ಭರತನಾಟ್ಯ, ಯಕ್ಷಗಾನ ಕಲಾವಿದೆ ಕುದ್ಕಾಡಿ ಆಸ್ತಿಕಾ ಸುನಿಲ್ ಶೆಟ್ಟಿ ನಿಧನ

0

ಪುತ್ತೂರು: ಯಕ್ಷಗಾನ, ಭರತನಾಟ್ಯ ಕಲಾವಿದೆಯಾಗಿ ಕಳೆದ ಹಲವು ವರ್ಷಗಳಿಂದ ಬಹರೈನ್‌ನಲ್ಲಿ ಕಲಾ ಸರಸ್ವತಿಯ ಸೇವೆ ಮಾಡುತ್ತಿರುವ ದಿ. ಕುದ್ಕಾಡಿ ವಿಶ್ವನಾಥ ರೈಯವರ ಪುತ್ರಿ ಆಸ್ತಿಕಾ ಸುನೀಲ್ ಶೆಟ್ಟಿ (45ವ)ರವರು ಅಲ್ಪ ಕಾಲದ ಅಸೌಖ್ಯದಿಂದಾಗಿ ಮಾ.07 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಭರತನಾಟ್ಯ ಕಲಾವಿದರಾದ ದಿ. ಕುದ್ಕಾಡಿ ವಿಶ್ವನಾಥ ರೈ ಮತ್ತು ನಯನಾ ವಿ.ರೈರವರ ಪುತ್ರಿಯಾಗಿ ಕಲಾ ಕುಟುಂಬದಲ್ಲಿ ಜನಿಸಿದ ಆಸ್ತಿಕಾ ಸುನಿಲ್ ಶೆಟ್ಟಿಯವರು ಭರತನಾಟ್ಯ ಕಲಾವಿದೆಯಾಗಿ, ಯಕ್ಷಗಾನ ಕಲಾವಿದೆಯಾಗಿ ಕಳೆದ 25 ವರ್ಷಗಳಿಂದ ಬಹರೈನ್‌ನಲ್ಲಿ ವಿಶ್ವಕಲಾನಿಕೇತನ ಸಂಸ್ಥೆಯನ್ನು ಕಟ್ಟಿಕೊಂಡು ಕಲಾಸರಸ್ವತಿಯ ಸೇವೆ ಮಾಡುತ್ತಿದ್ದರು. ಅದೆಷ್ಟೋ ವಿದ್ಯಾರ್ಥಿಗಳು ಇವರಿಂದ ಯಕ್ಷಗಾನ, ಭರತನಾಟ್ಯ ಕಲಿತುಕೊಂಡಿದ್ದರು. ಬಹರೈನ್ ಯಕ್ಷಗಾನ ರಂಗದಲ್ಲಿ ಆಸ್ತಿಕಾರವರು ಸುಧನ್ವಮೋಕ್ಷದ ಕೃಷ್ಣನಾಗಿ, ಕೋಟಿ ಚೆನ್ನಯದ ಕಿನ್ನಿದಾರುವಾಗಿ, ಶಾಂಭವಿ ವಿಲಾಸದ ಶಾಂಭವಿಯಾಗಿ ಇತ್ಯಾದಿ ಹಲವು ಪಾತ್ರಗಳಿಗೆ ಜೀವ ತುಂಬಿದವರು. ಬಹರೈನ್ ದೇಶದ ಕನ್ನಡ ಕಲಾರಂಗದ ಅಪ್ಪಟ ನೈಜ ಕಲಾಪ್ರತಿಭೆಯಾಗಿ ಮಿಂಚಿದ್ದರು.


ತನ್ನ ಗಂಡ ನಡೆಸುತ್ತಿದ್ದ ಉದ್ಯಮದೊಂದಿಗೆ ಕಲಾ ಸೇವೆ ಮಾಡುತ್ತ ಇದ್ದ ಇವರಿಗೆ ಹತ್ತು ಹಲವು ಪ್ರಶಸ್ತಿ ಸನ್ಮಾನಗಳು ದೊರೆತಿವೆ. `ಮಿಸ್ ಬಹರೈನ್’ ಆಗಿಯೂ ಮೂಡಿಬಂದಿದ್ದರು.
ಮೃತರು ತಾಯಿ ನಯನಾ ವಿ.ರೈ, ಪತಿ ಸುನಿಲ್ ಶೆಟ್ಟಿ, ಪುತ್ರ ಸಾಕ್ಷರ ಶೆಟ್ಟಿ, ಅಕ್ಕ ಸ್ವಸ್ತಿಕಾ ಆರ್.ಶೆಟ್ಟಿ ಹಾಗೂ ಕುಟುಂಬಸ್ಥರು, ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here