ಕಡಬ: ಅರಣ್ಯ, ಪಿಡಬ್ಲ್ಯೂಡಿ, ಪಂಚಾಯತ್ ರಾಜ್, ಕೃಷಿ ಸೇರಿದಂತೆ ಪ್ರಮುಖ ಇಲಾಖಾಧಿಕಾರಿಗಳ ಗೈರು ಹಾಜರಿ ಹಿನ್ನಲೆಯಲ್ಲಿ ಕಡ್ಯ ಕೊಣಾಜೆ ಗ್ರಾಮಸಭೆಯನ್ನು ಮುಂದೂಡಲಾಗಿದೆ.
ಗ್ರಾಮ ಸಭೆಯು ಗ್ರಾ.ಪಂ. ಅಧ್ಯಕ್ಷ ಶಿವಪ್ಪ ಗೌಡರವರ ಅಧ್ಯಕ್ಷತೆಯಲ್ಲಿ ಕೊಣಾಜೆ ಶ್ರೀ ದುರ್ಗಾಂಬಿಕಾ ಸಭಾ ಭವನದಲ್ಲಿ ಪ್ರಾರಂಭವಾಗಿತ್ತು. ಕಡಬ ಮೆಸ್ಕಾಂ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸಜಿಕುಮಾರ್ ಅವರು ಚರ್ಚಾ ನಿಯಂತ್ರಣಾಧಿಕಾರಿಯಾಗಿದ್ದರು. 11 ಗಂಟೆಗೆ ಆರಂಭವಾಗಬೇಕಿದ್ದ ಗ್ರಾಮಸಭೆ ತಡವಾಗಿ ಪ್ರಾರಂಭವಾದ ಕೂಡಲೇ, ಗ್ರಾಮಸ್ಥರು ಮಾತನಾಡಿ ಪ್ರಮುಖ ಇಲಾಖಾಧಿಕಾರಿಗಳು ಗೈರು ಹಾಜರಾಗಿದ್ದಾರೆ, ಪ್ರಮುಖವಾಗಿ ಅರಣ್ಯ ಇಲಾಖಾ ಅಧಿಕಾರಿಗಳು ಗೈರು ಹಾಜರಾಗಿದ್ದಾರೆ.
ಅಧಿಕಾರಿಗಳು ಸಭೆಗೆ ಬರದಿದ್ದರೆ ನಾವು ಗ್ರಾಮ ಸಭೆ ನಡೆಸುವ ಅಗತ್ಯ ಇಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ನೋಡೆಲ್ ಅಧಿಕಾರಿಯವರು ಗ್ರಾಮಸಭೆ ಮುಂದೂಡಲಾಗಿದೆ ಎಂದು ಪ್ರಕಟಿಸಿದರು. ಗ್ರಾ.ಪಂ. ಅಭಿವೃದ್ದಿ ಅಧಿಕಾರಿ ಪದ್ಮನಾಭ, ಪಂಚಾಯತ್ ಉಪಾಧ್ಯಕ್ಷೆ ರುಕ್ಮುಣಿ, ಸದಸ್ಯರಾದ ನವೀನ್ ಎಂ., ಸರೋಜಿನಿ. ಮೈತ್ರಿ.ಜಿ. ಉಪಸ್ಥಿತರಿದ್ದರು. ಸಭೆಗೆ ಪೋಲಿಸ್, ಕಂದಾಯ, ಶಿಕ್ಷಣ, ಮೆಸ್ಕಾಂ, ಸಮಾಜ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ದಿ ಅಧಿಕಾರಿ ಪದ್ಮನಾಭ ಅವರು ಸ್ವಾಗತಿಸಿದರು.