ಪುತ್ತೂರು: ನರಿಮೊಗರು ಹಿರಿಯ ಪ್ರಾಥಮಿಕ ಶಾಲಾ ಎಸ್‌ಡಿಎಂಸಿಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಸಮಿತಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ನೇರಳಕಟ್ಟೆ ಜನಪ್ರಿಯ ಗಾರ್ಡನ್‌ನಲ್ಲಿ ನಡೆದ ಜಿಲ್ಲಾಮಟ್ಟದ ಎಸ್‌ಡಿಎಂಸಿ ಸಮಾವೇಶದಲ್ಲಿ ನರಿಮೊಗರು ಶಾಲಾ ಎಸ್‌ಡಿಎಂಸಿ ಸಕ್ರಿಯ ಸದಸ್ಯ ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿರುವ ಪ್ರವೀಣ್ ಆಚಾರ್ಯ ನರಿಮೊಗರು, ಎಸ್‌ಡಿಎಂಸಿ ಉಪಾಧ್ಯಕ್ಷೆ ಪ್ರತಿಭಾ ಆಚಾರ್ಯ, ಸದಸ್ಯರಾದ ಸೌಮ್ಯ, ಗುಲಾಬಿ, ನಸೀಮ ಬಾನು, ಸುನೀತಾ ಡಿಸೋಜಾ, ದಿನೇಶ್ ದೋಳ, ಗಣೇಶ್ ಪೂಜಾರಿ ಹಾಗೂ ಎಸ್‌ಡಿಎಂಸಿ ನಿಕಟಪೂರ್ವ ಅಧ್ಯಕ್ಷರು ಮತ್ತು ಜಿಲ್ಲಾ ಸಮಿತಿ ಸದಸ್ಯರಾದ ಉಸ್ಮಾನ್ ನೆಕ್ಕಿಲು ಹಾಗೂ ಸಲೀಂ ಮಾಯಂಗಳ ಪ್ರಶಸ್ತಿ ಸ್ವೀಕರಿಸಿದರು. ಮಾಜಿ ಸಚಿವ ರಮನಾಥ ರೈ ಉಪಸ್ಥಿತರಿದ್ದರು.
ನರಿಮೊಗರು ಶಾಲಾ ಎಸ್‌ಡಿಎಂಸಿಯು ತನ್ನ ಕಾರ್ಯಾವಧಿಯಲ್ಲಿ ಶಾಲೆಗೆ ಇಂಟರ್ಲಾಕ್ ಅಳವಡಿಸಿದ ಸುಂದರ ಸಭಾಂಗಣ, ಶಾಲಾ ಪರಿಸರದಲ್ಲಿ ಅಡಿಕೆ ತೋಟ ನಿರ್ಮಾಣ, ಶಾಲಾ ಸೌಂದರೀಕರಣ, ಶಾಲೆಗೆ ಕಾಂಕ್ರೀಟ್ ರಸ್ತೆ, ಸ್ಮಾರ್ಟ್ ಕ್ಲಾಸ್ ಹಾಗೂ ಶುದ್ಧ ಕುಡಿಯುವ ನೀರಿನ ಘಟಕ, ಸುಂದರ ಹಾಗೂ ವ್ಯವಸ್ಥಿತವಾದ ಎಲ್‌ಕೆಜಿ ಮತ್ತು ಯುಕೆಜಿ ತರಗತಿ ಕೊಠಡಿ ಹೀಗೆ ಹಲವಾರು ವಿನೂತನ ಯೋಜನೆಗಳ ಮೂಲಕ ತಾಲೂಕಿನ ಪ್ರತಿಷ್ಠಿತ ವಿದ್ಯಾ ಸಂಸ್ಥೆಯಾಗಿ ಗುರುತಿಸಿಕೊಂಡಿದೆ.
ಶೈಕ್ಷಣಿಕ ಹಾಗೂ ಶಾಲಾ ಮೂಲಭೂತ ಸೌಕರ್ಯಗಳ ಸಂಯೋಜನೆಯೊಂದಿಗೆ ಉತ್ತಮವಾದ ಶಾಲಾ ಪರಿಸರ, ಸಮರ್ಥ ಎಸ್‌ಡಿಎಂಸಿ ಹಾಗೂ ಶಿಕ್ಷಕ ವರ್ಗದ ಸಹಯೋಗದೊಂದಿಗೆ ಅಭಿವೃದ್ಧಿ ಹೊಂದಿದ ಶಾಲೆಯಾಗಿ ಜಿಲ್ಲಾ ಮಟ್ಟದ ಅತ್ಯುತ್ತಮ ಎಸ್‌ಡಿಎಂಸಿ ಹಾಗೂ ಜಿಲ್ಲೆಯ ಮಾದರಿ ಶಾಲೆ ಪ್ರಶಸ್ತಿಯನ್ನು ಗಳಿಸಿಕೊಂಡಿದೆ. ಇದೇ ಸಂದರ್ಭದಲ್ಲಿ ಎಸ್‌ಡಿಎಂಸಿ ಸಮಾವೇಶದ ವೇದಿಕೆಯಲ್ಲಿ ಉಪಸ್ಥಿತರಿದ್ದ ನರಿಮೊಗರು ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಲತಾರವರನ್ನು ಹಾಗೂ ಎಲ್‌ಕೆಜಿ ಶಿಕ್ಷಕಿ ಸ್ನೇಹಲತಾರವರನ್ನು ಸಮಾವೇಶಕ್ಕೆ ಸಹಕಾರ ನೀಡಿದ್ದಕ್ಕಾಗಿ ಹಾಗೂ ಶಾಲಾ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸಿದ್ದಕ್ಕಾಗಿ ಅಭಿನಂದಿಸಲಾಯಿತು.