತು ಅರ್ಥ ಮಾಡಿಕೊಳ್ಳಬೇಕಾಗಿದೆ. ಯಾವುದೇ ಪ್ರಚೋದನೆಗೆ ಒಳಗಾಗದೇ ಸ್ವತ: ಚಿಂತನೆಯಿಂದ ನಿರ್ಧಾರ ಕೈಗೊಳ್ಳಬೇಕೆಂದು ಹೇಳಿದರು.

ವಿಶೇಷ ಆಹ್ವಾನಿತರಾಗಿದ್ದ ಹುಸೈನ್ ದಾರಿಮಿ, ಮುಖ್ಯ ಅತಿಥಿಯಾಗಿದ್ದ ಸೌದಿ ಅರೇಬಿಯಾ ಉದ್ಯಮಿ ಅಬ್ದುಲ್ ಹಮೀದ್ ಅಸ್ಕಾಪ್‌ರವರು ಸಂದರ್ಭೋಚಿತವಾಗಿ ಮಾತನಾಡಿದರು.

ಕೋಲ್ಪೆ ಬಿಜೆಎಂ ಅಧ್ಯಕ್ಷ ಕೆ.ಕೆ.ಅಬೂಬಕ್ಕರ್ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಹಿದಾಯ ಪೌಂಡೇಶನ್ ಕೇಂದ್ರ ಸಮಿತಿ ಅಧ್ಯಕ್ಷ ಹನೀಫ್ ಹಾಜಿ, ಕೋಶಾಧಿಕಾರಿ ಎಸ್.ಎಂ.ಬಶೀರ್, ಉದ್ಯಮಿ ಬಾತಿಷಾ ಸುಲ್ತಾನ್ ಕೊಡಾಜೆ, ಮಂಗಳೂರು ಸಹಲ್ ಕನ್‌ಸ್ಟ್ರಕ್ಷನ್‌ನ ಇಕ್ಬಾಲ್, ನೆಲ್ಯಾಡಿ ವರ್ತಕರ ಸಂಘದ ಅಧ್ಯಕ್ಷ ರಫೀಕ್ ಸೀಗಲ್, ಗೋಳಿತ್ತೊಟ್ಟು ಗ್ರಾ.ಪಂ.ಸದಸ್ಯರಾದ ವಿ.ಸಿ.ಜೋಸೆಫ್, ನೋಣಯ್ಯ ಗೌಡ, ಮಾಜಿ ಸದಸ್ಯ ನೇಮಿರಾಜ್ ಕಲಾಯಿ, ಉದ್ಯಮಿ ಮುಸ್ತಫ ಮಲ್ಲಿಗೆಮಜಲು ಕೊಕ್ಕಡ, ಕೋಲ್ಪೆ ಖಲಂದರ್ ಷಾ ದಫ್ ಸಮಿತಿ ಅಧ್ಯಕ್ಷ ಇಕ್ಬಾಲ್, ಯೂಸುಫ್ ಮೊರಂಕಳ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎಸ್‌ಕೆಎಸ್‌ಎಸ್‌ಎಫ್ ದಕ್ಷಿಣ ಕನ್ನಡ ಈಸ್ಟ್ ಇದರ ಪ್ರಧಾನ ಕಾರ್ಯದರ್ಶಿ ಹಾರಿಸ್ ಕೌಸರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಕೋಲ್ಪೆ ಬಿಜೆಎಂ ಸಂಘಟನಾ ಕಾರ್ಯದರ್ಶಿ ಕೆ.ಕೆ.ಇಸ್ಮಾಯಿಲ್ ಸ್ವಾಗತಿಸಿದರು. ಶಿಹಾಲ್ ಕಿರಾತ್ ಪಠಿಸಿದರು. ಅಶ್ರಫ್ ಮುಸ್ಲಿಯಾರ್, ಕೆ.ಎಸ್.ನಾಸಿರ್ ಸಮರಗುಂಡಿ, ಶರೀಫ್ ಕಾರ್ಯಕ್ರಮ ನಿರೂಪಿಸಿದರು. ಕೋಲ್ಪೆ ಬಿಜೆಎಂ ಪ್ರಧಾನ ಕಾರ್ಯದರ್ಶಿ ಯು.ಕೆ.ಉಮ್ಮರ್, ಉಪಾಧ್ಯಕ್ಷರಾದ ಅಬ್ದುಲ್ಲಾ ಕುಂಞಿ ಕೊಂಕೋಡಿ, ಎಸ್.ಇಕ್ಬಾಲ್, ಕಾರ್ಯದರ್ಶಿಗಳಾದ ಕೆ.ಎಚ್.ಸಾದಿಕ್, ಶಮೀರ್ ಅರ್ಶದಿ ಹಾಗೂ ಕೋಲ್ಪೆ ಬಿಜೆಎಂ, ಗೋಳಿತ್ತೊಟ್ಟು ರಹ್ಮಾನಿಯಾ ಜುಮಾ ಮಸೀದಿ, ಕೋಲ್ಪೆ ಖಲಂದರ್ ಷಾ ದಫ್ ಸಮಿತಿ, ಎಸ್‌ಕೆಎಸ್‌ಎಸ್‌ಎಫ್ ಕೋಲ್ಪೆ ಹಾಗೂ ಗೋಳಿತ್ತೊಟ್ಟು ಶಾಖೆಯ ಸದಸ್ಯರು ಸಹಕರಿಸಿದರು.

ಮುಖ್ಯಪ್ರಭಾಷಣ:
ಸೈಯ್ಯದ್ ಅಬ್ದುಲ್ ಖಾದರ್ ಫೈಝಿ ತಂಗಳ್ ಪಟ್ಟಾಂಬಿ ಅವರು ದುವಾರ್ಶೀವಚನ ಮತ್ತು ಮುಖ್ಯಪ್ರಭಾಷಣ ನೀಡಿದರು.

ಸನ್ಮಾನ:ಸೌಹಾರ್ದ ಸಂದೇಶ ನೀಡಿದ ಕೊಣಾಲು ಸೈಂಟ್ ತೋಮಸ್ ಸಿರಿಯನ್ ಚರ್ಚ್‌ನ ಧರ್ಮಗುರು ಪಿ.ಕೆ.ಅಬ್ರಹಾಂ, ನ್ಯಾಯವಾದಿ ಬಿ.ಎಂ.ಭಟ್, ಚಿಂತಕ ರಾ.ಚಿಂತನ್, ಉದ್ಯಮಿ ಹಮೀದ್ ಅಸ್ಕಾಪ್‌ರವರಿಗೆ ಶಾಲುಹಾಕಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಮದೀನ, ಮಕ್ಕಾಕ್ಕೆ ತೆರಳುತ್ತಿರುವ ಕೋಲ್ಪೆ ಖಲಂದರ್ ಷಾ ದಫ್ ಸಮಿತಿ ಅಧ್ಯಕ್ಷ ಇಕ್ಬಾಲ್ ಹಾಗೂ ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಪ್ರಶಸ್ತಿ ಪುರಸ್ಕೃತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here