ನೆಲ್ಯಾಡಿ: ಕಡಬ ತಹಶೀಲ್ದಾರ್ ಗ್ರಾಮ ವಾಸ್ತವ್ಯ

0

ನೆಲ್ಯಾಡಿ: ಕಡಬ ತಾಲೂಕು ಕಂದಾಯ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಕಡಬ ತಹಶೀಲ್ದಾರ್ ನೇತೃತ್ವದಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಮಾ.18 ರಂದು ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಾಮಧೇನು ಸಭಾಂಗಣದಲ್ಲಿ ನಡೆಯಿತು.


ಕಡಬ ತಹಶೀಲ್ದಾರ್ ರಮೇಶ್ ಬಾಬು ಅವರು ಕಾರ್ಯಕ್ರಮ ಉದ್ಘಾಟಿಸಿ, ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು. ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶಿಶಿರ, ಲೋಕೋಪಯೋಗಿ ಇಲಾಖೆಯ ಎಲ್.ಸಿ.ಸಿಕ್ವೇರಾ, ಕೃಷಿ ಇಲಾಖೆಯ ಭರಮಣ್ಣವರ, ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯ ಮೇಲ್ವಿಚಾರಕ ಟಿ.ವಿಠಲ್, ಸಾಮಾಜಿಕ ಅರಣ್ಯ ಇಲಾಖೆಯ ಉಪವಲಯಾರಣ್ಯಾಧಿಕಾರಿ ಕೃಷ್ಣಜೋಗಿ, ಅರಣ್ಯ ಇಲಾಖೆ ಉಪವಲಯಾರಣ್ಯಾಧಿಕಾರಿ ಸುನಿಲ್, ಹಿರಿಯ ಪಶುವೈದ್ಯಕೀಯ ಪರೀಕ್ಷಕ ರವೀಂದ್ರ ಪಿ., ಜಿ.ಪಂ.ಇಂಜಿನಿಯರ್ ಎಸ್.ಎಸ್.ಹುಕ್ಕೇರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಪುಷ್ಪಾವತಿ, ಶಿಕ್ಷಣ ಇಲಾಖೆ ಸಮನ್ವಯಾಧಿಕಾರಿ ಸ್ಟೀಫನ್‌ರವರು ಇಲಾಖೆಯ ಮಾಹಿತಿ ನೀಡಿದರು. ನೆಲ್ಯಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚೇತನಾ, ಉಪಾಧ್ಯಕ್ಷ ಅಬ್ದುಲ್ ಜಬ್ಬಾರ್, ಜಿ.ಪಂ.ಮಾಜಿ ಸದಸ್ಯ ಬಾಲಕೃಷ್ಣ ಬಾಣಜಾಲು, ತಾ.ಪಂ.ಮಾಜಿ ಸದಸ್ಯೆ ಉಷಾ ಅಂಚನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಅರ್ಜಿಗಳ ವಿಚಾರಣೆ:
ಗ್ರಾಮಸ್ಥರು ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಸಮಸ್ಯೆಗಳ ಅರ್ಜಿಗಳನ್ನು ಲಿಖಿತ ರೂಪದಲ್ಲಿ ಸಲ್ಲಿಸಿದರು. ತಹಶೀಲ್ದಾರ್ ರಮೇಶ್ ಬಾಬುರವರು ಅರ್ಜಿಗಳ ವಿಚಾರಣೆ ನಡೆಸಿ ಸೂಕ್ತ ಕ್ರಮಕ್ಕೆ ಸಂಬಂಧಪಟ್ಟ ಇಲಾಖೆಗಳಿಗೆ ವರ್ಗಾಯಿಸಿದರು. ಸುಮಾರು ೨೫ ಅರ್ಜಿಗಳು ಸಲ್ಲಿಕೆಯಾಗಿತ್ತು. ಉಪತಹಸೀಲ್ದಾರ್ ಮನೋಹರ್ ಸ್ವಾಗತಿಸಿದರು. ಉಪತಹಸೀಲ್ದಾರ್ ಗೋಪಾಲ ನಿರೂಪಿಸಿದರು.


ಮರ ತೆರವುಗೊಳಿಸಲು ಮನವಿ:
ನೆಲ್ಯಾಡಿ ಗ್ರಾಮದ ತೊಟ್ಟಿಲಗುಂಡಿ ಎಂಬಲ್ಲಿ ಮಂಗಳೂರು ವಿವಿ ಘಟಕ ಕಾಲೇಜು ನಿರ್ಮಾಣಕ್ಕೆ ಮೀಸಲಿರಿಸಿರುವ ಜಾಗದ ಗಡಿ ಗುರುತು ಮಾಡಲಾಗಿದ್ದು ಅದರಲ್ಲಿನ ಮರಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ತಾ.ಪಂ.ಮಾಜಿ ಸದಸ್ಯೆ ಉಷಾ ಅಂಚನ್ ಹಾಗೂ ಇತರರು ಒತ್ತಾಯಿಸಿದರು. ಈ ಬಗ್ಗೆ ಮಂಗಳೂರು ವಿವಿ ಅವರಿಂದ ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆಯುವಂತೆ ಸಲಹೆ ನೀಡಲಾಯಿತು.


ಪುತ್ಯೆ ರಸ್ತೆಗೆ ಅನುದಾನ ಇಲ್ಲ:
ನೆಲ್ಯಾಡಿಯಿಂದ ಪುತ್ಯೆ ಮೂಲಕ ಕೊಕ್ಕಡ ಸಂಪರ್ಕಿಸುವ ರಸ್ತೆ ಕಾಂಕ್ರಿಟೀಕರಣಗೊಳಿಸುವಂತೆ ಗ್ರಾಮಸ್ಥರ ಮನವಿಗೆ ಪ್ರತಿಕ್ರಿಯಿಸಿದ ಲೋಕೋಪಯೋಗಿ ಇಲಾಖೆಯ ಎಲ್.ಸಿ.ಸಿಕ್ವೇರಾ ಅವರು ಸದ್ರಿ ರಸ್ತೆಗೆ ಅನುದಾನ ಬಿಡುಗಡೆಗೊಂಡಿಲ್ಲ ಎಂದರು. ನೆಲ್ಯಾಡಿ-ಕಲ್ಲಚಡವು ರಸ್ತೆಯ ನೆಲ್ಯಾಡಿ ಬಲ್ಯ ಎಂಬಲ್ಲಿ ಸೇತುವೆ ನಿರ್ಮಾಣಕ್ಕೆ ಪರಿಶೀಲನೆ ನಡೆಸಿದ್ದು ಅಂದಾಜುಪಟ್ಟಿ ತಯಾರಿಸಲಾಗಿದೆ ಎಂದು ಸಿಕ್ವೇರಾ ತಿಳಿಸಿದರು. ಪಡುಬೆಟ್ಟು ದಲಿತ ಕಾಲೋನಿ ರಸ್ತೆ ಕಾಂಕ್ರಿಟೀಕರಣ, ಪಡುಬೆಟ್ಟು ಸ್ಮಶಾನಕ್ಕೆ ಜಾಗ ಮಂಜೂರು, ಅಂಗನವಾಡಿ ಕೇಂದ್ರಗಳ ಗಡಿ ಗುರುತು, ಜಾಗದ ಪ್ಲಾಟಿಂಗ್, ಶಾಲಾ ಮಕ್ಕಳಿಗೆ ಅನುಕೂಲವಾಗುವಂತೆ ನೆಲ್ಯಾಡಿಯಿಂದ ಪುತ್ತೂರಿಗೆ ಬೆಳಗ್ಗಿನ ಸಮಯ ಸರಕಾರಿ ಬಸ್ಸಿನ ಓಡಾಟ, ನೆಲ್ಯಾಡಿಯಿಂದ ಕಡಬಕ್ಕೆ ಸರಕಾರಿ ಬಸ್ಸು ಓಡಾಟ ಸೇರಿದಂತೆ ವಿವಿಧ ಬೇಡಿಕೆಗಳನ್ನು ಗ್ರಾಮಸ್ಥರು ಸಲ್ಲಿಸಿದರು. ಸಭೆಯಲ್ಲಿ ಗ್ರಾ.ಪಂ.ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮಸ್ಥರು ಉಪಸ್ಥಿತರಿದ್ದರು.


ನೆಲ್ಯಾಡಿ ಹೋಬಳಿ ಕೇಂದ್ರಕ್ಕೆ ಮನವಿ:
ಕಡಬ ತಾಲೂಕು ರಚನೆಯಾಗಿರುವ ಹಿನ್ನೆಲೆಯಲ್ಲಿ ನೆಲ್ಯಾಡಿಯನ್ನು ಹೋಬಳಿ ಕೇಂದ್ರ ಮಾಡಬೇಕೆಂದು ಸೀತಾರಾಮ ಗೌಡ ಕಾನಮನೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಉಪತಹಶೀಲ್ದಾರ್ ಮನೋಹರ್‌ರವರು, ಒಂದೂವರೇ ವರ್ಷದ ಹಿಂದೆಯೇ ನೆಲ್ಯಾಡಿಯನ್ನು ಹೋಬಳಿ ಕೇಂದ್ರ ಮಾಡುವ ಸಂಬಂಧ ಗ್ರಾಮಗಳ ವಿಂಗಡನೆ, ನಕ್ಷೆ ಮಾಡಿ ಜಿಲ್ಲಾಧಿಕಾರಿಗಳಿಗೆ ಕಳಿಸಲಾಗಿದೆ. ಅಲ್ಲಿಂದ ಈ ಪ್ರಸ್ತಾವನೆ ಸರಕಾರಕ್ಕೆ ಸಲ್ಲಿಕೆಯಾಗಿದೆ. ಸರಕಾರದಿಂದ ಅನುಮತಿ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು. ನೆಲ್ಯಾಡಿ ಹೋಬಳಿ ಕೇಂದ್ರ ಮಾಡುವಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಮನವಿ ಮಾಡಿದರು.

LEAVE A REPLY

Please enter your comment!
Please enter your name here