ಸರಕಾರಿ ನೌಕರರಿಂದ ಅನಿರ್ದಿಷ್ಟಾವಧಿ ಮುಷ್ಕರ ಹಿನ್ನೆಲೆ
ಪುತ್ತೂರು ತಾಲೂಕು ಆಡಳಿತ ಸಹಿತ, ಸರಕಾರಿ ಕಚೇರಿ ಸೇವೆ ಸ್ಥಗಿತ

0

ಎಸ್‌ಎಸ್‌ಎಲ್‌ಸಿ ಪ್ರಿಪರೇಟರಿ ಪರೀಕ್ಷೆ ಮುಂದೂಡಿಕೆ – ಶಾಲೆಗೆ ರಜೆ !

ಪುತ್ತೂರು: ರಾಜ್ಯ ಸರಕಾರಿ ನೌಕರರ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ 7ನೇ ವೇತನ ಆಯೋಗದಿಂದ ಮಧ್ಯಂತರ ವರದಿ ಪಡೆದು, 2022ರ ಜು.1 ರಿಂದ ಜಾರಿಗೆ ಬರುವಂತೆ ಶೇ.40ರಷ್ಟು ವೇತನ ಹೆಚ್ಚಳ ಹಾಗು ಹಳೆ ಪಿಂಚಣಿ ಯೋಜನೆ (ಒಪಿಎಸ್) ಜಾರಿಗೊಳಿಸುವಂತೆ ಆಗ್ರಹಿಸಿ ರಾಜ್ಯ ಸರಕಾರಿ ನೌಕರರು ಮಾ.1 ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದಂತೆ ಪುತ್ತೂರಿನಲ್ಲಿ ತಾಲೂಕು ಆಡಳಿತ ಸಹಿತ, ತಾಲೂಕು ಪಂಚಾಯತ್, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸೇವೆಗೆ ತೆರೆದು ಕೊಂಡಿಲ್ಲ. ಸರಕಾರಿ ಶಾಲೆಯ ವಿದ್ಯಾರ್ಥಿಗಳು ಶಾಲೆಗೆ ಬಂದು ಶಾಲೆ ತೆರೆಯಲಿಲ್ಲ ಎಂದು ಮನೆಗೆ ವಾಪಾಸಾಗಿದ್ದಾರೆ.

ಸರಕಾರಿ ಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪ್ರಿಪರೇಟರಿ ಪರೀಕ್ಷೆ ಆರಂಭಗೊಂಡಿದ್ದು, ಮಾ.1ರಂದು ಹಿಂದಿ ಪರೀಕ್ಷೆ ಇತ್ತು. ಆದರೆ ಶಿಕ್ಷಣ ಉಪನಿರ್ದೇಶಕರು ಪರೀಕ್ಷೆಯನ್ನು ಮುಂದೂಡಲಾಗಿದೆ ಎಂಬ ಆದೇಶವನ್ನು ನೀಡಿದ ಹಿನ್ನೆಲೆಯಲ್ಲಿ ಬೆಳಿಗ್ಗೆ ಶಾಲೆಗೆ ಬಂದಿದ್ದ ವಿದ್ಯಾರ್ಥಿಗಳನ್ನು ಶಿಕ್ಷಕರು ಮನೆಗೆ ಕಳುಹಿಸಿದ್ದಾರೆ. ಉಳಿದಂತೆ ಬಹುತೇಕ ಮಂದಿ ವಿದ್ಯಾರ್ಥಿಗಳು ಸರಕಾರಿ ನೌಕರರ ಪ್ರತಿಭಟನೆ ಅರಿತು ಶಾಲೆಗೆ ಬಂದಿರಲಿಲ್ಲ.

ಅದೆ ರೀತಿ ಬೆಳಿಗ್ಗೆ ಪುತ್ತೂರು ತಾಲೂಕು ಆಡಳಿತ ಸೌಧದಲ್ಲಿ ಎದುರಿನ ದ್ವಾರದಲ್ಲಿ ನೋಟೀಸ್ ಅಂಟಿಸಿ, ಬಾಗಿಲು ಮುಚ್ಚಲಾಗಿದೆ. ’ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಮತ್ತು ರಾಜ್ಯದ ಎಲ್ಲಾ ಇಲಾಖೆಗಳ ಸಂಘಗಳು ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಸರಕಾರಿ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುತ್ತಿದೆ. ಮಾ.1 ರಿಂದ ಆರಂಭಗೊಂಡಿದೆ. ಭವಿಷ್ಯದ ಬದುಕಿಗಾಗಿ ಕರ್ತವ್ಯಕ್ಕೆ ಗೈರು ಹಾಜರಾಗಿ ಎಂದು ನೋಟೀಸ್‌ನಲ್ಲಿ ಮಾಹಿತಿ ನೀಡಲಾಗಿದೆ. ತಾಲೂಕು ಪಂಚಾಯತ್, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸಹಿತ ವಿವಿಧ ಸರಕಾರಿ ಕಚೇರಿಗಳಲ್ಲಿ ಈ ರೀತಿಯ ನೊಟೀಸ್ ಅಂಟಿಸಲಾಗಿದೆ.

LEAVE A REPLY

Please enter your comment!
Please enter your name here