ಮಾ.11ರಂದು ಪುತ್ತೂರಿನಲ್ಲಿ ನಡೆಯುವ ವಿಜಯ ಸಂಕಲ್ಪ ಸಮಾವೇಶದಲ್ಲಿ 25ಸಾವಿರ ಸಂಖ್ಯೆ ನಿರೀಕ್ಷೆ – ಸಂಜೀವ ಮಠಂದೂರು

0

ಪುತ್ತೂರು: ಪೂರ್ವಾಂಚಲದಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಅದ್ಭುತವಾದ ವಿಜಯವನ್ನು ಸಾಧಿಸುವ ಮೂಲಕ ಬಿಜೆಪಿ ದೇಶದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿವಯರ ನೇತೃತ್ವದಲ್ಲಿ ಎಲ್ಲಾ ಚುನಾವಣೆಗಳನ್ನು ಗೆಲ್ಲುತ್ತದೆ ಎಂಬ ಸಂದೇಶ ಕರ್ನಾಟಕದಿಂದಲೂ ಕೂಡಾ ಉತ್ತಮ ಫಲಿತಾಂಶ ನೀಡಲಿದ್ದೇವೆ. ಹಾಗಾಗಿ ಈಗಾಗಲೇ ಕಳೆದ 6 ತಿಂಗಳಿನಿಂದ ಚುನಾವಣೆಯ ಪೂರ್ವ ಸಿದ್ಧತೆಯನ್ನು ಕೇಂದ್ರದ ನಾಯಕರು ಮತ್ತು ರಾಜ್ಯದ ನಾಯಕರ ಸೂಚನೆ ಮೇರೆಗೆ ಹತ್ತಾರು ಕಾರ್ಯಕ್ರಮ ಮಾಡಲಾಗಿದೆ. ಪ್ರತಿ ಕಾರ್ಯಕ್ರಮದಲ್ಲಿ ಒಂದೊಂದು ಸಂದೇಶ ಕೊಡುವ ಕಾರ್ಯಕ್ರಮ ಆಗಿದೆ. ಮಾ.11ರಂದು ಇಲ್ಲಿನ ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನದ ಬಳಿ ನಡೆಯುವ ವಿಜಯ ಸಂಕಲ್ಪ ಸಮಾವೇಶದಲ್ಲಿ ಸುಮಾರು 25ಸಾವಿರ ಜನರು ಸೇರುವ ನಿರೀಕ್ಷೆ ಇದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನವೆಂಬರ್ ತಿಂಗಳಲ್ಲಿ ನರೇಂದ್ರ ಮೋದಿಯವರು ರಾಜ್ಯದ ಮೊದಲ ಸಭೆಯನ್ನು ಮಂಗಳೂರಿನಲ್ಲಿ ಮಾಡಿದರು. ನಿರೀಕ್ಷೆಗಿಂತ ಮಿಗಿಲಾಗಿ ಜನ ಸೇರಿದ್ದರು. ಫೆಬ್ರವರಿ ತಿಂಗಳಲ್ಲಿ ಪುತ್ತೂರಿನಲ್ಲಿ ಅಮೀತ್ ಶಾ ಕಾರ್ಯಕ್ರಮ ನಡೆಯಿತು. ಸುಮಾರು ಸಾವಿರ ಮಂದಿ ಕಾರ್ಯಕ್ರಮಕ್ಕೆ ಸೇರಿದ್ದರು. ಇವತ್ತು ರಾಜ್ಯದ 224 ವಿಧಾನಸಭಾ ಕ್ಷೇತ್ರಗಳನ್ನು ಸಂಚರಿಸುವ ವಿಜಯ ಸಂಕಲ್ಪ ಯಾತ್ರೆ ರಾಜ್ಯದ 4 ಮೂಲೆಯಿಂದ ಹೊರಟು ಎಲ್ಲಾ ವಿಧಾನಭಾ ಕ್ಷೇತ್ರ ಸಂಪರ್ಕ ಮಾಡಿ ಮಾ.25ಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಸಮ್ಮುಖದಲ್ಲಿ ಉತ್ತರ ಕರ್ನಾಟಕದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ.

ಮಾಜಿ ಉಪಮುಖ್ಯಮಂತ್ರಿ ಈಶ್ವರಪ್ಪರವರ ನೇತೃತ್ವದಲ್ಲಿ ಸಚಿವರಾದ ಸುನಿಲ್, ಅಂಗಾರ, ಆರ್ ಅಶೋಕ್, ಪಕ್ಷದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಹಿತ ಅನೇಕ ಮಂತ್ರಿಗಳೊಂದಿಗೆ ಮಲೆಮಾದೇಶ್ವರ ಬೆಟ್ಟದಿಂದ ಹೊರಟ ಯಾತ್ರೆ ಮಾ.11ರಂದು ದಕ್ಷಿಣ ಕನ್ನಡ ಜಿಲ್ಲೆ ಪ್ರವೇಶ ಮಾಡಲಿದೆ. ಯಾತ್ರೆಯು ಮಡಿಕೇರಿಯಿಂದ ಸುಳ್ಯಕ್ಕೆ ಬಂದು ಅಲ್ಲಿ ರೋಡ್ ಶೋ ಆದ ಬಳಿಕ ಸಂಜೆ ಪುತ್ತೂರಿಗೆ ಬಂದು ಇಲ್ಲಿನ ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನದ ಬಳಿ ಸಾರ್ವಜನಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಎಲ್ಲಾ ಸಿದ್ದತೆ ಪಕ್ಷದಿಂದ ನಡೆಯುತ್ತಿದೆ. ಸುಮಾರು 25ಸಾವಿರ ಮಂದಿ ಜನರು ಸೇರುವ ನಿರೀಕ್ಷೆ ಇದೆ, ಮತದಾರರು, ಪೇಜ್ ಪ್ರಮುಖರು, ಬೂತ್ ಕಮಿಟಿ, ಪಂಚರತ್ನ ಎಲ್ಲರನ್ನು ಸೇರಿಸಿಕೊಂಡು ನಿರೀಕ್ಷೆಯ ಸಂಖ್ಯೆ ಕಡಿಮೆ ಆಗದ ರೀತಿಯಲ್ಲಿ ಭರದ ಸಿದ್ದತೆ ನಡೆಯುತ್ತಿದೆ. ಅದಕ್ಕೆ ಪೂರ್ವ ಭಾವಿಯಾಗಿ 13 ಸಮಿತಿ ಕೆಲಸ ಕಾರ್ಯ ಮಾಡುತ್ತಿದೆ. ಶಕ್ತಿ ಕೇಂದ್ರಗಳಲ್ಲಿ ಪ್ರಭಾರಿಗಳನ್ನು ನೇಮಕ ಮಾಡಲಾಗಿದೆ ಎಂದರು.

ಪೆರ್ನಾಜೆಯಲ್ಲಿ ವಿಜಯ ಸಂಕಲ್ಪ ಯಾತ್ರೆ ಸ್ವಾಗತ:
ವಿಜಯ ಸಂಕಲ್ಪ ಯಾತ್ರೆ ಪುತ್ತೂರಿಗೆ ಬರುವಾಗ ಪೆರ್ನಾಜೆಯಲ್ಲಿ ಸ್ವಾಗತ ಕಾರ್ಯಕ್ರಮ ನಡೆಯಲಿದೆ. ಕೊಳ್ತಿಗೆ, ನೆಟ್ಟಣಿಗೆಮುಡ್ನೂರು, ಮಾಡ್ನೂರು ಕಾರ್ಯಕರ್ತರು ವಿಜಯ ಸಂಕಲ್ಪ ಯಾತ್ರೆಯನ್ನು ಸ್ವಾಗತಿಸಲಿದ್ದಾರೆ. ಪುತ್ತೂರಿನಲ್ಲಿ ವಿಜಯ ಸಂಕಲ್ಪ ಯಾತ್ರೆ ಬಂದ ಬಳಿಕ ಸಂಜೆ ಗಂಟೆ 4.30ಕ್ಕೆ ಸಮಾವೇಶ ನಡೆಯಲಿದೆ. ಸಮಾವೇಶದಲ್ಲಿ ಬಿಜೆಪಿ ರಾಷ್ಟ್ರೀಯ ಸಮಿತಿಯಿಂದ ರಾಜ್ಯದ ಚುನಾವಣೆಯ ಸಹಪ್ರಭಾರಿಯಾಗಿರುವ ಅಣ್ಣಾ ಮಲೈ ಭಾಗವಹಿಸುವ ನಿರೀಕ್ಷೆ ಇದೆ. ಒಟ್ಟಿನಲ್ಲಿ ಪುತ್ತೂರಿನಲ್ಲಿ ಬಿಜೆಪಿ ಗೆಲ್ಲುವ ದೃಷ್ಟಿಯಿಂದ ಮಹತ್ವದ ಕಾರ್ಯಕ್ರಮ ಆಯೋಜನೆ ಮಾಡಿದ್ದೇವೆ ಎಂದು ಸಂಜೀವ ಮಠಂದೂರು ಹೇಳಿದರು.

ನಾವು ಬಲಿಷ್ಟ:
ಇತ್ತೀಚೆಗೆ ನಡೆದ ಪಂಚಾಯತ್ ಉಪಚುನಾವಣೆಯಲ್ಲಿ ಆರ್ಯಾಪಿನಲ್ಲಿ ಬಿಜೆಪಿ ಪರದ ಅಭ್ಯರ್ಥಿ ನಿರೀಕ್ಷೆಗೆ ಮೀರಿ ಗೆಲುವು ಸಾಧಿಸುವ ಕೆಲಸ ಆಗಿದೆ. ಯಾಕೆಂದರೆ ಕಾಂಗ್ರೆಸ್ ಅತೀ ಹೆಚ್ಚಿನ ಪ್ರಬಲವಾಗಿ ಶಕ್ತಿ ಪ್ರದರ್ಶನ ಮಾಡಿದ್ದರು. ಆದರೆ ಅವರು ಯಶಸ್ವಿಯಾಗಿಲ್ಲ. ಹಾಗಾಗಿ ಬಿಜೆಪಿ ಪುತ್ತೂರಿನಲ್ಲಿ ಬಲಿಷ್ಠವಾಗಿದೆ. ಪ್ರತಿ ಬೂತ್‌ನಲ್ಲಿ ಯಶಸ್ವಿ ಕಾರ್ಯಕರ್ತರ ತಂಡ ಇದೆ ಎಂದು ಹೇಳಿದ ಶಾಸಕರು ಅಮಿತ್ ಶಾ ಅವರು ಹೇಳಿದಂತೆ ಬೂತ್ ಜೀತೆಗಾ ತೋ ದೇಶ್ ಜೀತೆಗಾ ಎನ್ನುವ ಸಂದೇಶ ಆರ್ಯಾಪಿನಿಂದ ಆರಂಭವಾಗಿದೆ ಎಂದರು. ಈಗಾಗಲೆ ನಮ್ಮ ಕಡೆಯಿಂದ ಎಲ್ಲಾ ಬೂತ್‌ಗಳಿಗೆ ಎರಡು ಹಂತದ ಪ್ರವಾಸ ಮುಗಿಸಿ ಮೂರನೇ ಹಂತದ ಪ್ರವಾಸಕ್ಕೆ ಸಿದ್ಧತೆ ನಡೆಸಲಾಗಿದೆ. ಬಿಜೆಪಿ ಸಂಘಟಿತವಾಗಿ ಎಲ್ಲರು ಒಟ್ಟಾಗಿ ಈ ಚುನಾವಣೆಯನ್ನು ಎದುರಿಸಲಿದೆ ಎಂದು ಹೇಳಿದರು.

ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮತ್ತು ಪುತ್ತೂರಿನ ಬಿಜೆಪಿ ಪ್ರಭಾರಿಯೂ ಆಗಿರುವ ರಾಮದಾಸ್ ಬಂಟ್ವಾಳ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬೂಡಿಯಾರ್ ರಾಧಕೃಷ್ಣ ರೈ, ವಿಭಾಗದ ಪ್ರಭಾರಿ ಗೋಪಾಲಕೃಷ್ಣ ಹೇರಳೆ, ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ವಿಧಾನಸಭಾ ಕ್ಷೇತ್ರದ ಪ್ರಭಾರಿ ರಾಜೇಶ್ ಕಾವೇರಿ, ಮಾಜಿ ಪುರಸಭೆ ಅಧ್ಯಕ್ಷ ರಾಜೇಶ್ ಬನ್ನೂರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

30 ವರ್ಷದಿಂದ ಆಗದ ಕೆಲಸ ಪುತ್ತೂರಿನಲ್ಲಿ ಆಗಿದೆ:
ಬಿಜೆಪಿ ಬಂದ ಬಳಿಕ ಪುತ್ತೂರಿನಲ್ಲಿ ಅಮೂಲಾಗ್ರ ಬದಲಾವಣೆ ಆಗಿದೆ. 30 ವರ್ಷದಿಂದ ಆಗದ ಕೆಲಸ ಪುತ್ತೂರಿನಲ್ಲಿ ಆಗಿದೆ. ಗ್ರಾಮೀಣ ಭಾಗದಲ್ಲಿ ಸರ್ವಋತು ರಸ್ತೆಗಳಾಗಿವೆ. ನಗರದಲ್ಲಿ 24/7 ಕುಡಿಯುವ ನೀರಿನ ವ್ಯವಸ್ಥೆ, ಗ್ರಾಮಾಂತರದಲ್ಲಿ ಜಲಜೀವನ್ ಯೋಜನೆಯಲ್ಲಿ ಮನೆ ಮನೆಗೆ ಗಂಗೆ ಕಾರ್ಯಕ್ರಮದ ಮೂಲಕ ಮೂಲಭೂತ ಸೌಕರ್ಯ ನೀಡಲಾಗಿದೆ. ಸುಮಾರು 1200 ಮನೆ ಆರ್ಥಿಕ ವರ್ಷದಲ್ಲಿ ಕೊಡಲಾಗಿದೆ. ಜಿಲ್ಲೆಯಲ್ಲಿ ಶಾಲೆ ಅಂಗನವಾಡಿಗಳಿಗೆ ಸ್ಮಾರ್ಟ್ ಕ್ಲಾಸ್, ಕುಡಿಯುವ ನೀರು ವಿನೂತನ ಕಾರ್ಯಕ್ರಮ ಆಗಿದೆ. ಇನ್ನೂ ಯೋಜನೆ ಇದೆ. ಜನರ ಅಪೇಕ್ಷೆಗೆ ತಕ್ಕಂತೆ ಯೋಜನೆ ಮಾಡಲಿದ್ದೇವೆ. ಕೊರೋನಾದ ಸಂಕಷ್ಟ ಕಾಲದಲ್ಲಿ 2 ವರ್ಷ ಕಳೆದಿದ್ದೇವೆ. ಆ ಸಂದರ್ಭದಲ್ಲಿ ಆರೋಗ್ಯ ಮತ್ತು ಜೀವ ರಕ್ಷಣೆಗೆ ಹೆಚ್ಚು ಒತ್ತು ಕೊಟ್ಟಿದ್ದೇವೆ. ಪ್ರಾಕೃತಿಕ ವಿಕೋಪ ನೆರೆಯನ್ನು ಕೂಡಾ ಸಮರ್ಥವಾಗಿ ಎದುರಿಸಿದ್ದೇವೆ. ಕುಡಿಯುವ ನೀರಿನ ಯೋಜನೆಗೆ ಶಾಶ್ವತ ಪರಿಹಾರ, ಕಟಾರದಲ್ಲಿ 140 ಕೋಟಿಯ ಯೋಜನೆ ಡಿಪಿಆರ್ ಆಗಿದೆ, ಉಪ್ಪಿನಂಗಡಿ ಕುಮಾರಧಾರ ನೇತ್ರಾವತಿ ಸಂಗಮದಲ್ಲಿ ರೂ. 70 ಕೋಟಿಯ ಡಿಪಿಆರ್ ಆಗಿದೆ. ಆಸ್ಪತ್ರೆಯ ಯೋಜನೆ ಪ್ಲಾನ್ ಎಸ್ಟಿಮೆಟ್ ಆಗಿದೆ. ಹಿಂದೆ ಆಡಳಿತ ಮಾಡಿದವರು ಈಗ ಮೆಡಿಕಲ್ ಕಾಲೇಜಿಗೆ ಆಗ್ರಹ ಮಾಡುತ್ತಿದ್ದಾರೆ. ಹಿಂದೆ ಅವರು ಮಾಡಿಲ್ಲ ಯಾಕೆ ಎಂಬ ಪ್ರಶ್ನೆ ಜನರಲ್ಲಿ ಇದೆ. ಆದರೆ ನಾವು ಕೂಡಾ ಮೆಡಿಕಲ್ ಕಾಲೇಜಿಗೆ ಪ್ರಯತ್ನ ಮಾಡುತ್ತಾ ಇದ್ದೇವೆ. ಹಾಗಾಗಿ ನಾವು ಆಸ್ಪತ್ರೆಗೆ ಹೆಚ್ಚು ಒತ್ತು ಕೊಡುತ್ತಿದ್ದೇವೆ. ಮೆಡಿಕಲ್ ಕಾಲೇಜು ಮೊದಲು 300 ಬೆಡ್‌ನ ಆಸ್ಪತ್ರೆ ಆಗಬೇಕು ಅದು ಆದ ತಕ್ಷಣ ಮೆಡಿಕಲ್ ಕಾಲೇಜಿಗೆ ಮುಂದೆ ಹೋಗಬಹುದು ಎಂದು ಸಂಜೀವ ಮಠಂದೂರು ಹೇಳಿದರು.

LEAVE A REPLY

Please enter your comment!
Please enter your name here