ಎಲ್ಲರನ್ನೂ ಸಮಾನರಾಗಿ ಕಾಣುವುದು ಕಾಂಗ್ರೆಸ್ ಸಿದ್ಧಾಂತ: ಡಾ. ರಾಜಾರಾಮ್ ಕೆ.ಬಿ.
ಉಪ್ಪಿನಂಗಡಿ: ಧರ್ಮ ಧರ್ಮಗಳ ನಡುವೆ ಒಡಕು ಮೂಡಿಸಿ, ಸೌಹಾರ್ದದ ಸಮಾಜವನ್ನು ವಿಭಜನೆ ನಡೆಸುವುದು ಬಿಜೆಪಿಯ ಸಿದ್ಧಾಂತವಾದರೆ, ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಪ್ರಜಾಪ್ರಭುತ್ವದಡಿಯಲ್ಲಿ ಎಲ್ಲರನ್ನೂ ಸಮಾನರಾಗಿ ಕಾಣುವುದು ಕಾಂಗ್ರೆಸ್ ಸಿದ್ಧಾಂತವಾಗಿದೆ ಎಂದು ವಿಟ್ಲ- ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ್ ಕೆ.ಬಿ. ತಿಳಿಸಿದರು.
ಇಲ್ಲಿನ ೩೪ ನೆಕ್ಕಿಲಾಡಿಯಲ್ಲಿ ನೂತನ ಕಾಂಗ್ರೆಸ್ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿಯು ಒಂದು ಸುಳ್ಳನ್ನು ನೂರು ಬಾರಿ ಹೇಳುವ ಮೂಲಕ ಅದನ್ನು ಸತ್ಯ ಅಂತ ಸಮಾಜದೆದುರು ಬಿಂಬಿಸುತ್ತದೆ. ಅದನ್ನು ನಂಬಿ ಜನತೆ ಮೋಸ ಹೋಗಬಾರದು. ಉಳುವವನೇ ಭೂಮಿಯ ಒಡೆಯ ಎಂಬ ಪರಿಕಲ್ಪನೆಯಲ್ಲಿ ಭೂ ಮಸೂದೆ ಕಾಯಿದೆಯನ್ನು ಜಾರಿಗೆ ತರುವ ಮೂಲಕ ಭೂಮಿ ಇಲ್ಲದವರಿಗೆ ಭೂಮಿ ನೀಡಿರುವುದು ಕಾಂಗ್ರೆಸ್ ಸರಕಾರ. ಈ ಬಾರಿಯ ಕಾಂಗ್ರೆಸ್‌ನ ಪ್ರಣಾಳಿಕೆಗಳನ್ನು, ಗ್ಯಾರಂಟಿ ಕಾರ್ಡ್‌ಗಳನ್ನು ಮನೆ- ಮನೆಗೆ ತಲುಪಿಸುವ ಕಾರ್ಯ ಕಾರ್ಯಕರ್ತರಿಂದಾಗಬೇಕು. ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ನೆಮ್ಮದಿಯ, ಸೌಹಾರ್ದತೆಯ ಜೀವನ ಎಲ್ಲರದ್ದೂ ಆಗಲು ಸಾಧ್ಯವಿದೆ. ಆದ್ದರಿಂದ ಕಾಂಗ್ರೆಸ್ ಕಾರ್ಯಕರ್ತರು ಅಧಿಕಾರಕ್ಕಾಗಿ ಅಲ್ಲ. ಪಕ್ಷಕ್ಕಾಗಿ ಹಾಗೂ ಪಕ್ಷದ ಸಿದ್ಧಾಂತಕ್ಕಾಗಿ ಒಂದಾಗಿ ದುಡಿಯಬೇಕು. ಪಕ್ಷ ತೀರ್ಮಾನಿಸಿದ ಅಭ್ಯರ್ಥಿಯನ್ನು ಒಗ್ಗಟ್ಟಾಗಿ ಬೆಂಬಲಿಸಬೇಕು ಎಂದರು.
ಕಾಂಗ್ರೆಸ್ ಮುಖಂಡರಾದ ಕೃಷ್ಣರಾವ್ ಆರ್ತಿಲ, ಅಶ್ರಫ್ ಬಸ್ತಿಕ್ಕಾರ್, ವಿಟ್ಲ- ಪುತ್ತೂರು ಬ್ಲಾಕ್‌ನ ಯುವ ಕಾಂಗ್ರೆಸ್ ಅಧ್ಯಕ್ಷ ಫಾರೂಕ್ ಪೆರ್ನೆ ಮಾತನಾಡಿದರು. ವೇದಿಕೆಯಲ್ಲಿ ೩೪ ನೆಕ್ಕಿಲಾಡಿ ವಲಯಾಧ್ಯಕ್ಷೆ ಅನಿ ಮಿನೇಜಸ್, ರಾಜ್ಯ ಇಂಟಕ್‌ನ ನಝೀರ್ ಮಠ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಆದಂ ಕೊಪ್ಪಳ, ವಲಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕಲಂದರ್ ಶಾಫಿ, ವಲಯ ಕಾಂಗ್ರೆಸ್ ಉಪಾಧ್ಯಕ್ಷರಾದ ಇಕ್ಬಾಲ್ ಪಾಂಡೇಲ್, ಕಾಂಗ್ರೆಸ್ ಮುಖಂಡರಾದ ಹನೀಫ್ ಕೆನರಾ, ಶೇಖಬ್ಬ ಹಾಜಿ, ಅಬ್ದುಲ್ ಮಜೀದ್ ರಾಮನಗರ, ಅಬ್ದುಲ್ ಖಾದರ್ ಸಂತಕಟ್ಟೆ, ಅಭಿಷೇಕ್ ಬೆಳ್ಳಿಪ್ಪಾಡಿ, ಪುತ್ತುಮೋನು ಕರ್ವೇಲ್, ನವಾಝ್ ಕರ್ವೇಲ್, ಅಬ್ದುಲ್ ಖಾದರ್ ಆದರ್ಶನಗರ, ಇಸಾಕ್, ಇಸ್ಮಾಯೀಲ್ ಮೇದರಬೆಟ್ಟು, ಶರೀಕ್ ಅರಫಾ , ಜಬ್ಬಾರ್ ನಿನ್ನಿಕಲ್ಲ್ ಮತ್ತಿತರರು ಉಪಸ್ಥಿತರಿದ್ದರು.
ವಿಟ್ಲ, ಉಪ್ಪಿನಂಗಡಿ ಬ್ಲಾಕ್ ಕಾಂಗ್ರೇಸ್ ವಕ್ತಾರ ಅಬ್ದುಲ್ ರೆಹಮಾನ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು