ಪುತ್ತೂರು: ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಕಾಲೇಜಿನ ಎಂ.ಎಸ್.ಡಬ್ಲ್ಯೂ, (ಸ್ನಾತಕೋತ್ತರ ಸಮಾಜಕಾರ್ಯ) ವಿಭಾಗ ಮತ್ತು ಸರಕಾರಿ ಪ್ರೌಢಶಾಲೆ ಪಾಪೆಮಜಲು ಇದರ ಜಂಟಿ ಆಶ್ರಯದಲ್ಲಿ ಎಸ್ಎಸ್ಎಲ್‌ಸಿ ಪರೀಕ್ಷಾ ಪೂರ್ವ ತಯಾರಿ ಮಾಹಿತಿ ಕಾರ್ಯಕ್ರಮ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಸಂತ ಫಿಲೋಮಿನಾ ಕಾಲೇಜಿನ ಎಂ ಎಸ್ ಡಬ್ಲ್ಯೂ ವಿಭಾಗದ ಉಪನ್ಯಾಸಕರಾದ ಪ್ರತಿಭಾ ಕೆ.ರವರು ಮಾತನಾಡಿ, ಪರೀಕ್ಷೆಯೇ ಎಲ್ಲವೂ ಅಲ್ಲ ಪರೀಕ್ಷೆ ಎನ್ನುವುದು ನಮ್ಮೊಳಗಿರುವ ಜ್ಞಾನ, ಕೌಶಲ್ಯ ಮತ್ತು ಸಾಮರ್ಥ್ಯವನ್ನು ಅಳೆಯುವ ಮಾಪನವಷ್ಟೇ, ಆದರೂ ಎದುರಿಸುವ ಎಲ್ಲಾ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಜೀವನಕ್ಕೆ ಅತ್ಯಗತ್ಯ. ವಿದ್ಯಾರ್ಥಿ ಜೀವನದಲ್ಲಿ ಓದುವ ಹವ್ಯಾಸವನ್ನು ಹೇಗೆ ಬೆಳೆಸಿಕೊಳ್ಳಬೇಕು ಮತ್ತು ಹೇಗೆ ಪರೀಕ್ಷೆಗಳನ್ನು ಧೈರ್ಯದಿಂದ ಎದುರಿಸಬೇಕೆಂಬುದರ ಬಗ್ಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಅರಿಯಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೌಮ್ಯ ಬಾಲಸುಬ್ರಹ್ಮಣ್ಯ ಕಾರ್ಯಕ್ರಮ ಉದ್ಘಾಟಿಸಿ, ಸತತ ಪ್ರಯತ್ನದಿಂದ ಸಾಧನೆ ಸಾಧ್ಯ ಎಂದರು. ಅತಿಥಿಯಾಗಿ ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ಸಮಾಜ ಕಾರ್ಯ ವಿಭಾಗದ ಪ್ರಾಧ್ಯಾಪಕ ಶೀತಲ್ ಕುಮಾರ್.ಕೆ.ವಿ. ಭಾಗವಹಿಸಿದರು. ಶಾಲಾ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ತಿಲಕ್ ರೈ ಕುತ್ಯಾಡಿ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳು ಪರೀಕ್ಷೆಗೆ ಉತ್ತಮ ತಯಾರಿಯನ್ನು ಮಾಡಿಕೊಂಡು ಪರೀಕ್ಷೆಯನ್ನು ಉತ್ತಮವಾಗಿ ಎದುರಿಸಿ ಶಾಲೆಗೆ ಉತ್ತಮ ಫಲಿತಾಂಶವನ್ನು ತರುವಂತಾಗಲಿ ಎಂದು ಶುಭ ಹಾರೈಸಿದರು.
ಸ್ನಾತಕೋತರ ಸಮಾಜಕಾರ್ಯಾ ವಿಭಾಗದ ವಿದ್ಯಾರ್ಥಿ ಜ್ಞಾನೇಶ್ವರಿ.ಎ ಸ್ವಾಗತಿಸಿ, ವಂದನಾ ಎಂ.ಎಸ್ ವಂದಿಸಿದರು. ಪ್ರಕೃತಿ ಬಿ.ಕೆ ಕಾರ್ಯಕ್ರಮ ನಿರೂಪಿಸಿದರು.