ಆಲಂಕಾರು:ಡಿಸಿ ಆದೇಶದಂತೆ ಅನಧಿಕೃತ ಬ್ಯಾನರ್‌ಗಳ ತೆರವು:`ಮತದಾನ ಬಹಿಷ್ಕಾರ’ದ ಬ್ಯಾನರ್ ತೆರವಿಗೆ ನಾಗರಿಕರ ತಡೆ

0

ಆಲಂಕಾರು: ಪೇಟೆಯಲ್ಲಿದ್ದ ಅನಧಿಕೃತ ಬ್ಯಾನರ್,ಬಂಟಿಂಗ್ಸ್,ಜಾಹೀರಾತು ಫಲಕಗಳನ್ನು ಜಿಲ್ಲಾಧಿಕಾರಿಯವರ ಆದೇಶದಂತೆ ತೆರವುಗೊಳಿಸುವ ಸಂದರ್ಭ ಚುನಾವಣಾ ಬಹಿಷ್ಕಾರದ ಬ್ಯಾನರೊಂದನ್ನೂ ತೆರವುಗೊಳಿಸಲು ಮುಂದಾದಾಗ ನಾಗರಿಕರು ಆಕ್ಷೇಪಿಸಿ, ನಮ್ಮ ಬೇಡಿಕೆಯಾಗಿರುವ ರಸ್ತೆ ದುರಸ್ತಿಯಾದ ನಂತರವೇ ನಾವು ಬ್ಯಾನರ್ ತೆರವುಗೊಳಿಸುವುದಾಗಿ ಸ್ಪಷ್ಟಪಡಿಸಿ ಬ್ಯಾನರ್ ತೆರವಿಗೆ ತಡೆಯೊಡ್ಡಿದ ಘಟನೆ ನಡೆದಿದೆ.


ಆಲಂಕಾರು ಗ್ರಾ.ಪಂ ವ್ಯಾಪ್ತಿಯಲ್ಲಿ ಪಂಚಾಯತ್ ಅಭಿವೃದ್ದಿ ಅಧಿಕಾರಿ ಜಗನ್ನಾಥ ಶೆಟ್ಟಿ ಹಾಗು ಪಂಚಾಯತ್ ಸಿಬ್ಬಂದಿಗಳ ನೇತೃತ್ವದಲ್ಲಿ ಆಲಂಕಾರು ಪೇಟೆಯಲ್ಲಿ ಬ್ಯಾನರ್‌ಗಳ ತೆರವುಗೊಳಿಸುವ ಕಾರ್ಯ ನಡೆಯಿತು.ಈ ಸಂದರ್ಭ ಬುಡೇರಿಯಾ ಕ್ರಾಸ್‌ನಲ್ಲಿ ಹಾಕಲಾಗಿದ್ದ `ಮತದಾನ ಬಹಿಷ್ಕಾರ’ದ ಬ್ಯಾನರೊಂದನ್ನೂ ತೆರವುಗೊಳಿಸಲು ಮುಂದಾದಾಗ ಈ ಘಟನೆ ನಡೆಯಿತು.ರಸ್ತೆ ದುರಸ್ತಿ ಬೇಡಿಕೆ ಮುಂದಿಟ್ಟು, ಮತದಾನ ಬಹಿಷ್ಕಾರದ ಬ್ಯಾನರ್ ಅಳವಡಿಸಿದ್ದ ಕಂದ್ಲಾಜೆ, ನಗ್ರಿ, ಶರವೂರಿನ ನಾಗರಿಕರು ಬ್ಯಾನರ್ ತೆರವುಗೊಳಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರಲ್ಲದೆ, ನಾವು ಹಾಕಿರುವ ಬ್ಯಾನರ್ ತೆರವುಗೊಳಿಸಿದರೆ ಪ್ರತಿಭಟನೆ ಹಾಗು ಮನೆ ಮನೆಯಲ್ಲಿ ಮತದಾನ ಬಹಿಷ್ಕಾರದ ಬ್ಯಾನರ್ ಅಳವಡಿಸುವುದಾಗಿ ಆಕ್ರೋಶ ವ್ಯಕ್ತಪಡಿಸಿದರು.ಆಲಂಕಾರು ಗ್ರಾಮದ ಶರವೂರು ನಗ್ರಿ ಕಂದ್ಲಾಜೆ ನಿವಾಸಿಗಳಾದ ನಾವು,ಬುಡೇರಿಯಾ ಕ್ರಾಸ್ ಕಂದ್ಲಾಜೆ, ನಗ್ರಿ ಶರವೂರು ರಸ್ತೆಯು ನಡೆದಾಡಲು ಆಗದಂತೆ ತೀರಾ ಹದಗೆಟ್ಟಿರುವುದರಿಂದ ಈ ರಸ್ತೆ ಡಾಮರೀಕರಣ ಅಥವಾ ಕಾಂಕ್ರಿಟೀಕರಣ ಆಗುವವರೆಗೆ ಮತದಾನ ಮಾಡಲು ಬಹಿಷ್ಕರಿಸಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ ನಾಗರಿಕರು ಬ್ಯಾನರ್ ತೆರವುಗೊಳಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.


ಸಚಿವ ಎಸ್.ಅಂಗಾರರವರು ಸುಳ್ಯ ವಿಧಾನ ಸಭಾ ಕ್ಷೇತ್ರಕ್ಕೆ ೨೦೨೨-೨೩ನೇ ಸಾಲಿನಲ್ಲಿ ನೀಡಿದ ಮಳೆ ಹಾನಿ ಅನುದಾನದಲ್ಲಿ ಈ ರಸ್ತೆ ದುರಸ್ತಿಗಾಗಿ ನಿರ್ಮಿತಿ ಕೇಂದ್ರ ಮಂಗಳೂರಿನ ಯೋಜನಾ ನಿರ್ದೇಶಕರಿಗೆ ೨೯.೮೫ ಲಕ್ಷ ರೂ.ಅನುದಾನ ಬಿಡುಗಡೆ ಮಾಡಲಾಗಿದೆ.ಮಾ.೧೫ರಂದು ಈ ರಸ್ತೆಗೆ ಸಂಬಂಧಪಟ್ಟ ಇಂಜಿನಿಯರ್ ಅಗಮಿಸಿ ಎಸ್ಟಿಮೇಟ್ ಮಾಡಿದ್ದಾರೆ ಎಂದು ತಿಳಿದು ಬಂದಿರುವುದಾಗಿ ಆಲಂಕಾರು ಗ್ರಾ.ಪಂ ಅಧ್ಯಕ್ಷ ಸದಾನಂದ ಆಚಾರ್ಯ ಅವರು ಮಾಹಿತಿ ನೀಡಿದರು.ಆದರೂ ಪ್ರತಿಭಟನಾಕಾರ ನಾಗರಿಕರು ಸ್ಪಂದನೆ ನೀಡದೇ, ರಸ್ತೆ ದುರಸ್ತಿಗೊಂಡ ನಂತರವೇ ನಾವು ಬ್ಯಾನರ್ ತೆರೆವುಗೊಳಿಸುವುದಾಗಿ ಸ್ಪಷ್ಟಪಡಿಸಿದರು.ಬಳಿಕ ಗ್ರಾ.ಪಂ.ಅಧಿಕಾರಿ,ಸಿಬ್ಬಂದಿಗಳು ಅಲ್ಲಿಂದ ತೆರಳಿದರು ಎಂದು ವರದಿಯಾಗಿದೆ.

LEAVE A REPLY

Please enter your comment!
Please enter your name here