ಪಾಣಾಜೆ: ಪಾಣಾಜೆ ಸಿಎ ಬ್ಯಾಂಕ್ ಸಿಇಒ ಲಕ್ಷ್ಮಣ ನಾಯ್ಕ್ ರವರು ಸರಳತೆ, ಸಜ್ಜನಿಕೆ, ಪ್ರಾಮಾಣಿಕತೆಯ ಸಾಕಾರಮೂರ್ತಿಯಾಗಿದ್ದವರು. ಅವರು ಸಂಘ ಮತ್ತು ಸಮಾಜಕ್ಕೆ ಇನ್ನೂ ಬೇಕಿತ್ತು ಎಂಬ ಮಾರ್ಮಿಕ ನುಡಿಗಳು ಅವರ ಸಾರ್ವಜನಿಕ ಶ್ರದ್ಧಾಂಜಲಿ ಸಭೆಯಲ್ಲಿ ವ್ಯಕ್ತವಾಯಿತು. ಪಾಣಾಜೆ ಸಿಎ ಬ್ಯಾಂಕ್ ವತಿಯಿಂದ ಬ್ಯಾಂಕಿನ ಸಭಾಂಗಣದಲ್ಲಿ ಲಕ್ಷ್ಮಣ ನಾಯ್ಕರವರ ಸಾರ್ವಜನಿಕ ಶ್ರದ್ಧಾಂಜಲಿ ಸಭೆಯು ಮಾ. 10 ರಂದು ಸಂಜೆ ನಡೆಯಿತು.
ಸಹಕಾರಿ ಸಂಘದ ಅಧ್ಯಕ್ಷ ಪದ್ಮನಾಭ ಬೋರ್ಕರ್ ರವರು ಮಾತನಾಡಿ ‘ಅವರ ಸೇವಾವಧಿಯಲ್ಲಿ ಸಹಕಾರ ಸಂಘವು ಉತ್ತಮ ಅಭಿವೃದ್ಧಿ ಕಂಡಿದೆ. ತನ್ನ ಮನೆಯಂತೆ ಬ್ಯಾಂಕ್ ನ್ನು ಕಂಡಿದ್ದರು. ಬೆಳಿಗ್ಗೆ 8 ಗಂಟೆಗೆ ಓಪನ್ ಮಾಡಿ ರಾತ್ರಿ 8 ಗಂಟೆಯವರೆಗೂ ತೆರೆದು ಸ್ಥಳೀಯರಿಗೆ ಉತ್ತಮ ಸೇವೆ ಕೊಡುತ್ತಿದ್ದರು. ಮೃದು ಸ್ವಭಾವದ ವ್ಯಕ್ತಿ ಯಾವತ್ತೂ ನನಗೆ ಎದುರು ಮಾತಾಡಿದವರಲ್ಲ’ ಎಂದರು.
ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ರವರು ಮಾತನಾಡಿ ’25 ವರ್ಷಗಳಿಂದ ಅವರ ಒಡನಾಡಿ ನಾನು. ಪ್ರಾಮಾಣಿಕತೆಗೆ ಇನ್ನೊಂದು ಹೆಸರು ಅವರು. ಅವರ ಮರಣವನ್ನು ನಾವು ನಂಬಲಿಲ್ಲ. ಅವರ ಕುಟುಂಬ ದುಃಖಭರಿತವಾಗಿದೆ. ನಾವೆಲ್ಲಾ ಅವರ ಕುಟುಂಬದವರೊಡನೆ ಇರಬೇಕು. ಕುಟುಂಬಕ್ಕೆ ಆಧಾರವಾಗಿರುವುದಕ್ಕೆ ಸಹಕಾರಿ ಸಂಘಕ್ಕೆ ಅಭಾರಿಯಾಗಿದ್ದೇನೆ. ಊರಿನವರು, ಅವರ ಒಡನಾಡಿಗಳಾದ ನಾವೆಲ್ಲಾ ಸಹಕಾರ ನೀಡಿ ಅವರ ಕುಟುಂಬದೊಂದಿಗೆ ಸ್ಪಂದಿಸೋಣ ಎಂದರು.
ಎಸ್‌ಸಿಡಿಸಿಸಿ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟುರವರು ಮಾತನಾಡಿ ‘ಪ್ರೀತಿ ವಿಶ್ವಾಸದಿಂದ ಸೇವೆ ಸಲ್ಲಿಸಿದವರು. ಸಂಘದ ಸದಸ್ಯರಿಗೆ ಸಾಲ ಇನ್ನಿತರ ಸೌಲಭ್ಯ ನೀಡುವಲ್ಲಿ ಬಹಳ ಶೀಘ್ರವಾಗಿ ಸ್ಪಂದಿಸುತ್ತಿದ್ದರು. ಇಲ್ಲಿನ ಅಧ್ಯಕ್ಷರ ಜೊತೆ ಅಭಿವೃದ್ಧಿಗೆ ಸರ್ವರೀತಿಯಲ್ಲಿ ತೊಡಗಿಸಿಕೊಂಡವರು. ಜನಾನುರಾಗಿಯಾಗಿದ್ದರೆಂಬುದಕ್ಕೆ ಅವರು ಮರಣದ ವಾರ್ತೆ ಕೇಳಿ ಜನರು ಸೇರಿರುವುದೇ ಉತ್ತಮ ನಿದರ್ಶನ ಎಂದು ಹೇಳಿ ಅವರ ಪತ್ನಿಗೆ ಬ್ಯಾಂಕಿನಲ್ಲಿ ಉದ್ಯೋಗ ನೀಡುವ ನಿರ್ಧಾರ ತೆಗೆದುಕೊಂಡ ಸಂಘವನ್ನು ಶ್ಲಾಘಿಸಿದರು.
ಸಹಕಾರಿ ಸಂಘದ ಮಾಜಿ ನಿರ್ದೇಶಕ ಮೂಸೆಕುಂಞಿಯವರು ಮಾತನಾಡಿ ‘ಸರಳತೆ ಮತ್ತು ಸೌಮ್ಯತೆಯ ಸ್ವಭಾವದಿಂದ ಕೂಡಿದ್ದ ಲಕ್ಷ್ಮಣ ನಾಯ್ಕರ ಅಗಲುವಿಕೆ ಸಂಘಕ್ಕೆ ಮಾತ್ರವಲ್ಲದೇ ಇಡೀ ಪಾಣಾಜೆಗೆ ನಷ್ಟವಾಗಿದೆ’ ಎಂದರು.
ದ.ಕ. ಹಾಲು ಒಕ್ಕೂಟದ ನಿರ್ದೇಶಕ ನಾರಾಯಣ ಪ್ರಕಾಶ್ ನೆಲ್ಲಿತ್ತಿಮಾರ್ ರವರು ಮಾತನಾಡಿ ‘ಲಕ್ಷ್ಮಣರು ವೈಯುಕ್ತಿಕ ಸಾಧನೆಯಿಂದ ಮೇಲೇರಿದವರು. ಯಾವುದೇ ಹಿನ್ನೆಲೆಯಿಲ್ಲದೇ ಎತ್ತರದ ಸ್ಥಾನ ಏರಿದವರು. ಎಳೆಯ ವಯಸ್ಸಿನಿಂದಲೇ ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಂಡು ಬಂದಿದ್ದರು. ಸಹಕಾರಿ ರಂಗದ ಹೆಸರನ್ನು ಎತ್ತರಕ್ಕೆ ಏರಿಸಿದ ಧೀಮಂತ ಹುಡುಗ. ಅವರ ಕಾರ್ಯವೈಖರಿಯಲ್ಲಿದ್ದ ಸಂಘವನ್ನು ನಾವೆಲ್ಲಾ ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವುದೇ ಅವರಿಗೆ ಸಲ್ಲಿಸುವ ಶ್ರದ್ಧಾಂಜಲಿ’ ಎಂದರು.
ಮರಾಠಿ ಸಂಘದ ಅಧ್ಯಕ್ಷ ರಾಮಚಂದ್ರ ನಾಯ್ಕ್ ರವರು ಮಾತನಾಡಿ ‘ತನ್ನ ಜೀವನದ ನಿಜ ಸುಖವನ್ನು ಅನುಭವಿಸುವ ಮೊದಲೇ ಅವರು ದೇವರ ಪಾದ ಸೇರಿದ್ದಾರೆ. ಅವರ ಜೀವನದ ಕಷ್ಟಗಳನ್ನು ಅವರ ಕುಟುಂಬದೊಂದಿಗೆ ನಾವೆಲ್ಲಾ ಇದ್ದು ಎದುರಿಸಬೇಕಾಗಿದೆ’ ಎಂದರು.
ರಣಮಂಗಲ ಶ್ರೀ ಸುಬ್ರಹ್ಮಣ್ಯ ದೇವಾಲಯದ ಆಡಳಿತ ಮೊಕ್ತೇಸರ ಶ್ರೀಕೃಷ್ಣ ಬೋಳಿಲ್ಲಾಯರವರು ಮಾತನಾಡಿ ‘ಸಹಕಾರಿ ರಂಗದಲ್ಲಿ ಜನರ ಸೇವೆ ಮಾಡಿ ನಿಜವಾಗಿಯೂ ಜನರಿಗೆ ಸಹಕಾರಿಯಾಗಿ ಹತ್ತಿರವಾಗಿದ್ದವರು. ಅವರ ಆತ್ಮಕ್ಕೆ ಶ್ರೀ ಸುಬ್ರಹ್ಮಣ್ಯ ದೇವರು, ಈರ್ವೆರ್ ಉಳ್ಳಾಕುಲು, ವ್ಯಾಘ್ರಚಾಮುಂಡಿ ದೈವಗಳು ಚಿರಶಾಂತಿ ಪ್ರಾಪ್ತಿಸಲಿ’ ಎಂದರು.
ಪಾಣಾಜೆ ಗ್ರಾ.ಪಂ. ಅಧ್ಯಕ್ಷೆ ಭಾರತೀ ಭಟ್ ರವರು ಮಾತನಾಡಿ ‘ಜನಾನುರಾಗಿಯಾಗಿ, ಕಿರಿಯರೂ, ಹಿರಿಯರೂ, ಬಡವರೂ ಶ್ರೀಮಂತರೂ ಅವರನ್ನು ಉತ್ತಮ ಮನಸ್ಸುಳ್ಳ ವ್ಯಕ್ತಿ ಎಂದು ಹೇಳುವ ರೀತಿಯಲ್ಲಿ ಬದುಕಿದವರು. ವೃತ್ತಿ ಮತ್ತು ಪ್ರವೃತ್ತಿಯಲ್ಲಿ ಸೌಮ್ಯತೆಯ ಸ್ವಭಾವ ಅವರಲ್ಲಿತ್ತು’ ಎಂದರು.
ಲಕ್ಷ್ಮಣ ನಾಯ್ಕ್ ರವರ ಸಹಪಾಠಿ ದೈಹಿಕ ಶಿಕ್ಷಣ ಶಿಕ್ಷಕ ಸುಧಾಕರ ರೈ ಗಿಳಿಯಾಲುರವರು ಮಾತನಾಡಿ ‘ಕಾಲೇಜು ದಿನಗಳನ್ನು ಖುಷಿಯಿಂದ ಸಂಭ್ರಮಿಸಿದವರು ನಾವು. ಅವರ ಕೈ ಬರಹ ಬಹಳ ಅಂದವಾಗಿತ್ತು. ಬ್ಯಾಂಕಿನ ಬಗೆಗೆ ಅತ್ಯಂತ ಕಾಳಜಿ ವಹಿಸಿದವರು’ ಎಂದರು.
ಅಬೂಬಕ್ಕರ್ ಆರ್ಲಪದವುರವರು ಮಾತನಾಡಿ ‘ಮ್ಯಾನೇಜರ್ ಕುರ್ಚಿಯಲ್ಲಿ ಕುಳಿತಾಗ ಅವರಲ್ಲಿ ಯಾವುದೇ ಗತ್ತು ಅಹಂ ತೋರಿಸಿದವರಲ್ಲ. ಸಾಲ ವಸೂಲಾತಿಯಲ್ಲಿಯೂ ಅವರು ಸ್ವಭಾವ ವೈಶಿಷ್ಟ್ಯದಿಂದ ಕೂಡಿತ್ತು. ಅಪಾರ ಅಭಿಮಾನಿ ಬಳಗವನ್ನು ಅವರು ಹೊಂದಿದ್ದಾರೆ’ ಎಂದರು.
ಪಾಣಾಜೆ ಗ್ರಾ.ಪಂ. ಉಪಾಧ್ಯಕ್ಷ ಅಬೂಬಕ್ಕರ್ ರವರು ಮಾತನಾಡಿ ‘ಬಹಳ ಆತ್ಮೀಯರಾಗಿದ್ದವರು. ಅವಳಿ ಸಹೋದರರು ರಾಮಾಯಣದ ರಾಮಲಕ್ಷ್ಮಣರಂತೆ ಇದ್ದವರು. ಅವರ ಅಕಾಲಿಕ ಮರಣ ನಮಗೆ ಕೊಟ್ಟಿರುವ ನೋವು ಸಹಿಸಲು ಅಸಾಧ್ಯ’ ಎಂದರು.
ನಿವೃತ್ತ ಐಆರ್‌ಎಸ್ ಅಧಿಕಾರಿ ರಾಮ್‌ಕುಮಾರ್ ಮಾತನಾಡಿ ಅವರ ಮರಣದಿಂದಾಗಿ ಎಲ್ಲರ ಮನೆಯಲ್ಲಿಯೂ ನೋವು ಇದೆ ಎನ್ನುವುದರಿಂದ ಅವರು ಜನರಿಗೆ ಎಷ್ಟು ಆಪ್ತರಾಗಿದ್ದರೆಂಬುದು ತಿಳಿಯಲ್ಪಡುತ್ತದೆ’ ಎಂದರು.
ಪ್ರಿಯದರ್ಶಿನಿ ವಿದ್ಯಾಸಂಸ್ಥೆಯ ಮುಖ್ಯಗುರು ರಾಜೇಶ್ ನೆಲ್ಲಿತ್ತಡ್ಕ ನಿರೂಪಿಸಿದರು. ಸಭೆಯ ಬಳಿಕ ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಪಾಣಾಜೆ ಗ್ರಾಮಸ್ಥರು, ಲಕ್ಷ್ಮಣ ನಾಯ್ಕ್ ರವರ ಅಭಿಮಾನಿಗಳು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ಅವರ ಸಹೋದರ ರಾಮ ನಾಯ್ಕ್, ಪಾಣಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಡಾ. ಅಖಿಲೇಶ್ ಪಾಣಾಜೆ, ನಿರ್ದೇಶಕರುಗಳು, ಪಾಣಾಜೆ ಗ್ರಾ.ಪಂ. ಸದಸ್ಯರುಗಳು ಸೇರಿದಂತೆ ಊರಿನ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ಸಾರ್ವಜನಿಕರು ಉಪಸ್ಥಿತರಿದ್ದರು.
ಸಭೆಯ ಬಳಿಕ ಸಂಘದ ಆಡಳಿತ ಮಂಡಳಿ ಮತ್ತು ಸಿಬಂದಿ ವರ್ಗದವರು ಲಕ್ಷ್ಮಣ ನಾಯ್ಕ್‌ರವರ ಮನೆಗೆ ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿದರು.
ಪಾಣಾಜೆ ಸಹಕಾರಿ ಸಂಘದ ಕಾರ್ಯಕ್ಕೆ ಶ್ಲಾಘನೆ
ಮೃತ ಲಕ್ಷ್ಮಣ ನಾಯ್ಕ್ ರವರ ಕುಟುಂಬಕ್ಕೆ ಆಧಾರವಾಗಿ ಸ್ಪಂದಿಸಿರುವ ಪಾಣಾಜೆ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ತುರ್ತು ಸಭೆ ಸೇರಿ ಅವರ ಪತ್ನಿ ಅನುರಾಧರವರಿಗೆ ಬ್ಯಾಂಕ್‌ನಲ್ಲಿ ಉದ್ಯೋಗ ಕಲ್ಪಿಸಿದೆ. ಇಂತಹ ಪರಿಸ್ಥಿತಿಗಳಲ್ಲಿ ಶೀಘ್ರ ನಿರ್ಧಾರ ತೆಗೆದುಕೊಂಡಿರುವುದು ಜಿಲ್ಲೆಯ ಸಹಕಾರ ಸಂಘಗಳಲ್ಲಿ ಅದ್ವಿತೀಯವಾಗಿದೆ. ಈ ಮೂಲಕ ಸಮಾಜಕ್ಕೆ ಸಂಘವು ಉತ್ತಮ ಸಂದೇಶ ನೀಡಿದೆ ಎಂಬ ಶ್ಲಾಘನೆ ಸಭೆಯಲ್ಲಿ ವ್ಯಕ್ತವಾಯಿತು.