ಮುಂಡೂರು ಮೃತ್ಯುಂಜಯೇಶ್ವರ ದೇವಳದ ನಾಗನಕಟ್ಟೆ ವಿವಾದ ; ನಾಗಪ್ರತಿಷ್ಠೆಗೆ ತಡೆಯಾಜ್ಞೆ ಕೋರಿದ್ದ ಅರ್ಜಿ ಡಿಸ್ಪೋಸ್‌ಡ್

0

ಪುತ್ತೂರು: ಮುಂಡೂರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದಲ್ಲಿ ನಡೆದ ನಾಗಪ್ರತಿಷ್ಠೆ ಕಾರ್ಯಕ್ರಮಕ್ಕೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಮಾ.17ರಂದು ವಿಲೇವಾರಿ ಮಾಡಿದೆ. ಈ ಮೊದಲು ತಡೆಯಾಜ್ಞೆ ನೀಡಲು ನಿರಾಕರಿಸಿದ್ದ ಹೈಕೋರ್ಟ್ ವಿಚಾರಣೆಯನ್ನು ಮಾ.17ಕ್ಕೆ ಮುಂದೂಡಿತ್ತು. ತಡೆಯಾಜ್ಞೆ ದೊರೆಯದೇ ಇದ್ದುದರಿಂದ ಮಾ.7, 8ರಂದು ನಾಗಪ್ರತಿಷ್ಠೆ ಕಾರ್ಯಕ್ರಮ ನಿರಾತಂಕವಾಗಿ ನಡೆದಿತ್ತು.

ಮುಂಡೂರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದಲ್ಲಿ ನೂತನ ನಾಗನಕಟ್ಟೆ ಕ್ರಮಬದ್ಧವಾಗಿ ನಿರ್ಮಾಣಗೊಂಡಿಲ್ಲವಾದ್ದರಿಂದ ಉದ್ದೇಶಿತ ನಾಗಪ್ರತಿಷ್ಠೆ ಕಾರ್ಯಕ್ರಮ ನಡೆಸದಂತೆ ತಡೆಯಾಜ್ಞೆ ಕೋರಿ ದೇವಳದ ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅರುಣ್ ಕುಮಾರ್ ಪುತ್ತಿಲ, ನಾರಾಯಣ ನಾಯ್ಕ್ ಕಾಳಿಂಗಹಿತ್ಲು, ಕೆ.ಬಿ.ಸುಂದರ ನಾಯ್ಕ ಮುಂಡೂರು, ಬಾಲಕೃಷ್ಣ ಕೆ.ಮುಂಡೂರು, ಹೊನ್ನಪ್ಪ ನಾಯ್ಕ್ ಬಿ.ಯಾನೆ ಹರೀಶ್ ಬಿ.ಕೆ.ಅವರು ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು.

ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರು, ಸಂಪ್ಯ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಮತ್ತು ಮುಂಡೂರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರನ್ನು ಪ್ರತಿವಾದಿಗಳಾಗಿ ಕಾಣಿಸಲಾಗಿತ್ತು. ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡಿದ್ದ ಹೈಕೋರ್ಟ್ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು, ಕಾರ್ಯಕ್ರಮದ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ವಸ್ತುಸ್ಥಿತಿಯ ಕುರಿತು ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಧಾರ್ಮಿಕ ದತ್ತಿ ಇಲಾಖಾ ಸಹಾಯಕ ಆಯುಕ್ತರಿಗೆ ನಿರ್ದೇಶನ ನೀಡಿ ವಿಚಾರಣೆಯನ್ನು ಮಾ.7ಕ್ಕೆ ಮುಂದೂಡಿದ್ದರು. ಮಾ.7ರಂದು ವಿಚಾರಣೆ ನಡೆಸಿದ ನ್ಯಾಯಪೀಠ ತಡೆಯಾಜ್ಞೆ ನೀಡಲು ನಿರಾಕರಿಸಿ ವಿಚಾರಣೆಯನ್ನು ಮಾ.17ಕ್ಕೆ ಮುಂದೂಡಿತ್ತು.

ಹೈಕೋರ್ಟ್ ತಡೆಯಾಜ್ಞೆ ನೀಡದೇ ಇದ್ದುದರಿಂದಾಗಿ ಮಾ.7, 8ರಂದು ಕಾರ್ಯಕ್ರಮಗಳು ನಿರಾತಂಕವಾಗಿ ನಡೆದಿದ್ದವು. ತಡೆಯಾಜ್ಞೆ ಕೋರಿದ್ದ ಕಾರ್ಯಕ್ರಮಗಳು ಈಗಾಗಲೇ ನಡೆದಿರುವುದರಿಂದ ಹೈಕೋರ್ಟ್ ಅರ್ಜಿಯನ್ನು ಮಾ.17ರಂದು ಡಿಸ್‌ಪೋಸ್ ಮಾಡಿದೆ.

LEAVE A REPLY

Please enter your comment!
Please enter your name here