ಕುಡಿಪಾಡಿ ಸರಕಾರಿ ಉ.ಹಿ.ಪ್ರಾ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ, ವಿಜ್ಞಾನ ಪ್ರಯೋಗಾಲಯದ ಉದ್ಘಾಟನೆ

0

ಮೌಲ್ಯಾಧಾರಿತ, ಅರ್ಥಪೂರ್ಣ ಶಿಕ್ಷಣ ಸಿಗುವುದೇ ಸರಕಾರಿ ಶಾಲೆಯಲ್ಲಿ-ನವೀನ್ ಭಂಡಾರಿ

ಚಿತ್ರ: ಸಂತೋಷ್ ಮೊಟ್ಟೆತ್ತಡ್ಕ

ಪುತ್ತೂರು: ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮುಂದಿನ ಉಜ್ವಲ ಭವಿಷ್ಯದ ಪ್ರಾಪಂಚಿಕ ವಾಸ್ತವ ಬದುಕನ್ನು ಕಲಿಸಿಕೊಡುವುದಿಲ್ಲ. ಆದರೆ ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕೆ ಪ್ರಾಪಂಚಿಕ ಬದುಕಿನ ವಾಸ್ತವದ ಅರಿವಿನ ಜೊತೆಗೆ ಮೌಲ್ಯಾಧಾರಿತ ಹಾಗೂ ಅರ್ಥಪೂರ್ಣ ಶಿಕ್ಷಣವು ಸರಕಾರಿ ಶಾಲೆಗಳಲ್ಲಿ ಸಿಗಲು ಸಾಧ್ಯವಿದೆ ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಹೇಳಿದರು.

ಕುಡಿಪಾಡಿ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ‘ಬೆಳಕು..ನನಸಾದ ಜ್ಞಾನದೀಪ..ಜಾಗತಿಕ ಯೋಗಕ್ಷೇಮಕ್ಕಾಗಿ ಜಾಗತಿಕ ವಿಜ್ಞಾನ..’ ಎಂಬ ಧ್ಯೇಯವಾಕ್ಯದಡಿಯಲ್ಲಿ ಆರಂಭಿಸಲಾದ ನೂತನ ವಿಜ್ಞಾನ ಪ್ರಯೋಗಾಲಯದ ಉದ್ಘಾಟನೆ ಹಾಗೂ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಅವರು ದೀಪ ಬೆಳಗಿಸುವ ಮೂಲಕ ನೆರವೇರಿಸಿ ಉದ್ಘಾಟಿಸಿ ಮಾತನಾಡಿದರು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸರಕಾರಿ ಶಾಲೆ ಹಾಗೂ ಖಾಸಗಿ ಶಾಲೆಗೆ ಪೈಪೋಟಿ ಇದೆ ನಿಜ. ಸರಕಾರಿ ಶಾಲೆಗಳಲ್ಲೂ ಗುಣಮಟ್ಟದ ಶಿಕ್ಷಣವಿದೆ ಎನ್ನುವುದಕ್ಕೆ ಇಲ್ಲಿನ ಕುಡಿಪಾಡಿ ಸರಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳ ಜ್ಞಾನ ಬೆಳವಣಿಗೆಗೆ ಹಮ್ಮಿಕೊಳ್ಳುವ ವಿವಿಧ ಸ್ಪರ್ಧೆಗಳು, ಕಾರ್ಯಕ್ರಮಗಳೇ ಸಾಕ್ಷಿಯಾಗಿದೆ. ಸರಕಾರಿ ಶಾಲೆಯ ಅಭಿವೃದ್ಧಿಗೆ ಎಲ್ಲವನ್ನೂ ಸರಕಾರ ಕೊಡಲು ಸಾಧ್ಯವಾಗದು. ಸಹೃದಯಿ ದಾನಿಗಳ ನೆರವಿನಿಂದ ಸರಕಾರಿ ಶಾಲೆಗಳ ಅಭಿವೃದ್ಧಿಗೊಳಿಸಲು ಸಾಧ್ಯವಿದೆ ಎಂದರು.

ಮುಖ್ಯ ಅತಿಥಿ, ಮಂಗಳೂರಿನಲ್ಲಿ ಚಾರ್ಟರ್ಡ್ ಎಕೌಂಟೆಂಟ್ ಆಗಿರುವ ಸಿಎ ಆಲ್ವಿನ್ ರೊಡ್ರಿಗಸ್‌ರವರು ಮಾತನಾಡಿ, ವಿದ್ಯಾರ್ಥಿಗಳಿಗೆ ತಾನು ಯಾವ ಶಾಲೆಯಲ್ಲಿ ಕಲಿಯುತ್ತಿದ್ದೇನೆ ಎಂಬುದು ಮುಖ್ಯವಲ್ಲ, ಬದಲಾಗಿ ತನ್ನ ಮುಂದಿರುವ ಭವಿಷ್ಯದ ಗುರಿ ಎಂಬುದು ಬಹಳ ಮುಖ್ಯವಾಗುತ್ತದೆ. ಪುಸ್ತಕದ ಬದನೆಕಾಯಿ ಮೂಲಕ ರ‍್ಯಾಂಕ್ ತೆಗೆದುಕೊಂಡರೆ ಏನೂ ಪ್ರಯೋಜನವಿಲ್ಲ. ತಾನು ಕಲಿಯುತ್ತೇನೆ ಎಂಬ ಅಚಲ ಗುರಿ ಹಾಗೂ ನಮ್ಮ ಸುತ್ತಮುತ್ತಲಿನ ವಾಸ್ತವ ಬದುಕು ಇದರ ಬಗ್ಗೆ ತಿಳಿದುಕೊಂಡರೆ ಜೀವನದಲ್ಲಿ ಮುಂದೆ ಬರಲು ಸಾಧ್ಯವಾಗುತ್ತದೆ. ಪೋಷಕರು ತಮ್ಮ ಮಕ್ಕಳನ್ನು ಎಂದಿಗೂ ಮತ್ತೊಬ್ಬರೊಂದಿಗೆ ಹೋಲಿಕೆ ಮಾಡಬೇಡಿ. ಎಲ್ಲ ಮಕ್ಕಳೂ ಶ್ರೇಷ್ಟರೇ ಎಂದರು.

ಶಾಲಾ ಎಸ್‌ಡಿಎಂಸಿ ಗೌರವಾಧ್ಯಕ್ಷ ರಾಮ ಜೋಯಿಸ ಮಾತನಾಡಿ, ಜ್ಞಾನದ ವಿಸ್ತಾರವೇ ವಿಜ್ಞಾನ. ಜ್ಞಾನವನ್ನು ವಿದ್ಯಾಭ್ಯಾಸದ ಮೂಲಕ ಹೆಚ್ಚಿಸಿಕೊಳ್ಳಬೇಕು. ಮಕ್ಕಳು ಕೇವಲ ಅಂಕಗಳ ಹಿಂದೆ ಜೋತು ಬೀಳದೆ ಜ್ಞಾನವನ್ನು ಹೆಚ್ಚಿಸಿಕೊಳ್ಳುವಲ್ಲಿ ಪ್ರಬುದ್ಧರಾಗಬೇಕು. ಯಾವ ಕ್ಷೇತ್ರದಲ್ಲಿ ಸಂಪೂರ್ಣ ತಿಳುವಳಿಕೆಯಿದೆಯೋ ಅವರು ವಿಜ್ಞಾನಿ ಅಂದುಕೊಳ್ಳುತ್ತಾರೆ. ಕುಡಿಪಾಡಿ ಶಾಲೆಯಲ್ಲಿ ವಿದ್ಯಾರ್ಥಿಗಳು ವಿಜ್ಞಾನಿಗಳಾಗಿ ಉತ್ಪತ್ತಿ ಹೊಂದಲಿ ಎಂದರು.

ಹಾರಾಡಿ ಕ್ಲಸ್ಟರ್ ಸಿಆರ್‌ಪಿ ಕೆ.ವಿ.ಎಲ್.ಎನ್ ಪ್ರಸಾದ್ ಮಾತನಾಡಿ, ಕುಡಿಪಾಡಿ ಶಾಲೆಯು ಪಾಠ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ನಿರಂತರ ಸಾಧನೆಯನ್ನು ಮಾಡುತ್ತಾ ಬಂದಿದೆ. ಇಲ್ಲಿ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಏನೂ ಕಡಿಮೆಯಾಗದೆ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಜೋಡಿಸುತ್ತಾ ಬಂದಿರುತ್ತದೆ. ವಿದ್ಯಾರ್ಥಿಗಳು ಉತ್ತಮವಾಗಿ ಆಭ್ಯಾಸ ಮಾಡಿ ದೇಶದ ಆಸ್ತಿಯಾಗಿ ಹೊರ ಹೊಮ್ಮುವಂತಾಗಲಿ ಎಂದರು.

ಸ್ಮರಣಿಕೆ ನೀಡಿ ಗೌರವ:

ಉಪಯೋಗಕ್ಕಿಲ್ಲದ 15 ಚೆಯರ್‌ಗಳನ್ನು ಕುಡಿಪಾಡಿ ಶಾಲೆಯ ಪ್ರಯೋಗಾಲಯಕ್ಕೆ ನೀಡಲು ಸಹಕರಿಸಿರುವುದು ಹಾಗೆಯೇ ದಾನಿಗಳನ್ನು ಸಂಪರ್ಕಿಸಿ ಸುಮಾರು ರೂ.40 ರಿಂದ 50 ಸಾವಿರದಷ್ಟು ಪ್ರಯೋಗಾಲಯಕ್ಕೆ ಬೇಕಾದ ವಸ್ತುಗಳನ್ನು ನೀಡಲು ಸಹಕರಿಸಿ, ಮಾರ್ಗದರ್ಶನ ನೀಡಿದ ಕ್ರಿಶ್ಚಿಯನ್ ಲೈಫ್ ಕಮ್ಯೂನಿಟಿ ಅಧ್ಯಕ್ಷರೂ ಹಾಗೂ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ರಸಾಯನಶಾಸ್ತ್ರ ವಿಭಾಗದಲ್ಲಿ ಸಹಾಯಕರಾಗಿರುವ ಮಾರ್ಟಿನ್ ಡಿ’ಸೋಜವರಿಗೆ ಈ ಸಂದರ್ಭದಲ್ಲಿ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.

ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಗಿರೀಶ್ ಗೌಡ ಗೋಮುಖ ಮಾತನಾಡಿದರು. ಸಿಎ ಆಲ್ವಿನ್ ರೊಡ್ರಿಗಸ್‌ರವರ ಪುತ್ರ ಎಲ್ರೋನ್ ರೊಡ್ರಿಗಸ್, ಕುಡಿಪಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಸ್ಮಿತಾ, ಗಿರೀಶ್ ನಂದನ್, ಶಾಲಾ ಎಸ್‌ಡಿಎಂಸಿ ಸದಸ್ಯರು, ತಾಲೂಕು ಸರಕಾರಿ ವಾಹನ ಚಾಲಕರ ಸಂಘದ ಅಧ್ಯಕ್ಷ ಗಿರಿಧರ್ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಾಲಾ ಮುಖ್ಯ ಶಿಕ್ಷಕಿ ಚಂದ್ರಪ್ರಭಾ ಎಸ್. ಸ್ವಾಗತಿಸಿ, ಅತಿಥಿ ಶಿಕ್ಷಕಿ ಮಂಜುಳಾ ವಂದಿಸಿದರು. ಟಿಜಿಟಿ ಶಿಕ್ಷಕಿ ಆರತಿ ರಾವ್, ಸಹಶಿಕ್ಷಕ ಗಣೇಶ್‌ರವರು ಸನ್ಮಾನಿತರನ್ನು ಪರಿಚಯಿಸಿದರು. ಶಾಲಾ ದೈಹಿಕ ಶಿಕ್ಷಣ ನಿರ್ದೇಶಕ ಸ್ಟ್ಯಾನಿ ಪ್ರವೀಣ್ ಮಸ್ಕರೇನ್ಹಸ್ ಕಾರ್ಯಕ್ರಮ ನಿರೂಪಿಸಿದರು.

45ಕ್ಕೂ ಮಿಕ್ಕಿ ವಿಜ್ಞಾನ ಮಾದರಿ ಪ್ರದರ್ಶನ..
ಹಗಲು ಮತ್ತು ರಾತ್ರಿ, ಕಾಗದದ ಬಟ್ಟಲಲ್ಲಿ ನೀರನ್ನು ಕಾಯಿಸುವುದು, ಜ್ವಾಲಾಮುಖಿ, ಅಪಾಯರಹಿತ ಬಾವಿ, ಗಾಳಿಯ ಹಿಮ್ಮುಖ ಚಲನೆ, ನೀರಿನ ಹೀರುವಿಕೆ, ರೋಬೋಟ್, ಉರಿಯದ ಬಲೂನ್, ಬಣ್ಣ ಬದಲಾವಣೆ, ನೀರಿನ ಉಳಿಸುವಿಕೆ, ಬಬಲ್ಸ್, ಉಗುರು ಬಣ್ಣದಲ್ಲಿ ಬೆಂಕಿ, ಎಟಿಎಂ, ಶಾಸಕೋಶದ ಉಸಿರಾಟದ ವ್ಯವಸ್ಥೆ, ಕಾಡು ಬೆಳೆಸಿ-ಜೀವ ಉಳಿಸಿ, ಹೊಗೆ ಬಾಟಲ್, ಬೆಳಕಿನ ವಕ್ರೀಭವನ, ಹಣ ಬರುವ/ಮಾಡುವ ಮೆಷಿನ್, ಬಣ್ಣ ಉಜ್ಜುವಿಕೆ ಮತ್ತು ಗಾಳಿಯ ಒತ್ತಡ, ಬೆಂಕಿ ಉರಿಯುವುದು, ಸ್ಮೋಕ್ ರಿಂಗ್ಸ್, ಬಾವಿಯ ಮಾದರಿ, ಸೋಲಾರ್ ಪವರ್ ಸಿಸ್ಟಂ, ನೀರಿನ ಸಾಂದ್ರತೆ, ಗಾಳಿ ಪಂಪ್ ಯಂತ್ರ, ಸೌರವ್ಯೂಹ, ನರ್ತಿಸುವ ಮೇಣದ ಬತ್ತಿ, ಬೆಂಕಿ ಕಡ್ಡಿಯ ಗುಣ, ಹವಾನಿಯಂತ್ರಿತ ಘಟಕ, ಹನಿ ನೀರಾವರಿ ಪ್ರಯೋಗ, ವಿದ್ಯುತ್ ವಾಹಕತೆ, ಮಾನವನ ಶ್ವಾಸಕೋಶ, ವಿದ್ಯುತ್ ಹೀಟರ್, ವಾಹನಗಳಲ್ಲಿ ಬೆಂಕಿ ಪತ್ತೆ ಹಚ್ಚುವಿಕೆ, ಕಾಲ ಬದಲಾವಣೆ, ಹ್ಯಾಂಡ್ ಫ್ಯಾನ್, ನೀರಿನ ಶುದ್ಧೀಕರಣ, ಕಾಣದ ಬೆಂಕಿ ಮತ್ತು ಗಾಳಿಯ ಒತ್ತಡ, ಬೆಳಕು ಚಲನೆ, ನೀರಿನಲ್ಲಿ ಉರಿಯುತ್ತಿರುವ ಮೇಣದ ಬತ್ತಿ, ನೀರಿನ ಟ್ಯಾಂಕ್, ಸೂರ್ಯನ ಬೆಳಕು ಹೀಗೆ 45ಕ್ಕೂ ಮಿಕ್ಕಿ ವಿಜ್ಞಾನ ಮಾದರಿಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು.

ಸನ್ಮಾನ..
ಶಾಲೆಯಲ್ಲಿ ಸ್ಥಾಪನೆಗೊಂಡ ನೂತನ ವಿಜ್ಞಾನ ಪ್ರಯೋಗಾಲಯಕ್ಕೆ ರೂ.3 ಲಕ್ಷ ವೆಚ್ಚದಲ್ಲಿ ಪೀಠೋಪಕರಣಗಳು, ಸಲಕರಣೆಗಳನ್ನು ಒದಗಿಸಿದ ಸಿಎ ಆಲ್ವಿನ್ ರೊಡ್ರಿಗಸ್ ಹಾಗೂ ತಾಲೂಕು ಪಂಚಾಯತ್ ಅನುದಾನದಿಂದ ರೂ.2 ಲಕ್ಷ ಒದಗಿಸಲು ಸಹಕರಿಸಿದ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿರವರನ್ನು ಈ ಸಂದರ್ಭದಲ್ಲಿ ಶಾಲು ಹೊದಿಸಿ ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here