ಪುಣಚ : ಅಷ್ಟಬಂಧ ಬ್ರಹ್ಮಕಲಶೋತ್ಸವ -ಧಾರ್ಮಿಕ ಸಭೆ

0

ಮಕ್ಕಳಲ್ಲಿ ಭಕ್ತಿಮಾರ್ಗ ಪಸರಿಸುವ ಅವಶ್ಯಕತೆಯಿದೆ – ಮಾಣಿಲ ಶ್ರೀ
ಪ್ರಕೃತಿಯನ್ನು ಸಂರಕ್ಷಿಸೋಣ – ರವಿ ಶೆಟ್ಟಿ
ಹಿಂದುತ್ವವನ್ನು ಧೈರ್ಯದಿಂದ ಪ್ರತಿಪಾದಿಸಿ – ಕಿಶೋರ್ ಕುಮಾರ್ ಕೊಡ್ಗಿ
ಪ್ರಾರ್ಥನೆ ಮತ್ತು ನಿಷ್ಠೆಯ ಫಲ ಅಗೋಚರ – ಡಾ. ಪದ್ಮಪ್ರಸಾದ್ ಅಜಿಲ
ಹಿಂದಿನ ಆಚರಣೆ, ಇಂದಿನ ವಿಜ್ಞಾನ ಬೇರೆ ಬೇರೆಯಲ್ಲ – ಕೇಶವ ಪ್ರಸಾದ್ ಮುಳಿಯ
ಬೆಳಗಿದ ಕ್ಷೇತ್ರ ಉಳಿಯುವಂತೆ ಮಾಡಬೇಕು – ಕರುಣಾಕರ ಸುವರ್ಣ

ಪುಣಚ: ಇಲ್ಲಿನ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ಹಸಿರುವಾಣಿ ಮೆರವಣಿಗೆ ಮೂಲಕ ಮಾ. 8 ರಂದು ಚಾಲನೆ ದೊರೆಯಿತು. ಸಂಜೆ ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ದೇವಳದ ಶಾಶ್ವತ ಚಪ್ಪರವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಬಳಿಕ ನಡೆದ ಮೊದಲ ದಿನದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ’ಬ್ರಹ್ಮಕಲಶೋತ್ಸವದ ಸಂಭ್ರಮದ ಜೊತೆಗೆ ಜೀವನದ ಅರ್ಥವ್ಯವಸ್ಥೆಯ, ಸನಾತನ ಆಚಾರ, ಪರಂಪರೆ ಮತ್ತು ಮಾನವೀಯ ಮೌಲ್ಯಗಳ ಬಗ್ಗೆ ಯೋಚನೆ ಮಾಡಬೇಕಾದ ಕಾರ್ಯಕ್ರಮ ದೇಶದಾದ್ಯಂತ ನಡೆಯಬೇಕಿದೆ. ಸ್ವಾಮೀಜಿಗಳು ಸಾಮಾನ್ಯರಲ್ಲಿ ಸಾಮಾನ್ಯರಾಗುವ ಕಾಲಘಟ್ಟ ಬಂದಿದೆ. ಸನಾತನ ಧಾರ್ಮಿಕ ಚಟುವಟಿಕೆಗಳಲ್ಲಿ ನಮ್ಮ ಮಕ್ಕಳನ್ನು ಭಾಗವಹಿಸುವಂತೆ ಮಾಡಬೇಕಿದೆ. ಮಕ್ಕಳಲ್ಲಿ ಭಕ್ತಿಮಾರ್ಗವನ್ನು ಪಸರಿಸುವ ಅವಶ್ಯಕತೆಯಿದೆ ಎಂದರು. ಮಾಣಿಲ ಶ್ರೀಧಾಮದ ಅನೇಕ ಚಟುವಟಿಕೆಗಳಲ್ಲಿ ಆರ್ಥಿಕವಾಗಿ ಪುಣಚದ ಸಹಕಾರವಿದೆ ಎಂದು ಹೇಳಿದ ಶ್ರೀಗಳು ರಂಗಮೂರ್ತಿ ಮತ್ತು ಅವರ ಸಹೋದರರ ಪ್ರೋತ್ಸಾಹವನ್ನು ಸ್ಮರಿಸಿದರು.

ಪುಣಚದ ಗ್ರಾಮಸ್ಥರು ಅಭಿನಂದನಾರ್ಹರು ಎಲ್ಲರ ಜೊತೆ ಬೆರೆಯುವವರು. ಕೃಷಿಕರು, ದಾನಿಗಳು, ಉದಾರಿಗಳು, ಶ್ರೀಮಂತ ಮನಸ್ಸುಳ್ಳವರು ಪುಣಚದವರು. ಹಾಗಾಗಿ ಪುಣಚದವರನ್ನು ನಾನು ಅಭಿನಂದಿಸುತ್ತೇನೆ ಎಂದು ಶ್ರೀಗಳು ನುಡಿದರು.

ಸಭಾಧ್ಯಕ್ಷತೆ ವಹಿಸಿದ್ದ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಡಾ| ರವಿ ಶೆಟ್ಟಿ ಮೂಡಂಬೈಲು ಕತಾರ್ ರವರು ಮಾತನಾಡಿ ’ಪುಣಚ ಮಹಾಕ್ಷೇತ್ರವಾಗಿ ಬೆಳಗಲು ಕಾರಣ ಇಲ್ಲಿದ ದಕ್ಷ ನಾಯಕತ್ವ. ಪ್ರಕೃತಿಯ ಕಾಣಿಕೆಯಿಂದ ಬ್ರಹ್ಮಕಲಶೋತ್ಸವಕ್ಕೆ ಸುವಸ್ತುಗಳು ಬಂದಿವೆ. ಹಾಗಾಗಿ ಪ್ರಕೃತಿಯನ್ನು ಪೂಜಿಸುವ, ಸಂರಕ್ಷಿಸುವ ಮನೋಭಾವ ನಮ್ಮಲ್ಲಿರಬೇಕು. ಬ್ರಹ್ಮಕಲಶೋತ್ಸವದಲ್ಲಿನ ಒಗ್ಗಟ್ಟು ಇಡೀ ಗ್ರಾಮದಲ್ಲಿ ಒಗ್ಗಟ್ಟು ಮೂಡಿಸಲಿ. ಆ ಮೂಲಕ ದೇಶದ ಒಗ್ಗಟ್ಟಿನಲ್ಲಿ ಭಾಗಿಗಳಾಗೋಣ’ ಎಂದರು.

ಮುಖ್ಯ ಅತಿಥಿಯಾಗಿದ್ದ ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿಯವರು ಮಾತನಾಡಿ ’ಹಿಂದುಗಳಲ್ಲಿ ಧಾರ್ಮಿಕ ವಿಚಾರ ಒಳಗೊಳ್ಳದಿದ್ದರೆ ಹಿಂದುಗಳ ಭವಿಷ್ಯಕ್ಕೆ ಮಾರಕವಾದೀತು. ಹಿಂದು ಸಮಾಜದ ವಿಚಾರಗಳನ್ನು ನಾವು ಸಮಾಜದಲ್ಲಿ ಧೈರ್ಯದಿಂದ ಹೇಳಬೇಕು, ಮಾಡಬೇಕು. ಹಿಂದುತ್ವವನ್ನು ಧೈರ್ಯದಿಂದ ಪ್ರತಿಪಾದಿಸಬೇಕು. ಹಳೆಯ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಮಾಡಿ ಪುಣ್ಯದ ಕಾರ್ಯದಲ್ಲಿ ಇಲ್ಲಿನ ಜನರು ಭಾಗಿಗಳಾಗಿದ್ದಾರೆ’ ಎಂದರು.

ಅಳದಂಗಡಿ ಅರಮನೆಯ ಅರಸರಾದ ಡಾ. ಪದ್ಮಪ್ರಸಾದ್ ಅಜಿಲರು ಮಾತನಾಡಿ ’ಧರ್ಮದ ಬಗ್ಗೆ ಶ್ರದ್ಧೆಯಿದೆ. ಧರ್ಮಕ್ಕಾಗಿ ಜನರು ಖರ್ಚು ಮಾಡುತ್ತಿದ್ದಾರೆ. ಪ್ರಾರ್ಥನೆ ಮತ್ತು ನಿಷ್ಠೆಯ ಶಕ್ತಿ ಅಗೋಚರ. ರತ್ನತ್ರಯಗಳಾದ ಸಮ್ಯಕ್ ದರ್ಶನ, ಸಮ್ಯಕ್ ಜ್ಞಾನ ಮತ್ತು ಸಮ್ಯಕ್ ಚಾರಿತ್ರ್ಯ ವನ್ನು ನಾವು ಅಳವಡಿಸಿಕೊಂಡು ಆಚಾರವಂತಾಗಿ ಬಾಳಬೇಕು’ ಎಂದರು.

ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯರವರು ಮಾತನಾಡಿ ’ಪುರಾಣ ಪುರುಷರ ಪ್ರೇರಣೆ, ಹಿರಿಯರ ವ್ಯಕ್ತಿತ್ವಗಳು ನಮ್ಮನ್ನು ದೇವ ಕಾರ್ಯದಲ್ಲಿ ತೊಡಗಿಸಿವೆ. ನಮ್ಮ ಮಕ್ಕಳಿಗೆ ಹಿಂದಿನ ಆಚರಣೆ ಬೇರೆಯಲ್ಲ. ಇಂದಿನ ವಿಜ್ಞಾನ ಬೇರೆಯಲ್ಲ ಎಂಬುದನ್ನು ಅರ್ಥ ಮಾಡಿಸಬೇಕಿದೆ. ಮಕ್ಕಳಲ್ಲಿ ಧಾರ್ಮಿಕ ಶಿಕ್ಷಣದ ಮೂಲಕ ಹಿಂದಿನ ಆಚಾರ – ವಿಚಾರಗಳನ್ನು ಸಮಗ್ರವಾಗಿ ಹೇಳಿಕೊಡುವ ವ್ಯವಸ್ಥೆಯಾಗುತ್ತಿದೆ. 15 ಕೇಂದ್ರಗಳಲ್ಲಿ 1500 ಮಕ್ಕಳು ಪ್ರತೀ ವಾರ ಧಾರ್ಮಿಕ ಶಿಕ್ಷಣ ಪಡೆಯುತ್ತಿದ್ದಾರೆ ಎಂದು ಹೇಳಿ ದೇವಾಲಯದಲ್ಲಿ ನೂತನವಾಗಿ ಅಳವಡಿಸಲಾಗಿರುವ ಸುಂದರ ಶಾಶ್ವತ ಚಪ್ಪರ ನಿರ್ಮಾಣಕ್ಕೆ ಶ್ಲಾಸಿದರು.

ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕರುಣಾಕರ ಸುವರ್ಣರವರು ಮಾತನಾಡಿ ’ ಮಕ್ಕಳಲ್ಲಿ ಸಂಸ್ಕಾರ, ಸಂಸ್ಕೃತಿ, ಧರ್ಮದ ಬಗ್ಗೆ ತಿಳಿಸಿಕೊಟ್ಟರೆ ಮಾತ್ರ ಬ್ರಹ್ಮಕಲಶೋತ್ಸವ ಮಾಡಿದ ಸಾರ್ಥಕತೆ ನಮಗೆ ಬರಲಿದೆ. ಬೆಳಗುವ ಕ್ಷೇತ್ರವನ್ನು ಭವಿಷ್ಯದ ನೂರಾರು ವರ್ಷಗಳಿಗೆ ಇದೇ ರೀತಿಯಲ್ಲಿ ಉಳಿಯುವಂತೆ ಮಾಡುವ ಹೊಣೆಗಾರಿಕೆ ನಮ್ಮೆಲ್ಲರಲ್ಲಿದೆ. ಧಾರ್ಮಿಕ ನಂಬಿಕೆ, ಕಾರ್ಯಗಳು ಮಾತ್ರ ನಮ್ಮ ನೆಮ್ಮದಿಗೆ ಕಾರಣವಾಗುತ್ತವೆ’ ಎಂದರು.

ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ, ಶಾಸಕ ಸಂಜೀವ ಮಠಂದೂರು, ಪುಣಚ ಗ್ರಾ.ಪಂ. ಅಧ್ಯಕ್ಷ ರಾಮಕೃಷ್ಣ ಮೂಡಂಬೈಲು, ಪುಣಚ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಜನಾರ್ಧನ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಆಡಳಿತ ಸಮಿತಿ ಅಧ್ಯಕ್ಷ ಎಸ್. ಆರ್. ರಂಗಮೂರ್ತಿ ಸ್ವಾಗತಿಸಿ, ಕ್ಯಾಂಪ್ಕೊಗೂ ಪುಣಚಕ್ಕೂ ಅವಿನಾಭಾವ ಸಂಬಂಧವಿದೆ. ಕ್ಯಾಂಪ್ಕೋದ ಹುಟ್ಟು ಆಗಿರುವುದಕ್ಕೂ ಪುಣಚಕ್ಕೂ ಸಂಬಂಧವಿದೆ. ವಾರಣಾಸಿ ಸುಬ್ರಾಯ ಭಟ್ ರವರ ಶ್ರಮದ -ಲವಾಗಿ ಕ್ಯಾಂಪ್ಕೋ ಹುಟ್ಟಿ ಇಂದು ಅಡಿಕೆ ಬೆಳೆಗಾರರ ಪೋಷಕ ಸಂಸ್ಥೆಯಾಗಿ ಬೆಳೆಯುತ್ತಿದೆ ಎಂದು ಹೇಳಿದರು.

ಬ್ರಹ್ಮಕಲಶೋತ್ಸವ ಸಮಿತಿಯ ಉಪಾಧ್ಯಕ್ಷ ಮಹೇಶ್ ಶೆಟ್ಟಿ ಬೈಲುಗುತ್ತು ವಂದಿಸಿದರು.

ಶಿಕ್ಷಕ ವಿನೋದ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಹರೀಶ್ ಕುಲಾಲ್ ದಂಪತಿ ಶ್ರೀಗಳಿಗೆ ಫಲಪುಷ್ಪ ನೀಡಿ ಗೌರವಿಸಿದರು. ಶ್ರೀಧರ ಶೆಟ್ಟಿ ದೇವರಗುಂಡಿ, ಉದಯ ಕುಮಾರ್ ದಂಬೆ, ಶ್ರೀಕೃಷ್ಣಪ್ರಸಾದ್ ಕೊಪ್ಪರತೊಟ್ಟು, ಜಯಂತ ಒ., ಬಾಬು ನಾಯ್ಕ್, ಐತ್ತಪ್ಪ ನಾಯ್ಕ, ಪ್ರೀತಂ ಪೂಂಜ, ಸಂತೋಷ್ ಕಲ್ಲಾಜೆ, ತೀರ್ಥಾನಂದ ಗೌಡ, ಮಲ್ಯ ಶಂಕರನಾರಾಯಣ ಭಟ್, ಸತ್ಯಪ್ರಕಾಶ್ ಆಜೇರು, ಅಚ್ಚುತ ಮಣಿಯಾಣಿ, ಭರತ್ ದೇವಿನಗರ, ವಿಶ್ವನಾಥ ಪೆರಿಯಾಲು, ಕಿರಣ್ ಕೆಲ್ಲಾಳಿ ಅತಿಥಿಗಳನ್ನು ಗೌರವಿಸಿದರು. ಶ್ರೀಮತಿ ಜಯಲಕ್ಷ್ಮಿ ಪ್ರಾರ್ಥಿಸಿದರು. ಶ್ರೀದೇವಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಶಾಂತಿ ಮಂತ್ರ ಪಠಿಸಿದರು.

ಇಂದು ದೇವಳದಲ್ಲಿ

ಮಾ.9. ರಂದು ಬ್ರಹ್ಮಕಲಶೋತ್ಸವದ ವೈದಿಕ ಮತ್ತು ತಾಂತ್ರಿಕ ಕಾರ್ಯಕ್ರಮಗಳಿಗೆ ವಿದ್ಯುಕ್ತ ಚಾಲನೆ ದೊರೆಯಲಿದೆ. ಸಂಜೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಮತ್ತು ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಡಾ. ಧರ್ಮಪಾಲನಾಥ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ. ರಾತ್ರಿ ವಿಠಲ ನಾಯಕ್ ಮತ್ತು ಬಳಗದವರಿಂದ ’ಗೀತಾ ಸಾಹಿತ್ಯ ಸಂಭ್ರಮ’ ನಡೆಯಲಿದೆ.

LEAVE A REPLY

Please enter your comment!
Please enter your name here