60 ಸಾವಿರ ರೂ.ಕೇಳಿದ್ದರು
ನನ್ನ ತಂದೆಯವರ ಹೆಸರಿನಲ್ಲಿ 3 ಎಕ್ರೆ 18 ಸೆಂಟ್ಸ್ ಜಮೀನು ಇದೆ.ಆದರೆ ಅದು ನಮ್ಮ ಮನೆ ದೇವರಿಗೆ ಮೀಸಲಾಗಿರುವ ಭೂಮಿ.ಅದನ್ನು ಮಾರಾಟ ಮಾಡಲು ಅಥವಾ ಪಾಲು ಪಟ್ಟಿ ಮಾಡಲು ಆಗುವುದಿಲ್ಲ.ತಾಯಿಯ ಹೆಸರಿನಲ್ಲಿ 2 ಎಕ್ರೆ 30 ಸೆಂಟ್ಸ್ ಜಾಗಕ್ಕೆ ಅಕ್ರಮ ಸಕ್ರಮದಲ್ಲಿ ಅರ್ಜಿ ಸಲ್ಲಿಸಿದ್ದೆವು.ಅದನ್ನು ಸಕ್ರಮೀಕರಣ ಮಾಡಿಸಲು ಮಹೇಶ್‌ರವರು ನಮ್ಮೊಡನೆ 60 ಸಾವಿರ ರೂ.ಕೇಳಿದ್ದರು.ಮುಂಗಡವಾಗಿ ನಾನು 5 ಸಾವಿರ ರೂ.ಗಳನ್ನು ಅವರಿಗೆ ನೀಡಿದ್ದೆ.ಬಾಕಿ ಹಣ ನೀಡಲು ನಮ್ಮಲ್ಲಿ ಇಲ್ಲದೇ ಇದ್ದುದರಿಂದ ನಾನು ಲೋಕಾಯುಕ್ತಕ್ಕೆ ದೂರು ನೀಡಬೇಕಾಯಿತು ಎಂದು ಘಟನೆ ಸಂದರ್ಭ ಗೋಪಾಲಕೃಷ್ಣ ಅವರು ಪತ್ರಿಕೆಗೆ ಮಾಹಿತಿ ನೀಡಿದ್ದರು.
ಆರೋಪ ನಿರಾಕರಿಸಿದ್ದ ಮಹೇಶ್
ನಾನು ಯಾರಿಂದಲೂ ಹಣ ಕೇಳಿಯೇ ಇಲ್ಲ.ಆ ವ್ಯಕ್ತಿ ನನ್ನ ಹಿಂದಿನಿಂದ ಬಂದು ಕಿಸೆಗೆ ಹಣ ಹಾಕಿದ್ದಾರೆ. ನನ್ನನ್ನು ಹಿಡಿಸಬೇಕೆಂಬ ಉದ್ದೇಶದಿಂದಲೇ ಹೀಗೆ ಮಾಡಿದ್ದಾರೆ ಎಂದು ಆರೋಪಿ ಮಹೇಶ್‌ರವರು ಅಂದು ಪ್ರತಿಕ್ರಿಯೆ ನೀಡಿದ್ದರು.
ಪುತ್ತೂರು:2016ರಲ್ಲಿ ಸುಳ್ಯದ ಮಂಡೆಕೋಲು ಗ್ರಾಮದಲ್ಲಿ ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿ ಅಕ್ರಮ-ಸಕ್ರಮದಡಿ ಭೂಮಿ ಮಂಜೂರಾತಿ ಕಡತ ಸಿದ್ಧಪಡಿಸಲು ಲಂಚ ಪಡೆದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಗ್ರಾಮಕರಣಿಕನಿಗೆ ಜೈಲು ಶಿಕ್ಷೆ, ದಂಡ ವಿಧಿಸಿ ನ್ಯಾಯಾಲಯ ಆದೇಶಿಸಿದೆ.
ಸುಳ್ಯದ ಮಂಡೆಕೋಲಿನಲ್ಲಿ ಗ್ರಾಮಕರಣಿಕನಾಗಿದ್ದು ಪ್ರಸ್ತುತ ಪುತ್ತೂರು ಕಸಬಾ, ನರಿಮೊಗರು, ಶಾಂತಿಗೋಡು ಗ್ರಾಮದ ಆಡಳಿತಾಧಿಕಾರಿಯಾಗಿ ಕರ್ತವ್ಯದಲ್ಲಿದ್ದ ಎಸ್.ಮಹೇಶ್ ಎಂಬವರಿಗೆ ಮಂಗಳೂರು ಮೂರನೇ ಹೆಚ್ಚುವರಿ ಸತ್ರ ನ್ಯಾಯಾಲಯವು 4 ವರ್ಷಗಳ ಜೈಲು ಶಿಕ್ಷೆ ಹಾಗೂ ರೂ.70,000 ದಂಡ ವಿಽಸಿ ಆದೇಶಿಸಿದೆ.ದಂಡ ತೆರಲು ವಿಫಲನಾದಲ್ಲಿ ಮತ್ತೆ 8 ತಿಂಗಳ ಸಾದಾ ಸಜೆ ಅನುಭವಿಸುವಂತೆ ನ್ಯಾಯಾಧೀಶ ಬಿ.ಬಿ.ಜಕಾತಿಯವರು ಆದೇಶಿಸಿದ್ದಾರೆ. ಎಸಿಬಿಯವರು ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದರು.
ಸುಳ್ಯದ ಮಂಡೆಕೋಲು ಗ್ರಾಮದ ಉದ್ದಂತಡ್ಕ ಕೆರೆಮೂಲೆ ರಾಮಕೃಷ್ಣ ಉಂಗುರುಬಳಿತ್ತಾಯರ ಪತ್ನಿ ಪ್ರಭಾವತಿಯವರು 2 ಎಕ್ರೆ 20 ಸೆಂಟ್ಸ್ ಜಾಗಕ್ಕೆ 1998-99ರಲ್ಲಿ ಅಕ್ರಮ ಸಕ್ರಮದಡಿ ಅರ್ಜಿ ಸಲ್ಲಿಸಿದ್ದರು.ರಾಮಕೃಷ್ಣ ಉಂಗುರಬಳಿತ್ತಾಯರ ಹೆಸರಿನಲ್ಲಿ 3.18 ಎಕ್ರೆ ತರಿ ಜಮೀನು ಇದ್ದುದರಿಂದ ಅವರ ಪತ್ನಿ ಅಕ್ರಮ ಸಕ್ರಮದಡಿ ಜಾಗ ಮಂಜೂರಾತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಳ್ಯದ ಆಗಿನ ತಹಸಿಲ್ದಾರ್ ತಿರಸ್ಕರಿಸಿದ್ದರು.ಇದರ ವಿರುದ್ಧ ಪ್ರಭಾವತಿಯವರು 2015ರಲ್ಲಿ ಎ.ಸಿ. ಕೋರ್ಟ್ ಗೆ ಅಪೀಲು ಮಾಡಿದ್ದರು.
ಮರು ಪರಿಶೀಲಿಸಲು ಸುಳ್ಯಕ್ಕೆ ಕಡತ ವಾಪಾಸ್:
ರಾಮಕೃಷ್ಣ ಉಂಗುರಬಳಿತ್ತಾಯರ ಹೆಸರಲ್ಲಿರುವ ಭೂಮಿ ಮನೆದೇವರಿಗೆ ಸಂಬಂಧಿಸಿದ್ದಾಗಿದ್ದು ಅದು ಕುಟುಂಬದ ಯಜಮಾನನ ಹೆಸರಲ್ಲಿದೆ.ಆದರೆ ಅದನ್ನು ಮಾರಾಟ ಮಾಡಲಾಗಲೀ, ಬದಲಾಯಿಸಲಾಗಲೀ, ಪಾಲು ಪಟ್ಟಿ ಮಾಡಲಾಗಲೀ ಹಕ್ಕು ಇಲ್ಲ.ಆದ್ದರಿಂದ ಮಿತಿಗಿಂತ ಜಾಸ್ತಿ ಆಸ್ತಿ ಇದೆ ಎಂಬುದಕ್ಕೆ ಈ ಆಸ್ತಿಯನ್ನು ಪರಿಗಣಿಸಬಾರದು ಎಂದು ಮೇಲ್ಮನವಿಯಲ್ಲಿ ಪ್ರಭಾವತಿಯವರು ಕೋರಿದ್ದರು.ಇದರ ವಿಚಾರಣೆ ನಡೆಸಿದ ಎ.ಸಿ.ಯವರು ಪ್ರಭಾವತಿಯವರ ಅರ್ಜಿಯನ್ನು ಮರು ಪರಿಶೀಲಿಸುವಂತೆ ಹೇಳಿ ಮತ್ತೆ ಸುಳ್ಯಕ್ಕೆ ಕಳುಹಿಸಿದ್ದರು.
ಭೂಮಿ ಮಂಜೂರಾತಿಯಾಗುವ ರೀತಿ ಕಡತ ತಯಾರಿಸಲು 60 ಸಾವಿರ ರೂ.ಕೇಳಿದ್ದರು:
ಪ್ರಭಾವತಿಯವರ ಅರ್ಜಿಯನ್ನು ಅಕ್ರಮ ಸಕ್ರಮದಡಿ ಮರು ಪರಿಶೀಲಿಸುವಂತೆ ಹೇಳಿ ಎ.ಸಿ.ಯವರು ಕಡತವನ್ನು ಸುಳ್ಯಕ್ಕೆ ವಾಪಾಸ್ ಕಳುಹಿಸಿದ್ದರು.ಅಕ್ರಮ ಸಕ್ರಮದಲ್ಲಿ ಭೂಮಿ ಮಂಜೂರಾತಿಯಾಗುವ ರೀತಿಯಲ್ಲಿ ಈ ಕಡತವನ್ನು ತಯಾರಿಸಲು, ಆಗ ಮಂಡೆಕೋಲು ಗ್ರಾಮಕರಣಿಕರಾಗಿದ್ದ ಮಹೇಶ್ ಅವರು 60 ಸಾವಿರ ರೂ.ಕೇಳಿದ್ದರು ಎಂದು ಆರೋಪಿಸಿ ಪ್ರಭಾವತಿಯವರ ಮಗ ಗೋಪಾಲಕೃಷ್ಣರು ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದರು.ಎ.ಸಿ.ಬಿಯವರು 2016ರ ಜೂ.7ರಂದು ಸುಳ್ಯಕ್ಕೆ ಆಗಮಿಸಿ ಗೋಪಾಲಕೃಷ್ಣರವರು ಮಹೇಶ್ ಅವರಿಗೆ ಹಣ ನೀಡುವ ಸಂದರ್ಭದಲ್ಲಿ ರೆಡ್ ಹ್ಯಾಂಡ್ ಆಗಿ ಹಿಡಿಯಲು ಬಲೆ ಹೆಣೆದಿದ್ದರು.
ಸಂಜೆ ವೇಳೆ ಸುಳ್ಯ ಮೆಸ್ಕಾಂ ಬಳಿಯಿರುವ ಕಂದಾಯ ನಿರೀಕ್ಷಕರ ಕಚೇರಿಯಲ್ಲಿ ಮಹೇಶ್‌ರವರು ಇದ್ದ ಸಂದರ್ಭ ಗೋಪಾಲಕೃಷ್ಣರು ಅಲ್ಲಿಗೆ ಹೋಗಿ 45 ಸಾವಿರ ರೂ.ಗಳನ್ನು ಅವರಿಗೆ ನೀಡಿ ಹೊರಗಡೆ ಕಾಯುತ್ತಿದ್ದ ಎಸಿಬಿ ಪೊಲೀಸರಿಗೆ ಸಿಗ್ನಲ್ ನೀಡಿದರು.ಕೂಡಲೇ ಧಾವಿಸಿ ಬಂದ ಎಸಿಬಿಯವರು ಮಹೇಶ್‌ರವರನ್ನು ಹಿಡಿದುಕೊಂಡು, ಲಂಚ ಪಡೆದ ಹಣವನ್ನು ನೀಡುವಂತೆ ಕೇಳಿದಾಗ ಮಹೇಶ್‌ರವರು, ತಾನು ಯಾರಿಂದಲೂ ಲಂಚ ಪಡೆದಿಲ್ಲ.ತನಗೇನೂ ಗೊತ್ತಿಲ್ಲ ಎಂದು ಹೇಳಿದ್ದರು.
ಪೊಲೀಸರು ಒತ್ತಾಯಿಸಿದ ಬಳಿಕ ತನ್ನ ಕಿಸೆಯಲ್ಲಿದ್ದ 45 ಸಾವಿರ ರೂ.ಗಳ ಕಟ್ಟನ್ನು ತೆಗೆದು ಎಸಿಬಿಯವರಿಗೆ ಕೊಟ್ಟಿದ್ದರು.ಪ್ರಕರಣ ದಾಖಲಿಸಿಕೊಂಡಿದ್ದ ಎಸಿಬಿಯವರು ಆರೋಪಿ ಮಹೇಶ್‌ರವರನ್ನು ಬಂಽಸಿ ಕರೆದೊಯ್ದರು.ಎಸಿಬಿ ಡಿವೈಎಸ್ಪಿಯಾಗಿದ್ದ ಸುಧೀರ್ ಹೆಗ್ಡೆಯವರ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿತ್ತು.ಎಸಿಬಿ ಪೊಲೀಸ್ ನಿರೀಕ್ಷಕ ದಿನಕರ ಶೆಟ್ಟಿ ಆರಂಭಿಸಿದ್ದ ತನಿಖೆಯನ್ನು ಬಳಿಕ ಯೋಗೀಶ್ ಕುಮಾರ್ ಮುಂದುವರಿಸಿ,ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.ಸರಕಾರದ ಪರವಾಗಿ ಕರ್ನಾಟಕ ಲೋಕಾಯುಕ್ತ ವಿಶೇಷ ಸಾರ್ವಜನಿಕ ಅಭಿಯೋಜಕ ರವೀಂದ್ರ ಮುನ್ನಿಪ್ಪಾಡಿ ವಾದ ಮಂಡಿಸಿದ್ದರು.
ಮಂಡೆಕೋಲು ಗ್ರಾಮಕರಣಿಕರಾಗಿದ್ದ ಮಹೇಶ್‌ರವರು ಮೂಲತ: ಮೈಸೂರುನವರು.19 ವರ್ಷಗಳ ಹಿಂದೆ ಅನುಕಂಪದ ಆಧಾರದಲ್ಲಿ ಅವರಿಗೆ ಗ್ರಾಮಕರಣಿಕ ಹುದ್ದೆ ದೊರಕಿತ್ತು.ಆರಂಭದಲ್ಲಿ ಬೆಳ್ತಂಗಡಿಯಲ್ಲಿ ಕರ್ತವ್ಯದಲ್ಲಿದ್ದ ಅವರು ನಿಯೋಜನೆ ಮೇಲೆ ಕೊಲ್ಲಮೊಗ್ರು ಗ್ರಾಮಕರಣಿಕರಾಗಿ ಬಂದಿದ್ದರು.ಅಲ್ಲಿಂದ ಕಡಬ ಗ್ರಾಮಕರಣಿಕರಾಗಿ ಹೋಗಿ ಮತ್ತೆ ಸುಳ್ಯಕ್ಕೆ ಬಂದು ಮಂಡೆಕೋಲು ಗ್ರಾಮಕರಣಿಕರಾಗಿ ನೇಮಕಗೊಂಡಿದ್ದರು.ಮಂಡೆಕೋಲು ಜೊತೆಗೆ ಅಜ್ಜಾವರ ಗ್ರಾಮದ ಪ್ರಭಾರವನ್ನೂ ಹೊಂದಿದ್ದರು.ಎಸ್.ಮಹೇಶ್ ಅವರು ಈ ಹಿಂದೆ ಆರ್ಯಾಪು ಗ್ರಾಮಕರಣಿಕರಾಗಿ, ಪ್ರಭಾರ ಕಂದಾಯ ನಿರೀಕ್ಷಕರಾಗಿಯೂ ಕರ್ತವ್ಯ ನಿರ್ವಹಿಸಿದ್ದರು.