ಶಾಂತಿಮೊಗರು ಕುಮಾರಧಾರ ನದಿಗೆ ಕಿಂಡಿ ಅಣೆಕಟ್ಟು ಕಾಮಗಾರಿ ಪೂರ್ಣಗೊಂಡು ವರ್ಷ ಕಳೆದರೂ ಇನ್ನೂ ಹಲಗೆ ಜೋಡಣೆ ವಿಳಂಬ

0

ಬಿರು ಬೇಸಿಗೆಗೆ ನೀರಿನ ಸಮಸ್ಯೆ ದೂರವಾಗಬಹುದೆಂಬ ನಿರೀಕ್ಷೆಯಲ್ಲಿದ್ದ ಜನರ ನಿರೀಕ್ಷೆ ಸುಳ್ಳಾಗಿಸಿದ ಯೋಜನೆ..

7.5 ಕೋಟಿ ರೂ ಯೋಜನೆ ವ್ಯರ್ಥವಾಗುತ್ತಿದೆಯಾ.. ಗ್ರಾಮಸ್ಥರ ಪ್ರಶ್ನೆ?

ವರದಿ : ಸುಧಾಕರ ಆಚಾರ್ಯ ಕಾಣಿಯೂರು

ಕಾಣಿಯೂರು: ಬಿರು ಬೇಸಿಗೆಗೆ ನೀರಿನ ಸಮಸ್ಯೆ ದೂರವಾಗಬಹುದೆಂಬ ನಿರೀಕ್ಷೆಯಲ್ಲಿದ್ದ ಜನರಿಗೆ ಕಿಂಡಿ ಅಣೆಕಟ್ಟಿನ ಕಾಮಗಾರಿ ಪೂರ್ಣಗೊಂಡು ವರ್ಷ ಕಳೆದರೂ ಅಣೆಕಟ್ಟಿಗೆ ಹಲಗೆ ಅಳವಡಿಸುವ ಕಾರ‍್ಯ ಇನ್ನೂ ನಡೆದಿಲ್ಲ. ಅಣೆಕಟ್ಟಿಗೆ ಹಲಗೆ ಜೋಡಣೆ ಕಾರ್ಯ ನಡೆಸಬೇಕು. ನೀರಿನ ಸಮಸ್ಯೆ ಬಗೆಹರಿಸಬೇಕೆನ್ನುವುದು ಇಲ್ಲಿನ ಗ್ರಾಮಸ್ಥರ ಕೂಗು. ಪ್ರಸ್ತುತ ಸಚಿವರಾಗಿರುವ ಶಾಸಕ ಎಸ್ ಅಂಗಾರ ಅವರ ವಿಶೇಷ ಮುತುವರ್ಜಿಯಿಂದ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಮುಖಾಂತರ 7.5 ಕೋಟಿ ರೂ ಅನುದಾನದ ಕಾಮಗಾರಿಯು ಪಶ್ಚಿಮವಾಹಿನಿ ಯೋಜನೆಯಲ್ಲಿ ಶಾಂತಿಮೊಗರುವಿನಲ್ಲಿ ಕುಮಾರಧಾರ ನದಿಗೆ ಅತೀ ದೊಡ್ಡ ಕಿಂಡಿ ಅಣೆಕಟ್ಟು ನಿರ್ಮಾಣವಾಗಿದೆ.

7.5 ಕೋಟಿ ರೂ ಯೋಜನೆ ವ್ಯರ್ಥವಾಗುತ್ತಿದೆಯಾ?: ಕುಡಿಯುವ ನೀರಿನ ಬವಣೆ ನೀಗಿಸಬೇಕೆನ್ನುವ ಉದ್ದೇಶದಿಂದ ಕಿಂಡಿ ಅಣೆಕಟ್ಟು ಯೋಜನೆಗೆ 7.5ಕೋಟಿ ರೂ ಮಂಜೂರುಗೊಂಡು ಕಾಮಗಾರಿ ಪೂರ್ಣಗೊಂಡಿದೆ. ಆದರೆ ಕಾಮಗಾರಿ ಪೂರ್ಣಗೊಂಡರೂ ಹಲಗೆ ಜೋಡಣೆ ಮಾಡದೇ ಇರುವುದರಿಂದ ಜನತೆಗೆ ಪ್ರಯೋಜನಕ್ಕೆ ಬರದೇ ರೂ 7.5ಕೋಟಿ ವ್ಯರ್ಥವಾಗುತ್ತಿದೆಯಾ ಎನ್ನುವ ಪ್ರಶ್ನೆ ಬಲವಾಗಿ ಕೇಳಿಬರುತ್ತಿದೆ. ನದಿಯ ತಳಮಟ್ಟದಿಂದ ನಾಲ್ಕು ಮೀಟರ್ ಎತ್ತರದಲ್ಲಿ ನಿರ್ಮಾಣವಾಗಿರುವ ಈ ಅಣೆಕಟ್ಟು 221 ಮೀಟರ್ ಉದ್ದ ಹಾಗೂ ಮೂರು ಮೀಟರ್ ಅಗಲವಿದೆ. ಐವತ್ತಾರು ಕಿಂಡಿಗಳನ್ನು ನಿರ್ಮಾಣ ಮಾಡಲಾಗಿದೆ. ಇದರಲ್ಲಿ ಸುಮಾರು 18.56 ಎಮ್‌ಸಿಎಫ್‌ಟಿ ನೀರು ಶೇಖರಣೆಯಾಗಲಿದೆ. ಈ ಕಿಂಡಿ ಅಣೆಕಟ್ಟು ನಿರ್ಮಾಣದಿಂದ ನದಿಯ ಇಕ್ಕೆಳಗಳಲ್ಲಿ ಸುಮಾರು ಎರಡರಿಂದ ಮೂರು ಕಿಲೋ ಮೀಟರ್ ಸುತ್ತಳತೆಯಲ್ಲಿ ಅಂತರ್ಜಲ ವೃದ್ಧಿಯಾಗಲಿದ್ದು, ಕೃಷಿಕರ ಕೊಳವೆಬಾವಿ, ಕುಡಿಯುವ ನೀರಿನ ಬಾವಿ ಹಾಗೂ ಕೆರೆಗಳಲ್ಲಿ ಬಿರು ಬೇಸಿಗೆಯಲ್ಲೂ ಸಾಕಷ್ಟು ನೀರು ತುಂಬಿ ತುಳುಕಲಿದೆ. ಕೃಷಿ ಭೂಮಿಗೆ ನೀರುಣಿಸಲು ಪರದಾಡುತ್ತಿರುವ ಈ ಭಾಗದ ಕೃಷಿಕರಿಗೆ ಜಲನಿಧಿ ಒಲಿಯಲಿದೆ. ದಶಂಬರ್ ಆರಂಭದಿಂದ ನದಿಯ ನೀರಿನ ಮಟ್ಟವನ್ನು ನೋಡಿಕೊಂಡು ಹಲಗೆಗಳನ್ನು ಕಿಂಡಿಗಳಿಗೆ ಜೋಡಣೆ ಮಾಡಲಾಗುತ್ತದೆ. ಯಥಾ ಪ್ರಕಾರ ಮಳೆಗಾಲ ಪ್ರಾರಂಭವಾಗಿ ನದಿಯಲ್ಲಿ ನೀರಿನ ಮಟ್ಟ ಜಾಸ್ತಿಯಾಗುತ್ತಿದ್ದಂತೆ ಹಲಗೆಗಳನ್ನು ತೆಗೆದು ಬಿಡಲಾಗುತ್ತದೆ. ಮಳೆಗಾಲದಲ್ಲಿ ನದಿಯನ್ನು ಯಾವುದೇ ಅಡೆತಡೆಗಳಿಲ್ಲದೆ ಹರಿಯಬಿಡಲಾಗುತ್ತದೆ. ಇದು ಯೋಜನೆಯ ವಿಧಾನವಾದರೂ ಇಲ್ಲಿ ಹಲಗೆ ಜೋಡಣೆ ಇನ್ನೂ ಮಾಡದಿರುವುದು ಜನರ ಆಕ್ರೋಶಕ್ಕೆ ಕಾರಣವಾಗುತ್ತಿದೆ.

ಕಡಬ ತಾಲೂಕಿನ ಕುದ್ಮಾರು ಗ್ರಾಮದ ಶಾಂತಿಮೊಗರು ಎಂಬಲ್ಲಿ ಕುಮಾರಧಾರ ನದಿಗೆ ಪಶ್ಮಿಮವಾಹಿನಿ ಯೋಜನೆಯಡಿಯಲ್ಲಿ ನಿರ್ಮಿಸಲಾದ ಕಿಂಡಿ ಅಣೆಕಟ್ಟಿನ ಉಪಯೋಗವನ್ನು ಪಡೆದುಕೊಳ್ಳುವ ಕೆಲಸ ಸಾರ್ವಜನಿಕರಿಗೆ ಇಷ್ಟರವರೆಗೂ ಆಗಿಲ್ಲ. ದೇವಸ್ಥಾನದ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಅಣೆಕಟ್ಟಿಗೆ ಹಲಗೆ ಜೋಡಣೆ ಮಾಡಿ ಬಂದ್ ಮಾಡಲಾಗಿತ್ತು. ಅ ಎರಡು ತಿಂಗಳ ಅವಧಿಯಲ್ಲಿ ನಮ್ಮ ಹತ್ತಿರದ ಕೆರೆ, ಬಾವಿಗಳಲ್ಲಿ ನೀರಿನ ಮಟ್ಟ ಹೆಚ್ಚಳವಾಗಿತ್ತು. ಆದರೆ ಈಗಾಗಲೇ ನೀರಿನ ಮಟ್ಟ ಇಳಿಕೆಯಾಗುತ್ತಿದೆ. ಸಂಬಂಧಪಟ್ಟವರು ಇದರ ಬಗ್ಗೆ ಗಮನಹರಿಸಬೇಕು. ಮತ್ತು ಸರಕಾರದ ಹಣವನ್ನು ಉಪಯೋಗಿಸಿ ನಿರ್ಮಿಸಿದಂತಹ ಅಣೆಕಟ್ಟು ಸಾರ್ವಜನಿಕರಿಗೆ ಉಪಯೋಗವಾಗಬೇಕು. ರಾಜಕಾರಣಿಗಳು ಕೇವಲ ಚುನಾವಣೆಗಾಗಿ ಮಾತ್ರ ಬದುಕುವ ರೀತಿಯಲ್ಲಿ ಇರಬಾರದು. ಇಂತಹ ಒಳ್ಳೆಯ ಯೋಜನೆ ಜನರಿಗೆ ಪ್ರಯೋಜನವಾಗಬೇಕು. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣ ಮಾಡಿದ್ದಾರೆ. ಹಾಗಾಗಿ ಅದಕ್ಕೆ ಪೂರಕವಾಗಿ ಅದನ್ನು ಉಪಯೋಗಿಸಿಕೊಳ್ಳಬೇಕು. ಹಲಗೆ ಜೋಡಣೆ ಕೆಲಸ ನಡೆದು ಯೋಜನೆಯ ಪ್ರಯೋಜನ ಈ ಭಾಗದ ಜನರಿಗೆ ದೊರೆಯವಂತಾಗಲಿ.

ಪ್ರವೀಣ್‌ಕುಮಾರ್ ಕೆಡೆಂಜಿಗುತ್ತು
ಮಾಜಿ ಸದಸ್ಯರು, ಅಕ್ರಮ ಸಕ್ರಮ ಸುಳ್ಯ ವಿಧಾನಸಭಾ ಕ್ಷೇತ್ರ

ಕಡಬ ತಾಲೂಕಿನ ಕುದ್ಮಾರು ಗ್ರಾಮದ ಶಾಂತಿಮೊಗರು ಎಂಬಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಕಿಂಡಿ ಅಣೆಕಟ್ಟು ಮಾಡಿರುವುದು ಸಂತಸದ ವಿಚಾರ. ಬೇಸಿಗೆಯಲ್ಲಿ ನೀರು ಶೇಖರಿಸಿ ಅಂತರ್ಜಲ ಹೆಚ್ಚಿಸಬೇಕಿತ್ತು. ಆದರೆ ಇದುವರೆಗೆ ಯಾವುದೇ ಕ್ರಮವನ್ನು ಇಲಾಖೆ ಕೈಗೊಂಡಿರುವುದಿಲ್ಲ. ಸುತ್ತಮುತ್ತಲಿನ ಪ್ರದೇಶದ ಬಾವಿ, ಕೊಳವೆ ಬಾವಿಯಲ್ಲಿ ನೀರಿನ ಪ್ರಮಾಣವು ಕಡಿಮೆಯಾಗಿರುತ್ತದೆ. ನದಿಯಲ್ಲಿ ನೀರು ಕಡಿಮೆಯಾಗಿದ್ದು, ದೇವಳದ ದೇವರ ಮೀನು ಸಂರಕ್ಷಣೆಯು ಅಗತ್ಯವಾಗಿರುತ್ತದೆ. ಸೇತುವೆ ಮತ್ತು ಕಿಂಡಿಅಣೆಕಟ್ಟಿನ ಮಧ್ಯ ಭಾಗದಲ್ಲಿ ನಿರಂತರವಾಗಿ ಮರಳುಗಾರಿಕೆ ನಡೆಯುತ್ತದೆ. ಯಾವುದೇ ಪ್ರಭಾವಕ್ಕೆ ಮಣಿಯದೇ ಇಲಾಖೆ ಕೂಡಲೇ ನೀರು ಶೇಖರಿಸಿ ಸ್ಥಳೀಯ ಪ್ರದೇಶದ ರೈತರಿಗೆ ಅನುಕೂಲ ಮಾಡಬೇಕೆಂದು ಆಗ್ರಹಿಸುತ್ತಿದ್ದೇನೆ.

ಕುಶಾಲಪ್ಪ ಗೌಡ ಕೋರಿಯಾರು, ಸದಸ್ಯರು, ರೈತ ಸಂಘ ಸವಣೂರು ವಲಯ

ಬಹು ದಿನಗಳ ಈ ಭಾಗದ ಜನರ ಪ್ರಮುಖ ಬೇಡಿಕೆಯಲ್ಲಿ ಒಂದಾದ ಈ ಕಿಂಡಿ ಅಣೆಕಟ್ಟಿನ ಕಾಮಗಾರಿ ಸರಿ ಸುಮಾರು ಶೇ 80ರಷ್ಟು ಕಳೆದ ವರ್ಷವೇ ಪೂರ್ಣಗೊಂಡಿದ್ದು, ಈ ವರ್ಷ ಕಾಮಗಾರಿ ಪೂರ್ತಿಯಾಗುವ ನಿರೀಕ್ಷೆಯಿತ್ತು. ಈ ಬಗ್ಗೆ ಸಂಬಂಧಪಟ್ಟ ಇಂಜಿನಿಯರ್ ಅವರಲ್ಲಿ ವಿಚಾರಿಸಿದಾಗ ಕೆಲವು ತಾಂತ್ರಿಕ ತೊಂದರೆಯಿಂದಾಗಿ ವಿಳಂಬವಾಗಿರುವುದಾಗಿ ಹೇಳಿದ್ದು, ಅತೀ ಶೀಘ್ರದಲ್ಲಿ ಪೂರ್ಣಗೊಳಿಸುವ ಭರವಸೆ ನೀಡಿದ್ದಾರೆ.

ಲೋಹಿತಾಕ್ಷ ಕೆಡೆಂಜಿಕಟ್ಟ
ಅಧ್ಯಕ್ಷರು, ಗ್ರಾ.ಪಂ.ಬೆಳಂದೂರು

LEAVE A REPLY

Please enter your comment!
Please enter your name here