ಬ್ರಹ್ಮಕಲಶೋತ್ಸವದ ಮೂಲಕ ಆಧ್ಯಾತ್ಮಿಕ ಜ್ಞಾನ ಭರ್ತಿ ಮಾಡುವ ಕಾರ್‍ಯ-ಕನ್ಯಾಡಿ ಶ್ರೀ
ಪುತ್ತೂರು: ಶರೀರವೇ ದೇವಾಲಯ. ಜೀವಾತ್ಮವೇ ದೇವರು. ನಮ್ಮ ಆತ್ಮದ ಪ್ರತಿರೂಪವೇ ಪರಮಾತ್ಮ. ಆಧುನಿಕ ಜೀವನದಲ್ಲಿ ನಮ್ಮಲ್ಲಿ ಜ್ಞಾನ, ಆಧ್ಯಾತ್ಮದ ಹಸಿವು ಕಡಿಮೆಯಾಗಿದೆ. ಶ್ರದ್ಧಾ ಕೇಂದ್ರಗಳಲ್ಲಿ ನಡೆಯುವ ಬ್ರಹ್ಮಕಲಶೋತ್ಸವದ ಮೂಲಕ ಆಧ್ಯಾತ್ಮದ ಜ್ಞಾನ ಭರ್ತಿಮಾಡುವ ಕಾರ್ಯವಾಗುತ್ತಿದೆ ಎಂದು ಧರ್ಮಸ್ಥಳ ಕನ್ಯಾಡಿ ನಿತ್ಯಾನಂದ ನಗರದ ಶ್ರೀರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಹೇಳಿದರು.
ಬಂಟ್ವಾಳದ ಪೆರ್ನೆ ಕೊರತಿಕಟ್ಟೆ ಮಾಡತ್ತಾರು ಸಪರಿವಾರ ಶ್ರೀ ವ್ಯಾಘ್ರಚಾಮುಂಡಿ ದೈವಸ್ಥಾನದಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವದ ಎರಡನೇ ದಿನವಾದ ಫೆ.೨೨ರಂದು ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ಬ್ರಹ್ಮಕಲಶೋತ್ಸವಕ್ಕೆ ಜಾತಿಗೊಂದು ಸ್ವಾಮೀಜಿಗಳನ್ನು ಆಹ್ವಾನಿಸುವ ಸಂಪ್ರದಾಯದಿಂದ ಹೊರಬರಬೇಕು. ಇದರ ಹೊರತಾಗಿರುವ ಇಸ್ರೇಲ್, ಜಪಾನ್ ಮೊದಲಾದ ದೇಶಗಳು ರಾಷ್ಟ್ರೀಯತೆಯಿಂದಾಗಿ ಅಭಿವೃದ್ಧಿಯಾಗಿದೆ. ಯುವ ಜನತೆ ಪಕ್ಷದ ಭಾವನೆಯಿಂದ ಹೊರಬರಬೇಕು. ರಾಜಕಾರಣಿಗಳು, ಚಲನ ಚಿತ್ರ ನಟರು,ಕ್ರಿಕೆಟ್ ಆಟಗಾರರು ಮಾತ್ರ ನಮಗೆ ಮಾದರಿಯಲ್ಲ. ಜೀವನದಲ್ಲಿ ಶಾಂತಿ ನೆಮ್ಮದಿಗಾಗಿ ಆಧ್ಯಾತ್ಮದ ಜ್ಞಾನ ಬಹುಮುಖ್ಯ ಎಂದರು.
ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಸೂರ್ಯನಾರಾಯಣ ಕಶೆಕೋಡಿ ಮಾತನಾಡಿ, ಅಲ್ಪ ಅವಧಿಯಲ್ಲಿ ದೈವಗಳ ಭವ್ಯ ಆಲಯ ನಿರ್ಮಾಣಗೊಂಡಿದ್ದು ಆರಾಧನ ಕೇಂದ್ರಗಳಿಗೆ ಉದಾಹರಣೆಗೆ ಸಾಕ್ಷಿಯಾಗುವಂತಾಗಿದೆ. ಇಲ್ಲಿನ ಪ್ರಕೃತಿಗೆ ಪೂರಕವಾದಂತೆ, ಕ್ಷೇತ್ರದ ಮಹಿಮೆಯನ್ನೇ ಆಮಂತ್ರಣ ಪತ್ರಿಕೆಯಲ್ಲಿ ನೀಡಲಾಗಿದೆ. ಪುರಾತನ ಶೈಲಿಯಲ್ಲಿ ಸಾನಿಧ್ಯ ನಿರ್ಮಾಣಗೊಂಡಿದ್ದು, ಕ್ಷೇತ್ರದ ನಿರ್ಮಾಣದ ಮೂಲಕ ಈ ಹಿಂದೆ ಕಂಡುಕೊಂಡ ಕಷ್ಟ ಗಳಿಗೆ ಪರಿಹಾರ ದೊರೆತಿದೆ. ಇಲ್ಲಿ ಜಾತಿ ವಾದಗಳಿಗೆ ಅವಕಾಶ ನೀಡದೇ ಮುಂದುವರಿಯಬೇಕು ಎಂದರು.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಮಾತನಾಡಿ, ಪುರಾತನ ದೈವೀ ಸಾನಿಧ್ಯ ನಿರ್ಮಾಣಗೊಳ್ಳುವ ಮೂಲಕ ಮಾಡತ್ತಾರು ಕ್ಷೇತ್ರ ಭಕ್ತಿ ಭಾವದಲ್ಲಿ ತುಂಬಿ ತುಳುಕಿದೆ. ಭವ್ಯವಾಗಿ ನಿರ್ಮಾಣ ಗೊಂಡ ಸಾನಿಧ್ಯವನ್ನು ಉಳಿಸಿ, ಬೆಳೆಸಬೇಕಾದ ಹೊಣೆ ನಮ್ಮೆಲ್ಲರ ಮೇಲಿದೆ ಎಂದರು.
ಉಪ್ಪಿನಂಗಡಿ ಪದ್ಮವಿದ್ಯಾ ಪೆಟ್ರೋಲ್ ಪಂಪ್‌ನ ವಿದ್ಯಾಧರ ಜೈನ್ ಮಾತನಾಡಿ ಕ್ಷೇತ್ರ ಭೌತಿಕವಾಗಿ ಅಜೀರ್ಣವಾಗಿದ್ದರೂ ದೈವೀ ಶಕ್ತಿ ನಿರಂತರವಾಗಿದ್ದು ಕ್ಷೇತ್ರ ಅದ್ಬುತ ರೀತಿಯಲ್ಲಿ ನಿರ್ಮಾಣಗೊಂಡಿದೆ. ಈ ಕ್ಷೇತ್ರವು ಇನ್ನಷ್ಟು ಬೆಳಗಿ ಬರಲಿ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೇಲ್ವಿಚಾರಕಿ ಜಯಶ್ರೀ ಮಾತನಾಡಿ,ಮಕ್ಕಳಿಗೆ ಶಾಲಾ ಶಿಕ್ಷಣದ ಜೊತೆಗೆ ಧಾರ್ಮಿಕ ಶಿಕ್ಷಣ ನೀಡುವ ನಿಟ್ಟಿನಲ್ಲಿ ಶ್ರದ್ಧಾ ಕೇಂದ್ರಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ದೈವಸ್ಥಾನದ ಅಧ್ಯಕ್ಷ ಕಿರಣ್ ಶೆಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಮೂರು ವರ್ಷಗಳ ಹಿಂದೆ ಜೀರ್ಣೋದ್ಧಾರಕ್ಕೆ ಪ್ರಾರಂಭಿಸಲಾಗಿತ್ತು. ಇದಕ್ಕಾಗಿ ೧೨ ಬೈಲುವಾರು ಸಮಿತಿ ರಚಿಸಿಕೊಳ್ಳಲಾಗಿತ್ತು. ಕೊರೋನಾದಿಂದ ಕೆಲಕಾಲ ವಿಳಂಬವಾಗಿತ್ತು. ಊರ,ಪರವೂರ ಭಕ್ತರ ಸಹಕಾರದಿಂದ ರೂ.೧.೫೦ಕೋಟಿ ವೆಚ್ಚದಲ್ಲಿ ಕ್ಷೇತ್ರದ ಜೀರ್ಣೋದ್ಧಾರ ನಡೆದಿದೆ ಎಂದರು.
ಮುಂಬೈ ಉದ್ಯಮಿ ಲೀಲೇಶ್ ರೈ ಪಾಂಡಿಬೆಟ್ಟು, ದೈವಸ್ಥಾನದ ಗೌರವಾಧ್ಯಕ್ಷ ಈಶ್ವರ ಪ್ರಸನ್ನ ಪೆರ್ನೆಕೋಡಿ, ಕಾರ್ಯದರ್ಶಿ ಶಿವಪ್ಪ ನಾಯ್ಕ ಕಾರ್ಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸನ್ಮಾನ; ದೈವಸ್ಥಾನದ ನಿರ್ಮಾಣಕ್ಕೆ ಸ್ಥಳದಾನ ಮಾಡಿದ ದಯಾನಂದ ಪೂಜಾರಿ ಮಾಡತ್ತಾರು, ಜೆರಾಲ್ಡ್ ಫೆರ್ನಾಂಡೀಸ್ , ಶರೂನ್ ನೊರೋನ್ಹಾ, ಆನಂದ ಅತ್ತಜಾಲು ರವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಂಜೆ ಶ್ರೀಶಾರದಾ ಕಲಾ ಕೇಂದ್ರ ಪುತ್ತೂರು ಇವರಿಂದ ನೃತ್ಯ ವೈಭವ, ರಾತ್ರಿ ಕಾಪು ರಂಗ ತರಂಗ ಕಲಾವಿಕದರಿಂದ `ಅಧ್ಯಕ್ಷೆರ್’ ಎಂಬ ಹಾಸ್ಯಮಯ ತುಳು ನಾಟಕ ಪ್ರದರ್ಶನಗೊಂಡಿತು.
ವಿಂದ್ಯಾಶ್ರೀ ಹನುಮಾಜೆ ಪ್ರಾರ್ಥಿಸಿದರು. ವಿನೋದ್ ಅಡೆಕಲ್ಲು ಕಾರ್ಯಕ್ರಮ ನಿರೂಪಿಸಿದರು. ಸತೀಶ್ ಶೆಟ್ಟಿ ಮುಂಡೋವಿನಕೋಡಿ ವಂದಿಸಿದರು. ರೇಷ್ಮಾ ಪ್ರವೀಣ್ ದಂಪತಿ ಸ್ವಾಮೀಜಿಯವರಿಗೆ ಫಲಪುಷ್ಪ ನೀಡಿ ಗೌರವಿಸಿದರು. ಶ್ರೀಕಾಂತ್ ಯಾದವ್ ನಾಗಮೂಲೆ, ಸೀತಾರಾಮ ನಾಯ್ಕ್, ಕೃಷ್ಣ ಕುಮಾರ್ ಪೆರ್ನೆಕೋಡಿ, ಜಾನಕಿ ಕೊರತಿಕಟ್ಟೆ ಅತಿಥಿಗಳನ್ನು ಶಾಲು ಹಾಕಿ ಸ್ವಾಗತಿಸಿದರು.
ಇಂದು ಮಾಡತ್ತಾರಿನಲ್ಲಿ ಬ್ರಹ್ಮಕಲಶ, ನೇಮೋತ್ಸವ
ಫೆ.23ರಂದು ಮಾಡತ್ತಾರು ಕ್ಷೇತ್ರದಲ್ಲಿ ಮಹಾಗಣಪತಿ ಹೋಮ, ಬ್ರಹ್ಮಕಲಶಪೂಜೆ, ಶ್ರೀವ್ಯಾಘ್ರಚಾಮುಂಡಿ, ಉಳ್ಳಾಕ್ಲು, ಕೊರತಿ ಮತ್ತು ಗುಳಿಗ ದೈವಗಳ ಮಂಚ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ತಂಬಿಲ ಸೇವೆ, ಮಂಗಳಾರತಿ, ನೇಮಸ್ತಿಕ ನಿಯಮಗಳ ನಿರ್ಣಯ, ಮಧ್ಯಾಹ್ನ ಧರ್ಮಸಭೆ ನಡೆದು ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ರಾಮಕೃಷ್ಣ ಕಾಟುಕುಕ್ಕೆ ಬಳಗದವರಿಂದ ಭಕ್ತಿ ರಸಮಂಜರಿ ನಡೆಯಲಿದೆ.
ಸಂಜೆ ಅತ್ತೆಜಾಲು ಭಂಡಾರದ ಮನೆಯಿಂದ ಮಾಡತ್ತಾರು ದೈವಸ್ಥಾನಕ್ಕೆ ಭಂಡಾರ ಆಗಮನ, ಮಾಡತ್ತಾರು ಕ್ಷೇತ್ರದಲ್ಲಿ ಭಂಡಾರ ಏರಿ ತಂಬಿಲ ಸೇವೆ, ಎಣ್ಣೆ ಬೂಳ್ಯ, ಅನ್ನಸಂತರ್ಪಣೆ, ರಾತ್ರಿ ಸಪರಿವಾರ ದೈವಗಳ ನರ್ತನ ಸೇವೆ, ನೇಮೋತ್ಸವ ನಡೆಯಲಿದೆ ಎಂದು ದೈವಸ್ಥಾನದ ಪ್ರಕಟಣೆ ತಿಳಿಸಿದೆ.