ಕಡಬ : ನೀರಿನ ಪೈಪ್ ಅಳವಡಿಸುವ ಸಲುವಾಗಿ ಗುಂಡಿ ಅಗೆಯುತ್ತಿದ್ದ ಜೆಸಿಬಿಯೊಂದು ಹಳೆಯ ಕಿರು ಸೇತುವೆ ಮೇಲೆ ಹೋದ ಪರಿಣಾಮ ಸೇತುವೆ ಮುರಿದು ಬಿದ್ದ ಘಟನೆ ಕೊಂಬಾರಿನಲ್ಲಿ ಇಂದು ನಡೆದಿದೆ.
ಕಡಬ ತಾಲೂಕಿನ ಕೊಂಬಾರು ಗ್ರಾಮದಿಂದ ಕೆಂಜಾಳಕ್ಕೆ ಸಂಪರ್ಕಿಸುವ ಜಿಲ್ಲಾ ಪಂಚಾಯತ್ ಪ್ರಮುಖ ರಸ್ತೆ ಇದಾಗಿದೆ. ಹಳೆ ಸೇತುವೆ ಇದಾಗಿದ್ದು ಈ ಹಿಂದೆ ಜೆಸಿಬಿ ಹೋದ ಹಿನ್ನೆಲೆಯಲ್ಲಿ ಕಿರು ಸೇತುವೆ ಮುರಿದು ಬಿದ್ದಿತ್ತು. ಬಳಿಕ ಗ್ರಾಮಸ್ಥರೇ ಕಬ್ಬಿಣದ ಶೀಟ್,ಮರದ ಹಲಗೆ ಬಳಸಿ ಲಘು ವಾಹನ ಸಂಚರಿಸುವಂತೆ ಮಾಡಿದ್ದರು. ಇದೀಗ ಮತ್ತೆ ಗ್ರಾ.ಪಂ ನಿಂದ ನೀರು ಸರಬರಾಜು ಮಾಡುವ ಸಲುವಾಗಿ ಪೈಪ್ ಲೈನ್ ಅಗೆಯುತ್ತಿದ್ದ ವೇಳೆ ಜೆಸಿಬಿ ಹಾದು ಹೋದ ಕಾರಣ ಸೇತುವೆ ಬಹುತೇಕ ಕುಸಿದು ಬಿದ್ದಿರುವುದಾಗಿ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.
ಹಳೆ ಕಿರು ಸೇತುವೆ ಮುರಿದು ಬಿದ್ದ ಕಾರಣ ಸೇತುವೆ ಪಕ್ಕದಲ್ಲಿಯೇ ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿ ತಾತ್ಕಾಲಿಕ ರಸ್ತೆ ನಿರ್ಮಿಸಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ . ಹಲವಾರು ವರ್ಷಗಳಿಂದ ಕಿರು ಸೇತುವೆ ನಿರ್ಮಿಸುವಂತೆ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಅಳಲು ತೋಡಿ ಕೊಂಡಿದ್ದಾರೆ.