ಪುತ್ತೂರು: ದೇಶದಲ್ಲೇ ತಲ್ಲಣ ಸೃಷ್ಟಿಸಿದ್ದ ಬಿಜೆಪಿ ಯುವ ಮುಖಂಡ, ಬೆಳ್ಳಾರೆ ಸಮೀಪದ ನೆಟ್ಟಾರ್ ನಿವಾಸಿ ಪ್ರವೀಣ್ ಅವರ ಹತ್ಯೆಗೆ ಸಂಬಂಧಿಸಿದಂತೆ ನಡೆದ ತನಿಖೆಯ ವೇಳೆ ಕಬಕ ಸಮೀಪದ ಇಡ್ಕಿದು ಗ್ರಾಮದ ಮಿತ್ತೂರು ಎಂಬಲ್ಲಿರುವ ಫ್ರೀಡಂ ಕಮ್ಯೂನಿಟಿ ಹಾಲ್ನಲ್ಲಿ ಪಾಪ್ಯುಲರ್ ಫ್ರಂಟ್ ಅಫ್ ಇಂಡಿಯಾದ ಸದಸ್ಯರಿಗೆ ಅನಧಿಕೃತವಾಗಿ ಭಯೋತ್ಪಾದನೆಗೆ ಸಹಕಾರಿಯಾಗುವಂತಹ ಶಸ್ತ್ರಾಸ್ತ್ರ ತರಬೇತಿಯನ್ನು ನೀಡಲಾಗುತ್ತಿತ್ತು ಎಂಬ ವಿಚಾರ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ಫ್ರೀಡಂ ಕಮ್ಯೂನಿಟಿ ಹಾಲ್ನ್ನು ಸ್ವಾಧೀನ ಪಡಿಸಿಕೊಂಡಿದೆ.
ಇಡ್ಕಿದು ಗ್ರಾಮದ ಮಿತ್ತೂರಿನ ಒಟ್ಟು 0.20 ಎಕ್ರೆ ವಿಸ್ತೀರ್ಣದ ಜಾಗದಲ್ಲಿ ಪಾಪ್ಯುಲರ್ ಫ್ರಂಟ್ ಅಫ್ ಇಂಡಿಯಾ ಫ್ರೀಡಂ ಕಮ್ಯೂನಿಟಿ ಹಾಲ್ ಅಥವಾ ಮಿತ್ತೂರು ಕಮ್ಯೂನಿಟಿ ಹಾಲ್ ಎಂಬ ಹೆಸರಿನಲ್ಲಿ ಸಭಾಭವನವನ್ನು ನಿರ್ಮಿಸಿ ಮದುವೆ ಇನ್ನಿತರ ಕಾರ್ಯಕ್ರಮಗಳಿಗೆ ಬಾಡಿಗೆಗೆ ನೀಡುವುದರೊಂದಿಗೆ ತನ್ನ ಗುಪ್ತ ಯೋಜನೆಗಳಿಗೆ ಸಹಕಾರಿಯಾಗುವಂತೆ ಇದನ್ನು ಬಳಸಿಕೊಳ್ಳುತ್ತಿತ್ತು.
ಭಯೋತ್ಪಾದನಾ ಕೃತ್ಯಗಳಿಗೆ ಸಹಕಾರಿಯಾಗುವಂತೆ ಕಾನೂನುಬಾಹಿರವಾಗಿ ತನ್ನ ಕಾರ್ಯಪಡೆಗೆ ಇಲ್ಲಿ ಶಸ್ತ್ರ ತರಬೇತಿ ನೀಡುವುದು ತನಿಖೆಯ ವೇಳೆ ದೃಢಪಟ್ಟ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ತಂಡ ಯುಎ (ಪಿ) ಸೆಕ್ಷನ್ 25 / 1067 ಕಾನೂನಿನನ್ವಯ ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆಯಂತೆ ರಾಷ್ಟ್ರೀಯ ತನಿಖಾ ಸಂಸ್ಥೆಯ ಮಹಾನಿರ್ದೇಶಕರ ಸೂಚನೆ ಮತ್ತು ಆದೇಶದ ಮೇರೆಗೆ ರಾಷ್ಟ್ರೀಯ ತನಿಖಾ ಸಂಸ್ಥೆಯ ಬೆಂಗಳೂರು ಕಚೇರಿಯ ಮುಖ್ಯ ತನಿಖಾಧಿಕಾರಿ ಎಂ. ಷಣ್ಮುಗಂ ಫ್ರೀಡಂ ಎಜುಕೇಷನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಎಂದು ಕರೆಯಲ್ಪಡುವ ಪಾಪ್ಯುಲರ್ ಫ್ರಂಟ್ ಅಫ್ ಇಂಡಿಯಾ ಫ್ರೀಡಂ ಕಮ್ಯೂನಿಟಿ ಹಾಲ್ ಅಥವಾ ಮಿತ್ತೂರು ಕಮ್ಯೂನಿಟಿ ಹಾಲ್ನ್ನು ಸ್ವಾಧೀನ ಪಡಿಸಿಕೊಂಡಿದೆ.
ಇದರನ್ವಯ ಈ ಭೂಮಿ, ಕಟ್ಟಡವನ್ನು ಪರಭಾರೆ ಮಾಡುವುದಾಗಲಿ, ಬಾಡಿಗೆಗೆ ನೀಡುವುದಾಗಲಿ, ಯಾವುದೇ ಬದಲಾವಣೆ ಮಾಡುವುದಾಗಲಿ, ಬಳಸಿಕೊಳ್ಳುವುದಾಗಲೀ ಮಾಡುವುದನ್ನು ಸಂಪೂರ್ಣವಾಗಿ ಎನ್ಐಎ ನಿಷೇಧಿಸಿ, ವಶಕ್ಕೆ ಪಡೆದಿರುವ ಕುರಿತು ಫೆ.23ರಂದು ಆದೇಶ ಜಾರಿಗೊಳಿಸಿದೆ.
ಇದರ ಪ್ರತಿಯನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ವಿಟ್ಲ ಪೊಲೀಸ್ ಠಾಣೆಯ ಎಸ್ಎಚ್ಒ ಅವರಿಗೆ ಕಳುಹಿಸಿಕೊಡಲಾಗಿದೆ.