9 ವರ್ಷದಲ್ಲಿ ಬಿಜೆಪಿ ಏನು ಮಾಡಿದೆ ಎಂದು ಪ್ರತಿಯೊಬ್ಬರೂ ಪ್ರಶ್ನಿಸಬೇಕು:ಬಿ.ಕೆ.ಹರಿಪ್ರಸಾದ್
ಕಾಂಗ್ರೆಸ್‌ನಿಂದ ಪ್ರತಿ ಕುಟುಂಬಕ್ಕೆ ವರ್ಷಕ್ಕೆ 55,200ರೂ.ನೆರವು-ಡಾ|ಮಂಜುನಾಥ ಭಂಡಾರಿ
ಪುತ್ತೂರು:ಭಾರತ ವಿಶ್ವದಲ್ಲೇ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿದೆ,ಬಲಿಷ್ಠ ಸಂವಿಧಾನವನ್ನು ಹೊಂದಿದ ರಾಷ್ಟ್ರ ಎಂಬ ಗೌರವವನ್ನು ಪಡೆದಿದೆ, ಸ್ವಾತಂತ್ರ್ಯದ ಬಳಿಕ ದೇಶವನ್ನು ಕಟ್ಟಿ ಬೆಳೆಸಿದ್ದು ಕಾಂಗ್ರೆಸ್ ಪಕ್ಷವಾಗಿದೆ.ಆದರೆ ಕಾಂಗ್ರೆಸ್ 70 ವರ್ಷದಲ್ಲಿ ಏನೂ ಮಾಡಿಲ್ಲ ಎಂದು ಹೇಳುವ ಬಿಜೆಪಿ ಕಳೆದ 9 ವರ್ಷಗಳಿಂದ ದೇಶದಲ್ಲಿ ಏನು ಮಾಡಿದೆ ಎಂಬುದನ್ನು ಪ್ರತಿಯೊಬ್ಬ ನಾಗರಿಕ ಪ್ರಶ್ನಿಸಬೇಕು ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿದರು.
ಕುಂಬ್ರದಲ್ಲಿ ಮಾ.15 ರಂದು ನಡೆದ ಕರಾವಳಿ ಪ್ರಜಾಧ್ವನಿ ಯಾತ್ರೆಯಲ್ಲಿ ಅವರು ಮುಖ್ಯ ಭಾಷಣ ಮಾಡಿದರು.70 ವರ್ಷ ದೇಶವನ್ನಾಳಿದ ಕಾಂಗ್ರೆಸ್ ಏನೂ ಇಲ್ಲದ ಭಾರತದಲ್ಲಿ ಎಲ್ಲವನ್ನೂ ಮಾಡಿತ್ತು.ಜನ ನೆಮ್ಮದಿಯಿಂದ ಬದುಕುತ್ತಿದ್ದರು.ಒಪ್ಪೊತ್ತಿನ ಊಟಕ್ಕೂ ಕಷ್ಟಪಡುವ ಸನ್ನಿವೇಶ ಇರಲಿಲ್ಲ.ಆದರೆ ಕಳೆದ 9 ವರ್ಷಗಳಿಂದ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಮೋದಿ ನೇತೃತ್ವದ ಬಿಜೆಪಿ ಸರಕಾರ, ದೇಶದ ಜನತೆಗೆ ಕಾಂಗ್ರೆಸ್ ಮಾಡಿಟ್ಟ ಎಲ್ಲವನ್ನೂ ಮಾರಾಟ ಮಾಡುತ್ತಿದೆ ಎಂದು ಹೇಳಿದ ಹರಿಪ್ರಸಾದ್, ದೇಶದ ಕಟ್ಟಕಡೆಯ ವ್ಯಕ್ತಿ ಇಂದು ದೇಶದ ಗದ್ದುಗೆ ಏರಿದ್ದರೆ ಅದಕ್ಕೆ ಕಾಂಗ್ರೆಸ್ ಕಾರಣವಾಗಿದೆ ಎಂದರು.ಚುನಾವಣೆ ಸಂದರ್ಭದಲ್ಲಿ ಜನರ ಭಾವನೆಯನ್ನು ಕೆರಳಿಸಿ ಅಧಿಕಾರದ ಗದ್ದುಗೆ ಏರುವ ಬಿಜೆಪಿ ಅಧಿಕಾರ ಸಿಕ್ಕ ಬಳಿಕ ಜನ ಸಾಮಾನ್ಯರನ್ನು ಮರೆಯುತ್ತಿದೆ.ಅಚ್ಚೇದಿನ್ ಆಡಳಿತ ನೀಡುವುದಾಗಿ ಹೇಳಿದ್ದ ಮೋದಿ ಗ್ಯಾಸ್ ಬೆಲೆ ಏರಿಕೆ , ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಜನ ಸಾಮಾನ್ಯರ ಬದುಕನ್ನು ಮೂರಾಬಟ್ಟೆ ಮಾಡಿದೆ ಇದೇನಾ ಅಚ್ಚೇದಿನ್ ಎಂದು ಅವರು ಪ್ರಶ್ನಿಸಿದರು.ಕಾಂಗ್ರೆಸ್ ಅಭಿವೃದ್ಧಿ ಮಾಡಿ ಮತ ಕೇಳಿತ್ತು ಆದರೆ ಕರಾವಳಿಯಲ್ಲಿ ಬಿಜೆಪಿ ಧರ್ಮಗಳ ನಡುವೆ ಒಡಕು ಮೂಡಿಸಿ ಜನರ ಭಾವನೆಯನ್ನು ಕೆರಳಿಸಿ ಅಭಿವೃದ್ದಿ ವಿಚಾರವನ್ನು ಮೂಲೆಗುಂಪು ಮಾಡಿತ್ತು.ಪ್ರತಿಯೊಬ್ಬ ನಾಗರಿಕ ಆಲೋಚನೆ ಮಾಡಬೇಕಿದೆ.ಬಿಜೆಪಿಗೆ ಅಧಿಕಾರ ಮಾತ್ರ ಬೇಕಿದೆ ದೇಶದ, ರಾಜ್ಯದ ಅಭಿವೃದ್ದಿ ಬೇಕಾಗಿಲ್ಲ ಎಂದು ಹೇಳಿದ ಹರಿಪ್ರಸಾದ್, ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದರೆ ಪ್ರತಿಯೊಬ್ಬರಿಗೂ ನ್ಯಾಯ ಕೊಡಿಸುತ್ತೇವೆ,ದೇಶದ ಗತ ವೈಭವವನ್ನು ಮರಳಿಕೊಡುತ್ತೇವೆ ಎಂದು ಹೇಳಿದರು.
ಕಾಂಗ್ರೆಸ್‌ನಿಂದ ಪ್ರತೀ ಕುಟುಂಬಕ್ಕೆ 55,200 ಹಣಕಾಸಿನ ನೆರವು:ಡಾ|ಮಂಜುನಾಥ ಭಂಡಾರಿ:
ವಿಧಾನ ಪರಿಷತ್ ಶಾಸಕ ಡಾ|ಮಂಜುನಾಥ್ ಭಂಡಾರಿ ಮಾತನಾಡಿ, ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವನ್ನು ಅಧಿಕಾರಕ್ಕೆ ತಂದರೆ ಜಾತಿ,ಮತ,ಧರ್ಮ ಭೇದವಿಲ್ಲದೆ ಎಲ್ಲಾ ಕುಟುಂಬಗಳಿಗೂ ವರ್ಷವೊಂದಕ್ಕೆ ೫೫,೨೦೦ ರೂ.ಗಳ ಹಣಕಾಸಿನ ನೆರವು ನೀಡುತ್ತೇವೆ.ಇದು ಕಾಂಗ್ರೆಸ್ ಗ್ಯಾರಂಟಿ ಯೋಜನೆಯಾಗಿದೆ ಎಂದು ಹೇಳಿದರು.ಪ್ರತೀ ಕುಟುಂಬದ ಗೃಹಿಣಿಗೆ ತಿಂಗಳಿಗೆ ೨೦೦೦ ರೂ., ೨೦೦ ಯೂನಿಟ್ ತನಕ ವಿದ್ಯುತ್ ಉಚಿತ, ೧೦ ಕೆ.ಜಿ ಅಕ್ಕಿ, ಮಂಗಳೂರಿನಲ್ಲಿ ಐಟಿ ಪಾರ್ಕ್, ಮಹಿಳೆಯರಿಗೆ ಉದ್ಯೋಗ ಸೃಷ್ಟಿಗೆ ಜವುಳಿ ಉದ್ಯಮ ಆರಂಭ, ಪ್ರತಿ ಜಾತಿಗೂ ಅಭಿವೃದ್ದಿ ನಿಗಮ ಸ್ಥಾಪನೆ, ಪ್ರತಿ ನಿಗಮಕ್ಕೂ ೨೫೦ ಕೋಟಿ ರೂ.ಅನುದಾನ, ಕರಾವಳಿ ಅಭಿವೃದ್ದಿ ಪ್ರಾಧಿಕಾರವನ್ನು ಮೇಲ್ದರ್ಜೆಗೇರಿಸಿ ಪ್ರಾಧಿಕಾರಕ್ಕೆ ೨೫೦೦ ಕೋಟಿ ರೂ.ಅನುದಾನವನ್ನು ಒದಗಿಸುವ ಮೂಲಕ ರಾಜ್ಯದಲ್ಲಿ, ಕರಾವಳಿಯಲ್ಲಿ ಉತ್ತಮ ಸರಕಾರವನ್ನು ನೀಡಲಿದ್ದೇವೆ.ವಿದ್ಯಾವಂತ ನಿರುದ್ಯೋಗಿ ಯುವಕರಿಗೆ ಉದ್ಯೋಗವನ್ನು ನೀಡಲು ಕಾಂಗ್ರೆಸ್ ಸದಾ ಬದ್ದವಾಗಿದೆ ಎಂದು ಹೇಳಿದರು.
ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ, ಕಾಂಗ್ರೆಸ್ ಮುಖಂಡರಾದ ಅಶೋಕ್ ಕುಮಾರ್ ರೈ ಕೋಡಿಂಬಾಡಿ,ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ, ಮಾಜಿ ಜಿ.ಪಂ.ಉಪಾಧ್ಯಕ್ಷ ಎಂ.ಎಸ್.ಮಹಮ್ಮದ್,ಕೆಪಿಸಿಸಿ ಪ್ರ.ಕಾರ್ಯದರ್ಶಿ ಕೃಪಾ ಅಮರ್ ಆಳ್ವ, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಂ ಕೆ.ಬಿ., ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್, ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಎಚ್.ಮಹಮ್ಮದಾಲಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಮುಖಂಡೆ ಅಸ್ಮಾ ಗಟ್ಟಮನೆ ಮೊದಲಾದವರು ಉಪಸ್ಥಿತರಿದ್ದರು.ಕೆಪಿಸಿಸಿ ಸದಸ್ಯ ಸತೀಶ್ ಕುಮಾರ್ ಕೆಡೆಂಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈ ಸ್ವಾಗತಿಸಿ, ಜಿಲ್ಲಾ ಕಾಂಗ್ರೆಸ್ ವಕ್ತಾರ ಮಹಮ್ಮದ್ ಬಡಗನ್ನೂರು ಕಾರ್ಯಕ್ರಮ ನಿರ್ವಹಿಸಿದರು.ಒಳಮೊಗ್ರು ವಲಯ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಪೂಜಾರಿ ವಂದಿಸಿದರು. ಸೇವಾ ದಳದ ಜಿಲ್ಲಾ ಅಧ್ಯಕ್ಷ ಜೋಕಿಂ ಡಿಸೋಜಾ ಪ್ರಾರ್ಥಿಸಿದರು.
ಪೆಟ್ರೋಲ್,ಬೆಂಕಿ ಪೊಟ್ಟಣ ಹಿಡಿದು ಬಿಜೆಪಿ ತಿರುಗಾಡುತ್ತಿದೆ
ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಬಿಜೆಪಿ ಪೆಟ್ರೋಲ್ ಮತ್ತು ಬೆಂಕಿ ಪೊಟ್ಟಣವನ್ನು ಹಿಡಿದು ತಿರುಗಾಡುತ್ತಿದೆ.ಜನರ ಭಾವನೆಯನ್ನು ಕೆರಳಿಸಿ, ಧರ್ಮದ ವಿಚಾರದಲ್ಲಿ ಸಮಾಜವನ್ನು ಒಡೆದು ಕೋಮು ಗಲಭೆ ನಡೆಸಿ ಆ ಮೂಲಕ ಮತ ವಿಭಜಿಸಿ ಅಧಿಕಾರ ಪಡೆಯಲು ಹಾತೊರೆಯುತ್ತಿದೆ.ಕಳೆದ ೯ ವರ್ಷಗಳಿಂದ ಬಿಜೆಪಿ ಏನು ಮಾಡಿದೆ ಎಂದು ಜಿಲ್ಲೆಯ ಬುದ್ದಿವಂತ ಜನರಿಗೆ ಗೊತ್ತಾಗಿದೆ.ದೇಶದಲ್ಲಿ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಾತ್ರ ನೆಮ್ಮದಿಯ ಜೀವನ ಎಂಬುದು ಜನರಿಗೆ ಅರಿವಾಗುತ್ತಿದೆ.ಬಿಜೆಪಿಯವರ ಧರ್ಮ ರಾಜಕಾರಣಕ್ಕೆ ಯುವ ಜನಾಂಗ ಬಲಿಯಾಗುವುದು ಬೇಡ ಎಂದು ಡಾ|ಮಂಜುನಾಥ ಭಂಡಾರಿ ಮನವಿ ಮಾಡಿದರು.