ಯೋಜನೆ, ಯೋಚನೆ ಕಾರ್ಯಬದ್ಧತೆಯಲ್ಲಿ ರಾಜಿ ಮಾಡಿಕೊಳ್ಳದಿರುವುದರಿಂದ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಮುಂದಿನ ಚುನಾವಣೆಯಲ್ಲೂ ಗೆಲುವು – ಗೋಪಾಲಕೃಷ್ಣ ಹೇರಳೆ

0

ಮಾ.11ಕ್ಕೆ ಪುತ್ತೂರಿಗೆ ವಿಜಯ ಸಂಕಲ್ಪ ಯಾತ್ರೆ
ಮಾ.5ಕ್ಕೆ ಎಸ್ಟಿ ಮೋರ್ಚಾ ಸಮಾವೇಶ
ಯುವ ಮೋರ್ಚಾದಿಂದ ಪ್ರಗತಿ ರಥ ವಾಹನ
ಪ್ರಣಾಳಿಕೆ ಸಲಹಾ ಅಭಿಯಾನ

ಪುತ್ತೂರು: ಬಿಜೆಪಿ ಅತ್ಯಂತ ಬಲಿಷ್ಠವಾಗಿದೆ. ನಮ್ಮ ಯೋಜನೆ ಮತ್ತು ಯೋಚನೆಯಿಂದ ಹಾಗು ಕಾರ್ಯಬದ್ದತೆಯಲ್ಲಿ ನಿರಂತರವಾಗಿ ರಾಜಿ ಮಾಡಿಕೊಂಡಿಲ್ಲ. ಹಾಗಾಗಿ ನಮಗೆ ನಿಶ್ಚಯವಿದೆ. ಮುಂದಿನ ಚುನಾವಣೆಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಏನು ಲೀಡ್ ಬಂದಿತ್ತೋ ಅದಕ್ಕಿಂತಲೂ ಮಿಗಿಲಾದ ಮತಗಳಿಂದ ಈ ಕ್ಷೇತ್ರವನ್ನು ಗೆಲ್ಲುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಬಿಜೆಪಿ ವಿಭಾಗ ಪ್ರಭಾರಿ ಗೋಪಾಲಕೃಷ್ಣ ಹೇರಳೆ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.


ಪಕ್ಷದ ಯೋಜನೆ, ಯೋಚನೆಗೆ ಪೂರಕವಾಗಿ ಶಾಸಕರ ಕಾರ್ಯವೈಖರಿ ಅತ್ಯಂತ ಯಶಸ್ವಿಯಾಗಿದೆ. ಅಡಿಕೆ ಸಂಬಂಧಿತ ಆಮದು ತೆರಿಗೆ ಏರಿಸಿದ್ದು, ಕೃಷಿ ಸಮ್ಮಾನ್ ಯೋಜನೆ, ಅಕ್ರಸಕ್ರಮದಲ್ಲೂ ಅದ್ಭುತ ದಾಖಲೆಯ ರೀತಿಯಲ್ಲಿ ಕೆಲಸ ಕಾರ್ಯ ನಡೆದಿದೆ. ಈ ಎಲ್ಲಾ ಯೋಜನೆಗಳನ್ನು ಮತದಾರರಿಗೆ ತಿಳಿಸುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮ ಆಯೋಜಿಸಲಾಗಿದೆ. ಬೂತ್ ಅಧ್ಯಕ್ಷರ ಮನೆಗೆ ನಾಮಫಲಕ ತಲುಪಿಸುವ ಕಾರ್ಯವನ್ನು ನಮ್ಮ ಸಂಸದರಾಗಿರುವ ರಾಜ್ಯ ಬಿಜೆಪಿ ಅಧ್ಯಕ್ಷರು ಬಹಳ ಯಶಸ್ವಿಯಾಗಿ ಮಾಡಿದ್ದಾರೆ. ಅದೇ ರೀತಿ ಶಾಸಕ ಸಂಜೀವ ಮಠಂದೂರು ಅವರು ಬೂತ್ ಅಧ್ಯಕ್ಷರ ಮನೆ ಭೇಟಿ ಮಾಡಿದ್ದಾರೆ. 220 ಮತಗಟ್ಟೆಗಳಿಂದ ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ಸುಮಾರು 25 ಸಾವಿರ ಮಂದಿ ಭಾಗವಹಿಸಿದ್ದಾರೆ. ಮೊನ್ನೆ ಪುತ್ತೂರಿನಲ್ಲಿ ನಡೆದ ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾರ್ಯಕ್ರಮದಲ್ಲಿ ಸುಮಾರು 20ಸಾವಿರ ಮಂದಿ ಪುತ್ತೂರಿನಿಂದ ಭಾಗವಹಿಸಿದ್ದಾರೆ. ರಾಜ್ಯದಿಂದ ಬಂದಿರುವ ಸೂಚನೆಯಂತೆ ಹಲವು ಕಾರ್ಯಕ್ರಮ ಪುತ್ತೂರಿನಲ್ಲಿ ಆಯೋಜಿಸಲಾಗುತ್ತಿದೆ ಎಂದು ಅವರು ಹೇಳಿದರು.


ಬೂತ್ ವಿಜಯ, ಸಂಕಲ್ಪ ಅಭಿಯಾನ ಯಶಸ್ವಿ:


ಕಳೆದ ಡಿಸೆಂಬರ್ ತಿಂಗಳಲ್ಲಿ ಬೂತ್ ವಿಜಯ ಅಭಿಯಾನ ಮಾಡುವ ಮೂಲಕ ಎಲ್ಲಾ ಬೂತ್‌ಗಳನ್ನು ಶಶಕ್ತಿಕರಣಗೊಳಿಸುವುದು, ಪೇಜ್‌ಪ್ರಮುಖರನ್ನು ನಿಯುಕ್ತಿಗೊಳಿಸುವುದು, ವಾಟ್ಸಪ್ ಗ್ರೂಪ್ ರಚನೆ, ಮನ್ ಕೀ ಬಾತ್ ಕಾರ್ಯಕ್ರಮ, ಮನೆಮನೆಯಲ್ಲಿ ಪಕ್ಷದ ಬಾವುಟ ಹಾರಿಸುವ ಕಾರ್ಯಕ್ರಮ ಯಶಸ್ವಿಯಾಗಿದೆ. ಜನವರಿ ತಿಂಗಳಲ್ಲಿ ವಿಜಯ ಸಂಕಲ್ಪ ಅಭಿಯಾನ ಕಾರ್ಯಕ್ರಮದಲ್ಲಿ ಬೂತ್‌ನ ಎಲ್ಲಾ ಮನೆ ಸಂಪರ್ಕ, ಪ್ರತಿ ಮನೆಗೂ ಸರಕಾರದ, ಶಾಸಕರ ಅಭಿವೃದ್ಧಿ ಕೆಲಸದ ಕರ ಪತ್ರ ತಲುಪಿಸುವುದು, ಪ್ರಾಥಮಿಕ ಸದಸ್ಯತ್ವ ಅಭಿಯಾನ, ಫಲಾನುಭವಿಗಳನ್ನು ಸಂಪರ್ಕಿಸುವುದು, ಗೋಡೆಬರಹ ಕಾರ್ಯಕ್ರಮವು ಯಶಸ್ವಿಯಾಗಿದೆ ಎಂದು ಗೋಪಾಲಕೃಷ್ಣ ಹೇರಳೆ ಹೇಳಿದರು.


ಫೆಬ್ರವರಿ, ಮಾರ್ಚ್‌ನಲ್ಲಿ 3ನೇ ಅಭಿಯಾನ:


ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ 3ನೇ ಅಭಿಯಾನವಾಗಿ 5 ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ, ವಿಜಯ ಸಂಕಲ್ಪ ಯಾತ್ರೆ, ಮೋರ್ಚಾಗಳ ಸಮಾವೇಶ, ಫಲಾನುಭವಿಗಳ ಸಮಾವೇಶ, ಪ್ರಗತಿ ರಥ ವಾಹನ, ಪ್ರಣಾಳಿಕೆಗೆ ಸಲಹೆ ಅಭಿಯಾನ ನಡೆಯಲಿದೆ. ವಿಜಯ ಸಂಕಲ್ಪ ಯಾತ್ರೆಯಲ್ಲಿ ರಾಜ್ಯದಲ್ಲಿ ನಾಲ್ಕು ಭಾಗವಾಗಿ ನಡೆಯಲಿದೆ. ರಾಜ್ಯದಿಂದ ಹೊರಟ ವಿಜಯ ಸಂಕಲ್ಪ ಯಾತ್ರೆಯು ಕೊಡಗು ಮೂಲಕ ಮಾ.11ಕ್ಕೆ ಮಧ್ಯಾಹ್ನ ಸುಳ್ಯಕ್ಕೆ ಬರಲಿದೆ. ಅಲ್ಲಿಂದ ಸಂಜೆ ಪುತ್ತೂರಿಗೆ ಬಂದು ಸಾರ್ವಜನಿಕ ಸಭೆ ನಡೆಯಲಿದೆ. ಇದರಲ್ಲಿ ರಾಜ್ಯದಿಂದ ನಿಯುಕ್ತಿಗೊಂಡವರು ಭಾಗವಹಿಸಲಿದ್ದಾರೆ. ಇದರ ಸಮಾರೋಪ ಸಮಾರಂಭ ಮಾ.24ರಂದು ದಾವಣಗೆರೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಡೆಯಲಿದೆ. ಸುಮಾರು 10 ಲಕ್ಷಕ್ಕೂ ಅಧಿಕ ಮಂದಿ ಸೇರುವ ನಿರೀಕ್ಷೆ ಇದೆ. ಮಾ. 5ರಂದು ಬಿಜೆಪಿ ಎಸ್ಟಿ ಮೋರ್ಚಾದ ಜಿಲ್ಲಾ ಸಮಾವೇಶ ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಜರುಗಲಿದೆ. ಫಲಾನುಭವಿಗಳ ಸಮಾವೇಶವು ಜಿಲ್ಲಾ ಮಟ್ಟದಲ್ಲಿ ನಡೆಯಲಿದೆ. ಪ್ರಗತಿ ರಥ ವಾಹನ ಯುವ ಮೋರ್ಚಾದ ಕಡೆಯಿಂದ ನಡೆಯಲಿದೆ. ಎಲ್‌ಇಡಿ ಪರದೆಯ ಮೂಲಕ ವಾಹನದಲ್ಲಿ ಸರಕಾರದ ಅಭಿವೃದ್ಧಿ ಕಾರ್ಯಕ್ರಮಗಳ ಪ್ರದರ್ಶನ ನಡೆಯಲಿದೆ. 5 ನೇ ಕಾರ್ಯಕ್ರಮವಾಗಿ ಪ್ರಣಾಳಿಕೆ ಸಲಹಾ ಅಭಿಯಾನದಲ್ಲಿ ಸಾರ್ವಜನಿಕರ ಸಲಹೆ ಪಡೆಯುವ ಕಾರ್ಯಕ್ರಮ ನಡೆಯಲಿದೆ ಎಂದು ಗೋಪಾಲಕೃಷ್ಣ ಹೇರಳೆ ಹೇಳಿದರು.

ಬಿಜೆಪಿಯಲ್ಲಿ ಅಭ್ಯರ್ಥಿ ವಿಚಾರ ಚರ್ಚೆಗೆ ಬರುವುದಿಲ್ಲ


ಬಿಜೆಪಿಯಲ್ಲಿ ಅಭ್ಯರ್ಥಿ ವಿಚಾರ ಚರ್ಚೆಗೆ ಬರುವುದಿಲ್ಲ. ಮುಂದಿನ ಚುನಾವಣೆಯಲ್ಲೂ ಅಭ್ಯರ್ಥಿ ಹೆಚ್ಚು ಮತ ಪಡೆದರೂ ಅದು ಬಿಜೆಪಿಯ ಗೆಲುವು ಆಗಿರುತ್ತದೆ. ಈಗ ನಮ್ಮ ಶಾಸಕರು ಸಂಜೀವ ಮಠಂದೂರು. ಅದರಲ್ಲಿ ಸಂಶಯವಿಲ್ಲ. ಅವರ ಅವಧಿ ಮೇ ತಿಂಗಳ ತನಕ ಇದೆ. ಅದೇ ರೀತಿ ಬಿಜೆಪಿ ಬಲಿಷ್ಠವಾದ ರಾಜಕೀಯ ಪಕ್ಷ. ಅದು ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದು ಕೊಳ್ಳುತ್ತದೆ ಎಂದು ಬಿಜೆಪಿ ವಿಭಾಗ ಪ್ರಭಾರಿ ಗೋಪಾಲಕೃಷ್ಣ ಹೇರಳೆ ಅವರು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ್ದಾರೆ. ಅಭ್ಯರ್ಥಿ ವಿಚಾರ ಇಲ್ಲಿ ಚರ್ಚೆಗೆ ಬರುವುದಿಲ್ಲ. ಮುಂದಿನ ಚುನಾವಣೆಯಲ್ಲೂ ಅಭ್ಯರ್ಥಿ ಹೆಚ್ಚು ಮತ ಪಡೆದರೂ ಅದು ಬಿಜೆಪಿ ಗೆಲುವು. ಬಿಜೆಪಿ ಸಂಘಟನಾತ್ಮಕವಾಗಿ ಅತ್ಯಂತ ಬಲಿಷ್ಠವಾದ ಕ್ಷೇತ್ರ. ಪುತ್ತೂರು ಮತ್ತು ಸುಳ್ಯ ಕ್ಷೇತ್ರ ರಾಷ್ಟ್ರಕ್ಕೆ ಮಾದರಿಯಾಗಿ ಕೆಲಸ ಮಾಡಿದೆ. ಯಾಕೆಂದರೆ ಎಲ್ಲಿಯೂ ಕೂಡ ಪಕ್ಷದಲ್ಲಿ ಅಭ್ಯರ್ಥಿ ವಿಚಾರವಾಗಿ ಚರ್ಚೆಯೂ ಆಗಿಲ್ಲ. ಗೊಂದಲವೂ ಆಗಿಲ್ಲ. ಬಿಜೆಪಿ ಪಕ್ಷದಲ್ಲಿ ಬೂತ್‌ನಿಂದ ಹಿಡಿದು ಮಂಡಲ ಸಹಿತ ಎಲ್ಲೂ ಕೂಡಾ ಗೊಂದಲವಿಲ್ಲ. ಇಲ್ಲಿ ಬಿಜೆಪಿ ಕಾರ್ಯಕರ್ತ ಆ ಶಿಸ್ತಿಗೆ ಒಳಪಟ್ಟು ಕೆಲಸ ಕಾರ್ಯ ಮಾಡುತ್ತಾನೆ. ಶಿಸ್ತು ಉಲ್ಲಂಘನೆ ಮಾಡಿದರೆ ನಮ್ಮಲ್ಲಿ ಕಠಿಣ ಕ್ರಮ ಜಾರಿಯಾಗುತ್ತದೆ. ಅದರಲ್ಲಿ ಯಾವುದೆ ಸಂಶಯವಿಲ್ಲ. ಬಿಜೆಪಿಯಲ್ಲಿ ಒಬ್ಬೊಬ್ಬರಿಗೆ ಒಂದೊಂದು ಜವಾಬ್ದಾರಿ ಇದೆ, ಆ ಚೌಕಟ್ಟಿನಲ್ಲಿ ಅವರು ಕೆಲಸ ಕಾರ್ಯ ಮಾಡುತ್ತಾರೆ. ಚೌಕಟ್ಟು ಮೀರಿದಾಗ ಪಕ್ಷ ಅವರ ಮೇಲೆ ಕ್ರಮಕ್ಕೆ ನಿರ್ಧಾರ ಮಾಡುತ್ತದೆ ಎಂದರು.


ಗೊಂದಲವನ್ನು ನಿವಾರಿಸಿಕೊಂಡೆ ಚುನಾವಣೆ ಎದುರಿಸಲಿದ್ದೇವೆ:
ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ಅವರು ಮಾತನಾಡಿ ಅಭ್ಯರ್ಥಿಗಳ ಆಯ್ಕೆಯನ್ನು ರಾಷ್ಟ್ರಮಟ್ಟದಲ್ಲಿ ನಿರ್ಧಾ ಕೈಗೊಳ್ಳುವಂತಹದ್ದು, ನಾವು ಗೊಂದಲವನ್ನು ನಿವಾರಿಸಿಕೊಂಡೆ ಚುನಾವಣೆ ಎದುರಿಸಲಿದ್ದೇವೆ ಎಂದರು.

ಒಟ್ಟು ಬಿಜೆಪಿಯ ಅಭಿವೃದ್ಧಿ ಕಾರ್ಯಕ್ರಮದಿಂದಾಗಿ ಯಾವುದೇ ಸಂಶಯವಿಲ್ಲದೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಅವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಆರ್.ಸಿ.ನಾರಾಯಣ್, ಮಾಜಿ ಪುರಸಭೆ ಅಧ್ಯಕ್ಷ ರಾಜೇಶ್ ಬನ್ನೂರು, ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ಚಂದ್ರಶೇಖರ್ ರಾವ್ ಬಪ್ಪಳಿಗೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here