ಪೆರ್ನೆ ಮಾಡತ್ತಾರು ವ್ಯಾಘ್ರಚಾಮುಂಡಿ ದೈವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ
ಭಂಡಾರದ ಮನೆಯಲ್ಲಿ ದೈವಗಳ ಪ್ರತಿಷ್ಠೆ, ಪರಿಚಾರಕರ ಗೃಹಪ್ರವೇಶ

0

ಪುತ್ತೂರು: ಪೆರ್ನೆ ಗ್ರಾಮದ ಕೊರತಿಕಟ್ಟೆ ಮಾಡತ್ತಾರುವಿನ ಸಪರಿವಾರ ಶ್ರೀ ವ್ಯಾಘ್ರಚಾಮುಂಡಿ, ಉಳ್ಳಾಕ್ಲು, ಕೊರತಿದೈವ ಮತ್ತು ಗುಳಿಗ ದೈವಗಳ ದೈವಸ್ಥಾನದ ಬ್ರಹ್ಮಕಲಶೋತ್ಸವದ ಎರಡನೇ ದಿನವಾದ ಫೆ.22ರಂದು ಭಂಡಾರದ ಮನೆಯಲ್ಲಿ ದೈವಗಳ ಪ್ರತಿಷ್ಠೆ ಹಾಗೂ ಪರಿಚಾರಕರ ಗೃಹಪ್ರವೇಶ ನೆರವೇರಿತು.

ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಷ್ಠಾ ಬ್ರಹ್ಮಕಲಶೋತ್ಸವದಲ್ಲಿ ಫೆ.21ರಂದು ಭಂಡಾರದ ಮನೆ ಅತ್ತೆಜಾಲುವಿನಲ್ಲಿ ದೇವತಾ ಪ್ರಾರ್ಥನೆ, ಆಚಾರ್ಯವರಣೆ, ಪ್ರಾಸಾದಾದಿ ಬಿಂಬ ಪರಿಗ್ರಹ, ಸ್ವಸ್ತಿ ಪುಣ್ಯಾಹವಾಚನ, ಸ್ಥಳಶುದ್ಧಿ, ಪ್ರಾಸಾದ ಶುದ್ಧಿ, ರಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತುಪೂಜಾ ಬಲಿ, ನೂತನ ಬಿಂಬ ಜಲಾಧಿವಾಸ, ಪ್ರಾಕಾರದಿಕ್ಬಲಿ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು.

ಫೆ.22ರಂದು ಅತ್ತೆಜಾಲು ಕ್ಷೇತ್ರದ ಭಂಡಾರದ ಮನೆಯಲ್ಲಿ ಮಹಾಗಣಪತಿಹೋಮ, ಬ್ರಹ್ಮಕಲಶಪೂಜೆ, ವ್ಯಾಘ್ರ ಚಾಮುಂಡಿ, ಉಳ್ಳಾಕ್ಲು, ಕೊರತಿ, ಗುಳಿಗ ಹಾಗೂ ಸಪರಿವಾರ ದೈವಗಳ ಪ್ರತಿಷ್ಠೆ ಬ್ರಹ್ಮಕಲಶಾಭಿಷೇಕ, ತಂಬಿಲ ಸೇವೆ, ನಾಗದೇವರಿಗೆ ತಂಬಿಲ, ಅತ್ತೆಜಾಲುವಿನಲ್ಲಿರುವ ಪರಿಚಾರಕರ ಮನೆ ಗೃಹಪ್ರವೇಶ, ಮಂಗಳಾರತಿ, ಪ್ರಸಾದ ವಿತರಣೆ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.

ಸಂಜೆ ಮಾಡತ್ತಾರು ದೈವಸ್ಥಾನದಲ್ಲಿ ಸ್ವಸ್ತಿ ಪುಣ್ಯಾಹವಾಚನ, ಸ್ಥಳಶುದ್ಧಿ, ಪ್ರಾಸಾದ ಶುದ್ಧಿ, ರಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತು ಪೂಜಾ ಬಲಿ, ಪ್ರಾಕಾರದಿಕ್ಬಲಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.

ಧಾರ್ಮಿಕ ಸಭೆ:
ಸಂಜೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಧರ್ಮಸ್ಥಳ ಕನ್ಯಾಡಿ ನಿತ್ಯಾನಂದ ನಗರದ ಶ್ರೀರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮಿಜಿಯವರು ಆಶೀರ್ವಚನ ನೀಡಲಿದ್ದಾರೆ. ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆ ವಹಿಸಲಿದ್ದಾರೆ. ಇಂಧನ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಸೂರ್ಯನಾರಾಯಣ ಕಶೆಕೋಡಿ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿ, ಸಂಪ್ಯ ಅಕ್ಷಯ ಕಾಲೇಜಿನ ಅಧ್ಯಕ್ಷ ಜಯಂತ ನಡುಬೈಲು, ಮುಂಬೈ ಉದ್ಯಮಿ ಲೀಲೇಶ್ ರೈ ಪಾಂಡಿಬೆಟ್ಟು, ಉಪ್ಪಿನಂಗಡಿ ಪದ್ಮವಿದ್ಯಾ ಪೆಟ್ರೋಲ್ ಪಂಪ್‌ನ ವಿದ್ಯಾಧರ ಜೈನ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೇಲ್ವಿಚಾರಕಿ ಜಯಶ್ರೀ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಂಜೆ ಶ್ರೀಶಾರದಾ ಕಲಾ ಕೇಂದ್ರ ಪುತ್ತೂರು ಇವರಿಂದ ನೃತ್ಯ ವೈಭವ, ರಾತ್ರಿ ಕಾಪು ರಂಗ ತರಂಗ ಕಲಾವಿಕದರಿಂದ ಅಧ್ಯಕ್ಷೆರ್ ಎಂದ ಹಾಸ್ಯಮಯ ತುಳು ನಾಟಕ ಪ್ರದರ್ಶನಗೊಳ್ಳಲಿದೆ ಎಂದು ದೈವಸ್ಥಾನದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here