ಕಡಬ:ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳಿಗೆ ಅದ್ದೂರಿ ಸ್ವಾಗತ

0

ಕಡಬ: ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವತಿಯಿಂದ ಜರಗಿದ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವ ಕ್ರೀಡಾಪಟುಗಳಿಗೆ ಕಡಬದ ಜನಪ್ರಿಯ ಆರ್ಟ್ಸ್ -ಸ್ಪೋರ್ಟ್ಸ್ ಕ್ಲಬ್‌ನ ನೇತೃತ್ವದಲ್ಲಿ ಅದ್ದೂರಿಯ ಸ್ವಾಗತ ನೀಡಲಾಯಿತು.

ಕಡಬ ತಹಶೀಲ್ದಾರ್ ಕಚೇರಿಯ ಬಳಿ ನಡೆದ ಕಾರ್ಯಕ್ರಮದಲ್ಲಿ ಸಾಧಕ ಕ್ರೀಡಾಪಟುಗಳಾದ ಕಡಬದ ಸೈಂಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆಯ ನವ್ಯಾ, ಧೃತಿ ಕೆ. ರೈ, ತೀಕ್ಷ ಎಸ್., ಫಾತಿಮಾ ಫಿದಾ, ನಂದನಾ ಎ. ನಾಯರ್, ಅವನಿ ಹಾಗೂ ಕಡಬದ ಸರಕಾರಿ ಪ್ರೌಢಶಾಲೆಯ ಚರಿಷ್ಮಾ ಅವರನ್ನು ಗಣ್ಯರು ಗೌರವಿಸಿದರು. ಬಳಿಕ ಕಡಬದ ಮುಖ್ಯರಸ್ತೆಯಲ್ಲಿ ತೆರೆದ ವಾಹನದಲ್ಲಿ ಕುಳ್ಳಿರಿಸಿ ಸಾಧಕ ಕ್ರೀಡಾಪಟುಗಳನ್ನು ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು.

ಸೈಂಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ವಂ| ಅಮಿತ್ ಪ್ರಕಾಶ್ ರೋಡ್ರಿಗಸ್, ಸೈಂಟ್ ಜೋಕಿಮ್ಸ್ ಚರ್ಚ್‌ನ ಸಹಾಯಕ ಧರ್ಮಗುರು ವಂ|ರೋಲ್ಸನ್ ಡಿ’ಸೋಜ, ಕಡಬ ಸರಕಾರಿ ಪ್ರೌಢಶಾಲೆಯ ಉಪಪ್ರಾಂಶುಪಾಲೆ ಡಾ|ವೇದಾವತಿ, ಪ್ರೌಢಶಾಲಾ ಶಿಕ್ಷಕರ ಸಂಘದ ಕಡಬ ತಾಲೂಕು ಘಟಕದ ಕಾರ್ಯದರ್ಶಿ ದೇವಿಪ್ರಸಾದ್, ಜನಪ್ರಿಯ ಆರ್ಟ್ಸ್ -ಸ್ಪೋರ್ಟ್ಸ್ ಕ್ಲಬ್‌ನ ರಜತ ಮಹೋತ್ಸವ ಸಮಿತಿಯ ಅಧ್ಯಕ್ಷ ಕಿಶನ್‌ಕುಮಾರ್ ರೈ, ಪದಾಧಿಕಾರಿಗಳಾದ ಅನೀಶ್ ಆರಿಗ, ಅನಿಲ್ ಬಲ್ಯ, ಮಿಥುನ್ ಹೆಗ್ಡೆ, ಹಾರಿಸ್, ಶರೀಫ್, ಜೇಸಿಐ ಕಡಬ ಕದಂಬದ ಪೂರ್ವಾಧ್ಯಕ್ಷ ಅಶೋಕ್‌ಕುಮಾರ್ ಪಿ., ಕ್ರೀಡಾಪಟುಗಳಿಗೆ ತರಬೇತಿ ನೀಡಿದ ಸೈಂಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಸಮದ್ ಎ.ಎಸ್., ಅರುಣ್‌ಕುಮಾರ್, ಕಡಬ ಸರಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಲೋಕೇಶ್ ತಂಟೆಪ್ಪಾಡಿ, ಕಡಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಸತೀಶ್ ನಾಕ್ ಮೇಲಿನಮನೆ ಮುಂತಾದ ಪ್ರಮುಖರು ಉಪಸ್ಥಿತರಿದ್ದರು.

ಜನಪ್ರಿಯ ಆರ್ಟ್ಸ್ -ಸ್ಪೋರ್ಟ್ಸ್ ಕ್ಲಬ್‌ನ ಮಾಜಿ ಅಧ್ಯಕ್ಷ ಮಹಮ್ಮದ್ ಮನ್ಸೂರ್ ಸ್ವಾಗತಿಸಿ, ವಂದಿಸಿದರು. ಅಬ್ದುಲ್‌ಖಾದರ್ ಶೇಡಿಗುಂಡಿ ನಿರೂಪಿಸಿದರು.

LEAVE A REPLY

Please enter your comment!
Please enter your name here