ಮುಂದುವರಿದ ಕಾಡಾನೆ ಸೆರೆ ಕಾರ್ಯಾಚರಣೆ
ಐತ್ತೂರಿನ ಆಜನದಲ್ಲಿ ಕಾಡಾನೆ ಗೋಚರ
ಗುರಿ ತಪ್ಪಿದ ಮದ್ದುಗುಂಡು ಪ್ರಯೋಗ
ಕಾರ್ಯಾಚರಣೆ ಇಂದೂ ಮುಂದುವರಿಕೆ

0

ನೆಲ್ಯಾಡಿ: ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ನೈಲ ಎಂಬಲ್ಲಿ ಇಬ್ಬರನ್ನು ಬಲಿ ಪಡೆದುಕೊಂಡಿರುವ ಹಿನ್ನೆಲೆಯಲ್ಲಿ ಕಾಡಾನೆ ಸೆರೆಗೆ ಕೊಣಾಜೆ ರಕ್ಷಿತಾರಣ್ಯದಲ್ಲಿ ಅರಣ್ಯ ಇಲಾಖೆ ನಡೆಸುತ್ತಿರುವ ಕಾರ್ಯಾಚರಣೆ ಎರಡನೇ ದಿನವಾದ ಬುಧವಾರವೂ ನಡೆದಿದೆ. ಐತ್ತೂರು ಗ್ರಾಮದ ಆಜನ ಎಂಬಲ್ಲಿ ಅರಣ್ಯಪ್ರದೇಶದೊಳಗೆ ಗೋಚರಿಸಿದ ಕಾಡಾನೆಗೆ ವೈದ್ಯರ ತಂಡ ಎರಡು ಬಾರಿ ಅರಿವಳಿಕೆ ಮದ್ದು ಪ್ರಯೋಗಿಸಿದರೂ ಗುರಿ ತಪ್ಪಿರುವುದರಿಂದ ಕಾರ್ಯಾಚರಣೆಗೆ ಹಿನ್ನಡೆಯಾಗಿದೆ. ಸಂಜೆ ವೇಳೆಗೆ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದ್ದು ಗುರುವಾರ ಮತ್ತೆ ಮುಂದುವರಿಯಲಿದೆ.

ಕಾಡಾನೆ ಸೆರೆ ಕಾರ್ಯಾಚರಣೆ ಮಂಗಳವಾರ ಬೆಳಗ್ಗಿನಿಂದಲೇ ಆರಂಭಿಸಿದ್ದ ಅರಣ್ಯ ಇಲಾಖೆ ತಂಡ ಸಂಜೆ ವೇಳೆಗೆ ಕೊಣಾಜೆ ಗ್ರಾಮದ ಪುತ್ತಿಗೆಯಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಿತ್ತು. ಈ ಮಧ್ಯೆ ಮಂಗಳವಾರ ರಾತ್ರಿ ಐತ್ತೂರು ಗ್ರಾಮದ ಸುಳ್ಯ ಬಳಿ ಕಾಡಾನೆ ಕೃಷಿ ತೋಟಕ್ಕೆ ಲಗ್ಗೆ ಇಟ್ಟು ಹಾನಿಗೊಳಿಸಿತ್ತು. ಈ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಈ ಹಿನ್ನಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಆನೆ ಪತ್ತೆಗೆ ಆಗಮಿಸಿದ್ದ ಕಾಡು ಜೇನು ಕುರುಬರು ಕೊಣಾಜೆ ರಕ್ಷಿತಾರಣ್ಯದೊಳಗೆ ಕಾಡಾನೆ ಪತ್ತೆ ಕಾರ್ಯಾಚರಣೆ ಆರಂಭಿಸಿದ್ದರು. ಮಧ್ಯಾಹ್ನದ ವೇಳೆಗೆ ಈ ತಂಡದವರು ಐತ್ತೂರು ಗ್ರಾಮದ ಸುಳ್ಯ ಬಳಿಯ ಅಜನ ಎಂಬಲ್ಲಿನ ರಬ್ಬರ್ ತೋಟಕ್ಕೆ ಹೊಂದಿಕೊಂಡಿರುವ ಅರಣ್ಯದಲ್ಲಿ ಕಾಡಾನೆ ಇರುವುದನ್ನು ಪತ್ತೆ ಹಚ್ಚಿದ್ದರು. ಈ ತಂಡ ನೀಡಿದ ಮಾಹಿತಿಯಂತೆ ಕೂಡಲೇ ಕಾರ್ಯಾಚರಣೆ ಆರಂಭಿಸಿದ ಅರಣ್ಯ ಇಲಾಖೆ ರೆಂಜಿಲಾಡಿ ಗ್ರಾಮದ ಪೇರಡ್ಕ ಸಮೀಪದ ತುಂಬೆ ಅರಣ್ಯಪ್ರದೇಶದ ಶಿಬಿರದಲ್ಲಿದ್ದ 5 ಸಾಕಾನೆ, ವೈದ್ಯರ ತಂಡವನ್ನು ಐತ್ತೂರಿನ ಆಜನ ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಕಾರ್ಯಾಚರಣೆ ಆರಂಭಿಸಲಾಯಿತು. ಇದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು.

ಗುರಿ ತಪ್ಪಿದ ಮದ್ದು ಗುಂಡು: ಕಾಡಿನೊಳಗೆ ತೆರಳಿದ್ದ ಆನೆ ಪತ್ತೆ ತಂಡ ನೀಡಿದ ಮಾಹಿತಿಯಂತೆ ಸ್ಥಳಕ್ಕೆ ತೆರಳಿದ ನಾಗರಹೊಳೆಯಿಂದ ಆಗಮಿಸಿದ್ದ ಡಾ.ಮುಜಿಬ್ ನೇತೃತ್ವದ ವೈದ್ಯರ ತಂಡ ಕೆಲವೇ ಮೀಟರ್‌ಗಳ ಅಂತರದಿಂದ ಕಾಡಾನೆಗೆ ಏರ್‌ಗನ್ ಮೂಲಕ ಅರಿವಳಿಕೆ ಮದ್ದು ಚುಚ್ಚುವ ಪ್ರಯೋಗ ಮಾಡಿದೆ. ಆದರೆ ಕಾಡಾನೆ ಇದ್ದ ಜಾಗ ಪೊದರುಗಳಿಂದ ಆವರಿಸಿದ್ದರಿಂದ ಈ ಪ್ರಯೋಗ ಕೈಕೊಟ್ಟಿತು. ಮತ್ತೊಂದು ಸಲ ವೈದ್ಯರ ತಂಡ ಅರಿವಳಿಕೆ ಮದ್ದು ಪ್ರಯೋಗಕ್ಕೆ ಪ್ರಯತ್ನಿಸಿದರೂ ಕಾಡಾನೆಯ ದೇಹ ತಲುಪುವಲ್ಲಿ ವಿಫಲವಾಯಿತು ಎಂದು ಹೇಳಲಾಗಿದೆ. ಅಲ್ಲದೇ ಈ ಸಂದರ್ಭದಲ್ಲಿ ಕಾಡಾನೆ ವೈದ್ಯರು ಹಾಗೂ ಕಾರ್ಯಾಚರಣೆಯಲ್ಲಿದ್ದ ತಂಡವರನ್ನು ಅಟ್ಟಾಡಿಸಿರುವುದಾಗಿಯೂ ವರದಿಯಾಗಿದೆ. ಸಂಜೆಯಾದ ಹಿನ್ನೆಲೆಯಲ್ಲಿ 2ನೇ ದಿನದ ಕಾರ್ಯಾಚರಣೆ ಸ್ಥಗಿತಗೊಳಿಸಿ 5 ಸಾಕಾನೆಗಳನ್ನು ಪೇರಡ್ಕದ ಶಿಬಿರಕ್ಕೆ ಕರೆ ತರಲಾಗಿದೆ. ಡಿಎಫ್‌ಒ ದಿನೇಶ್‌ಕುಮಾರ್ ಹಾಗೂ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ತಂಡ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು ಕಾರ್ಯಾಚರಣೆಗೆ ಮಾರ್ಗದರ್ಶನ ನೀಡುತ್ತಿದ್ದಾರೆ.

ತಂಡೋಪತಂಡ ಜನರ ಆಗಮನ: ಕಾಡಾನೆ ಸೆರೆ ಕಾರ್ಯಾಚರಣೆ ವೀಕ್ಷಣೆಗೆ ವಿವಿಧ ಕಡೆಗಳಿಂದ ಜನರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ. ರೆಂಜಿಲಾಡಿಯ ಶಿಬಿರದಿಂದ ಐತ್ತೂರಿನ ಆಜನ ಪ್ರದೇಶಕ್ಕೆ 5 ಲಾರಿಗಳಲ್ಲಿ 5 ಸಾಕಾನೆಗಳನ್ನು ಸಾಗಾಟ ಮಾಡುವ ಸಂದರ್ಭದಲ್ಲೂ ನೂರಾರು ಮಂದಿ ಬೈಕ್ ಹಾಗೂ ಕಾರುಗಳಲ್ಲಿ ಆನೆ ಸಾಗಾಟದ ಲಾರಿಯನ್ನು ಹಿಂಬಾಲಿಸುತ್ತಿರುವುದು ಕಂಡುಬಂದಿದೆ. ಜನ ಸೇರುತ್ತಿರುವುದೂ ಕಾಡಾನೆ ಸೆರೆ ಕಾರ್ಯಾಚರಣೆಗೆ ಹಿನ್ನಡೆ ಆಗುತ್ತಿದೆ ಎಂದು ಹೇಳಲಾಗುತ್ತಿದೆ. ಜನ ಸೇರುತ್ತಿರುವ ಗ್ರಹಿಕೆಯಿಂದಲೇ ಕಾಡಾನೆ ಸ್ಥಳದಿಂದ ಪಥ ಬದಲಿಸುತ್ತಿದೆ ಎಂದೂ ಹೇಳಲಾಗುತ್ತಿದೆ.

ವೈರಲ್ ಆದ ಹಳೆಯ ವಿಡಿಯೋ
ಕೊಣಾಜೆ, ಐತ್ತೂರು ಭಾಗದಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆಯ ಸಂದರ್ಭದಲ್ಲೇ ಆನೆಯೊಂದನ್ನು ಇನ್ನೊಂದು ಆನೆಯ ಮೂಲಕ ಸೆರೆ ಹಿಡಿಯುವ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಭಾರೀ ಸದ್ದು ಮಾಡಿತ್ತು. ’ಅಭಿಮನ್ಯು ಆರ್ಭಟಕ್ಕೆ ನಲುಗಿದ ಪುಂಡಾನೆ’ ಎಂಬ ಬರಹದೊಂದಿಗೆ ಈ ವಿಡಿಯೋ ಹಲವರ ವಾಟ್ಸಪ್ ಸ್ಟೇಟಸ್‌ಗಳಲ್ಲಿಯೂ ರಾರಾಜಿಸತೊಡಗಿತು. ಇದನ್ನು ನೋಡಿದ ಹಲವರು ಸ್ಥಳೀಯರಿಗೆ, ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಫೋನ್ ಮಾಡಿ ವಿಚಾರಿಸುತ್ತಿರುವುದು ಕಂಡುಬಂತು. ಕೊಣಾಜೆ ರಕ್ಷಿತಾರಣ್ಯದೊಳಗೆ ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ ಕಾಡಾನೆ ಸೆರೆ ಸಿಗದೇ ಇದ್ದರೂ ಆನೆ ಸೆರೆಯ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೇಗವಾಗಿ ಪ್ರಸಾರಗೊಂಡು ಜನರು ನಿಬ್ಬೆರಗಾಗುವಂತೆ ಮಾಡಿತ್ತು.

LEAVE A REPLY

Please enter your comment!
Please enter your name here