ಪೆರ್ಲಂಪಾಡಿ ಉದಯಗಿರಿಯಲ್ಲಿ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ, ಅನ್ನಸಂತರ್ಪಣೆ

0

ಪುತ್ತೂರು: ಪೆರ್ಲಂಪಾಡಿ ಉದಯಗಿರಿಯಲ್ಲಿ ನಡೆಯುವ ಊರ ಜಾತ್ರೆ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ ಮಾ.14 ರಂದು ರಾತ್ರಿ ವಿಜೃಂಭಣೆಯಿಂದ ಜರಗಿತು. ಬೆಳಿಗ್ಗೆ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು. ಗಣಪತಿ ಹೋಮ, ಕಲಶಪ್ರತಿಷ್ಠೆ ನಡೆದು ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.

ಸಂಜೆ ಮಠತ್ತಡ್ಕ ಶ್ರೀ ವಿಷ್ಣುಮೂರ್ತಿ ದೈವಸ್ಥಾನದಿಂದ ಭಂಡಾರ ಬಂದು, ಸಿಆರ್.ಸಿ ಕಾಲೋನಿಯ ಶ್ರೀ ಮುತ್ತುಮಾರಿಯಮ್ಮ ದೇವಸ್ಥಾನಕ್ಕೆ ಬಂದು ಅಲ್ಲಿಂದ ದರುಶನದಿಂದ ಉದಯಗಿರಿಗೆ ತೆರಳುವ ಕಾರ್ಯಕ್ರಮ ನಡೆಯಿತು. ರಾತ್ರಿ ಮೇಲೇರಿಗೆ ಅಗ್ನಿಸ್ಪರ್ಶದ ಬಳಿಕ ಸಾರ್ವಜಿನಿಕ ಅನ್ನಸಂತರ್ಪಣೆ ನಡೆಯಿತು. ನೂರಾರು ಮಂದಿ ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು. ಬಳಿಕ ಕುಳಿಚಟ್ಟು ದೈವದ ನರ್ತನ ನಡೆಯಿತು.

ಮಾ.15 ರಂದು ಪ್ರಾತಃಕಾಲ ಶ್ರೀ ವಿಷ್ಣುಮೂರ್ತಿ ದೈವದ ಅಗ್ನಿಪ್ರವೇಶ, ಬೆಳಿಗ್ಗೆ ಮಾರಿಕಲಕ್ಕೆ ಹೋಗಿ ಬಳಿಕ ಭಕ್ತಾದಿಗಳಿಗೆ ಪ್ರಸಾದ ವಿತರಣೆ ನಡೆದು ಗುಳಿಗ ನೇಮ ನಡೆಯಿತು. ನೂರಾರು ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀ ದೈವದ ಗಂಧಪ್ರಸಾದ ಸ್ವೀಕರಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ರಾತ್ರಿ 9 ರಿಂದ ಶ್ರೀಧರ್ ಎಕ್ಕಡ್ಕ ಇವರ ಸಾರಥ್ಯದಲ್ಲಿ ಆರ್.ಪಿ ಕ್ರಿಯೇಷನ್ ಪಾಂಬಾರು ತಂಡದಿಂದ ಭಕ್ತಿ ರಸಮಂಜರಿ ನಡೆಯಿತು.

ಆಡಳಿತ ಸಮಿತಿ ಅಧ್ಯಕ್ಷ ತಾರಾಪ್ರಸಾದ್ ರಾಮಕಜೆ, ಕಾರ್ಯದರ್ಶಿ ಗಿರೀಶ್ ಪಾದೆಕಲ್ಲು, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ನ್ಯಾಯವಾದಿ ಗಿರಿಶ್ ಮಳಿ ಹಾಗೂ ಸಮಿತಿ ಸರ್ವ ಸದಸ್ಯರು ಸೇರಿದಂತೆ ಊರಪರವೂರ ಭಕ್ತಾದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here