ಬೇಡಿಕೆ ಈಡೇರದಿದ್ದರೆ ರಸ್ತೆಗೆ ಇಳಿಯುವುದಿಲ್ಲ ಚುನಾವಣೆಯಲ್ಲಿ ಉತ್ತರ ನೀಡುತ್ತೇವೆ-ಐಕಳ ಹರೀಶ್ ಶೆಟ್ಟಿ

0

ಮಂಗಳೂರು: ಬಂಟ ಸಮಾಜಕ್ಕೂ ನಿಗಮ ಸ್ಥಾಪಿಸಬೇಕು, ಮೀಸಲಾತಿಯನ್ನು ‘3ಬಿ’ಯಿಂದ ‘2ಎ’ಗೆ ವರ್ಗಾಯಿಸಬೇಕು ಎನ್ನುವ 2 ಬೇಡಿಕೆಗಳ ಮನವಿಯನ್ನು ಬಿ.ಜೆ.ಪಿ. ರಾಜ್ಯಾಧ್ಯಕ್ಷರ ಮೂಲಕ ರಾಜ್ಯದ ಮುಖ್ಯಮಂತ್ರಿಯವರಿಗೆ ಸಲ್ಲಿಸಲಾಗಿದೆ. ನಮ್ಮ ಬೇಡಿಕೆ ಈಡೇರದಿದ್ದಲ್ಲಿ ರಸ್ತೆಗಿಳಿಯುವುದಿಲ್ಲ. ಚುನಾವಣೆಯಲ್ಲಿ ಉತ್ತರ ನೀಡುತ್ತೇವೆ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದ್ದಾರೆ.

ನಮ್ಮವರು ಏನು ಮಾಡಿದ್ದಾರೆ ಗೊತ್ತಾಗುತ್ತಿಲ್ಲ: ಬಂಟ ಸಮುದಾಯ ಮೇಲ್ನೋಟಕ್ಕೆ ಅತ್ಯಂತ ಶ್ರೀಮಂತ ಸಮುದಾಯವಾಗಿ ಕಂಡು ಬರುತ್ತಿದ್ದರೂ ಸಮುದಾಯದ ಶೇ.75ರಷ್ಟು ಮಂದಿ ಮಧ್ಯಮ ಮತ್ತು ಬಡತನ ರೇಖೆಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಇದುವರೆಗೆ ಬಂಟ ಸಮುದಾಯಕ್ಕೆ ಸಿಗಬೇಕಾದ ಮೀಸಲಾತಿಯನ್ನು ಯಾವುದೇ ಆಡಳಿತ ಪಕ್ಷಗಳು ಕೊಟ್ಟಿಲ್ಲ.ಕರಾವಳಿಯ ಉಭಯ ಜಿಲ್ಲೆಯಲ್ಲಿ 5 ಜನ ಶಾಸಕರು ಬಂಟರಾಗಿದ್ದರೂ ಸಮುದಾಯಕ್ಕೆ ಸಹಾಯ ಮಾಡಿದರೆ ಇತರ ಸಮುದಾಯದವರಿಗೆ ಕೋಪ ಬರಬಹುದು ಎನ್ನುವ ಅಳುಕು ಇರಬಹುದು. ನಮಗೆ ಯಾರ ಮೇಲೂ ವೈಯಕ್ತಿಕ ದ್ವೇಷವಿಲ್ಲ. ಸಮುದಾಯವನ್ನು ಬೆಂಬಲಿಸುವವರಿಗೆ ನಾವು ಬೆಂಬಲಿಸುತ್ತೇವೆ. ಬಿಲ್ಲವರಿಗೆ ನಿಗಮ ಆಗಿದ್ದು ನಮಗೆ ಸಂತೋಷ ತಂದಿದೆ. ಅವರು ಹೋರಾಟ ಮಾಡಿ ತೆಗೆದುಕೊಂಡಿದ್ದಾರೆ. ಅವರಿಗೆ ಶಾಸಕರು, ಸಚಿವರು ಬೆಂಬಲ ನೀಡಿದ್ದಾರೆ. ಆದರೆ ನಮ್ಮವರು ಏನು ಮಾಡಿದ್ದಾರೆಂದು ಗೊತ್ತಾಗುತ್ತಿಲ್ಲ ಎಂದು ಐಕಳ ಹೇಳಿದರು.

ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಕೋಶಾಧಿಕಾರಿ ಉಳ್ತೂರ್ ಮೋಹನ್‌ದಾಸ್ ಶೆಟ್ಟಿ, ಕಾರ್ಯದರ್ಶಿ ಇಂದ್ರಾಳಿ ಜಯಕರ ಶೆಟ್ಟಿ, ಜತೆ ಕಾರ್ಯದರ್ಶಿ ಪ್ರವೀಣ್ ಭೋಜ ಶೆಟ್ಟಿ, ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ಸುಳ್ಯ ತಾಲೂಕು ಸಂಘದ ಅಧ್ಯಕ್ಷ ಜಯಪ್ರಕಾಶ್ ರೈ ಸೇರಿದಂತೆ ಕರಾವಳಿ ಭಾಗದ ತಾಲೂಕು ಅಧ್ಯಕ್ಷರುಗಳು ಮತ್ತು ವಿವಿಧ ಕ್ಷೇತ್ರದ ಮುಖಂಡರುಗಳು ಉಪಸ್ಥಿತರಿದ್ದರು.

ಅಭ್ಯರ್ಥಿಯನ್ನು ಸೋಲಿಸುವ ಯಾ ಗೆಲ್ಲಿಸುವ ಸಾಮರ್ಥ್ಯ ನಮಗಿದೆ

ರಸ್ತೆ ವಿಚಾರದಲ್ಲಿ ಸುಂದರ್ ರಾಮ್ ಶೆಟ್ಟಿ ಹೆಸರು ಬಂದಾಗ ಬಂಟರು ಒಗ್ಗಟ್ಟಾಗಿದ್ದಾರೆ. ಬಂಟರಿಗೆ ಯಾವುದೇ ಪಕ್ಷದ ಅಭ್ಯರ್ಥಿಯನ್ನು ಸೋಲಿಸುವ ಅಥವಾ ಗೆಲ್ಲಿಸುವ ಸಾಮರ್ಥ್ಯ ಇದೆ. ಪ್ರತಿ ಕ್ಷೇತ್ರದಲ್ಲೂ ಬಂಟ ಅಭ್ಯರ್ಥಿಗಳನ್ನು ನಿಲ್ಲಿಸಿ ವಿಶ್ವದಾದ್ಯಂತ ಇರುವ ಬಂಟರನ್ನು ತರಿಸಿ ನಿರ್ಣಾಯಕ ಪಾತ್ರ ವಹಿಸುತ್ತೇವೆ. ಐದು ಸಾವಿರ ಮತ ಗಳಿಸಿದರೂ ಗೆಲ್ಲುವ ಅಭ್ಯರ್ಥಿಯನ್ನು ಸೋಲಿಸುವ ಸಾಮರ್ಥ್ಯ ನಮಗಿದೆ ಎಂದು ಎಚ್ಚರಿಸಿದರು.

LEAVE A REPLY

Please enter your comment!
Please enter your name here