





ನಾಳೆ(ಮಾ.13) ಕುಂಬ್ರದಲ್ಲಿ ಒಳಮೊಗ್ರು ಗ್ರಾಪಂನ ನೂತನ ಕಛೇರಿ ಕಟ್ಟಡ, ರಾಜೀವ್ ಗಾಂಧಿ ಸೇವಾ ಕೇಂದ್ರ ಉದ್ಘಾಟನೆ


ಪುತ್ತೂರು: ಕುಂಬ್ರವನ್ನು ಅಂದಿನ ಕಾಲದಲ್ಲಿ ಬಾಂದಲಪ್ಪು ಎಂದು ಕರೆಯುತ್ತಿದ್ದರು. ಪ್ರಸ್ತುತ ಇರುವ ಪಂಚಾಯತ್ ಕಛೇರಿ ಅಂದಿನ ಕಾಲದಲ್ಲಿ ಸಮಾಜ ಮಂದಿರವಾಗಿತ್ತು. ಇದರಲ್ಲಿ ಸಭೆ, ಸಮಾರಂಭ, ಮದುವೆ ಇತ್ಯಾದಿ ಸಣ್ಣಪುಟ್ಟ ಕಾರ್ಯಕ್ರಮಗಳಲ್ಲದೆ ಭಜನೆ ಕೂಡ ನಡೆಯುತ್ತಿತ್ತು. ಈ ಕಟ್ಟಡಕ್ಕೆ ಸುಮಾರು 80 ವರ್ಷಗಳ ಇತಿಹಾಸವಿದೆ ಎನ್ನಲಾಗಿದೆ. ಪಂಚಾಯತ್‌ಗೆ ಸರಿಯಾದ ಕಟ್ಟಡ ಇರದೇ ಇದ್ದ ಸಂದರ್ಭದಲ್ಲಿ ಈ ಕಟ್ಟಡದಲ್ಲಿ ಪಂಚಾಯತ್ ಕಛೇರಿ ಆರಂಭ ಮಾಡಲಾಯಿತು. ಆ ಬಳಿಕ ಹಲವು ಬಾರಿ ಈ ಕಟ್ಟಡ ನವೀಕರಣಗೊಂಡಿತ್ತು. ಅರಿಯಡ್ಕ ವೆಂಕಪ್ಪ ರೈ ಯವರು ಒಳಮೊಗ್ರು ವಿಲೇಜ್ ಪಂಚಾಯತ್‌ನ ಮೊದಲ ಚೆಯರ್‌ಮೆನ್ ಆಗಿದ್ದರು. ಅವರ ಕಾಲದಲ್ಲೇ ಈ ಕಟ್ಟಡದ ನವೀಕರಣವಾಯಿತು ಎನ್ನಲಾಗಿದೆ. 1987 ರಲ್ಲಿ ಮಂಡಲ ಪಂಚಾಯತಿಯ ಕೇಂದ್ರ ಸ್ಥಾನವಾಗಿತ್ತು. ಈ ಮಂಡಲ ಪಂಚಾಯತಿಗೆ ಒಳಮೊಗ್ರು, ಕೆದಂಬಾಡಿ, ಕೆಯ್ಯೂರು ಮತ್ತು ಅರಿಯಡ್ಕ ಗ್ರಾಮಗಳು ಸೇರಿತ್ತು. ಒಳಮೊಗ್ರು ಗ್ರಾಮ ಪಂಚಾಯತ್‌ಗೆ ನೂತನ ಕಟ್ಟಡ ಬೇಕು ಎನ್ನುವುದು ಗ್ರಾಮಸ್ಥರ ಹಲವು ವರ್ಷಗಳ ಕನಸಾಗಿತ್ತು. ಇಂತಹ ಕನಸು ನನಸಾಗುವ ಮೂಲಕ ಗ್ರಾಮಸ್ಥರಲ್ಲಿ ಸಂತಸ ತುಂಬಿದೆ. ಒಳಮೊಗ್ರು ಗ್ರಾಪಂನ ನೂತನ ಕಛೇರಿ ಕಟ್ಟಡ, ರಾಜೀವ್ ಗಾಂಧಿ ಸೇವಾ ಕೇಂದ್ರ ಮಾ.13 ರಂದು ಲೋಕಾರ್ಪಣೆಗೊಳ್ಳುತ್ತಿದೆ.





ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ, ತಾಲೂಕು ಪಂಚಾಯತ್ ಪುತ್ತೂರು, ಒಳಮೊಗ್ರು ಗ್ರಾಮ ಪಂಚಾಯತ್ ಸಹಯೋಗದಲ್ಲಿ ಕುಂಬ್ರ ಕೆಪಿಎಸ್ ಕಾಲೇಜು ಪಕ್ಕದಲ್ಲಿ ನಿರ್ಮಾಣಗೊಂಡ ರಾಜೀವ್ ಗಾಂಧಿ ಸೇವಾ ಕೇಂದ್ರ ಹಾಗೂ ನೂತನ ಗ್ರಾಮ ಪಂಚಾಯತ್ ಕಛೇರಿಯ ಉದ್ಘಾಟನೆ ಮಾ.೧೩ ರಂದು ಬೆಳಿಗ್ಗೆ ನಡೆಯಲಿದೆ. ರಾಜೀವ್ ಗಾಂಧಿ ಸೇವಾ ಕೇಂದ್ರ ಹಾಗೂ ನೂತನ ಗ್ರಾಮ ಪಂಚಾಯತ್ ಕಛೇರಿಯನ್ನು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ, ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ವಿ.ಸುನಿಲ್ ಕುಮಾರ್ ಉದ್ಘಾಟಿಸಲಿದ್ದಾರೆ. ಗ್ರಾಮ ಆಡಳಿತ ಅಧಿಕಾರಿ ಕಛೇರಿಯನ್ನು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಲಿದ್ದು, ಕುಂಬ್ರ ಶಾಖಾ ಅಂಚೆ ಕಛೇರಿಯನ್ನು ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಲಿದ್ದಾರೆ. ಶಾಸಕ ಸಂಜೀವ ಮಠಂದೂರುರವರು ಸಭಾಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅಭ್ಯಾಗತರಾಗಿ ರಾಜ್ಯಸಭಾ ಸಂಸದ ಡಾ| ಡಿ. ವೀರೇಂದ್ರ ಹೆಗ್ಗಡೆ, ಶಾಸಕರಾದ ಜಿ. ಎಂ. ಫಾರೂಕ್, ವಿಧಾನ ಪರೀಷತ್ ಶಾಸಕರಾದ ಕೆ. ಹರೀಶ್ ಕುಮಾರ್, ಆಯನೂರು ಮಂಜುನಾಥ್, ಎಸ್. ಎಲ್. ಭೋಜೇಗೌಡ, ಕೆ. ಪ್ರತಾಪ್‌ಸಿಂಹ ನಾಯಕ್, ಡಾ| ಮಂಜುನಾಥ ಭಂಡಾರಿ, ಕರ್ನಾಟಕ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ| ಕುಮಾರ, ಪುತ್ತೂರು ತಾಪಂ ಕಾರ್ಯನಿರ್ವಾಹಕಾಧಿಕಾರಿ ನವೀನ್ ಭಂಡಾರಿ ಹೆಚ್, ಪಂಚಾಯತ್‌ರಾಜ್ ಇಂಜಿನಿಯರಿಂಗ್ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಭರತ್, ಮಾಜಿ ಓಂಬುಡ್ಸ್‌ಮನ್, ಸ್ವಚ್ಛತಾ ರಾಯಭಾರಿ ಶೀನ ಶೆಟ್ಟ, ಜನ ಶಿಕ್ಷಣ ಟ್ರಸ್ಟ್ ಮುಡಿಪು ನಿರ್ದೇಶಕ ಕೃಷ್ಣ ಮೂಲ್ಯ ಸಹಿತ ಹಲವು ಮಂದಿ ಭಾಗವಹಿಸಲಿದ್ದಾರೆ. ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಉಪಾಧ್ಯಕ್ಷೆ ಸುಂದರಿ, ಅಭಿವೃದ್ಧಿ ಅಧಿಕಾರಿ ಅವಿನಾಶ್ ಬಿ.ಆರ್, ಕಾರ್ಯದರ್ಶಿ ಜಯಂತಿ ಹಾಗೂ ಸರ್ವ ಸದಸ್ಯರುಗಳು, ಸಿಬ್ಬಂದಿ ವರ್ಗದ ಪ್ರಕಟಣೆ ತಿಳಿಸಿದೆ.
ಎಲ್ಲಿಂದ ಅನುದಾನ :
ಇಂತಹ ಸುಂದರವಾದ ಕಟ್ಟಡವು ಬಹುತೇಕ ಉದ್ಯೋಗ ಖಾತರಿ ಯೋಜನೆಯ ಅನುದಾನದಲ್ಲಿ ನಿರ್ಮಾಣವಾಗಿದೆ. ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ರೂ.೨೮ ಲಕ್ಷದ ೬೦ ಸಾವಿರ ರೂಪಾಯಿಗಳನ್ನು ಬಳಸಿಕೊಳ್ಳಲಾಗಿದೆ. ಉಳಿದಂತೆ ೨೦೨೨-೨೩ ನೇ ಸಾಲಿನ ೧೫ ನೇ ಹಣಕಾಸು ಅನುದಾನದಡಿ ರೂ.೪.೭೦ ಲಕ್ಷ, ೨೦೨೧-೨೨ ನೇ ಸಾಲಿನ ಗ್ರಾಮ ಪಂಚಾಯತ್ ಸ್ವಂತ ನಿಧಿಯಡಿ ರೂ.೨ ಲಕ್ಷದ ೨೪ ಸಾವಿರ, ೨೦೨೨-೨೩ ನೇ ಸಾಲಿನ ಗ್ರಾಮ ಪಂಚಾಯತ್ ಸ್ವಂತ ನಿಧಿಯಡಿ ರೂ. ೪ ಲಕ್ಷದ ೭೦ ಸಾವಿರ ಹಾಗೂ ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ರೂ.೧೦ ಲಕ್ಷ ರೂಪಾಯಿಗಳ ಅನುದಾನ ಲಭಿಸಿದೆ. ಪಂಚಾಯತ್ ಕಟ್ಟಡಕ್ಕೆ ಧ್ವಜ ಕಟ್ಟೆ ಮತ್ತು ಸ್ತಂಭವನ್ನು ಕುಂಬ್ರ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದಿಂದ ಕೊಡುಗೆಯಾಗಿ ನೀಡಲಾಗಿದೆ.
` ಗ್ರಾಮಸ್ಥರಿಗೆ ಒಂದೇ ಸೂರಿನಡಿಯಲ್ಲಿ ಎಲ್ಲಾ ವ್ಯವಸ್ಥೆ ಆಗಬೇಕು ಎಂಬ ನಿಟ್ಟಿನಲ್ಲಿ ಪ್ರತಿ ಗ್ರಾಮ ಪಂಚಾಯತ್‌ಗಳಿಗೂ ಸರಕಾರ ವಿಶೇಷ ಅನುದಾನಗಳನ್ನು ನೀಡುತ್ತಿದೆ. ಒಳಮೊಗ್ರು ಗ್ರಾಪಂನ ನೂತನ ಕಛೇರಿ ಕಟ್ಟಡ ಎಲ್ಲರಿಗೂ ಪ್ರಯೋಜನವಾಗಲಿದೆ. ಇದು ಗ್ರಾಮದ ಅಭಿವೃದ್ಧಿಗೆ ಪೂರಕವಾಗಿದೆ. ಗ್ರಾಪಂ ಅಭಿವೃದ್ಧಿ ಅಧಿಕಾರಿಯವರ ಹೆಚ್ಚಿನ ಮುತುವರ್ಜಿ, ಅಭಿವೃದ್ಧಿಗೆ ಪೂರಕವಾದ ಆಲೋಚನೆ, ಗ್ರಾಮಸ್ಥರ ಬೆಂಬಲದಿಂದಾಗಿ ೮೦ ವರ್ಷಗಳ ಹಿಂದಿನ ಬೇಡಿಕೆ ಈ ಬಾರಿ ಈಡೇರಿದೆ. ಇದು ಎಲ್ಲರಿಗೂ ಸಂತೋಷದ ವಿಷಯ. ಈ ಕಟ್ಟಡವು ತಾಲೂಕಿನ ಎಲ್ಲಾ ಗ್ರಾಮಗಳಿಗೆ ಒಂದು ಮಾದರಿಯಾಗಿದೆ. ಗ್ರಾಮಸ್ಥರಿಗೆ ಈ ಕಟ್ಟಡವು ಕಂದಾಯ ಮತ್ತು ಪಂಚಾಯತ್ ವ್ಯವಹಾರಗಳಿಗೆ ಸಹಾಯವಾಗಲಿದೆ. ಸರಕಾರದ ವಿವಿಧ ಯೋಜನೆಗಳು, ಸವಲತ್ತುಗಳು, ಗ್ರಾಮಸ್ಥರಿಗೆ ತಲುಪುವಂತೆ ಆಗಲು ಗ್ರಾಮಸ್ಥರಿಗೆ ಮಾಹಿತಿ ನೀಡುವ ಕೆಲಸ ಗ್ರಾಪಂನಿಂದ ಆಗಬೇಕು. ಒಳಮೊಗ್ರುನ ಈ ಕಟ್ಟಡವು ಗ್ರಾಮ ಸೌಧದಂತೆ ಕಾರ್ಯ ನಿರ್ವಹಿಸಲಿದೆ. ಅಭಿವೃದ್ಧಿ ಅಧಿಕಾರಿ ಮತ್ತು ಆಡಳಿತ ಮಂಡಳಿಗೆ ನನ್ನ ಅಭಿನಂದನೆಗಳು.’
ಸಂಜೀವ ಮಠಂದೂರು, ಶಾಸಕರು ಪುತ್ತೂರು
ಜಿಲ್ಲೆಯಲ್ಲೆ ಹೊಸ ವಿನ್ಯಾಸದ ಕಟ್ಟಡ
ಒಳಮೊಗ್ರು ಗ್ರಾಮ ಪಂಚಾಯತ್‌ನ ನೂತನ ಕಛೇರಿ ಕಟ್ಟಡ ಜಿಲ್ಲೆಯಲ್ಲೇ ಹೊಸ ನೋಟವನ್ನು ಹೊಂದಿದೆ. ವಿಧಾನಸೌಧದ ಮಾದರಿಯಲ್ಲಿ ನಿರ್ಮಿಸಿದಂತಹ ಇಂತಹ ಕಟ್ಟಡ ಜಿಲ್ಲೆಯಲ್ಲೇ ಇಲ್ಲ ಎನ್ನಬಹುದು. ಹೊಸ ಮಾದರಿಯಲ್ಲಿ ಕಟ್ಟಡವನ್ನು ನಿರ್ಮಿಸಲಾಗಿದ್ದು ಕಛೇರಿ, ಅಧ್ಯಕ್ಷ, ಉಪಾಧ್ಯಕ್ಷ, ಅಭಿವೃದ್ಧಿ ಅಧಿಕಾರಿಗಳ ಪ್ರತ್ಯೇಕ ಕಛೇರಿ, ಗ್ರಾಮಸ್ಥರಿಗೆ ಆರಾಮವಾಗಿ ಕುಳಿತುಕೊಳ್ಳುವ ವ್ಯವಸ್ಥೆ, ಕಡತಗಳನ್ನು ಇಡಲು ಸ್ಟಾಕ್‌ರೂಮ್ ಸೇರಿದಂತೆ ಎಲ್ಲಾ ವ್ಯವಸ್ಥೆಗಳು ಇದರಲ್ಲಿದೆ. ಸಿಬ್ಬಂದಿಗಳಿಗೆ ಪ್ರತ್ಯೇಕ ಶೌಚಾಲಯ, ಸ್ನಾನಗೃಹ ಎಲ್ಲವೂ ಇದರಲ್ಲಿದೆ. ಒಂದು ವಿಶಿಷ್ಠ ಕಲ್ಪನೆಯಲ್ಲಿ ಮೂಡಿಬಂದ ಇಡೀ ಜಿಲ್ಲೆಗೆ ಮಾದರಿಯಾಗಬಲ್ಲಂತಹ ಕಟ್ಟಡ ಇದಾಗಿದೆ.ಇದೇ ಕಟ್ಟಡದ ಮೇಲ್ಬಾಗದಲ್ಲಿ ಮೀಟಿಂಗ್ ಹಾಲ್, ಗ್ರಂಥಾಲಯ, ಸಭಾಂಗಣ ನಿರ್ಮಾಣವಾಗಲಿದೆ. ಆ ಮೂಲಕ ಒಂದೇ ಸೂರಿನಡಿ ಎಲ್ಲವೂ ಗ್ರಾಮಸ್ಥರಿಗೆ ಲಭ್ಯವಾಗಲಿದೆ. ಇಂತಹ ಸುಂದರವಾದ ಕಟ್ಟಡ ನಿರ್ಮಾಣದ ಹಿಂದೆ ಶ್ರಮಿಸಿದವರಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅವಿನಾಶ್ ಬಿ.ಆರ್.ರವರ ಕಾರ್ಯವನ್ನು ಶ್ಲಾಸಲೇಬೇಕಾಗಿದೆ. ಇವರ ಕಾರ್ಯಕ್ಕೆ ಬೆನ್ನೆಲುಬಾಗಿ ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಹಾಗೂ ಸರ್ವ ಸದಸ್ಯರು, ಸಿಬ್ಬಂದಿ ವರ್ಗ, ಅಧಿಕಾರಿ ವರ್ಗ, ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಬೆಂಬಲ ನೀಡಿರುವುದು ಇಂತಹ ಸುಂದರ ಕಟ್ಟಡ ನಿರ್ಮಾಣಕ್ಕೆ ನಾಂದಿಯಾಗಿದೆ.









