ದೇವಸ್ಥಾನಗಳು ಧಾರ್ಮಿಕ ಶಿಕ್ಷಣ ಕೇಂದ್ರವಾಗಬೇಕು – ವೀಣಾ ಟಿ. ಶೆಟ್ಟಿ
ಸಮಾಜವನ್ನು ರೂಪಿಸುವವಳು ನಿಜ ಮಾತೆ – ಅಮೃತವರ್ಷಿಣಿ
ಭಾರತೀಯ ಕೌಟುಂಬಿಕ ಪದ್ದತಿ ಶಾಶ್ವತವಾಗಿರಲಿ – ಶಕುಂತಳಾ ಶೆಟ್ಟಿ
ಮಾತೃ ಸಂಗಮ ಅರ್ಥಪೂರ್ಣ ಕಾರ್ಯಕ್ರಮ – ರೂಪಲೇಖ
ಪ್ರಕೃತಿ ಸಂರಕ್ಷಣೆಯೊಂದಿಗೆ ಭೂದೇವಿಯ ಆರಾಧನೆಯಾಗಲಿ – ಅಶ್ವಿನಿ ಕೃಷ್ಣಮೂರ್ತಿ
ಶುಕ್ರವಾರದ ಪುಣ್ಯದಿನ ಮಾತೃಸಂಗಮವಾಗಿದೆ – ಮಾಲತಿ
ಪುಣಚ: ಸಮಾಜದ ಉತ್ತಮ ನಡೆಗೆ ತಾಯಿ ಪ್ರೇರಣೆ, ಸಮಾಜದ ಉನ್ನತಿಗೆ ಸ್ತ್ರೀ ಮೂಲವಾಗಿರುತ್ತಾಳೆ. ತ್ಯಾಗದ ಸಂಕೇತ, ಸೇವಾ ಮನೋಭಾವದ ಪ್ರತಿರೂಪ ಮಹಿಳೆಯಾಗಿದ್ದಾಳೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಸಾಧ್ವಿ ಶ್ರೀ ಮಾತಾನಂದಮಯೀ ನುಡಿದರು.
ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವದ ಮೂರನೇ ದಿನದ ಧಾರ್ಮಿಕ ಸಭೆ – ಮಾತೃಸಂಗಮದಲ್ಲಿ ಅವರು ಆಶೀರ್ವಚನ ನೀಡಿದರು.
ರಾಷ್ಟ್ರಪತಿ ಮತ್ತು ರಾಷ್ಟ್ರದ ಕೋಶಾಧಿಕಾರಿಯ ಸ್ಥಾನವನ್ನು ಮಹಿಳೆಯರಿಗೆ ಕೊಡುವುದರ ಮೂಲಕ ಮೋದಿಜಿಯವರು ಮಾತೆಯರಿಗೆ ಗೌರವ ಕಲ್ಪಿಸಿದ್ದಾರೆ ಎಂದ ಸಾಧ್ವಿಯವರು ಮಾತೆಯ ಪ್ರೇರಣೆಯಿಂದ ಮಾತೃಸಂಗಮ ಆಯೋಜಿಸಿರುವುದಕ್ಕೆ ಆಯೋಜಕರಿಗೆ ಅಭಿನಂದನೆ ಸಲ್ಲಿಸಿದರು.
ದೇವಸ್ಥಾನಗಳು ಧಾರ್ಮಿಕ ಶಿಕ್ಷಣ ಕೇಂದ್ರವಾಗಬೇಕು – ವೀಣಾ ಟಿ. ಶೆಟ್ಟಿ:
ಸಭಾಧ್ಯಕ್ಷತೆ ವಹಿಸಿ ಮಾತನಾಡಿದ ಮಂಗಳೂರು ಎಂಆರ್‌ಪಿಎಲ್ ನ ಪ್ರಶಿಕ್ಷಣ ಮಹಾಪ್ರಬಂಧಕ ವೀಣಾ ಟಿ. ಶೆಟ್ಟಿಯವರು ‘ಸಾಮಾಜಿಕ ವ್ಯವಸ್ಥೆಗಳು ಕೆಡುತ್ತಿರುವುದಕ್ಕೆ ಇಂದು ಮಹಿಳೆಯ ನಿಜ ಚೈತನ್ಯ ಸದ್ಬಳಕೆಯಾಗದೇ ಇರುವುದು ಕಾರಣವಾಗಿದೆ. ಸಮಾಜ ರೂಪಿಸಲು ಪುರುಷರು ಕೊಡುವ ಅವಕಾಶವನ್ನು ಸ್ವೀಕರಿಸಲು ನಾವು ತಯಾರಾಗಿದ್ದೇವೆಯಾ ? ಎಂಬುದನ್ನು ನಾವು ವಿಮರ್ಶಿಸಿಕೊಳ್ಳಬೇಕಾಗಿದೆ. ಮುಂದಿನ ಪೀಳಿಗೆಯ ಇಂದಿನ ಮಕ್ಕಳನ್ನು ಸಂಸ್ಕಾರಭರಿತವಾಗಿ ರೂಪಿಸುವ ಮಹತ್ತರ ಹೊಣೆ ಮಹಿಳೆಯರಲ್ಲಿದೆ. ಅದಕ್ಕಾಗಿ ಧಾರ್ಮಿಕ ಶಿಕ್ಷಣ ಕೊಡುವ ವ್ಯವಸ್ಥೆ ದೇವಸ್ಥಾನಗಳಲ್ಲಿ ಆಗಬೇಕು’ ಎಂದರು.
ಸಮಾಜವನ್ನು ರೂಪಿಸುವವಳು ನಿಜ ಮಾತೆ – ಅಮೃತವರ್ಷಿಣಿ:
ಧಾರ್ಮಿಕ ಉಪನ್ಯಾಸ ನೀಡಿದ ಶಿಕ್ಷಣ ಚಿಂತಕಿ, ಉಪನ್ಯಾಸಕಿ ಅಮೃತವರ್ಷಿಣಿಯವರು ಮಾತನಾಡಿ ‘ಹೆಣ್ಮಕ್ಕಳಿಗೆ ಸರಿಯಾದ ಶಿಕ್ಷಣ ಇಲ್ಲ. ಚಾರಿತ್ರ್ಯ ರೂಪಿಸದ ಡಿಗ್ರಿಗಳು ಶಿಕ್ಷಣವಾಗಲ್ಲ. ಬಂಧನದಿಂದ ಬಿಡಿಸತಕ್ಕಂತಹ ವಿಚಾರವನ್ನು ಶಿಕ್ಷಣ ಎನ್ನುತ್ತಾರೆ. ಸಮಾನತೆಯ ದಾರಿ ಕ್ರಮಿಸುವ ಧಾವಂತದಲ್ಲಿ ಹೆಣ್ಣು ತಪ್ಪು ದಾರಿ ತುಳಿಯುವ ಪರಿಸ್ಥಿತಿಯೂ ಇದೆ. ವ್ಯಕ್ತಿತ್ವವನ್ನು, ಸಮಾಜವನ್ನು ರೂಪಿಸುವವಳು ಮಾತೆಯಾಗಿರುತ್ತಾಳೆ. ವೇದಗಳಲ್ಲಿ ರೂಪಿತವಾದ ಮಾತೃತ್ವವನ್ನು ನಿಜವಾದ ಅರ್ಥದಲ್ಲಿ ಸ್ವೀಕರಿಸಿ ಪಾಲಿಸೋಣ’ ಎಂದರು.
ಭಾರತೀಯ ಕೌಟುಂಬಿಕ ಪದ್ದತಿ ಶಾಶ್ವತವಾಗಿರಲಿ – ಶಕುಂತಳಾ ಶೆಟ್ಟಿ:
ಮುಖ್ಯ ಅತಿಥಿಯಾಗಿದ್ದ ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿಯವರು ಮಾತನಾಡಿ ‘ಮಹಿಳೆಯರು ಮಹಿಳೆಯರಾಗಿ ಇದ್ದೇವಾ ಎಂದು ನಮ್ಮನ್ನು ಪ್ರಶ್ನಿಸಬೇಕಾಗಿದೆ. ದೈವನರ್ತನವಿರುವ ಕಾಂತಾರ ಸಿನಿಮಾ ನೋಡಲು ನಾವು ವಹಿಸುವ ಆಸಕ್ತಿ ನಮ್ಮ ತರವಾಡಿನ ದೈವಾರಾಧನೆಯಲ್ಲಿ ಪಾಲ್ಗೊಳ್ಳುವಲ್ಲಿ ಇಲ್ಲ. ಲವ್ ಮಾಡಿ ಓಡಿಹೋಗಿ ತುಂಡರಿಸಿ ಫ್ರಿಡ್ಜ್‌ಲ್ಲಿ ಇಡುವ ಪರಿಸ್ಥಿತಿ, ಗಂಡನನ್ನೇ ಕೊಲ್ಲುವ ಘಟನೆಗಳು ನಮ್ಮ ಕಣ್ಣೆದುರು ನಡೆಯುತ್ತವೆಯಾದರೆ ಸಂಸ್ಕಾರ ಎಲ್ಲಿದೆ ? ಎಂದು ಪ್ರಶ್ನಿಸಬೇಕಾಗಿದೆ. ಸುಸಂಸ್ಕೃತ ಸಮಾಜ, ಭಾರತೀಯ ಕೌಟುಂಬಿಕ ಪದ್ದತಿಯನ್ನು ಶಾಶ್ವತವಾಗಿ ಉಳಿಯುವಂತೆ ಮಾಡಲು ತಾಯಿ ಮಹಿಷಮರ್ದಿನಿ ಅನುಗ್ರಹಿಸಲಿ’ ಎಂದರು.
ಮಾತೃ ಸಂಗಮ ಅರ್ಥಪೂರ್ಣ ಕಾರ್ಯಕ್ರಮ – ರೂಪಲೇಖ:
ವಿವೇಕಾನಂದ ವಿದ್ಯಾವರ್ಧಕ ಸಂಘದ ಜೊತೆ ಕಾರ್ಯದರ್ಶಿ ಶ್ರೀಮತಿ ರೂಪಲೇಖ ರವರು ಮಾತನಾಡಿ ‘ಪರಕೀಯರ ದಾಳಿಯಾದರೂ ಹಿಂದು ಧರ್ಮದ ಸಂಸ್ಕೃತಿ, ಪರಂಪರೆ ನಾಶಗೊಂಡಿಲ್ಲ. ವಿಶೇಷ ಶಕ್ತಿ ನಮ್ಮನ್ನು ಕಾಪಾಡಿಕೊಂಡು ಬರುತ್ತಿದೆ. ಇಂದಿನ ಕಾಲಘಟ್ಟದಲ್ಲಿ ಮಾತೃಸಂಗಮ ಕಾರ್ಯಕ್ರಮ ಅರ್ಥಪೂರ್ಣವಾಗಿದೆ’ ಎಂದರು.
ಪ್ರಕೃತಿ ಸಂರಕ್ಷಣೆಯೊಂದಿಗೆ ಭೂದೇವಿಯ ಆರಾಧನೆಯಾಗಲಿ – ಅಶ್ವಿನಿ ಕೃಷ್ಣಮೂರ್ತಿ:
ವಾರಣಾಸಿ ಪ್ರತಿಷ್ಠಾನದ ನಿರ್ದೇಶಕಿ ಅಶ್ವಿನಿ ಕೃಷ್ಣಮೂರ್ತಿಯವರು ಮಾತನಾಡಿ ‘ಅನ್ನದಾತನಿಂದ ಧರ್ಮ ನಡೆಯುತ್ತಿದೆ. ಕೃಷಿ ನಡೆಯದಿದ್ದರೆ ಯಾವ ದೇಶವೂ ನಡೆಯಲು ಸಾಧ್ಯವಿಲ್ಲ. ಸ್ವಾವಲಂಬಿ ಕೃಷಿಯೊಂದಿಗೆ ಪ್ರಕೃತಿಯನ್ನು ಸಂರಕ್ಷಿಸಿಕೊಂಡು ಕಣ್ಣಿಗೆ ಕಾಣುವ ಭೂಮಿ ತಾಯಿಯನ್ನು ಆರಾಧಿಸಿಕೊಂಡು ಬರೋಣ’ ಎಂದರು.
ಶುಕ್ರವಾರದ ಪುಣ್ಯದಿನ ಮಾತೃಸಂಗಮವಾಗಿದೆ – ಮಾಲತಿ:
ಎಸ್‌ಕೆಡಿಆರ್‌ಪಿ ಅಳಿಕೆ ವಲಯದ ಮೇಲ್ವಿಚಾರಕಿ ಮಾಲತಿ ಯವರು ಮಾತನಾಡಿ ‘ವ್ಯವಸ್ಥಿತ ಕಾರ್ಯಕ್ರಮವಾಗಿದೆ. ನಮ್ಮ ಮಕ್ಕಳನ್ನು ಇದೇ ಧರ್ಮದ ದಾರಿಯಲ್ಲಿ ಕೊಂಡುಹೋಗುವ ಜವಾಬ್ದಾರಿ ನಮ್ಮೆಲ್ಲರಲ್ಲಿದೆ. ಬ್ರಹ್ಮಕಲಶೋತ್ಸವದ ಸಂದೇಶ ಇಲ್ಲಿಗೆ ಕೊನೆಗೊಳ್ಳಬಾರದು. ಶುಕ್ರವಾರದ ಈ ಪುಣ್ಯದಿನವೇ ಮಾತೃಸಂಗಮ ಆಗಿರುವುದು ದೇವಿಯ ಅನುಗ್ರಹವಾಗಿದೆ’ ಎಂದರು.
ಪುಣಚ ಗ್ರಾ.ಪಂ. ಉಪಾಧ್ಯಕ್ಷೆ ಪ್ರತಿಭಾ ಜಗನ್ನಾಥ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಪೂರ್ವ ಗುಂಡ್ಯಡ್ಕ ಪ್ರಾರ್ಥಿಸಿದರು. ಮಹಿಳಾ ಸಮಿತಿಯ ಅಧ್ಯಕ್ಷೆ ನವೀನಲತಾ ಶಾಸ್ತ್ರಿ ಮಣಿಲಾ ಸ್ವಾಗತಿಸಿ, ಮಮತಾ ಶೆಟ್ಟಿ ದೇವರಗುಂಡಿ ವಂದಿಸಿದರು. ಶ್ರೀಧರ ಶೆಟ್ಟಿ ಪ್ರತಿಭಾ ಶೆಟ್ಟಿ ದಂಪತಿ ಸಾಧ್ವಿಯವರಿಗೆ ಫಲಫುಷ್ಪ ನೀಡಿ ಗೌರವಿಸಿದರು.
ರಜನಿ, ಯಮುನಾ ಎಸ್. ಗೌಡ, ಪವಿತ್ರ ಅಮರೇಶ್, ಪ್ರೀತಿಕಾ ಶೆಟ್ಟಿ ಬೈಲುಗುತ್ತು, ಶಶಿಕಲಾ ಹರ್ಷ, ನಳಿನಿ ಸುವರ್ಣ, ಶ್ರೀಲತಾ ಸಾಲ್ಯಾನ್, ವಿಜಯ ಪುಂಡರೀಕ ರಾವ್, ಭವಾನಿ ಗಣೇಶ್, ರಶ್ಮಿ ರಂಗಮೂರ್ತಿ, ಉಷಾ ರಾಮಕೃಷ್ಣ, ಸುಂದರಿ, ಕಮಲಾ ಶ್ರೀನಿವಾಸ ಗೌಡ, ಸತ್ಯ ಪಿ. ಶೆಟ್ಟಿ, ಬೇಬಿ ಪಡಿಕಲ್ಲು ಅತಿಥಿಗಳನ್ನು ಗೌರವಿಸಿದರು. ಗಂಗಮ್ಮ ಟಿ. ಮತ್ತು ವಾಣಿಶ್ರೀ ಕಾರ್ಯಕ್ರಮ ನಿರೂಪಿಸಿದರು.
ಇಂದು ದೇವಳದಲ್ಲಿ
ಬೆಳಿಗ್ಗೆ ಹಾಗೂ ಸಂಜೆ ದೇವಳದಲ್ಲಿ ವೈದಿಕ ಮತ್ತು ತಾಂತ್ರಿಕ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ ನಡೆಯಲಿರುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಧರ್ಮಸ್ಥಳ ನಿತ್ಯಾನಂದ ನಗರ ಶ್ರೀರಾಮ ಕ್ಷೇತ್ರದ ಮಠಾಧೀಶ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಬೆಳಿಗ್ಗೆ ಯಕ್ಷಶ್ರೀ ಹವ್ಯಾಸಿ ಬಳಗ ರಾಮಕುಂಜ ತಂಡದಿಂದ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ರಾತ್ರಿ ‘ಅಮ್ಮ ಕಲಾವಿದೆರ್ ಕುಡ್ಲ’ ಇವರಿಂದ ‘ಪರಕೆ ಪೂವಕ್ಕೆ’ ತುಳು ನಾಟಕ ನಡೆಯಲಿದೆ.