ಹೊಸ ವಾಹನಗಳಿಗೆ ನಂಬರ್ ಪ್ಲೇಟ್ ಅಳವಡಿಸಿದ ಬಳಿಕವೇ ಖರೀದಿದಾರರಿಗೆ ನೀಡಲು ಆದೇಶ

0

ಬೆಂಂಗಳೂರು: ಹೊಸ ವಾಹನಗಳನ್ನು ಖರೀದಿಸಿದವರಿಗೆ ಅತಿ ಸುರಕ್ಷಿತ ನೋಂದಣಿ ಫಲಕವನ್ನು (ಎಚ್‌ಎಸ್‌ಆರ್‌ಪಿ) ಅಳವಡಿಸಿದ ಬಳಿಕವೇ ವಾಹನ ಮಾರಾಟ ಮಳಿಗೆಯವರು ವಾಹನಗಳನ್ನು ಹಸ್ತಾಂತರ ಮಾಡಬೇಕು ಎಂದು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.

‘ವಾಹನಕ್ಕೆ ನೋಂದಣಿ ಫಲಕ ಅಳವಡಿಸದ ಹೊರತು ಅಂತಹ ವಾಹನಗಳನ್ನು ಖರೀದಿದಾರರಿಗೆ ಹಸ್ತಾಂತರ ಮಾಡಬಾರದು ಎಂದು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು ಮಾ.3ರಂದು ಹೊರಡಿಸಿರುವ ಆದೇಶದಲ್ಲಿ ಸೂಚಿಸಿದ್ದಾರೆ. ಈಗ ಆನ್‌ಲೈನ್‌ನಲ್ಲಿ ಶುಲ್ಕ ಪಾವತಿಸಿ ತಕ್ಷಣವೇ ವಾಹನದ ನೋಂದಣಿ ಸಂಖ್ಯೆ ಪಡೆಯುವುದಕ್ಕೆ ಅವಕಾಶವಿದೆ. 1988 ರ ಮೋಟಾರು ವಾಹನಗಳ ಕಾಯ್ದೆಯ ಸೆಕ್ಷನ್ 41 (6)ರ ಪ್ರಕಾರ ವಾಹನಗಳ ಮಾರಾಟ ಮಳಿಗೆಗಳು, ನೋಂದಣಿ ಸಂಖ್ಯೆ ಪಡೆದು ವಾಹನಕ್ಕೆ ಅಳವಡಿಸಿದ ಬಳಿಕವೇ ಅದನ್ನು ಖರೀದಿದಾರರಿಗೆ ಹಸ್ತಾಂತರ ಮಾಡಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.

ಇದುವರೆಗೆ ವಾಹನ ಮಾರಾಟ ಮಳಿಗೆಯವರು ಹೊಸ ವಾಹನವನ್ನು ಮಾರಾಟ ಮಾಡಿದ ಬಳಿಕ, ಅದನ್ನು ನೋಂದಾಯಿಸಲು ಪ್ರಾದೇಶಿಕ ಸಾರಿಗೆ ಅಧಿಕಾರಿಯ ಕಚೇರಿಗೆ ಅರ್ಜಿ ಸಲ್ಲಿಸುತ್ತಿದ್ದರು. ನೋಂದಣಿ ಸಂಖ್ಯೆ ಪಡೆದು, ಅದನ್ನು ವಾಹನದಲ್ಲಿ ಅಳವಡಿಸುವುದಕ್ಕೆ ಸಮಯ ತಗಲುತ್ತಿತ್ತು. ಇನ್ನು ಮುಂದೆ ನೋಂದಣಿ ಸಂಖ್ಯೆ ಇಲ್ಲದೇ ವಾಹನವನ್ನು ರಸ್ತೆಗೆ ಇಳಿಸುವುದಕ್ಕೆ ಅವಕಾಶ ಇಲ್ಲ. 2019ರ ಏಪ್ರಿಲ್ 1ರ ನಂತರ ತಯಾರಿಸಲಾದ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ ಅಳವಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

LEAVE A REPLY

Please enter your comment!
Please enter your name here