ಇನ್‌ಫ್ಲೂಯೆಂಜಾ ಜ್ವರ ಹೆಚ್ಚಳ ಎಚ್ಚರ ವಹಿಸಲು ಆರೋಗ್ಯ ಇಲಾಖೆ ಸೂಚನೆ

0

ಬೆಂಗಳೂರು: ರಾಜಸ್ಥಾನ, ಗುಜರಾತ್ ಸೇರಿ ವಿವಿಧ ರಾಜ್ಯಗಳಲ್ಲಿ ಹೆಚ್ಚಳವಾಗಿರುವ ಇನ್‌ಫ್ಲೂಯೆಂಜಾ ಜ್ವರ, ರಾಜ್ಯದಲ್ಲಿಯೂ ಹೆಚ್ಚುವ ಸಾಧ್ಯತೆಯಿದೆ.ಆದ್ದರಿಂದ ಈ ಜ್ವರ ತಡೆಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು ಎಂದು ಆರೋಗ್ಯ ಇಲಾಖೆ ಸೂಚಿಸಿದೆ.


ಈ ಬಗ್ಗೆ ಸುತ್ತೋಲೆ ಹೊರಡಿಸಲಾಗಿದೆ.ಇನ್‌ಫ್ಲೂಯೆಂಜಾ ಚಿಕಿತ್ಸೆಗೆ ಉತ್ತಮ ಆಯ್ಕೆಯಾಗಿರುವ `ಒಸಲ್ಟಾಮಿವಿರ್ ಆಂಟಿ-ವೈರಲ್’ ಅನ್ನು ಅಗತ್ಯ ಔಷಧಗಳ ಪಟ್ಟಿಗೆ ಸೇರಿಸಲಾಗಿದೆ. ಇದು ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಲಭ್ಯವಿರುತ್ತದೆ.ಐಸಿಎಂಆರ್ ಪ್ರಯೋಗಾಲಯಗಳ ದತ್ತಾಂಶ ವಿಶ್ಲೇಷಣೆಯಿಂದ ಕರ್ನಾಟಕದಲ್ಲೂ ಈ ಸೋಂಕು ಪ್ರಕರಣಗಳು ವ್ಯಾಪಿಸಿಕೊಳ್ಳುತ್ತಿರುವುದು ತಿಳಿದು ಬಂದಿದೆ ಎಂದು ಇಲಾಖೆ ಹೇಳಿದೆ.


ಋತುಮಾನದ ಫ್ಲೂ ಜ್ವರವು ಸಾಂಕ್ರಾಮಿಕ ರೋಗವಾಗಿದ್ದು, ಜ್ವರ ಇರುವ ವ್ಯಕ್ತಿ ಕೆಮ್ಮಿದಾಗ ಹಾಗೂ ಸೀನಿದಾಗ ಹೊರಹೊಮ್ಮುವ ತುಂತುರು ಹನಿಗಳ ಸಂಪರ್ಕದಿಂದ ಒಬ್ಬರಿಂದ ಒಬ್ಬರಿಗೆ ಸೋಂಕು ಹರಡುತ್ತದೆ. ಸ್ವಯಂ ನಿಯಂತ್ರಣಕ್ಕೆ ಬರುವ ಈ ಸಾಂಕ್ರಾಮಿಕ ರೋಗವು ೫-೭ ದಿನಗಳವರೆಗೆ ಕಾಡಲಿದೆ.ಕೆಲವರಿಗೆ ಆಸ್ಪತ್ರೆಗೆ ದಾಖಲಾಗಬೇಕಾದ ಅವಶ್ಯಕತೆ ಬರಬಹುದು. ಹಾಗಾಗಿ, ನವಜಾತ ಶಿಶುಗಳು, ವೃದ್ಧರು, ಗರ್ಭಿಣಿಯರು, ರೋಗ ನಿರೋಧಕ ಶಕ್ತಿ ಕುಂಠಿತಗೊಂಡವರು ಸೇರಿ ಕೆಲ ವರ್ಗದವರು ಎಚ್ಚರಿಕೆಯಿಂದ ಇರಬೇಕು ಎಂದು ಇಲಾಖೆ ತಿಳಿಸಿದೆ.


ಜ್ವರ, ಚಳಿ, ಆಲಸ್ಯ, ಹಸಿವಾಗದಿರುವಿಕೆ, ಮೈ-ಕೈನೋವು, ವಾಕರಿಕೆ, ಸೀನುವಿಕೆ, ಬಹುದಿನಗಳ ಒಣಕೆಮ್ಮು ಹಾಗೂ ಹಠಾತ್ ಅಸ್ವಸ್ಥತೆಗೊಳಗಾಗುವುದು ಈ ರೋಗದ ಸಾಮಾನ್ಯ ಲಕ್ಷಣಗಳಾಗಿವೆ. ಹೆಚ್ಚಿನ ಔಷಧ ತೆಗೆದುಕೊಳ್ಳುತ್ತಿರುವವರಿಗೆ ಈ ಲಕ್ಷಣಗಳು ೩ ವಾರಗಳವರೆಗೂ ಕಾಣಿಸಿಕೊಳ್ಳಬಹುದು ಎಂದು ಇಲಾಖೆ ಹೇಳಿದೆ.

LEAVE A REPLY

Please enter your comment!
Please enter your name here