ಪುತ್ತೂರು: ಕೋಡಿಂಬಾಡಿ ಗ್ರಾಮದ ಕಜೆ ಎಂಬಲ್ಲಿ ಜೆಸಿಬಿ ಕೆಲಸ ನಡೆಯುತ್ತಿದ್ದಾಗ ಅಕ್ರಮವಾಗಿ ಪ್ರವೇಶ ಮಾಡಿ ಜೀವ ಬೆದರಿಕೆ ಒಡ್ಡಿ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಐವರಿಗೆ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಕಜೆ ನಿವಾಸಿ ರೇವತಿ ನೀಡಿದ್ದ ದೂರಿನಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಕಜೆ ನಿವಾಸಿಗಳಾದ ಗಿರಿಯಪ್ಪ, ಗೀತಾ, ಶ್ವೇತಾ, ರಂಜಿತಾ ಮತ್ತು ರಂಜನ್ ವಿರುದ್ಧ ಫೆ.6ರಂದು ಕೇಸು ದಾಖಲಾಗಿತ್ತು. ಬಳಿಕ ಗಿರಿಯಪ್ಪ ಮತ್ತಿತರರು ನಿರೀಕ್ಷಣಾ ಜಾಮೀನು ಕೋರಿ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶರು ಗಿರಿಯಪ್ಪ ಕಜೆ ಸಹಿತ ಐವರಿಗೂ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದಾರೆ. ಅರ್ಜಿದಾರರ ಪರ ನ್ಯಾಯವಾದಿಗಳಾದ ಪುತ್ತೂರು ಅಗ್ರಜಾಸ್ ಲಾ ಚೇಂಬರ್ಸ್ ನ ಅಕ್ಷಿತ್ ಮುರ ಮತ್ತು ಉದಯಚಂದ್ರ ಕರಂಬಾರು ವಾದಿಸಿದ್ದರು.
ಕಜೆಯಲ್ಲಿ ನಡೆದಿದ್ದ ಘಟನೆಗೆ ಸಂಬಂಧಿಸಿ ಪರಸ್ಪರ ಆರೋಪ ಹೊರಿಸಿ ದೂರು ನೀಡಲಾಗಿದ್ದು ಗಿರಿಯಪ್ಪ ಅವರು ನೀಡಿದ್ದ ದೂರಿನಂತೆ ಸುಂದರ ಪಾಟಾಜೆ ಮತ್ತಿತರರ ವಿರುದ್ಧವೂ ನಗರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.