ಫೆ.26ರಂದು ಗಾಳಿಪಟ ಉತ್ಸವ, ಗಂಗಾಪೂಜೆ

0

ಉಪ್ಪಿನಂಗಡಿ: ಇಲ್ಲಿನ ಶ್ರೀ ಮಾಧವ ಶಿಶು ಮಂದಿರದ ಆಶ್ರಯದಲ್ಲಿ ಮಾತೃ ಮಂಡಳಿ ಇದರ ನೇತೃತ್ವದಲ್ಲಿ 16 ನೇ ವರ್ಷದ ಪವಿತ್ರ ಗಂಗಾ ಪೂಜೆ, ಮಾತೃ ಸಂಗಮ ಹಾಗೂ ಗಾಳಿಪಟ ಉತ್ಸವವು ಫೆ. 26ರಂದು ಸಂಜೆ ಜರಗಲಿದೆ ಎಂದು ಮಾತೃ ಮಂಡಳಿಯ ಅಧ್ಯಕ್ಷೆ ಸುಜಾತ ಕೃಷ್ಣ ಆಚಾರ್ಯ ತಿಳಿಸಿದರು.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿದ ಅವರು, ಪ್ರಕೃತಿಯ ಆರಾಧಕರಾದ ನಾವು ಈ ದೇಶದಲ್ಲಿನ ಎಲ್ಲಾ ನದಿಗಳನ್ನು ಗಂಗಾ ನದಿಗೆ ಸಮಾನವೆಂದು ಪರಿಗಣಿಸುತ್ತೇವೆ. ಅಂತೆಯೇ ದಕ್ಷಿಣ ಕಾಶಿ ಎಂದೇ ಪರಿಗಣಿತವಾದ ಪುರಾಣ ಕಾಲದಿಂದಲೂ ಪ್ರಸಿದ್ದಿ ಪಡೆದಿರುವ ಉಪ್ಪಿನಂಗಡಿಯ ನೇತ್ರಾವತಿ – ಕುಮಾರಧಾರಾ ನದಿ ಸಂಗಮ ಸ್ಥಳದಲ್ಲಿ ಈ ಬಾರಿ ಹದಿನಾರನೇ ವರ್ಷದ ಗಂಗಾ ಪೂಜೆ ಹಾಗೂ ಮಾತೃ ಸಂಗಮ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಈ ಮಾತೃ ಸಂಗಮ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಹಿರಿಯ ಸಾಮಾಜಿಕ ಚಿಂತಕಿ ಕಾಮಾಕ್ಷಿ ಜಿ. ಹೆಗ್ಡೆ ವಹಿಸಲಿದ್ದು, ಉಪನ್ಯಾಸವನ್ನು ಕಡಬ ಸರಸ್ವತಿ ವಿದ್ಯಾಲಯದ ಪ್ರೇಮಲತಾ ಎ. ರವರು ನಡೆಸಲಿದ್ದಾರೆ. ಸಮಾಜದ ತರುಣ ವರ್ಗದಿಂದ ಆಕರ್ಷಕ ಗಂಗಾ ಆರತಿಯೂ ನಡೆಯಲಿದೆ.

ಅದೇ ದಿನ ಸಂಜೆ 4 ಗಂಟೆಯಿಂದ ನದಿ ಕಿನಾರೆಯಲ್ಲಿ ಗಾಳಿಪಟ ಉತ್ಸವವು ಜರಗಲಿದ್ದು, ಅಬಾಲ ವೃದ್ದರಾಗಿ ಎಲ್ಲರಿಗೂ ಭಾಗವಹಿಸಲು ಮುಕ್ತ ಅವಕಾಶವನ್ನು ಕಲ್ಪಿಸಲಾಗಿದೆ. ಈ ಸಂಧರ್ಭದಲ್ಲಿ ಹಣ್ಣು ಪಾನೀಯಗಳ ವಿತರಣೆ ಹಾಗೂ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ಸಹಕಾರದೊಂದಿಗೆ ಆಗಮಿಸುವ ಭಕ್ತಾದಿಗಳಿಗೆ ರಾತ್ರಿ ಅನ್ನ ಪ್ರಸಾದ ವಿತರಣೆಯು ಜರಗಲಿದೆ ಎಂದು ಅವರು ವಿವರಿಸಿದರು.

ಈ ಸಂದರ್ಭದಲ್ಲಿ ಮಾತೃ ಮಂಡಳಿಯ ಸಂಚಾಲಕಿ ಶ್ಯಾಮಲಾ ಶೆಣೈ, ಪ್ರಧಾನ ಕಾರ್ಯದರ್ಶಿ ಪುಷ್ಪಲತಾ ಜನಾರ್ದನ್, ಸಹ ಕಾರ್ಯದರ್ಶಿ ಸುಗಂಧಿ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here