ಕುಂತೂರುಪದವು ಹಾ.ಉ.ಸಹಕಾರಿ ಸಂಘದ ನೂತನ ಕಟ್ಟಡ ‘ಕುಮಾರಧಾರ’, ಸಾಂದ್ರ ಶೀತಲೀಕರಣ ಘಟಕ ಉದ್ಘಾಟನೆ

0

ಹಾಲು ಉತ್ಪಾದನೆ ಕುಂಠಿತ: ಕೆ.ಪಿ.ಸುಚರಿತ ಶೆಟ್ಟಿ

ಉತ್ಪಾದನೆ ಹೆಚ್ಚಳಕ್ಕೆ ಕ್ರಮ: ಎಸ್.ಬಿ.ಜಯರಾಮ ರೈ

ಹಸು,ಹೈನುಗಾರರ ನಡುವೆ ಅವಿನಾನುಭವ ಸಂಬಂಧ: ಅರ್ಕಜೆ

ಹೈನುಗಾರಿಕೆ ಇದ್ದಲ್ಲಿ ಡೈವೋರ್ಸ್ ಇಲ್ಲ: ನಾರಾಯಣ ಪ್ರಕಾಶ್

ಹೈನುಗಾರಿಕೆಯಿಂದ ಆರ್ಥಿಕ ಬಲ: ಸವಿನ ಎನ್.ಶೆಟ್ಟಿ

ಸದಸ್ಯರ ಸಹಕಾರದಿಂದ ಸಂಘದ ಬೆಳವಣಿಗೆ: ಸೋಮಪ್ಪ ಗೌಡ

ಪೆರಾಬೆ: ಕಡಬ ತಾಲೂಕಿನ ಕುಂತೂರುಪದವು ಹಾಲು ಉತ್ಪಾದಕರ ಸಹಕಾರಿ ಸಂಘದ ನೂತನ ಕಟ್ಟಡ ಕುಮಾರಧಾರ, ಸಾಂದ್ರ ಶೀತಲೀಕರಣ ಘಟಕ, ಗೋದಾಮು ಕೊಠಡಿ, ಸಭಾಂಗಣ ಹಾಗೂ ನೂತನ ಜನರೇಟರ್ ಉದ್ಘಾಟನೆ ಮಾ.20ರಂದು ಬೆಳಿಗ್ಗೆ ನಡೆಯಿತು.


ದ.ಕ.ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟ, ಮಂಗಳೂರು ಇದರ ಅಧ್ಯಕ್ಷರಾದ ಕೆ.ಪಿ.ಸುಚರಿತ ಶೆಟ್ಟಿಯವರು ನೂತನ ಕಟ್ಟಡ ಉದ್ಘಾಟಿಸಿದರು. ಬಳಿಕ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ದ.ಕ.ಜಿಲ್ಲಾ ಹಾಲು ಒಕ್ಕೂಟಕ್ಕೆ ಪ್ರತಿದಿನ ೪.೯೦ ಲಕ್ಷ ಲೀ.ಹಾಲಿನ ಅವಶ್ಯಕತೆ ಇದೆ. ಆದರೆ ಈಗಿನ ಪ್ರತಿಕೂಲ ಪರಿಣಾಮದಿಂದಾಗಿ ಪ್ರತಿದಿನ ೪.೨೭ ಲಕ್ಷ ಲೀಟರ್ ಹಾಲು ಮಾತ್ರ ಉತ್ಪಾದನೆಯಾಗುತ್ತಿದೆ. ಹಾಲಿನ ಉತ್ಪಾದನೆಯಲ್ಲಿ ಕುಂಠಿತಗೊಂಡಿದೆ. ಇದರ ಹೆಚ್ಚಳಕ್ಕೆ ತಾಂತ್ರಿಕತೆ ಸೇರಿದಂತೆ ಕೆಲವೊಂದು ವೈಜ್ಞಾನಿಕ ಕ್ರಮ ಬಳಕೆಗೆ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಹೇಳಿದರು.

ಹಾಲು ಉತ್ಪಾದನೆ ಪವಿತ್ರ ಕ್ಷೇತ್ರವಾಗಿದೆ. ಈಗಿನ ಪ್ರತಿಕೂಲ ಪರಿಸ್ಥಿತಿ ಮೆಟ್ಟಿ ನಿಲ್ಲುವ ಶಕ್ತಿ ಒಕ್ಕೂಟಕ್ಕೆ ಇದೆ. ದ.ಕ.ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟವು ಆಡಳಿತ, ಹಾಲು ಉತ್ಪಾದನೆಯಲ್ಲಿ ದೇಶದಲ್ಲಿಯೇ ಹೆಸರು ಪಡೆದಿದೆ. ಇದಕ್ಕೆಲ್ಲಾ ಹೈನುಗಾರರು, ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಯವರ ಪ್ರೋತ್ಸಾಹವೇ ಕಾರಣ. ಈಗ ಹೈನುಗಾರಿಕೆ ಕ್ಷೇತ್ರ ಸಮೃದ್ಧವಾಗಿ ಬೆಳೆದಿದೆ. ಯುವಶಕ್ತಿ ಹೈನುಗಾರಿಕೆಯಲ್ಲಿ ತೊಡಗಿಕೊಳ್ಳಬೇಕೆಂದು ಕೆ.ಪಿ.ಸುಚರಿತ ಶೆಟ್ಟಿ ಹೇಳಿದರು.


ಉತ್ಪಾದನೆ ಹೆಚ್ಚಳಕ್ಕೆ ಕ್ರಮ:
ನಾಮಫಲಕ ಅನಾವರಣಗೊಳಿಸಿದ ದ.ಕ.ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು ಇದರ ಉಪಾಧ್ಯಕ್ಷ ಎಸ್.ಬಿ.ಜಯರಾಮ ರೈ ಬಳಜ್ಜರವರು ಮಾತನಾಡಿ, ೧೯೮೬ರಲ್ಲಿ ದ.ಕ.ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟ ಆರಂಭಗೊಂಡಿದೆ. ಈಗ ಒಕ್ಕೂಟದಡಿಯಲ್ಲಿ ೨೦೩ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ಸೇರಿ ಒಟ್ಟು ೭೩೫ ಸಂಘಗಳಿವೆ. ೧.೪೭ ಲಕ್ಷ ಸದಸ್ಯರಿದ್ದಾರೆ. ಪುತ್ತೂರು ತಾಲೂಕಿನಲ್ಲಿ ೨೧ ಸಂಘಗಳಲ್ಲಿ ಬಿಎಂಸಿ ಆಗಿದೆ. ಇನ್ನೊಂದು ಬಿಎಂಸಿ ಆದಲ್ಲಿ ಪುತ್ತೂರು ಕ್ಯಾನ್‌ಲೆಸ್ ಆಗಲಿದೆ. ಬೆಳ್ತಂಗಡಿ, ಸುಳ್ಯ ಈಗಾಗಲೇ ಕ್ಯಾನ್‌ಲೆಸ್ ಆಗಿವೆ. ಬಂಟ್ವಾಳ ತಾಲೂಕಿನಲ್ಲಿ ೨ ಬಿಎಂಸಿ ಆಗಬೇಕಾಗಿದೆ ಎಂದರು. ಹಸುಗಳಿಗೆ ಚರ್ಮಗಂಟು ರೋಗ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಹಾಲು ಉತ್ಪಾದನೆ ಕಡಿಮೆಯಾಗಿದೆ. ಇದರ ಹೆಚ್ಚಳಕ್ಕೆ ಕಾರ್ಯಕ್ರಮ ಹಾಕಿಕೊಂಡಿದ್ದೇವೆ ಎಂದ ಎಸ್.ಬಿ.ಜಯರಾಮ ರೈಯವರು, ಹೈನುಗಾರಿಕೆಗೆ ಸರಕಾರವೂ ಪ್ರೋತ್ಸಾಹ ನೀಡುತ್ತಿದೆ. ಈ ನಿಟ್ಟಿನಲ್ಲಿ ಕ್ಷೀರ ಅಭಿವೃದ್ಧಿ ಬ್ಯಾಂಕ್ ಸ್ಥಾಪನೆ ಮಾಡಲಿದೆ. ಡಿಸಿಸಿ ಬ್ಯಾಂಕ್‌ನಿಂದಲೂ ೪ ಹಸು ಖರೀದಿಗೆ ೨ ಲಕ್ಷ ರೂ.,ತನಕ ಸಾಲ ನೀಡುವ ಯೋಜನೆ ಇದ್ದು ಹೈನುಗಾರರೂ ಇದರ ಬಳಕೆ ಮಾಡಿಕೊಳ್ಳುವಂತೆ ಹೇಳಿದರು.


ಹಸು, ಹೈನುಗಾರರ ನಡುವೆ ಅವಿನಾನುಭವ ಸಂಬಂಧ:
ಗೋದಾಮು ಕೊಠಡಿ ಉದ್ಘಾಟಿಸಿದ ದ.ಕ.ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು ಇದರ ನಿರ್ದೇಶಕ ಪದ್ಮನಾಭ ಶೆಟ್ಟಿ ಅರ್ಕಜೆಯವರು ಮಾತನಾಡಿ, ಉಪಕುಸುಬು ಆಗಿದ್ದ ಬೀಡಿ ಉದ್ಯಮ ಕ್ಷೀಣಗೊಂಡ ಬಳಿಕ ಹೆಚ್ಚಿನ ಮಹಿಳೆಯರು ಹೈನುಗಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಹಸು ಹಾಗೂ ಹೈನುಗಾರರ ನಡುವೆ ಅವಿನಾನುಭವ ಸಂಬಂಧವಿದೆ. ಹಾಲು ಉತ್ಪಾದನೆ ಹೆಚ್ಚಳಕ್ಕೆ ಹಸಿರು ಹುಲ್ಲು ಉತ್ಪಾದನೆಗೆ ಪ್ರೋತ್ಸಾಹ ನೀಡುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದರು.


ಹೈನುಗಾರಿಕೆ ಇದ್ದಲ್ಲಿ ಡೈವೋರ್ಸ್ ಇಲ್ಲ:
ಸಭಾಂಗಣ ಉದ್ಘಾಟಿಸಿದ ದ.ಕ.ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು ಇದರ ನಿರ್ದೇಶಕ ನಾರಾಯಣ ಪ್ರಕಾಶ್ ಕೆ.,ರವರು ಮಾತನಾಡಿ, ಹೈನುಗಾರಿಕೆ ಇರುವಲ್ಲಿ ತಾಳ್ಮೆ ಇದೆ. ಮನಸ್ಸು ಶುದ್ಧಿಯಾಗಿರುತ್ತದೆ. ಪತಿ, ಪತ್ನಿಯೂ ಜೊತೆಯಾಗಿ ಕೆಲಸ ಮಾಡುವುದರಿಂದ ಅವರ ಸಂಬಂಧ ಗಟ್ಟಿಯಾಗಿರುತ್ತದೆ. ಇಂತಹ ಮನೆಗಳಲ್ಲಿ ಡೈವೋರ್ಸ್ ಪ್ರಕರಣಗಳೂ ಇಲ್ಲ ಎಂದರು. ಹೈನುಗಾರಿಕೆ ಅವಿಭಾಜ್ಯ ಅಂಗವಾಗಿದೆ. ಆದ್ದರಿಂದ ಪ್ರತಿ ಮನೆಯಲ್ಲೂ ಕನಿಷ್ಠ ೧ ಹಸುವಾದರೂ ಇರಬೇಕು. ಇದರಿಂದ ಮಣ್ಣು, ಭೂಮಿಯೂ ಫಲವತ್ತಾಗುತ್ತದೆ. ಮಾನಸಿಕ ಆರೋಗ್ಯವೂ ಹೆಚ್ಚಾಗುತ್ತದೆ ಎಂದರು.


ಹೈನುಗಾರಿಕೆಯಿಂದ ಆರ್ಥಿಕ ಬಲ:
ನೂತನ ಜನರೇಟರ್ ಉದ್ಘಾಟಿಸಿ ಮಾತನಾಡಿದ ದ.ಕ.ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು ಇದರ ನಿರ್ದೇಶಕಿ ಸವಿತ ಎನ್.ಶೆಟ್ಟಿ ಅವರು, ಹೈನುಗಾರಿಕೆಯಿಂದ ನಷ್ಟ ಇಲ್ಲ. ಇದು ಕುಟುಂಬಕ್ಕೆ ಆರ್ಥಿಕವಾಗಿ ಬಲತುಂಬುತ್ತದೆ. ಹೈನುಗಾರಿಕೆ ವೃತ್ತಿಯಲ್ಲಿ ಮಕ್ಕಳನ್ನೂ ತೊಡಗಿಸಿಕೊಳ್ಳಬೇಕು. ಇದರಿಂದ ಅವರಿಗೆ ಆತ್ಮಶಕ್ತಿ ಸಿಗುತ್ತದೆ. ಕುಂತೂರುಪದವು ಹಾಲು ಉತ್ಪಾದಕರ ಸಹಕಾರ ಸಂಘವು ಮುಂದಿನ ದಿನಗಳಲ್ಲಿ ದಿನವೊಂದಕ್ಕೆ ೧೫೦೦ ಲೀ.ನಷ್ಟು ಹಾಲು ಉತ್ಪಾದನೆ ಮಾಡಬೇಕು. ಈ ಮೂಲಕ ಈ ಭಾಗದ ಹೈನುಗಾರರು ತಮ್ಮ ಸಂಘಕ್ಕೂ, ಒಕ್ಕೂಟಕ್ಕೂ ಬಲ ತುಂಬಬೇಕೆಂದು ಹೇಳಿದರು.


ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಎ.ಸೋಮಪ್ಪ ಗೌಡ ಎರ್ಮಾಳ ಮಾತನಾಡಿ, ೩೮ ವರ್ಷದ ಹಿಂದೆ ೪ ಲೀ.ಹಾಲು ಸಂಗ್ರಹಣೆಯೊಂದಿಗೆ ಆರಂಭಗೊಂಡ ಕುಂತೂರುಪದವು ಹಾಲು ಉತ್ಪಾದಕರ ಸಹಕಾರ ಸಂಘ ಈಗ ಅಂದಾಜು ೧ ಸಾವಿರ ಲೀ.ಹಾಲು ಉತ್ಪಾದನೆಯ ಹಂತಕ್ಕೆ ಬೆಳೆದು ನಿಂತಿದೆ. ಇದಕ್ಕೆಲ್ಲಾ ಸಂಘದ ಸದಸ್ಯರೇ ಮೂಲ ಕಾರಣ ಆಗಿದ್ದಾರೆ. ಈಗ ಸಂಘಕ್ಕೆ ಸುಸಜ್ಜಿತ ಕಟ್ಟಡ, ಬಿಎಂಸಿ ಘಟಕ, ಸಭಾಂಗಣ ಮಾಡಲಾಗಿದೆ. ಸಭಾಂಗಣಕ್ಕೆ ಶಾಸಕರಿಂದ ಅನುದಾನದ ಭರವಸೆ ದೊರೆತಿದೆ. ಇದಕ್ಕೆ ಜಿ.ಪಂ.ಮಾಜಿ ಸದಸ್ಯೆ ಆಶಾತಿಮ್ಮಪ್ಪ ಗೌಡರವರ ಸಹಕಾರ ದೊರೆತಿದೆ. ಸಂಘ ಇನ್ನಷ್ಟೂ ಎತ್ತರಕ್ಕೆ ಬೆಳೆಯಲು ಸಂಘದ ಸದಸ್ಯರು ಮುಂದೆಯೂ ಸಹಕಾರ ನೀಡಬೇಕೆಂದು ಹೇಳಿದರು.


ಪೆರಾಬೆ ಗ್ರಾ.ಪಂ.ಅಧ್ಯಕ್ಷ ಮೋಹನ್‌ದಾಸ್ ರೈ ಪೆರಾರಿಗುತ್ತು, ದ.ಕ.ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು ಇದರ ಉಪವ್ಯವಸ್ಥಾಪಕ ಡಾ. ಡಿ.ಆರ್.ಸತೀಶ್ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ನೀಲಯ್ಯ ಗೌಡರವರು ವರದಿ ಮಂಡಿಸಿದರು. ಕಟ್ಟಡ ಸಮಿತಿ ಅಧ್ಯಕ್ಷ, ಸಂಘದ ಉಪಾಧ್ಯಕ್ಷರೂ ಆದ ವಸಂತ ಕೆ.,ಸ್ವಾಗತಿಸಿ, ನಿರ್ದೇಶಕ ಪದ್ಮನಾಭ ಗೌಡ ಬಿ.ವಂದಿಸಿದರು. ಶೀನಪ್ಪ ಗೌಡ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕರಾದ ಎ.ಚಂದ್ರಶೇಖರ, ದಿನಕರ ಭಟ್, ಕೇಶವ ಕೆ., ಪುರುಷೋತ್ತಮ ಬಿ., ಎ.ರಾಮಚಂದ್ರ ಗೌಡ, ಶ್ರೀಮತಿ ವಿಜಯ, ಶ್ರೀಮತಿ ಶಶಿಕಲಾ, ಹಾಲು ಪರೀಕ್ಷಕ ಶ್ರೇಯಸ್ ಎಂ., ಕೃ.ಗ.ಕಾರ್ಯಕರ್ತ ಕೆ.ಮಂಜಪ್ಪ ಸಹಕರಿಸಿದರು. ದ.ಕ.ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು ಇದರ ವ್ಯವಸ್ಥಾಪಕ ನಿರ್ದೇಶಕ ಡಿ.ಅಶೋಕ್, ವಿಸ್ತರಣಾಧಿಕಾರಿ ಆದಿತ್ಯ ಚಿದ್ಗಲ್, ಕುಂತೂರುಪದವು ಹಾಲು ಉತ್ಪಾದಕರ ಸಹಕಾರ ಸಂಘದ ಸ್ಥಾಪಕಾಧ್ಯಕ್ಷ ವಿಶ್ವೇಶ್ವರ ಭಟ್, ಮಾಜಿ ಅಧ್ಯಕ್ಷರುಗಳು, ಮಾಜಿ ನಿರ್ದೇಶಕರುಗಳು, ನೆರೆಯ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರುಗಳು, ಕಾರ್ಯದರ್ಶಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಒಕ್ಕೂಟದಿಂದ ಉಚಿತವಾಗಿ ಲಸ್ಸಿ ವಿತರಿಸಲಾಯಿತು. ಮಧ್ಯಾಹ್ನ ಸಹಭೋಜನ ನಡೆಯಿತು.


ಬೆಲೆ ಹೆಚ್ಚಳಕ್ಕೆ ಒತ್ತಾಯಿಸಿ ಹಕ್ಕೋತ್ತಾಯ:
ಬೇರೆ ರಾಜ್ಯಗಳಿಗೆ ಹೋಲಿಸಿದಲ್ಲಿ ಕರ್ನಾಟಕದಲ್ಲಿ ಹಾಲು ಉತ್ಪಾದಕರಿಗೆ ಪ್ರತಿ ಲೀ.ಹಾಲಿಗೆ ಅತೀ ಕಡಿಮೆ ಬೆಲೆ ಸಿಗುತ್ತದೆ. ಆದ್ದರಿಂದ ಬೆಲೆ ಹೆಚ್ಚಳಕ್ಕೆ ಒತ್ತಾಯಿಸಿ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆದು ಹೊಸ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಮೇ ತಿಂಗಳಿನಲ್ಲಿ ಮಂಗಳೂರಿನಲ್ಲಿ ಬೃಹತ್ ಹಕ್ಕೋತ್ತಾಯ ಸಭೆ ನಡೆಸಲಾಗುವುದು. ಈ ಹೋರಾಟದಲ್ಲಿ ದ.ಕ.ಜಿಲ್ಲೆಯ ೭೦ ಸಾವಿರ ಹಾಲು ಉತ್ಪಾದಕ ಸದಸ್ಯರೂ ಭಾಗವಹಿಸಬೇಕೆಂದು ಒಕ್ಕೂಟದ ನಿರ್ದೇಶಕ ನಾರಾಯನ ಪ್ರಕಾಶ್ ಕೆ.ಹೇಳಿದರು. ದ.ಕ.ಜಿಲ್ಲಾ ಹಾಲು ಒಕ್ಕೂಟದಿಂದ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಬಿಎಂಸಿ ಘಟಕ ಸ್ಥಾಪನೆಗೆ ಈಗ ದೊಡ್ಡ ಪ್ರಮಾಣದಲ್ಲಿ ಆರ್ಥಿಕ ನೆರವು ನೀಡಲಾಗುತ್ತಿದೆ. ದ.ಕ.ಜಿಲ್ಲಾ ಹಾಲು ಒಕ್ಕೂಟವನ್ನು ವಿಭಜಿಸುವ ಸಂಬಂಧ ಸರ್ವಾನುಮತದ ನಿರ್ಣಯ ಕೈಗೊಂಡು ಕೆಎಂಎಫ್‌ಗೆ ಕಳುಹಿಸಲಾಗಿದೆ ಎಂದು ಒಕ್ಕೂಟದ ನಿರ್ದೇಶಕ ನಾರಾಯಣ ಪ್ರಕಾಶ್ ಕೆ.ಹೇಳಿದರು.

ಸನ್ಮಾನ:
ಮಾಜಿ ಸೈನಿಕ ಅಚಲ್ ಎಂ.ಜಿ., ನಿವೃತ್ತ ಹಿರಿಯ ಪಶುವೈದ್ಯ ಪರೀಕ್ಷಕ ಅಶೋಕ್ ಕೊಯಿಲ ಹಾಗೂ ಗಾರೆ ಮೇಸ್ತ್ರಿ ಕೃಷ್ಣಪ್ಪ ಗೌಡ ಅವರಿಗೆ ಹಾರಾರ್ಪಣೆ, ಶಾಲು, ಫಲತಾಂಬೂಲ,ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಶೀನಪ್ಪ ಗೌಡ, ನೀಲಯ್ಯ ಗೌಡ ಅವರು ಸನ್ಮಾನಿತರನ್ನು ಪರಿಚಯಿಸಿದರು.

ಸಂತಾಪ:
ಅಸೌಖ್ಯದಿಂದ ಮಾ.18ರಂದು ನಿಧನರಾದ ಕುಂತೂರುಪದವು ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಕತ್ರಿನಾ ವಿ.ಎಕ್ಸ್.ಅವರ ಆತ್ಮಕ್ಕೆ ಚಿರಶಾಂತಿ ಕೋರಿ ಸಭೆಯ ಕೊನೆಯಲ್ಲಿ 1 ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.

LEAVE A REPLY

Please enter your comment!
Please enter your name here