ಕೃಷಿಕರಿಗೆ ಕೋವಿ ಡಿಪಾಸಿಟ್ ವಿನಾಯತಿಗೆ ಒತ್ತಾಯ-ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ ಮಹಾಸಭೆಯಲ್ಲಿ ನಿರ್ಧಾರ

0

ಪುತ್ತೂರು: ಚುನಾವಣೆಯ ಹೊತ್ತಿನಲ್ಲಿ ಕೃಷಿಕರ ಕೋವಿ ಡಿಪಾಸಿಟ್ ಇಡುವುದಕ್ಕೆ ವಿನಾಯತಿ ನೀಡಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಮಹಾಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.


ತೆಂಕಿಲದ ಒಕ್ಕಲಿಗ ಗೌಡ ಸಮುದಾಯ ಭವನದ ಚುಂಚಶ್ರೀ ಸಭಾಭವನದಲ್ಲಿ ಮಾ.18ರಂದು ನಡೆದ ಸಂಘದ ಮಹಾಸಭೆಯು ಅಧ್ಯಕ್ಷ ಅಶೋಕ ಕಿನಿಲ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಚುನಾವಣೆಯ ಸಂದರ್ಭ ಕೃಷಿಕರ ಕೋವಿಯನ್ನು ಡಿಪಾಸಿಟ್ ಇಡಲು ಇಲಾಖೆಗಳಿಂದ ಸೂಚನೆ ಬರುತ್ತಿದೆ. ಕೃಷಿ ರಕ್ಷಣೆಗೆ ನೀಡುವ ಕೋವಿಯನ್ನು ಚುನಾವಣೆಯ ಹೊತ್ತಿನಲ್ಲಿ ಡಿಪಾಸಿಟ್ ಇಡುವುದು ಸೂಕ್ತವಲ್ಲ. ಅದೂ ಅಲ್ಲದೆ ಇಲಾಖೆಗಳಿಗೂ ಇದೊಂದು ಹೊರೆಯಾಗಿದೆ. ಕೃಷಿ ರಕ್ಷಣೆಯ ಉದ್ದೇಶದಿಂದ ಬಳಕೆಯಾಗುವ ಕೋವಿಯ ಮೂಲಕ ಚುನಾವಣೆಯ ಸಮಯದಲ್ಲಿ ಯಾವುದೇ ಗೊಂದಲಗಳು ಆಗಿಲ್ಲ. ಒಂದು ವೇಳೆ ಯಾವುದಾದರೂ ಅನಾಹುತಗಳು ನಡೆದರೆ ಅಂತಹ ವ್ಯಕ್ತಿಗಳ ಕೋವಿ ಲೈಸನ್ಸ್ ರದ್ದು ಮಾಡಲು ಅವಕಾಶ ಇದೆ. ಈಗ ಚುನಾವಣೆಯ ಸಮಯದಲ್ಲಿ ಕೋವಿ ಡಿಪಾಸಿಟ್ ಕೃಷಿಕರಿಗೂ ಸಮಸ್ಯೆಯಾಗುತ್ತಿದೆ. ಈ ಕಾರಣದಿಂದ ಕೋವಿ ಡಿಪಾಸಿಟಿಗೆ ವಿನಾಯಿತಿ ನೀಡಬೇಕೆಂದು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಲು ನಿರ್ಧರಿಸಲಾಯಿತು.


ಮೆಡಿಕಲ್ ಕಾಲೇಜು ಸ್ಥಾಪನೆಗೆ ಬೆಂಬಲ:
ಪುತ್ತೂರಿನಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಯ ಹಿನ್ನಲೆಯಲ್ಲಿ ನಡೆಯುತ್ತಿರುವ ಅಭಿಯಾನಕ್ಕೆ ಅಡಿಕೆ ಬೆಳೆಗಾರರ ಸಂಘದಿಂದಲೂ ಬೆಂಬಲ ವ್ಯಕ್ತಪಡಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಹಿರಿಯ ಸದಸ್ಯರಾದ ದಯಾನಂದ ಕೋಟೆ ಹಾಗೂ ಬಿ ಟಿ ನಾರಾಯಣ ಭಟ್ ಅವರನ್ನು ಗೌರವಿಸಲಾಯಿತು. ಅವರನ್ನು ಅಡಿಕೆ ಬೆಳೆಗಾರರ ಸಂಘದ ಪರವಾಗಿ ಮಾಜಿ ವಿಧಾನ ಪರಿಷತ್ ಸದಸ್ಯ ಅಣ್ಣಾ ವಿನಯಚಂದ್ರ ಹಾಗೂ ಕೃಷಿಕ ಎ ಪಿ ಸದಾಶಿವ ಅವರು ಗೌರವಿಸಿದರು. ಸಂಘದ ವರದಿ ಹಾಗೂ ಲೆಕ್ಕಪತ್ರವನ್ನು ಸಂಘದ ಕಾರ್‍ಯದರ್ಶಿ ಮಹೇಶ್ ಪುಚ್ಚಪ್ಪಾಡಿ ಮಂಡಿಸಿದರು. ಸಂಘದ ಉಪಾಧ್ಯಕ್ಷ ಎಂ ಜಿ ಸತ್ಯನಾರಾಯಣ ಅಡಿಕೆ ಬೆಳೆಗಾರರ ಸಂಘದ ಬೈಲಾ ತಿದ್ದುಪಡಿ ಬಗ್ಗೆ ಮಾತನಾಡಿದರು. ಮಹೇಶ್ ಪುಚ್ಚಪ್ಪಾಡಿ ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here