ವಿವಿಧ ರೋಟರಿ ಸಂಸ್ಥೆಗಳಿಂದ ವಿಶ್ವ ರೋಟರಿ ದಿನಾಚರಣೆ

0

ಸೂರ್ಯ ಚಂದ್ರವಿರುವವರೆಗೆ ರೋಟರಿಯ ಸಮಾಜ ಸೇವೆ ಗುರುತಿಸಲ್ಪಡುತ್ತದೆ-ವಿಕ್ರಂ ದತ್ತ

ಚಿತ್ರ: ಸಂತೋಷ್ ಮೊಟ್ಟೆತ್ತಡ್ಕ

-ಪುತ್ತೂರು ರೋಟರಿಯಿಂದ ಶೀಘ್ರ ಕಣ್ಣಿನ ಆಸ್ಪತ್ರೆ-ಎ.ಜೆ ರೈ
-ರೋಟರಿಯು ಪ್ರಪಂಚದಲ್ಲಿ ಎರಡನೇ ದೊಡ್ಡ ಸೇವಾ ಸಂಸ್ಥೆಯಾಗಿ ಗುರುತಿಸಿಕೊಂಡಿದೆ-ಪುರಂದರ ರೈ
-ನಾವೆಲ್ಲರೂ ಒಗ್ಗಟ್ಟಿನಿಂದ ರೋಟರಿ ಸಂಸ್ಥೆಯನ್ನು ಬೆಳೆಸೋಣ, ಬೆಳಗಿಸೋಣ-ಡಾ|ಹರ್ಷಕುಮಾರ್ ರೈ
-ರೋಟರಿ ಸಂಸ್ಥೆಯಲ್ಲಿ ಮಹಿಳೆಯರಿಗೆ ಸ್ಥಾನಮಾನ ದೊರಕಿರುವುದು ಶ್ಲಾಘನೀಯ-ಸೆನೋರಿಟಾ ಆನಂದ್

ಪುತ್ತೂರು: ದೇಶದಲ್ಲಿ ಯಾವುದೇ ಅನಾಹುತ, ಸಂಕಷ್ಟ ಎದುರಾಗಲಿ ಅಲ್ಲಿ ರೋಟರಿ ಸಂಸ್ಥೆ ಸದಾ ಸ್ಪಂದಿಸುವ ಮೂಲಕ ಮಾನವೀಯ ಮೌಲ್ಯಗಳನ್ನು ಸಮಾಜದಲ್ಲಿ ಬಿತ್ತುತ್ತಿದೆ. ರೋಟರಿ ಜನಕ ಪಾವ್ಲ್ ಹ್ಯಾರಿಶ್‌ರವರ ರೋಟರಿಯು ಸಮಾಜ ಸೇವೆಯಿಂದ ಹೇಗೆ ಇತಿಹಾಸ ಸೃಷ್ಟಿಸಿದೆಯೋ ಹಾಗೆಯೇ ಸೂರ್ಯ ಚಂದ್ರ ಇರುವವರೆಗೆ ರೋಟರಿ ಸಂಸ್ಥೆಯು ತನ್ನ ಸಮಾಜ ಸೇವೆಯಿಂದ ಗುರುತಿಸಲ್ಪಡುತ್ತದೆ ಎಂದು ರೋಟರಿ ಜಿಲ್ಲೆ ೩೧೮೧, ವಲಯ ಐದರ ಜಿಲ್ಲಾ ಗವರ್ನರ್ ನಾಮಿನಿ ವಿಕ್ರಂ ದತ್ತರವರು ಹೇಳಿದರು.
ಫೆ.೨೩ ರಂದು ಅಂತರ್ರಾಷ್ಟ್ರೀಯ ರೋಟರಿ ಸಂಸ್ಥೆಗೆ ೧೧೮ನೇ ಹುಟ್ಟುಹಬ್ಬವಾಗಿದ್ದು ಈ ನಿಟ್ಟಿನಲ್ಲಿ ಪುತ್ತೂರಿನ ರೋಟರಿ ಸಂಸ್ಥೆಗಳಾದ ರೋಟರಿ ಕ್ಲಬ್ ಪುತ್ತೂರು, ರೋಟರಿ ಕ್ಲಬ್ ಪುತ್ತೂರು ಈಸ್ಟ್, ರೋಟರಿ ಕ್ಲಬ್ ಪುತ್ತೂರು ಯುವ, ರೋಟರಿ ಕ್ಲಬ್ ಪುತ್ತೂರು ಸ್ವರ್ಣ, ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್‌ರವರ ಜಂಟಿ ಸಹಭಾಗಿತ್ವದಲ್ಲಿ ಲಯನ್ಸ್ ಸೇವಾ ಮಂದಿರದಲ್ಲಿ ಹಮ್ಮಿಕೊಂಡ ‘ವಿಶ್ವ ರೋಟರಿ ಜನ್ಮ ದಿನಾಚರಣೆ’ಯಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು. ಸ್ಥಳೀಯ ಕ್ಲಬ್‌ಗಳು ತಮ್ಮ ಕ್ಲಬ್‌ಗಳ ಸಮಾಜಮುಖಿ ಕಾರ್ಯಕ್ರಮಗಳಿಗೆ ಸಾರ್ವಜನಿಕರಿಂದ ಫಂಡ್ ಅನ್ನು ಸಂಗ್ರಹಿಸಲಾಗುತ್ತದೆ. ಆದರೆ ರೋಟರಿ ಕ್ಲಬ್ ತನ್ನಲ್ಲಿನ ಸದಸ್ಯರೇ ಸಮಾಜಮುಖಿ ಕಾರ್ಯಗಳಿಗೆ ಹೆಚ್ಚಿನ ಕಾಣಿಕೆಯನ್ನು ಸಮರ್ಪಿಸುವುದೇ ಸ್ಥಳೀಯ ಕ್ಲಬ್‌ಗಳಿಗೆ ಮತ್ತು ರೋಟರಿಗೆ ಇರುವ ವ್ಯತ್ಯಾಸವಾಗಿದೆ ಎಂದರು.

ಪುತ್ತೂರು ರೋಟರಿಯಿಂದ ಶೀಘ್ರ ಕಣ್ಣಿನ ಆಸ್ಪತ್ರೆ-ಎ.ಜೆ ರೈ:
ರೋಟರಿ ಅಸಿಸ್ಟೆಂಟ್ ಗವರ್ನರ್ ಎ.ಜಗಜ್ಜೀವನ್ ದಾಸ್ ರೈ ಮಾತನಾಡಿ, ೨೨೦ ದೇಶಗಳಲ್ಲಿ ರೊಟೇರಿಯನ್ಸ್‌ಗಳು ಪರಸ್ಪರ ಸ್ನೇಹ, ಒಡನಾಟ, ಬಾಂಧವ್ಯತೆ ಹಾಗೂ ಸೇವೆಯಿಂದ ಗುರುತಿಸಿಕೊಂಡಿದೆ. ಪುತ್ತೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಏಳು ರೋಟರಿ ಸಂಸ್ಥೆಗಳಲ್ಲಿನ ಸುಮಾರು ೫೦೦ ಸದಸ್ಯರು ತಮ್ಮದೇ ಆದ ಸೇವಾ ಚಟುವಟಿಕೆಗಳನ್ನು ನೀಡುತ್ತಾ ಸಾರ್ವಜನಿಕರಿಂದ ಅಭಿನಂದನೆಯನ್ನು ಗಳಿಸಿಕೊಂಡಿದೆ. ಪುತ್ತೂರಿನಲ್ಲಿ ಬ್ಲಡ್ ಬ್ಯಾಂಕ್, ಡಯಾಲಿಸಿಸ್ ಕೇಂದ್ರಗಳನ್ನು ಸ್ಥಾಪಿಸುವುದರ ಜೊತೆಗೆ ಇನ್ನಿತರ ಸಮಾಜಮುಖಿ ಕಾರ್ಯಗಳು ನಿರಂತರ ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ರೋಟರಿ ವತಿಯಿಂದ ಕಣ್ಣಿನ ಆಸ್ಪತ್ರೆಯು ಶೀಘ್ರದಲ್ಲಿಯೇ ಆಗಲಿದೆ ಎಂದರು.

ರೋಟರಿಯು ಪ್ರಪಂಚದಲ್ಲಿ ಎರಡನೇ ದೊಡ್ಡ ಸೇವಾ ಸಂಸ್ಥೆಯಾಗಿ ಗುರುತಿಸಿಕೊಂಡಿದೆ-ಪುರಂದರ ರೈ:
ರೋಟರಿ ವಲಯ ಸೇನಾನಿ ಪುರಂದರ ರೈ ಮಾತನಾಡಿ, ವಾಹನದ ನಾಲ್ಕು ಚಕ್ರಗಳೆಂಬಂತೆ ಪಾವ್ಲ್ ಹ್ಯಾರಿಶ್‌ರವರನ್ನೊಳಗೊಂಡ ನಾಲ್ಕು ಮಂದಿ ಮಿತ್ರರು ರೋಟರಿ ಎಂಬ ಚಕ್ರವನ್ನು ತಿರುಗಿಸಿ, ತಿರುಗಿಸಿ ರೋಟರಿಯ ಶಕ್ತಿ ಮತ್ತು ಸಾಮರ್ಥ್ಯವನ್ನು ಜಗತ್ತಿಗೆ ಪ್ರಚುರಪಡಿಸಿರುತ್ತಾರೆ. ಪ್ರಪಂಚದಲ್ಲಿ ಎರಡನೇ ದೊಡ್ಡ ಸೇವಾ ಸಂಸ್ಥೆಯಾಗಿ ರೋಟರಿ ಸಂಸ್ಥೆ ಗುರುತಿಸಿಕೊಂಡಿರುವುದು ನಮಗೆ ಹೆಮ್ಮೆ ಎನಿಸಿದೆ. ಜಾತಿ-ಮತ-ಪಂಥ-ಧರ್ಮ ಏನೇ ಇದ್ದರೂ ಅನೇಕತೆಯಲ್ಲಿ ಏಕತೆ ಎಂಬಂತೆ ರೋಟರಿಯು ಕಾರ್ಯ ನಿರ್ವಹಿಸುತ್ತಿದೆ ಎಂದರು.

ನಾವೆಲ್ಲರೂ ಒಗ್ಗಟ್ಟಿನಿಂದ ರೋಟರಿ ಸಂಸ್ಥೆಯನ್ನು ಬೆಳೆಸೋಣ, ಬೆಳಗಿಸೋಣ-ಡಾ|ಹರ್ಷಕುಮಾರ್ ರೈ:
ಮತ್ತೋರ್ವ ವಲಯ ಸೇನಾನಿ ಡಾ|ಹರ್ಷಕುಮಾರ್ ರೈ ಮಾತನಾಡಿ, ರೋಟರಿ ಅಂದರೆ ಪರರಿಗೆ ಸ್ಪಂದಿಸುವತ್ತ ಕೊಡುವ ಕೈ ಎನಿಸಿದೆ. ಪುತ್ತೂರಿನಲ್ಲಿ ರೋಟರಿಯ ಹಲವಾರು ಕ್ಲಬ್‌ಗಳಿದ್ದರೂ ಅದರ ಧ್ಯೇಯೋದ್ಧೇಶಗಳು ಒಂದೇ ಆಗಿರುತ್ತದೆ. ವಿವಿಧ ರೋಟರಿ ಕ್ಲಬ್‌ಗಳು ನೊಂದವರಿಗೆ ನೆರವು ನೀಡಿದಾಗ ಆಗ ಸಮಾಜ ಹೇಳುವುದು ರೋಟರಿ ಸಂಸ್ಥೆ ಮಾಡಿರುವುದು ಎಂಬುದನ್ನು ಬಿಟ್ರೆ ಆ ರೋಟರಿ ಮಾಡಿರುವುದು, ಈ ರೋಟರಿ ಮಾಡಿರುವುದು ಎಂಬುದಲ್ಲ. ನಾವೆಲ್ಲರೂ ಮುಂದಿನ ದಿನಗಳಲ್ಲಿ ಒಗ್ಗಟ್ಟಿನಿಂದ ರೋಟರಿ ಸಂಸ್ಥೆಯನ್ನು ಬೆಳೆಸೋಣ, ಬೆಳಗಿಸೋಣ ಎಂದರು.

ರೋಟರಿ ಸಂಸ್ಥೆಯಲ್ಲಿ ಮಹಿಳೆಯರಿಗೆ ಸ್ಥಾನಮಾನ ದೊರಕಿರುವುದು ಶ್ಲಾಘನೀಯ-ಸೆನೋರಿಟಾ ಆನಂದ್:
ಮತ್ತೋರ್ವೆ ವಲಯ ಸೇನಾನಿ ಸೆನೋರಿಟಾ ಆನಂದ್ ಮಾತನಾಡಿ, ರೋಟರಿ ಸಂಸ್ಥೆಯಲ್ಲಿ ಮಹಿಳೆಯರಿಗೆ ಸ್ಥಾನಮಾನವಿರಲಿಲ್ಲ. ೧೯೭೭ರಲ್ಲಿ ಲೇಡಿ ರೊಟೇರಿಯನ್ಸ್‌ಗಳ ಸೇರ್ಪಡೆಗೆ ವಿರೋಧ ವ್ಯಕ್ತವಾಗಿತ್ತು. ಬಳಿಕ ೧೯೭೯ರಲ್ಲಿ ಮಹಿಳಾ ರೊಟೇರಿಯನ್ಸ್‌ಗಳ ಸೇರ್ಪಡೆಗೆ ಸುಪ್ರೀಂ ಕೋರ್ಟ್ ಅಸ್ತು ನೀಡಿತ್ತಾದರೂ ೧೯೮೭ರಲ್ಲಿ ಅದು ಅಧಿಕೃತಗೊಂಡಿತ್ತು. ಪ್ರಸ್ತುತ ಅಂತರ್ರಾಷ್ಟ್ರೀಯ ರೋಟರಿಯ ಅಧ್ಯಕ್ಷೆ ಮಹಿಳೆ ಆಗಿರುವುದು ಜೊತೆಗೆ ಪುತ್ತೂರಿನ ರೋಟರಿಯಲ್ಲೂ ಮಹಿಳೆಯರು ಮಹತ್ವದ ಹುದ್ದೆಗಳನ್ನು ಅಲಂಕರಿಸಿರುವುದು ಹೆಮ್ಮೆ ಎನಿಸುತ್ತದೆ ಎಂದರು.

ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಅಧ್ಯಕ್ಷ ಮೊಹಮದ್ ರಫೀಕ್ ದರ್ಬೆ, ರೋಟರಿ ಕ್ಲಬ್ ಪುತ್ತೂರು ಯುವ ಅಧ್ಯಕ್ಷೆ ರಾಜೇಶ್ವರಿ ಆಚಾರ್‌ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಶ್ವಿನಿ ಕೃಷ್ಣ ಮುಳಿಯ ಪ್ರಾರ್ಥಿಸಿದರು. ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಅಧ್ಯಕ್ಷ ವೆಂಕಟ್ರಮಣ ಗೌಡ ಕಳುವಾಜೆ ಸ್ವಾಗತಿಸಿ, ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಉಮಾನಾಥ್ ಪಿ.ಬಿ ವಂದಿಸಿದರು. ರೋಟರಿ ಕ್ಲಬ್ ಪುತ್ತೂರು ಈಸ್ಟ್ ಅಧ್ಯಕ್ಷ ಶರತ್ ಕುಮಾರ್ ರೈ ಮುಖ್ಯ ಅತಿಥಿಗಳ ಪರಿಚಯ ಮಾಡಿದರು. ರೋಟರಿ ಜಿಲ್ಲಾ ಇವೆಂಟ್ ಕಾರ್ಯದರ್ಶಿ ಕೆ.ವಿಶ್ವಾಸ್ ಶೆಣೈ, ರೋಟರಿ ಸೆಂಟ್ರಲ್ ಕಾರ್ಯದರ್ಶಿ ಚಂದ್ರಹಾಸ್ ರೈ, ರೋಟರಿ ಸ್ವರ್ಣ ಮಾಜಿ ಅಧ್ಯಕ್ಷ ಭಾಸ್ಕರ ಕೋಡಿಂಬಾಳ, ರೋಟರಿ ಸ್ವರ್ಣ ಕಾರ್ಯದರ್ಶಿ ಸುರೇಶ್ ಪಿ, ರೋಟರಿ ಈಸ್ಟ್ ಕಾರ್ಯದರ್ಶಿ ಶಶಿಕಿರಣ್ ರೈ ನೂಜಿ, ರೋಟರಿ ಸೆಂಟ್ರಲ್ ಸ್ಥಾಪಕಾಧ್ಯಕ್ಷ ಸಂತೋಷ್ ಶೆಟ್ಟಿ, ರೋಟರಿ ಸದಸ್ಯರಾದ ಸಾಯಿರಾ ಝುಬೈರ್, ಸುರೇಂದ್ರ ಆಚಾರ್ಯರವರು ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಕೋಶಾಧಿಕಾರಿ ಡಾ|ರಾಮಚಂದ್ರ ಕಾರ್ಯಕ್ರಮ ನಿರೂಪಿಸಿದರು.

ರೋಟರಿ ಹುಟ್ಟುಹಬ್ಬದ ಕೇಕ್ ಕತ್ತರಿಸಿ ಸಂಭ್ರಮ…
ಅಂತರ್ರಾಷ್ಟ್ರೀಯ ಸೇವಾ ಸಂಸ್ಥೆಯಾಗಿರುವ ರೋಟರಿಯು ೧೯೦೫ರಲ್ಲಿ ನಾಲ್ವರು ಮಿತ್ರರಿಂದ ಹುಟ್ಟು ಪಡೆದುಕೊಂಡಿದ್ದು ಇದೀಗ ರೋಟರಿಗೆ ಫೆ.೨೩ ರಂದು ೧೧೮ರ ಹುಟ್ಟುಹಬ್ಬದ ಸಂಭ್ರಮ. ಈ ಹುಟ್ಟು ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಲು ಐದು ರೋಟರಿ ಸಂಸ್ಥೆಗಳು ಸಿಹಿಯ ಪ್ರತೀಕವಾದ ಕೇಕ್ ಕತ್ತರಿಸಿ ಸಂಭ್ರಮವನ್ನು ಆಚರಿಸಲಾಯಿತು. ಪುತ್ತೂರಿನ ರೋಟರಿ ಭೀಷ್ಮ ಎನಿಸಿದ ಕೆ.ಆರ್ ಶೆಣೈ ಹಾಗೂ ರೊಟರಿ ಜಿಲ್ಲಾ ಗವರ್ನರ್ ನಾಮಿನಿ ವಿಕ್ರಂ ದತ್ತರವರು ಜೊತೆಗೂಡಿ ಕೇಕ್ ಕತ್ತರಿಸಿ, ಪರಸ್ಪರ ತಿನ್ನಿಸಿ ಸಂಭ್ರಮವನ್ನು ಇಮ್ಮಡಿಗೊಳಿಸಿದರು. ಈ ಸಂದರ್ಭದಲ್ಲಿ ರೋಟರಿಗೆ ತನ್ನ ಸರ್ವಸ್ವವನ್ನೇ ದಾನ ಮಾಡಿದ ಹಿರಿಯರಾದ ರಾಮಕೃಷ್ಣ, ರೋಟರಿ ಜಿಲ್ಲಾ ಇವೆಂಟ್ ಸೆಕ್ರೆಟರಿ ಕೆ.ವಿಶ್ವಾಶ್ ಶೆಣೈ, ಜಿ.ಆರ್.ಎಫ್.ಸಿ ಡಾ.ಸೂರ್ಯನಾರಾಯಣರವರೊಂದಿಗೆ ವೇದಿಕೆಯಲ್ಲಿನ ಗಣ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here