ಶ್ರೀ ಕ್ಷೇತ್ರ ಪಡುಮಲೆ ಬ್ರಹ್ಮಕಲಶೋತ್ಸವ -ಧಾರ್ಮಿಕ ಸಭೆ

0

ಧರ್ಮ ಕಾರ್ಯದಲ್ಲಿ ಜನರಿಗೆ ಶಕ್ತಿ ಬಂದಿದೆ -ಡಾ| ಡಿ. ವೀರೇಂದ್ರ ಹೆಗ್ಗಡೆ
ಮನುಷ್ಯ ಅಧ್ಮಾತ್ಮ ಮತ್ತು ಸಾಮಾಜಿಕ ಎತ್ತರ ಏರಬೇಕು -ಸುಬ್ರಹ್ಮಣ್ಯ ಶ್ರೀ

ಪುತ್ತೂರು: ಧರ್ಮ ಕಾರ್ಯಗಳನ್ನು ನಡೆಸಲು ಜನರಲ್ಲಿ ಶಕ್ತಿ ಬಂದಿದೆ. ಧಾರ್ಮಿಕ ಕೇಂದ್ರಗಳಿದ್ದಲ್ಲಿ ನಮ್ಮ ಜೀವನವೂ ಸುಸೂತ್ರವಾಗಿ ಸಾಗುತ್ತದೆ ಎಂಬ ಸತ್ಯವನ್ನು ಜನರು ತಿಳಿದುಕೊಂಡಿದ್ದಾರೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಂದ ಬಳಿಕ ಹಳ್ಳಿಗಳಲ್ಲಿ ಸಾಕಷ್ಟು ಬದಲಾವಣೆಗಳು ಮೂಡಿವೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ನುಡಿದರು.


ಶ್ರೀ ಕ್ಷೇತ್ರ ಪಡುಮಲೆ ಶ್ರೀ ಕೂವೆಶಾಸ್ತಾರ ವಿಷ್ಣುಮೂರ್ತಿ ದೇವರ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಕ್ಷೇತ್ರದಲ್ಲಿ ನಿರ್ಮಿಸಲಾದ ಕೀರ್ತಿಶೇಷ ರಮಾ ಟಿ. ಭಂಡಾರಿ ಮತ್ತು ಕ್ಯಾ. ಕೆ.ಟಿ. ಭಂಡಾರಿ ಪೇರಾಲ್ ವೇದಿಕೆಯಲ್ಲಿ ನಡೆದ ಮೂರನೇ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.


ಕ್ಷೇತ್ರದ ಜೀರ್ಣೋದ್ಧಾರ ಅತ್ಯಲ್ಪ ಅವಧಿಯಲ್ಲಿ ಮೂಡಿಬಂದು ಶಿಲಾ ಕೆತ್ತನೆ ಕೆಲಸ, ದಾರು ಕೆಲಸ ಉತ್ತಮವಾಗಿ ಮೂಡಿ ಬಂದಿದೆ. ದೇವಸ್ಥಾನ ಮತ್ತು ಇಲ್ಲಿನ ವ್ಯವಸ್ಥೆ ನೋಡಿ ಅತ್ಯಂತ ಸಂತುಷ್ಟನಾಗಿದ್ದೆನೆ ಎಂದ ಡಾ| ಹೆಗ್ಗಡೆಯವರು ‘ದೇವಸ್ಥಾನ ನಿರ್ಮಿಸಿದ ಪುಣ್ಯ ನಿಮ್ಮ್ಮೆಲ್ಲರ ಪಾಲಿಗೆ ಬರಲಿ. ಆರೋಗ್ಯ, ನೆಮ್ಮದಿ, ಸಂತೋಷಕ್ಕಾಗಿ ಮನುಷ್ಯ ಶಕ್ತಿಗೆ ಮೀರಿದ ದೈವೀಶಕ್ತಿಯನ್ನು ನಾವು ನಂಬುತ್ತೇವೆ. ಸಂಪತ್ತಿನ ಒಂದಂಶ ಸಮಾಜಕ್ಕೆ ನೀಡಿ ಸಮಾಜದ ಋಣ ತೀರಿಸುವ ಕಾರ್ಯ ದೇವಸ್ಥಾನದ ಅಭಿವೃದ್ಧಿ ಮೂಲಕವೂ ನೆರವೇರುತ್ತದೆ’ ಎಂದರು.


ಆಧ್ಮಾತ್ಮಿಕ ಮತ್ತು ಸಾಮಾಜಿಕ ಎತ್ತರಕ್ಕೆ ಏರಬೇಕು – ಸುಬ್ರಹ್ಮಣ್ಯ ಶ್ರೀ:

ಆಶೀರ್ವಚನ ನೀಡಿದ ಸುಬ್ರಹ್ಮಣ್ಯ ಶ್ರೀ ಸಂಪುಟ ನರಸಿಂಹ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ‘ಅಧ್ಮಾತ್ಮಿಕ ಎತ್ತರ ಏರಬೇಕಾದರೆ ಎತ್ತರದಲ್ಲಿರುವ ಭಗವಂತನನ್ನು ಒಲಿಸಿಕೊಳ್ಳುವ ಕಾರ್ಯ ಮಾಡಬೇಕು. ಇತರ ಪ್ರಾಣಿಗಳಿಗಿಂತ ವಿಶೇಷ ಶಕ್ತಿಯನ್ನು ಹೊಂದಿರುವ ಮನುಷ್ಯ ತನ್ನ ಜೀವಿತಾವಧಿಯಲ್ಲಿ ಅಧ್ಯಾತ್ಮ ಎತ್ತರ ಮತ್ತು ತನಗೆ ಸಿಕ್ಕಿರುವ ಜ್ಞಾನ, ಸಂಪತ್ತನ್ನು ಸಮಾಜಕ್ಕೂ ವಿಸ್ತರಿಸಬೇಕೆಂಬ ಸಾಮಾಜಿಕ ವಿಸ್ತಾರದ ಜವಾಬ್ಧಾರಿಯನ್ನು ನಿರ್ವಹಿಸಬೇಕು. ಇದರಿಂದ ಮನುಷ್ಯರ ಬದುಕು ಸಾರ್ಥಕವಾಗುತ್ತದೆ. ಇದಕ್ಕೆ ಉತ್ತಮ ಉದಾಹರಣೆ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರು ಎಂದರು. ಪ್ರಾಚೀನ ಕ್ಷೇತ್ರದ ಜೀರ್ಣೋದ್ದಾರದಿಂದ ಸಾನ್ನಿಧ್ಯ ವೃದ್ದಿಯಾಗಿದೆ. ನೂರು ಹೊಸ ದೇವಸ್ಥಾನ ಕಟ್ಟುವುದಕ್ಕಿಂತ ಒಂದು ಹಳೆಯ ದೇವಸ್ಥಾನ ಜೀರ್ಣೋದ್ದಾರ ಮಾಡುವುದು ಉತ್ತಮ ಎಂದು ಶ್ರೀಗಳು ಹೇಳಿದರು.


ಕಶ್ಮಲ, ವಾಸ್ತು ದೋಷ ಪರಿಹರಿಸಿ :

ರಾತ್ರಿ ಹಗಲು ಶ್ರಮಿಸಿ ದೇವಾಲಯದ ಜೀರ್ಣೋದ್ದಾರ ಮಾಡಿ ಸಾನ್ನಿಧ್ಯ ವೃದ್ದಿ ಮಾಡಿ ಜೀವನದ ಸಾರ್ಥಕತೆ ಮಾಡಿಕೊಂಡಿದ್ದೀರಿ. ದೇವರು ಕೊಟ್ಟ ಅವಕಾಶವನ್ನು ಉತ್ತಮ ರೀತಿಯಲ್ಲಿ ಬಳಸಿಕೊಂಡು ಉತ್ತಮ ಕಾರ್ಯ ಮಾಡಿದ್ದೀರಿ’ ಎಂದು ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ನುಡಿದರು.


500 ವರ್ಷಗಳ ಮುಂದಿನ ಪೀಳಿಗೆಗೆ ಈ ಕಾಲದ ಧರ್ಮದ ಪರಿಚಯವಾಗಲಿದೆ – ಮಠಂದೂರು:

ಸಭಾಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಸಂಜೀವ ಮಠಂದೂರುರವರು ‘ಕೃತಜ್ಞತಾ ಭಾವದಿಂದ ನಮ್ಮ ಜೀವಮಾನದಲ್ಲಿ ದೇವರ ಜೀರ್ಣೋದ್ದಾರ ಪುಣ್ಯದ ಕಾರ್ಯದಲ್ಲಿ ನಾವೆಲ್ಲಾ ತೊಡಗಿಸಿಕೊಂಡಿದ್ದೆವೆ. ಭಜನೆಯಿಂದ ಭಕ್ತಿ, ದೈವದ ಭಕ್ತಿ, ಅಧ್ಯಾತ್ಮಿಕ ಶ್ರದ್ಧೆಯು ಭವ್ಯವಾದ ದೇಗುಲ ನಿರ್ಮಾಣಕ್ಕೆ ಕಾರಣವಾಗಿದೆ. ಹತ್ತಾರು ಕೈಗಳು, ಹೃದಯಗಳು ಒಂದಾಗಿವೆ. ತ್ಯಾಗದ ಸಂಕೇತವನ್ನು ಸಾರುವ ಕೆಲಸ ಕೇಸರಿ ಬಣ್ಣದ ಅಲಂಕಾರದಿಂದ ನಡೆದಿದೆ. ಭಕ್ತಾಭಿಮಾನಿಗಳ ಸಮರ್ಪಣಾ ಮನೋಭಾವ ಇಲ್ಲಿ ಸಾಕಾರಗೊಂಡಿದೆ. ಈ ಮಣ್ಣಿನ ಜನ ಧರ್ಮಿಷ್ಟರೆಂಬುದನ್ನು ತೋರಿಸುವ ಕೆಲಸ ನಡೆದಿದೆ. ದೇಗುಲ ನಿರ್ಮಾಣದ ಮೂಲಕ ಇತಿಹಾಸ ನಿರ್ಮಾಣವಾಗಿದೆ. ಮುಂದಿನ 500 ವರ್ಷಗಳ ನಂತರದ ಪೀಳಿಗೆಗೆ ಇವತ್ತಿನ ಸಮಾಜ, ಧರ್ಮ ಆಚಾರ ವಿಚಾರವನ್ನು ಪರಿಚಯಿಸುವ ಕಾರ್ಯ ನಡೆದಿದೆ. ಇಂತಹ ಕಾರ್ಯ ದೇಶದೆಲ್ಲೆಡೆ ನಡೆಯುತ್ತಿದೆ. ಹಾಗಾಗಿ ಜಗತ್ತು ಭಾರತದತ್ತ ನೋಡುತ್ತಿದೆ’ ಎಂದರು.


ನಮ್ಮ ಧರ್ಮದ ಬಗ್ಗೆ ನಮಗೆ ಹೆಮ್ಮೆ – ಆನೆಮಜಲು ವಿಷ್ಣು ಭಟ್:


ಶ್ರೀ ಕ್ಷೇತ್ರ ಮಲ್ಲದ ಅನುವಂಶಿಕ ಆಡಳಿತ ಮೊಕ್ತೇಸರ ಆನೆಮಜಲು ವಿಷ್ಣು ಭಟ್ ರವರು ಮಾತನಾಡಿ ‘ನಮ್ಮ ಧರ್ಮದ ಬಗ್ಗೆ ಹೆಮ್ಮೆಯುಂಟಾಗುವ ಕಾಲಘಟ್ಟದಲ್ಲಿದೆ. ಕೂವೆತೋಟ ಮನೆತನ ಮತ್ತು ಮಲ್ಲ ಕ್ಷೇತ್ರಕ್ಕೆ ಸಂಬಂಧವಿದೆ. ಹಾಗಾಗಿ ಈ ಕ್ಷೇತ್ರಕ್ಕೆ ಬರುವಂತಾಯಿತು’ ಎಂದರು.


ಕ್ಷೇತ್ರದ ಪವಿತ್ರ ಪಾಣಿ ಕೇಶವ ಭಟ್ ಕೂವೆತೋಟ ರವರು ಮಾತನಾಡಿ, ಶ್ರೀನಿವಾಸ ಭಟ್‌ರವರ ಪ್ರಯತ್ನವನ್ನು ಶ್ಲಾಘಿಸಿದರು. ಯುಗ ಯುಗಳಲ್ಲಿಯೂ ಈ ಕ್ಷೇತ್ರ ಬೆಳಗುವಂತಾಗಲಿ. ಕ್ಷೇತ್ರಾಭಿವೃದ್ಧಿಯಲ್ಲಿ ಪಾಲ್ಗೊಂಡ ಸಮಸ್ತ ಭಕ್ತರಿಗೂ ದೇವರು ಅನುಗ್ರಹ ಮಾಡಲಿ’ ಎಂದು ಶುಭಾಶಿಸಿದರು.


ಗೌರವಾರ್ಪಣೆ:

ಡಾ| ಡಿ. ವೀರೇಂದ್ರ ಹೆಗ್ಗಡೆಯವರನ್ನು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಪುತ್ತೂರು ತಾಲೂಕು, ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಪುತ್ತೂರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟ ಪುತ್ತೂರು ಮತ್ತು ಕಡಬ ತಾಲೂಕು, ಬಡಗನ್ನೂರು ಒಕ್ಕೂಟ ಎ ಮತ್ತು ಬಿ ವತಿಯಿಂದ ಗೌರವಾರ್ಪಣೆ ಮಾಡಲಾಯಿತು. ವೇಣುಗೋಪಾಲ್ ಭಟ್ ಪಟ್ಟೆ ದಂಪತಿ ಸುಬ್ರಹ್ಮಣ್ಯ ಶ್ರೀಗಳನ್ನು ಗೌರವಿಸಿದರು. ಶ್ರೀನಿವಾಸ ಭಟ್ ಚಂದುಕೂಡ್ಲು ದಂಪತಿ ಡಾ| ಹೆಗ್ಗಡೆಯವರನ್ನು ಫಲಪುಷ್ಪ ನೀಡಿ ಗೌರವಿಸಿದರು.


ಪ್ರಾಸ್ತಾವಿಕ ಮಾತುಗಳನ್ನಾಡಿದ ಜೀರ್ಣೊದ್ದಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಚಂದುಕೂಡ್ಲು ಶ್ರೀನಿವಾಸ ಭಟ್‌ರವರು ಕ್ಷೇತ್ರದ ಇತಿಹಾಸ, ಜೀರ್ಣೋದ್ದಾರ ಕಾರ್ಯಗಳು ನಡೆದು ಬಂದ ಸವಿಸ್ತಾರ ವರದಿಯನ್ನು ಸಭೆಯ ಮುಂದಿಟ್ಟರು. ಪಡುಮಲೆಯ ಈ ಪುಣ್ಯಭೂಮಿ ಸತ್ಯಯುಗದಲ್ಲಿ ವಿಷ್ಣುವಿನ ಕೂರ್ಮಾವತಾರವಾದ ಜಾಗವೆಂದು ಅಷ್ಟಮಂಗಲ ಪ್ರಶ್ನೆಯಲ್ಲಿ ತಿಳಿದು ಬಂದಿರುವುದಾಗಿ ಹೇಳಿದ ಶ್ರೀನಿವಾಸ್ ಭಟ್ ರವರು ಕೇವಲ ೨೮೬ ದಿನಗಳಲ್ಲಿ ದೇವಾಲಯ ಸಂಪೂರ್ಣ ಜೀರ್ಣೋದ್ದಾರಗೊಂಡು ಬ್ರಹ್ಮಕಲಶೋತ್ಸವ ನಡೆಯಲು ಕಾರಣೀಭೂತರಾದ ಸಮಸ್ತರನ್ನು ಸ್ಮರಿಸಿದರು.


ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮನೋಜ್ ರೈ ಪೇರಾಲು, ದೇವಳದ ರಾಜಗೋಪುರದ ಸಂಪೂರ್ಣ ವೆಚ್ಚ ಭರಿಸಿದ ಲಕ್ಷ್ಮೀನಾರಾಯಣ ರಾವ್ ಪಡುಮಲೆ, ಗರ್ಭಗುಡಿ ಮತ್ತು ಮಹಾಬಲಿ ಪೀಠಕ್ಕೆ ದೇಣಿಗೆ ನೀಡಿದ ಶ್ರೀಮತಿ ತಿಲೋತ್ತಮ ಎಸ್. ರೈ ಬೆಳ್ಳಿಪ್ಪಾಡಿ ಪಡುಮಲೆ, ವಿವಿಧ ರೀತಿಯಲ್ಲಿ ದಾನಿಗಳಾಗಿ ಸಹಕರಿಸಿದ ಅಚ್ಚುತ ಭಟ್ ಪೈರುಪುಣಿ, ಚಿತ್ರನಟ ಬಜ ಸುರೇಶ್ ರೈ, ಮನೋಹರ ಪ್ರಸಾದ್ ಮೇಗಿನಮನೆ, ಮರಮುಗ್ಗಟ್ಟು ಹಾಗೂ ಆರ್ಥಿಕ ಧನಸಹಾಯ ನೀಡಿದ ವಿಶಾಲಾಕ್ಷಿ ನೂಚಿಲೋಡ್, ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ಬಲರಾಜ್ ಶೆಟ್ಟಿ ನಿಟ್ಟೆಗುತ್ತು, ಪಟ್ಟೆ ವಿದ್ಯಾಸಂಸ್ಥೆಯ ನಾರಾಯಣ ಭಟ್, ಪೂರ್ವಗೋಪುರದ ಸಂಪೂರ್ಣ ಖರ್ಚು ಭರಿಸಿದ ನಾಗೇಶ್ ಭಟ್ ಪಾದೆಕರ್ಯ, ರಾಮಮೋಹನ್ ನೆಕ್ಕರೆ, ಡಾ. ಗುರುಸಂದೇಶ್ ಭಂಡಾರಿ ಪೇರಾಲು, ವಿಷ್ಣು ಭಟ್ ಕನ್ನಡ್ಕ, ಲಲಿತಾ ಭಟ್ ಚಂದುಕೂಡ್ಲು, ಸುಧಾಕರ ಶೆಟ್ಟಿ ಮಂಗಳಾದೇವಿ, ಉಲ್ಲಾಸ್ ಪಡ್ಪು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಋತ್ವಿಜರಾದ ಗಣಪತಿ ಭಟ್ ಮತ್ತು ಮಹೇಶ್ ಭಟ್ ವೇದ ಘೋಷದೊಂದಿಗೆ ಪ್ರಾರ್ಥಿಸಿದರು. ಶಿಕ್ಷಕ ರಾಮಣ್ಣ ಗೌಡ ವಂದಿಸಿದರು. ಶಿವಶಂಕರ ಭಟ್, ರವೀಶ್ ಪಡುಮಲೆ ಹಾಗೂ ರಾಜಗೋಪಾಲ್ ಭಟ್ ಕಾರ್ಯಕ್ರಮ ನಿರೂಪಿಸಿದರು.


ಹೆಗ್ಗಡೆಯವರ ಚಿತ್ರ ಅರ್ಪಣೆ:

ಇದೇ ವೇಳೆ ವಿದ್ಯಾರ್ಥಿನಿ ಯಶಸ್ವಿ ಯವರು ಪೆನ್ಸಿಲ್ ಶೇಡಿಂಗ್‌ನಲ್ಲಿ ರಚಿಸಿದ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಭಾವಚಿತ್ರವನ್ನು ಹೆಗ್ಗಡೆಯವರಿಗೆ ಅರ್ಪಿಸಿದರು. ಸ್ವೀಕರಿಸಿದ ಧರ್ಮಾಧಿಕಾರಿಗಳು ಹಸ್ತಾಕ್ಷರ ಮೂಡಿಸಿ ವಿದ್ಯಾರ್ಥಿನಿಗೆ ನೀಡಿ ಅಭಿನಂದಿಸಿದರು.


ಸದಾಶಿವ ಭಟ್ ಪೈರುಪುಣಿ, ರಾಮಕೃಷ್ಣ ಭಟ್, ಉತ್ತಮ್ ಪಡ್ಪು, ಹರಿಪ್ರಸಾದ್ ರೈ, ಬಾಲಕೃಷ್ಣ ಏರಾಜೆ, ಸುಬ್ರಹ್ಮಣ್ಯ ಶರಾವು, ಯಮುನಾ ಪಟ್ಟೆ, ಸತೀಶ್ ರೈ ಕಟ್ಟಾವು, ಸುಖೇಶ್, ರಮಾದೇವಿ ಪಡುಮಲೆ, ಪ್ರಸನ್ನ ರೈ, ನಾಗರಾಜ್ ಪಟ್ಟೆ, ಸರಳಾ, ಸುಬ್ಬಪ್ಪ ಪಾಟಾಳಿ ಪಟ್ಟೆ, ಆನಂದ ಪಾಟಾಳಿ, ನಾರಾಯಣ ಪಾಟಾಳಿ ಮೈಂದನಡ್ಕ, ಶರ್ಮಿಳಾ ಬೀರ್ನೋಡಿ, ಸುರೇಶ್ ರೈ ಪಳ್ಳತ್ತಾರುರವರು ಅತಿಥಿಗಳನ್ನು ಹೂ ನೀಡಿ ಗೌರವಿಸಿದರು.

ತೆರೆದ ಜೀಪಿನಲ್ಲಿ ಮೆರವಣಿಗೆ

ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ ಮತ್ತು ಸುಬ್ರಹ್ಮಣ್ಯ ಶ್ರೀಗಳನ್ನು ಕೀರ್ತಿಶೇಷ ಎ. ರಾಧಾಕೃಷ್ಣ ರೈ ಪೇರಾಲು ದ್ವಾರದ ಬಳಿಯಿಂದ ತೆರೆದ ಜೀಪಿನಲ್ಲಿ ಮೆರವಣಿಗೆ ಮೂಲಕ ಕರೆದೊಯ್ಯಲಾಯಿತು. ಈ ವೇಳೆ ಗ್ರಾಮಾಭಿವೃದ್ದಿ ಯೋಜನೆಯ ಸದಸ್ಯರು ಮೆರವಣಿಗೆಗೆ ಶೋಭೆ ನೀಡಿದರು. ಪೂರ್ಣಕುಂಭದೊಂದಿಗೆ ಈರ್ವರನ್ನೂ ದೇವಳಕ್ಕೆ ಬರಮಾಡಿಕೊಳ್ಳಲಾಯಿತು.


ವೈದಿಕ ಮತ್ತು ತಾಂತ್ರಿಕ ಕಾರ್ಯಕ್ರಮ:

ದೇವಳದಲ್ಲಿ ಬೆಳಿಗ್ಗೆ ಗಣಪತಿ ಹೋಮ, ತತ್ವಕಲಶ, ತತ್ವ ಹೋಮ, ಅನುಜ್ಞಾ ಕಲಶಾಭಿಷೇಕ, ಅಂಕುರಪೂಜೆ, ತ್ರಿಕಾಲ ಪೂಜೆ, ಮಹಾಪೂಜೆಯಾಗಿ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ವಿಶೇಷವಾಗಿ ಕುಳಿತು ಬಾಳೆಲೆ ಊಟದ ವ್ಯವಸ್ಥೆ ಮಾಡಲಾಗಿತ್ತು.
ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಅಪರಾಹ್ನ ಜಿಲ್ಲೆಯ ಪ್ರಸಿದ್ದ ಕಲಾವಿದರ ಕೂಡುವಿಕೆಯಲ್ಲಿ ‘ಯಕ್ಷಗಾನ ನಾಟ್ಯ ಹಾಸ್ಯ ವೈಭವ’ ನಡೆಯಿತು.

ರಾಜಕೀಯ ಚಟುವಟಿಕೆ ಇಲ್ಲಿಂದಲೇ ಆರಂಭ
ಇಲ್ಲಿನ ದೇವರ ಅನುಗ್ರಹ, ಪ್ರಾರ್ಥನೆಯೊಂದಿಗೆ ರಾಜಕೀಯ ಚಟುವಟಿಕೆ ಆರಂಭಿಸುತ್ತೇವೆ. ರಾಜಮುದ್ರೆ ಇದ್ದಾಗ ಕಾರ್ಯ ಶೀಘ್ರ ಎಂಬ ಮಾತಿಗೆ ಪೂರಕವಾಗಿ ನಮ್ಮನ್ನು ಗೌರವಾಧ್ಯಕ್ಷನನ್ನಾಗಿ ಮಾಡಿದ್ದಾರೆ ಎಂದು ಶಾಸಕರು ಹೇಳಿದರು.

ಸರಕಾರದ ಕಡೆಯಿಂದ ಒಟ್ಟು 80 ಲಕ್ಷ ರೂ. ಅನುದಾನ
ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಸರಕಾರದ ಕಡೆಯಿಂದ ಈಗಾಗಲೇ ೧೫ ಲಕ್ಷ ರೂ. ನೀಡಲಾಗಿದೆ. ಸಮಿತಿಯವರ ಬೇಡಿಕೆ ಇರುವುದರಿಂದ ಇದೇ ಅವಧಿಯಲ್ಲಿ ಮತ್ತೆ 15 ಲಕ್ಷ ರೂ. ನೀಡಲಿದ್ದೆವೆ. ಅದರ ಜೊತೆಗೆ ಸಭಾಭವನ ನಿರ್ಮಾಣಕ್ಕೆ ಕನ್ನಡ ಸಂಸ್ಕೃತಿ ಇಲಾಖೆಯಿಂದ 50 ಲಕ್ಷ ರೂ. ಅನುದಾನ ಸೇರಿದಂತೆ ಒಟ್ಟು 80 ಲಕ್ಷ ರೂ. ನೀಡಲಾಗುತ್ತದೆ. ಜಿಲ್ಲಾ ಪಂಚಾಯತ್ ವಿಶೇಷ ಅನುದಾನದಲ್ಲಿ ರೂ. 10 ಲಕ್ಷ ಮೊತ್ತದಲ್ಲಿ ಶೌಚಾಲಯ ನಿರ್ಮಾಣಗೊಳ್ಳಲಿದೆ’ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ಜಾನಪದ, ಪರಂಪರಾಗತ ಪದ್ದತಿ ಸುಳ್ಳಲ್ಲ:
ನಮ್ಮ ಜಾನಪದ, ಪಾರಂಪರಿಕ ಪದ್ದತಿಗಳು ಎಂದಿಗೂ ಸುಳ್ಳಾಗಲು ಸಾಧ್ಯವಿಲ್ಲ. ಹಿಂದಿನ ನಾಟಿ ವೈದ್ಯ ಪದ್ದತಿಯನ್ನು ಸಂಶೋಧಿಸುವ ಕಾರ್ಯ ನಡೆಯುತ್ತಿದೆ. ಅದರಿಂದ ಜನರಿಗೆ ಲಾಭ ಆಗುವ ಹಾಗೇ ಮಾಡಬೇಕು. ಸಂಶೋಧನೆ ಇಲ್ಲದೇ ಅನೇಕ ಔಷಧಿಗಳು ಮರೆಯಾಗಿವೆ. ನಮ್ಮ ಆಯುರ್ವೇದ, ನಾಟಿ ಮದ್ದು ವಿದೇಶಕ್ಕೆ ಹೋಗಿ ಇಂಗ್ಲೀಷ್ ಮದ್ದಾಗಿ ಬರುತ್ತಿವೆ. ಅವೆಲ್ಲವನ್ನೂ ಮತ್ತೆ ಕಂಡುಹಿಡಿದು ನಮ್ಮ ಆರೋಗ್ಯವನ್ನು ನಾವೇ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಸಂಶೋಧನೆಗಳು ನಡೆಯುತ್ತಿವೆ ಎಂದು ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

ಧಾರ್ಮಿಕ ಸಭಾ ಕಾರ್ಯಕ್ರಮ ಮತ್ತು ಬಳಿಕ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ‘ಸುದ್ದಿ ಪುತ್ತೂರು ಲೈವ್’ ಚಾನೆಲ್‌ನಲ್ಲಿ ನೇರ ಪ್ರಸಾರಗೊಂಡಿತು.

LEAVE A REPLY

Please enter your comment!
Please enter your name here