ಕೆ.ವಿ.ಜಿ.ಯಂತೆ ಎ.ವಿ.ಜಿ ಆಗಬೇಕೆಂಬ ಮನಸ್ಸಿನಲ್ಲಿ ಕಚೇರಿ ಉದ್ಘಾಟಿಸಿದ್ದೇನೆ-ಮಠಂದೂರು
ಗುಣಮಟ್ಟದ ಶಿಕ್ಷಣ ಸಂಸ್ಥೆಯ ಯಶಸ್ಸಿಗೆ ಪೂರಕ-ಭಾಸ್ಕರ್ ದೇವಸ್ಯ
ಜಿಲ್ಲೆಗೆ ಮಾದರಿಯಾಗಿ ಶಾಲೆ ಶಿಕ್ಷಣದ ಬೆಳಕನ್ನು ನೀಡಲಿ-ಗೌರಿ ಬನ್ನೂರು
ಜಿಲ್ಲೆಗೆ ಮಾದರಿಯಾಗಿ ಶಾಲೆ ಶಿಕ್ಷಣದ ಬೆಳಕನ್ನು ನೀಡಲಿ-ಗೌರಿ ಬನ್ನೂರು
ಕ್ರಿಯಾಶೀಲ ಮನಸ್ಸಿನ ಶಾಸಕರು -ಎ.ವಿ.ನಾರಾಯಣ
ಪುತ್ತೂರು:ಎವಿಜಿ ಎಜ್ಯುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್‌ನ ಅಡಿಯಲ್ಲಿ ಎ.ವಿ.ನಾರಾಯಣ ಅವರ ಸಂಚಾಲಕತ್ವದಲ್ಲಿ ಕೃಷ್ಣನಗರ ಸಮೀಪದ ಅಲುಂಬುಡದಲ್ಲಿ ನೂತನವಾಗಿ ಆರಂಭಗೊಳ್ಳಲಿರುವ ಎ.ವಿ.ಜಿ ಇಂಗ್ಲಿಷ್ ಮೀಡಿಯಂ ಸ್ಕೂಲ್‌ನ ಆಡಳಿತ ಕಚೇರಿ ಮಾ.17ರಂದು ಉದ್ಘಾಟನೆಗೊಂಡಿತು.ಕಚೇರಿ ಉದ್ಘಾಟನೆ ದಿನವೇ ವಿದ್ಯಾರ್ಥಿಗಳ ದಾಖಲಾತಿಯೂ ನಡೆಯಿತು. ಶಾಸಕ ಸಂಜೀವ ಮಠಂದೂರು ಅವರು ನೂತನ ಆಡಳಿತ ಕಚೇರಿಯನ್ನು ಉದ್ಘಾಟಿಸಿದರು.
ಕೆ.ವಿ.ಜಿಯಂತೆ ಎ.ವಿ.ಜಿ ಆಗಬೇಕೆಂಬ ಮನಸ್ಸಿನಲ್ಲಿ ಕಚೇರಿ ಉದ್ಘಾಟಿಸಿದ್ದೇನೆ:
ಆಡಳಿತ ಕಚೇರಿಯನ್ನು ಉದ್ಘಾಟಿಸಿದ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ, ಭಾರತೀಯರು ಬದಲಾಗುವುದಾದರೆ ಶಿಕ್ಷಣ ಪದ್ಧತಿಯಿಂದ ಎಂದು ನೂರು ವರ್ಷದ ಹಿಂದೆ ಬ್ರಿಟೀಷರು ಅರಿತಿದ್ದರು.ಅದು ಸತ್ಯವಾಗಿತ್ತು.ಹಾಗಾಗಿ ಇವತ್ತು ಮೆಕಾಲೆ ಶಿಕ್ಷಣದ ಬದಲು ದೇಶದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ತರಲಾಗಿದೆ.ಇದರಿಂದಾಗಿ
ಎಲ್‌ಕೆಜಿಯಿಂದ ಪೋಸ್ಟ್ ಗ್ರಾಜ್ಯುವೇಶನ್ ತನಕ ಆಮೂಲಾಗ್ರ ಬದಲಾವಣೆ ತಂದು ನಮ್ಮ ಮಕ್ಕಳು ಭಾರತೀಯತೆಯನ್ನು ಮೈಗೂಡಿಸಬೇಕೆಂದು ನಮ್ಮ ಸರಕಾರ ಕಾರ್ಯ ಪ್ರವೃತ್ತವಾಗಿದೆ.ಅದಕ್ಕೆ ಪೂರಕವಾಗಿ ಇವತ್ತು ನಮ್ಮ ತರಗತಿಗಳು ಕೂಡಾ ೧ರಿಂದ ೫, ೬ರಿಂದ ೮, ೯ರಿಂದ ೧೨, ಡಿಗ್ರಿಯಲ್ಲಿ ೪ ವರ್ಷದ ಕೋರ್ಸ್, ಬೇರೆ ಬೇರೆ ಅವಕಾಶ ಮಾಡಿಕೊಟ್ಟಿದೆ.ಅದರ ಜೊತೆಯಲ್ಲಿ ಶಿಕ್ಷಣದಲ್ಲಿ ಏನು ಆಯ್ಕೆ ಮಾಡಿಕೊಂಡು ಶಿಕ್ಷಣ ಪಡೆಯಬೇಕೆಂಬ ನಿಟ್ಟಿನಲ್ಲಿ ಬೇರೆ ಬೇರೆ ಕೋರ್ಸ್‌ಗಳನ್ನು ಆಯ್ಕೆ ಮಾಡಲು ಸರಕಾರ ಅವಕಾಶ ಮಾಡಿಕೊಟ್ಟಿದೆ.ಇಂತಹ ಸಂದರ್ಭದಲ್ಲಿ ಎ.ವಿ.ಜಿ ಆಂಗ್ಲ ಮಾಧ್ಯಮ ಶಾಲೆಯು ಇಲ್ಲಿ ಆರಂಭಗೊಳ್ಳುತ್ತಿದೆ.ಇದಕ್ಕೆ ಪೂರಕವಾಗಿ ಅಳಿಕೆ ಶಿಕ್ಷಣ ಸಂಸ್ಥೆ, ಕೆ.ವಿ.ಜಿ ಶಿಕ್ಷಣ ಸಂಸ್ಥೆ ಒಂದು ಉದಾಹರಣೆಯಾಗಿದೆ.ವೈಶಿಷ್ಟ್ಯ ಪೂರ್ಣವಾದ ಶಿಕ್ಷಣ ಪದ್ದತಿ ಅನುಷ್ಟಾನ, ಹಳ್ಳಿಯಲ್ಲಿ ಕೂಡಾ ಒಂದು ಆಧುನಿಕ ನಗರದಲ್ಲಿರುವಂತೆ ಉತ್ತಮ ಶಿಕ್ಷಣ ಕೊಡುವ ಸಂಸ್ಥೆ ನಮ್ಮ ಜಿಲ್ಲೆಯಲ್ಲಿದೆ.ಈ ನಿಟ್ಟಿನಲ್ಲಿ ಕೆ.ವಿ.ಜಿಯಂತೆ ಎ.ವಿ.ಜಿ ಆಗಬೇಕೆಂದು ಮನಸ್ಸಿನಲ್ಲಿಟ್ಟು ಉದ್ಘಾಟನೆ ಮಾಡಿದ್ದೇನೆ ಎಂದರು.ಕುರುಂಜಿ ವೆಂಕಟ್ರಮಣ ಗೌಡರು,ಯಾವುದೋ ಒಂದು ಹಳ್ಳಿಯಲ್ಲಿ ಮೆಡಿಕಲ್ ಕಾಲೇಜು ಆರಂಭ ಮಾಡಿ ಇಡೀ ನಾಡಿಗೆ ಹೆಸರು ತರಬಹುದು ಎಂದು ತೋರಿಸಿದ ಸಾಧಕರಾಗಿದ್ದಾರೆ.ಹಾಗೆ ಇಲ್ಲಿ ಕೂಡ ವಿದ್ಯಾಸಂಸ್ಥೆ ನಡೆಸಲು ಬಹಳಷ್ಟು ಚಾಲೆಂಜಿಂಗ್ ಇದೆ.ಈ ನಿಟ್ಟಿನಲ್ಲಿ ಆಧುನಿಕತೆ ಮತ್ತು ಸಂಸ್ಕಾರಯುತ ಶಿಕ್ಷಣ ಮುಂದಿಟ್ಟು ಈ ಸಂಸ್ಥೆಯ ಕೆಲಸ ಕಾರ್ಯ ಮುನ್ನಡೆಯಲಿ ಎಂದು ಶುಭಹಾರೈಸಿದ ಶಾಸಕರು,ರಸ್ತೆ ಅಭಿವೃದ್ಧಿ ಕುರಿತ ಬೇಡಿಕೆಗೆ ಪ್ರತಿಕ್ರಿಯಿಸಿ ಈ ಬಾರಿಯ ಅವಧಿ ಮುಗಿಯುತ್ತಿದೆ.ಮುಂದೆ ನೀವೆಲ್ಲರೂ ಆಶೀರ್ವಾದ ಮಾಡಿದರೆ ಈ ಭಾಗಕ್ಕೆ ಕಾಂಕ್ರೀಟ್ ರಸ್ತೆ ಮಾಡಿಕೊಡುವುದಾಗಿ ಭರವಸೆ ನೀಡಿದರು.
ಗುಣಮಟ್ಟದ ಶಿಕ್ಷಣ ಸಂಸ್ಥೆಯ ಯಶಸ್ಸಿಗೆ ಪೂರಕ:
ಕಟೀಲು ನಿಡ್ಡೋಡಿ ಜ್ಞಾನರತ್ನ ಎಜ್ಯುಕೇಶನ್ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಭಾಸ್ಕರ್ ದೇವಸ್ಯ ಅವರು ಮಾತನಾಡಿ ಶಾಲೆಗಳು ಆರಂಭ ಮಾಡೋದಕ್ಕೆ ಸುಲಭ.ಇದು ಹುಲಿಯ ಮೇಲೆ ಸವಾರಿ ಮಾಡಿದ ಹಾಗೆ.ಹುಲಿಯಿಂದ ಇಳಿದಾಗ ಯಾವಾಗ ಅದು ನಮ್ಮನ್ನು ತಿಂದು ಬಿಡುತ್ತದೆಯೋ ಎಂಬ ಭಯದಂತೆ ಶಾಲೆಯನ್ನು ನಡೆಸುವಲ್ಲಿಯೂ ಜಾಗರೂಕತೆ ಇರಬೇಕು.ಆದರೆ ಎ.ವಿ.ಜಿಯವರು ಕಳೆದ ಎರಡು ವರ್ಷಗಳಿಂದ ತುಂಬಾ ಯೋಚನೆ ಮಾಡಿ ಈ ಸಂಸ್ಥೆ ಆರಂಭಿಸಿದ್ದಾರೆ.ಗುಣಮಟ್ಟದ ಶಿಕ್ಷಣ ನೀಡಬೇಕಾದರೆ ಇವತ್ತು ಶಿಕ್ಷಕರ ಮತ್ತು ಪೋಷಕರ ಭಾವನೆಗಳ ನಡುವೆ ಕೆಲಸ ಮಾಡಬೇಕು.ಸಾಮಾನ್ಯವಾಗಿ ಸಂಸ್ಥೆ ಆರಂಭಗೊಂಡಾಗ ಅನೇಕ ಚಾಲೆಂಜ್‌ಗಳು ಎದುರಾಗುವ ಸಾಧ್ಯತೆ ಇದೆ. ೧೪ ವರ್ಷದ ಹಿಂದೆ ನಾನು ಸಂಸ್ಥೆ ಆರಂಭಿಸಿದಾಗ ಚಾಲೆಂಜ್ ಎದುರಿಸಿದ್ದೆ.ಆದರೆ ಗುಣಮಟ್ಟವೆಂಬ ಒಂದೇ ಒಂದು ಚಾಲೆಂಜ್ ಇಟ್ಟುಕೊಂಡು ಶಿಕ್ಷಣ ಕೊಡುವ ಮೂಲಕ ವ್ಯಕ್ತಿ ನಿರ್ಮಾಣ ಮಾಡುವ ಕಾರ್ಯದಿಂದಾಗಿ ನಾನು ಸೋಲಲಿಲ್ಲ.ಎವಿಜಿಯವರು ತುಂಬಾ ಶ್ರಮಪಟ್ಟು ಇಲ್ಲಿ ವಾಣಿಜ್ಯ ಉದ್ದೇಶವಿಟ್ಟುಕೊಳ್ಳದೆ ಸಮಾಜಕ್ಕೆ ಉತ್ತಮ ವಿಚಾರದ ಕೂಸನ್ನು ಕೊಟ್ಟಿದ್ದಾರೆ.ಕಟೀಲು ಶ್ರೀ ದೇವಿಯ ಅನುಗ್ರಹ ಅವರಿಗಿರಲಿ ಎಂದು ಹಾರೈಸಿದರು.
ಜಿಲ್ಲೆಗೆ ಮಾದರಿಯಾಗಿ ಶಾಲೆ ಶಿಕ್ಷಣದ ಬೆಳಕನ್ನು ನೀಡಲಿ:
ನಗರಸಭಾ ಸ್ಥಳೀಯ ಸದಸ್ಯೆಯಾಗಿರುವ ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕಿ ಗೌರಿ ಬನ್ನೂರು ಅವರು ಮಾತನಾಡಿ ಬನ್ನೂರಿನ ಬಾವುದ ಕೆರೆಯ ಅಭಿವೃದ್ಧಿ, ಈ ಭಾಗಕ್ಕೆ ನಮ್ಮ ಕ್ಲಿನಿಕ್ ಸಹಿತ ಹಲವಾರು ಅಭಿವೃದ್ಧಿ ಕಾರ್ಯದಲ್ಲಿ ಶಾಸಕರ ಕೊಡುಗೆ ಇದೆ. ಅದೇ ರೀತಿ ಈ ಭಾಗದಲ್ಲಿ ಆರಂಭಗೊಳ್ಳುತ್ತಿರುವ ಶಿಕ್ಷಣ ಕ್ಷೇತ್ರವು ಜಿಲ್ಲೆಗೆ ಮಾದರಿಯಾಗಿ ಬೆಳಗಲಿ ಎಂದು ಹಾರೈಸಿದರು.
ಶಾಲೆ ಮುನ್ನಡೆಸಲು ಎಲ್ಲರ ಆಶೀರ್ವಾದ ಬೇಕು:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎ.ವಿ.ಜಿ ಇಂಗ್ಲಿಷ್ ಮೀಡಿಯಂ ಸ್ಕೂಲ್‌ನ ಆಡಳಿತ ಮಂಡಳಿ ಅಧ್ಯಕ್ಷ ವೆಂಕಟ್ರಮಣ ಗೌಡ ಕಳುವಾಜೆ ಅವರು ಮಾತನಾಡಿ ಮೂರುನಾಲ್ಕು ವರ್ಷಗಳಿಂದ ಶಿಕ್ಷಣದ ಚಿಂತನೆಯನ್ನು ನನ್ನ ಅಳಿಯನೊಂದಿಗೆ ಯೋಚನೆ, ಯೋಜನೆಯನ್ನು ಇಟ್ಟುಕೊಂಡು ಕಾರ್ಯರೂಪಕ್ಕೆ ತಂದಿದ್ದೇವೆ.ಮುಂದೆ ಮುನ್ನಡೆಸಲು ನಿಮ್ಮೆಲ್ಲರ ಆಶೀರ್ವಾದ ಬೇಕೆಂದರು.ಶಾಲೆ ಮಾಡುವುದು ತುಂಬಾ ಜವಾಬ್ದಾರಿಯುತ ಕೆಲಸ.ಭಾರತೀಯ ಸಂಸ್ಕೃತಿ ಕೊಡಬೇಕು.ನಮ್ಮ ಶಾಲೆಗೆ ಮಕ್ಕಳು ಬರಬೇಕಾದರೆ ವಿನೂತನವಾದ ಸಂಸ್ಕೃತಿಯ ದೇವಾಲಯ ಆಗಬೇಕೆಂದು ಯೋಚನೆ ಮಾಡಿಕೊಂಡು ಹಲವು ಶೈಕ್ಷಣಿಕ ಸಂಸ್ಥೆಗಳಿಗೆ ಭೇಟಿ ನೀಡಿ ಅಲ್ಲಿನ ಮುಖ್ಯಸ್ಥರ ಮಾರ್ಗದರ್ಶನ ಪಡೆದು ಕೊಂಡಿದ್ದೇವೆ ಎಂದರು.
ಶಾಸಕರು ಉದ್ಘಾಟನೆಗೆ ಸಚಿವರಾಗಿ ಬರುತ್ತಾರೆ:
ಇವತ್ತು ಶಾಸಕರು ನಮ್ಮೊಂದಿಗೆ ಶಾಸಕರಾಗಿ ಬಂದಿದ್ದಾರೆ.ಮುಂದೆ ಎರಡು ಮೂರು ತಿಂಗಳಲ್ಲಿ ಶಾಲೆಯ ಕೊಠಡಿ ಉದ್ಘಾಟನೆಗೆ ಅವರು ಸಚಿವರಾಗಿ ಬಂದು ಉದ್ಘಾಟನೆ ಮಾಡಬೇಕು.ನಾನು ಹೇಳಿದ್ದು ಸತ್ಯವಾಗುತ್ತದೆ.ಸುಳ್ಳಾಗುವುದಿಲ್ಲ ಎಂದು ಕಳುವಾಜೆ ವೆಂಕಟ್ರಮಣ ಗೌಡ ಹೇಳಿದರು.
ಕ್ರಿಯಾಶೀಲ ಮನಸ್ಸಿನ ಶಾಸಕರು:
ಎ.ವಿ.ಜಿ.ಇಂಗ್ಲಿಷ್ ಮೀಡಿಯಂ ಸ್ಕೂಲ್‌ನ ಸಂಚಾಲಕ ಎ.ವಿ.ನಾರಾಯಣ ಅವರು ಸ್ವಾಗತಿಸಿ ಮಾತನಾಡಿ ಪುತ್ತೂರಿನ ಮಟ್ಟಿಗೆ ಬಹಳ ದೊಡ್ಡ ಸಮಸ್ಯೆ ಎಪಿಎಂಸಿ ರೈಲ್ವೇ ಗೇಟ್ ಬದಲು ಅಂಡರ್ ಪಾಸ್ ಯೋಜನೆ ಮಾಡುವ ಮೂಲಕ ಕ್ರಿಯಾಶೀಲ ಶಾಸಕರಿಂದ ನಮ್ಮ ವಿದ್ಯಾ ಸಂಸ್ಥೆಯ ಕಚೇರಿಯನ್ನು ಉದ್ಘಾಟಿಸಲಾಗಿದೆ. ನಮ್ಮ ಅನೇಕ ಮಂದಿಯ ಕನಸು ಇವತ್ತು ನನಸಾಗುತ್ತಿದೆ. ಎಲ್ಲರ ಪ್ರೋತ್ಸಾಹ ಸಹಕಾರ ಇದೇ ರೀತಿ ಇರಲಿ ಎಂದು ವಿನಂತಿಸಿದರು.ವೇದಿಕೆಯಲ್ಲಿ ಸಂಸ್ಥೆಯ ಆಡಳಿತ ಮಂಡಳಿ ಕೋಶಾಧಿಕಾರಿ ವನಿತಾ ಎ.ವಿ, ನಿರ್ದೇಶಕ ಗಂಗಾಧರ ಗೌಡ, ಪುಷ್ಪಾವತಿ ಕಳುವಾಜೆ, ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಪ್ರತಿಭಾದೇವಿ ಉಪಸ್ಥಿತರಿದ್ದರು.ಶಾಲೆಗೆ ಪ್ರಥಮ ದಾಖಾಲತಿ ಪಡೆದ ಅನಿಕಾ ಬಳಗ ಪ್ರಾರ್ಥಿಸಿದರು.ಸಂಸ್ಥೆಯ ಆಡಳಿತ ಮಂಡಳಿ ಪ್ರಧಾನ ಕಾರ್ಯದರ್ಶಿ ಗುಡ್ಡಪ್ಪ ಗೌಡ ಬಲ್ಯ ಕಾರ್ಯಕ್ರಮ ನಿರೂಪಿಸಿದರು.ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್‌ನ ಆಡಳಿತ ಮಂಡಳಿ ಉಪಾಧ್ಯಕ್ಷ ಉಮೇಶ್ ಗೌಡ ಮಳುವೇಲು ಅವರು ವಂದಿಸಿದರು.ಬೆಳಿಗ್ಗೆ ಗಣಪತಿ ಹೋಮ, ವೈದಿಕ ಕಾರ್ಯಕ್ರಮ ನಡೆಯಿತು.ಬಳಿಕ ಸಭಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಆಡಳಿತ ಮಂಡಳಿಯ ಜೊತೆ ಕಾರ್ಯದರ್ಶಿ ಮನೋಹರ ರೈ, ನಿರ್ದೇಶಕರಾದ ಸೀತಾರಾಮ, ವಾಮನ್ ಎ.ವಿ, ಡಾ.ಅನುಪಮ, ರಾಮಣ್ಣ ಗೌಡ ಹಲಂಗ, ಪ್ರಕಾಶ್, ಲತಾ, ಕೊರಗಪ್ಪ ಗೌಡ. ಸೀತಾರಾಮ ಪೂಜಾರಿ ಮೇಲ್ಮಜಲು, ಅವಿನಾಶ್, ನರೇಂದ್ರ ಕೆ.ಟಿ, ಸಲಹೆಗಾರರಾದ ಸುಂದರ ಗೌಡ ನಾಯ್ತೊಟ್ಟು, ಇನಾಸ್ ಗೊನ್ಸಾಲ್ವಿಸ್, ಕಾನೂನು ಸಲಹೆಗಾರ ಚಿದಾನಂದ ಬೈಲಾಡಿ, ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ಅಧ್ಯಕ್ಷ ಮನೋಹರ ಡಿ.ವಿ., ಪ್ರೇರಣಾ ಸಂಸ್ಥೆಯ ಎಂ.ಡಿ ಪ್ರವೀಣ್ ಕುಂಟ್ಯಾನ, ನಾಗೇಶ್ ಕೆಡೆಂಜಿ, ಸುದ್ದಿ ಸೌಹಾರ್ದ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ನರೇಂದ್ರ ರಾವ್, ಸಂಸ್ಥೆಯ ಸಲಹಾ ಸಮಿತಿಯ ವೆಂಕಪ್ಪ ಗೌಡ, ಜಿನ್ನಪ್ಪ ಗೌಡ ಮಳವೇಲು, ನಗರಸಭೆ ಮಾಜಿ ಉಪಾಧ್ಯಕ್ಷ ವಿಶ್ವನಾಥ ಗೌಡ, ರಮೇಶ್ ಗೌಡ, ಅಮರನಾಥ ಗೌಡ, ಸೋಮಪ್ಪ ಗೌಡ, ದೀಕ್ಷಾ ವಾಮನ ಗೌಡ, ಒಕ್ಕಲಿಗ ಮಹಿಳಾ ಗೌಡ ಸಂಘದ ಅಧ್ಯಕ್ಷೆ ಮೀನಾಕ್ಷಿ ಡಿ ಗೌಡ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.
ಪುತ್ತೂರು ಪೇಟೆಯಿಂದ ೩.೫ ಕೀ.ಮೀ. ಇರುವ ಕೃಷ್ಣನಗರ ಸಮೀಪದ ಬನ್ನೂರು ಗ್ರಾಮಕ್ಕೆ ಸೇರಿದ ಅಲುಂಬುಡ ಕುಟುಂಬದ ಸ್ವಂತ ಸ್ಥಳದಲ್ಲಿ ಅಲುಂಬುಡ ವೀರಪ್ಪ ಗೌಡ(ಎ.ವಿ.ಜಿ) ಎಂಬ ಹೆಸರಿನಲ್ಲಿ ಶಿಕ್ಷಣ ಸಂಸ್ಥೆ ಹಿರಿಯರ ಆಸೆಯಂತೆ ಕನಸಿನಂತೆ ಆರಂಭಿಸಲಾಗಿದೆ.ಎ.ವಿ.ನಾರಾಯಣ ಅವರ ಅನೇಕ ವರ್ಷಗಳ ಕನಸು. ಶೈಕ್ಷಣಿಕ ಕ್ಷೇತ್ರಕ್ಕೆ ಕೊಡುಗೆ ನೀಡುವ ನಿಟ್ಟಿನಲ್ಲಿ ಒಂದು ವರ್ಷದ ಹಿಂದೆ ಚಿಂತನ ಮಂಥನ ಮಾಡಿದ್ದರು.ಇವತ್ತು ಕಟ್ಟಡ ಲಿಂಟಲ್ ಲೆವೆಲ್‌ಗೆ ಬಂದು ನಿಂತಿದೆ.ಮುಂದೆ ಜೂನ್ ತಿಂಗಳಲ್ಲಿ ಎರಡುಮೂರು ತರಗತಿಯ ಕಟ್ಟಡ ನಿರ್ಮಾಣ. ಮುಂದೆ ಮೂರು ಅಂತಸ್ಥಿನ ಕಟ್ಟಡ ಯೋಜನೆ ಆಗಲಿದೆ-
ಗುಡ್ಡಪ್ಪ ಬಲ್ಯ, ಪ್ರಧಾನ ಕಾರ್ಯದರ್ಶಿ
ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್
ಭಾರತೀಯತೆ, ದೇಶಪ್ರೇಮವಿದ್ದ ಶಿಕ್ಷಣ ಕ್ಷೇತ್ರ ಯಶಸ್ವಿ
ಇವತ್ತು ಮಕ್ಕಳ ಹುಟ್ಟುವ ಪ್ರಮಾಣ ಕಡಿಮೆ ಆಗಿದೆ.ಇಂತಹ ಸಂದರ್ಭದಲ್ಲಿ ಇಲ್ಲಿರುವ ವಿದ್ಯಾಸಂಸ್ಥೆಗಳು ಮಕ್ಕಳ ಹಾಜರಾತಿ ಸಮಸ್ಯೆ ಎದುರಿಸುತ್ತಿದೆ. ಮತ್ತೆ ಇವತ್ತು ಬೇರೆ ಬೇರೆ ಸಮುದಾಯದವರು ಶಿಕ್ಷಣ ಸಂಸ್ಥೆ ಆರಂಭಿಸಿದ್ದಾರೆ.ಸ್ವಲ್ಪ ಜಾತಿ ಪ್ರೇಮ, ಸಂಘಟನೆ ಪ್ರೇಮಕ್ಕೆ ಮಕ್ಕಳನ್ನು ಕಳುಹಿಸುವ ಸ್ಥಿತಿ ಇದೆ.ಇಂತಹ ಬೇರೆ ಬೇರೆ ಮಾನಸಿಕತೆಯಿಂದ ಬೇರೆ ಬೇರೆ ಶಾಲೆಗೆ ಹೋಗುವ ಸಂದರ್ಭದಲ್ಲಿ ಇವತ್ತು ಆಧುನಿಕ ಮತ್ತು ಸಂಸ್ಕಾರಯುತ ಎಂಬ ಎರಡು ರೀತಿಯ ಶಿಕ್ಷಣ ಎಲ್ಲಿ ಕೊಡುತ್ತಾರೋ ಅಲ್ಲಿಗೆ ಮಕ್ಕಳು ಹೋಗುವ ಕೆಲಸ ಆಗುತ್ತದೆ. ಆ ಕೆಲಸ ಈ ಶಿಕ್ಷಣ ಸಂಸ್ಥೆಯಿಂದ ಆಗಬೇಕು. ಶಿಕ್ಷಣ ಸಂಸ್ಥೆ ಕೇವಲ ಅಂಕ ತೆಗೆಯುವ ಉದ್ದೇಶ ಇಟ್ಟುಕೊಳ್ಳಬಾರದು. ಅಂಕ ತೆಗೆದು ಯಾವುದೋ ವೈಟ್ ಕಾಲರ್ ಜಾಬ್‌ನ ಜೊತೆಗೆ ಈ ದೇಶದಲ್ಲಿ ಸಂಸ್ಕಾರಯುತವಾದ ಸತ್ಪ್ರಜೆಯಾಗಬೇಕಂಬ ಕಲ್ಪನೆ ಕೂಡಾ ಒಂದು ವಿದ್ಯಾಸಂಸ್ಥೆಗೆ ಇರಬೇಕು.ಇಂತಹ ವಿಶೇಷತೆಗಳು ಶಾಲೆಯಲ್ಲಿ ಅನುಷ್ಠಾನ ಆದಾಗ ಮಾತ್ರ ಮಕ್ಕಳ ಹೆತ್ತವರಿಗೆ ಶಾಲೆಯ ಮೇಲೆ ಪ್ರೀತಿ ಹೆಚ್ಚುತ್ತದೆ.ಶಾಲೆ ಅನ್ನುವುದು ದೇವಸ್ಥಾನ, ಚರ್ಚ್, ಮಸೀದಿಯಂತೆ ಶ್ರದ್ಧಾ ಕೇಂದ್ರ, ಜ್ಞಾನ ಮಂದಿರ. ಇಲ್ಲಿ ಭಾರತೀಯತೆ ಮತ್ತು ದೇಶ ಪ್ರೇಮ ಇರಬೇಕು. ದೇಶ ಪ್ರೇಮ ಇಲ್ಲದ ಶಿಕ್ಷಣ ಖಂಡಿತಾ ಈ ದೇಶದಲ್ಲಿ ಯಶಸ್ವಿಯಾಗಲು ಸಾಧ್ಯವಿಲ್ಲ.ಯಾವ ರಾಷ್ಟ್ರಪ್ರೇಮ ಮೈಗೂಡಿಸಿ ಉನ್ನತ ಹದ್ದೆಗೆ ಹೋಗುತ್ತಾನೋ ಅವನು ಈ ದೇಶದ ಆಸ್ತಿಯಾಗುತ್ತಾನೆ-
ಸಂಜೀವ ಮಠಂದೂರು ಶಾಸಕರು ಪುತ್ತೂರು.
ಎವಿಜಿ ಶಿಕ್ಷಣ ಸಂಸ್ಥೆಯ ವಿಶೇಷತೆ ಬಿಡುಗಡೆ
ಶಿಶುಕೇಂದ್ರಿತ ಶಿಕ್ಷಣ, ಮಗುವಿಗೆ ಕರಿಹಲಗೆ ಬಳಸುವ ಅವಕಾಶ, ರಾಷ್ಟ್ರಭಕ್ತಿಯ ಮೌಲ್ಯಗಳನ್ನು ಪರಿಚಯಿಸುವುದು, ಭಾರತೀಯ ಸಂವಿಧಾನದ ಕುರಿತಾಗಿ ಸ್ಪಷ್ಟ ಜ್ಞಾನವನ್ನು ನೀಡುವುದು, ಪ್ರತಿ ಮಗುವಿಗೆ ವೈಯುಕ್ತಿಕ ಗಮನ, ಮಗುವಿನ ಪ್ರಗತಿಯ ವರದಿಯನ್ನು ನೈಮಿತ್ತಿಕವಾಗಿ ನೀಡುವುದು, ಶಾಲೆಯಲ್ಲಿಯೇ ಮಕ್ಕಳಿಗೆ ಮತ್ತು ಸಿಬ್ಬಂದಿಗಳಿಗೆ ಶುಚಿ ರುಚಿಯಾದ ಸರಳ ಆಹಾರದ ವ್ಯವಸ್ಥೆ, ಮಕ್ಕಳನ್ನು ಸಮಾಜದ ವಾಸ್ತವಿಕತೆಗೆ ಒಡ್ಡಿಕೊಳ್ಳುವಂತೆ ಮಾಡುವುದು,ಪೋಷಕರು ಹಿರಿಯರು ಮತ್ತು ಶಿಕ್ಷಕರನ್ನು ಗೌರವಿಸುವ ಪ್ರಕಾರಗಳನ್ನು ಮಕ್ಕಳಿಗೆ ತಿಳಿಸಿ ಕೊಡುವುದು, ಒತ್ತಡ ರಹಿತ ಕಲಿಕೆ, ರಾಷ್ಟ್ರ ಜಾಗೃತಿ, ಪರಿಸರ ಜಾಗೃತಿ, ಮಾನವೀಯತೆಯ ಜಾಗೃತಿಗಳ ಮನೋಭಾವದೊಂದಿಗೆ ರಾಷ್ಟ್ರಚಿಂತನೆಯೊಂದಿಗೆ ಎಳೆಯರನ್ನು ಬೆಳೆಸುವುದು ಮತ್ತು ರಾಷ್ಟ್ರ ಮೊದಲು ಎಂಬ ಮೌಲ್ಯವನ್ನು ಮಕ್ಕಳಲ್ಲಿ ಮತ್ತು ಸಮಾಜದಲ್ಲಿ ಬಿತ್ತುವುದು ಗುರಿ. ೨೦೨೩-೨೪ನೇ ಶೈಕ್ಷಣಿಕ ವರ್ಷದಲ್ಲಿ ಪೂರ್ವ ನರ್ಸರಿ ಮತ್ತು ನರ್ಸರಿ ಹಂತಗಳ ಶಿಕ್ಷಣವನ್ನು ನೀಡುವುದು. ೩ ವರ್ಷ ಪ್ರಾಯದ ಯಾವುದೇ ಮಗು ಇಲ್ಲಿ ದಾಖಲಾಗುವುದು. ನೂತನ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ನ್ನು ಗಮನದಲ್ಲಿರಿಸಿಕೊಂಡು ಮೌಲ್ಯಾಧಾರಿತ ಶಿಕ್ಷಣ ನೀಡುವುದು ಸಹಿತ ಹಲವು ವಿಚಾರಗಳ ಶಾಲಾ ಚಟುವಟಿಕೆ ಪುಸ್ತಕವನ್ನು ಶಾಸಕ ಸಂಜೀವ ಮಠಂದೂರು ಅವರು ಬಿಡುಗಡೆಗೊಳಿಸಿದರು.