ಮಾ.10ರಿಂದ ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಜಾಧ್ವನಿ ಯಾತ್ರೆ ಆರಂಭ: ಬಿ.ರಮಾನಾಥ ರೈ

0

ವಿಟ್ಲ: ಕಾಂಗ್ರೆಸ್ ಪಕ್ಷದ ವತಿಯಿಂದ ಬಂಟ್ವಾಳ ಕ್ಷೇತ್ರದಾದ್ಯಂತ ಗ್ರಾಮಗಳನ್ನು ತಲುಪುವ ಬಂಟ್ವಾಳ ಪ್ರಜಾಧ್ವನಿ ಯಾತ್ರೆ ಮಾ. 10ರಂದು ಆರಂಭಗೊಳ್ಳಲಿದ್ದು 14 ದಿನಗಳ ಕಾಲ ಕ್ಷೇತ್ರದಾದ್ಯಂತ ಸಂಚರಿಸಲಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.

ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತನ್ನ ಐದು ವರ್ಷಗಳ ಶಾಸಕತ್ವದ ಅವಧಿಯಲ್ಲಿ ಸಿದ್ಧರಾಮಯ್ಯ ಸರಕಾರ ಮೂಲಕ ಕ್ಷೇತ್ರದಾದ್ಯಂತ ಕೈಗೊಳ್ಳಲಾದ 5 ಸಾವಿರ ಕೋಟಿ ರೂಗಳ ಪ್ರಗತಿಕಾರ್ಯಗಳನ್ನು ಜನರಿಗೆ ತಿಳಿಸುವ ಕಾರ್ಯವನ್ನು ಯಾತ್ರೆ ಮೂಲಕ ಮಾಡಲಾಗುವುದು. ಒಂದೇ ದಿನ ಮೂರು ಗ್ರಾಮ ಪಂಚಾಯತ್ ಗಳನ್ನು ಒಳಗೊಂಡು ಯಾತ್ರೆಯನ್ನು ನಡೆಸಲಾಗುವುದು. ಪ್ರತಿ ದಿನ ಸಂಜೆ ಸಭೆ ನಡೆಸಲಾಗುತ್ತದೆ. ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಯಾತ್ರೆ ಆರಂಭಗೊಳ್ಳಲಿದೆ. ಪ್ರಮುಖ ಮುಖಂಡರು ಪ್ರತಿದಿನದ ಯಾತ್ರೆಯಲ್ಲಿ ಭಾಷಣಕಾರರಾಗಿ ಆಗಮಿಸಲಿದ್ದಾರೆ ಎಂದು ಹೇಳಿದರು.

ನಾನು ಮಾಡಿದ ಅಭಿವೃದ್ಧಿಯನ್ನು ಜನರಿಗೆ ತಿಳಿಸುವ ಪ್ರಯತ್ನ:
ಇನ್ನೊಬ್ಬರು ಮಾಡಿದ ಕೆಲಸವನ್ನು ನಾನು ಮಾಡಿದ್ದು ಎಂದು ಎಲ್ಲೂ ಹೇಳುವುದಿಲ್ಲ ಎಂದು ಹೇಳಿದ ಅವರು ಬಂಟ್ವಾಳದ ಒಳಚರಂಡಿ ಯೋಜನೆ ಮಂಜೂರಾತಿಯನ್ನು 2017ರ ಅಕ್ಟೋಬರ್ 10ರಂದು ನಾನು ಮಾಡಿಸಿದ್ದೇನೆ. ಇದಕ್ಕೆ ದಾಖಲಾತಿ ಇದೆ. ಆರು ವರ್ಷಗಳಾದರೂ ಕೆಲಸವಾಗಿಲ್ಲ ಎಂದು ಹೇಳಿದರು. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ತನ್ನ ಅವಧಿಯಲ್ಲಿ ಆಗಿದ್ದು ಎಂದು ನೆನಪಿಸಿದ ಅವರು, ಬಂಟ್ವಾಳ ತಾಲೂಕಿನ ಹೆಮ್ಮೆ ಎನಿಸಿದ ಪಂಜೆ ಮಂಗೇಶರಾಯರ ಸ್ಮಾರಕ ಭವನ ನಿರ್ಮಾಣಕ್ಕೆ ಎಂಟು ಕೋಟಿಗಳನ್ನು ಮಂಜೂರುಗೊಳಿಸಿ ಕೆಲಸ ಆರಂಭಿಸಲಾಗಿತ್ತು. ಇದುವರೆಗೂ ಈಗಿನ ಶಾಸಕರ ಅವಧಿಯಲ್ಲಿ ಮುಗಿಸಿಲ್ಲ ಎಂದರು.

ಈಗ ಬಂಟ್ವಾಳ ಶಾಂತಿಯುತವಾಗಿದೆ ಎನ್ನುತ್ತಾರೆ. ಹಿಂದೆ ಮತೀಯ ಹೆಸರಲ್ಲಿ ಹತ್ಯೆಯನ್ನು ಕಾಂಗ್ರೆಸ್ ಮಾಡಿರಲಿಲ್ಲ. ಹತ್ಯೆ ಆರೋಪಿಗಳೊಂದಿಗೆ ತಿರುಗಾಟ ಮಾಡಿದವರು ಯಾರು ಎಂದು ಪ್ರಶ್ನಿಸಿದ ರೈ, ಮರಳು ಮಾಫಿಯಾ, ಇಸ್ಪೀಟ್ ಕ್ಲಬ್ ನವರ ಬ್ಯಾನರ್ ಕಟೌಟ್ ಗಳು ಈಗ ರಾರಾಜಿಸುತ್ತಿವೆ ಎಂದರು.

ಯಾತ್ರೆ ಕುರಿತು ಮುಖಂಡ ಪಿಯೂಸ್ ಎಲ್. ರೋಡ್ರಿಗಸ್ ಮಾಹಿತಿ ನೀಡಿದರು. ಪ್ರಮುಖರಾದ ಚಂದ್ರಪ್ರಕಾಶ್ ಶೆಟ್ಟಿ, ಸುದೀಪ್ ಕುಮಾರ್ ಶೆಟ್ಟಿ, ಬೇಬಿ ಕುಂದರ್, ಪದ್ಮಪ್ರಸಾದ್ ಜೈನ್, ಸುದರ್ಶನ ಜೈನ್, ಮಧುಸೂಧನ ಶೆಣೈ, ಅಬ್ಬಾಸ್ ಆಲಿ ಬಿ.ಎಂ., ಮಾಯಿಲಪ್ಪ ಸಾಲಿಯಾನ್. ಸುರೇಶ್ ಜೋರ, ಚಂದ್ರಶೇಖರ ಪೂಜಾರಿ, ಚಂದ್ರಶೇಖರ ಭಂಡಾರಿ, ಸುಧಾಕರ ಶೆಣೈ ಖಂಡಿಗ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here