ಕುವೆಚ್ಚಾರು: ಸೇತುವೆ ನಿರ್ಮಾಣಕ್ಕೆ ಶಿಲಾನ್ಯಾಸ

0

ಡಬಲ್ ಇಂಜಿನ್ ಸರಕಾರದಿಂದ ಮಾತ್ರ ಅಭಿವೃದ್ಧಿ ಸಾಧ್ಯ: ಮಠಂದೂರು

ರಾಮಕುಂಜ: ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರದ ಆಡಳಿತವಿದೆ. ಈ ಡಬಲ್ ಇಂಜಿನ್ ಸರಕಾರದಿಂದ ಕಳೆದ 4 ವರ್ಷದಲ್ಲಿ ಸಾಕಷ್ಟೂ ಅಭಿವೃದ್ಧಿ ಕೆಲಸ ಆಗಿದೆ. ಬಹುವರ್ಷದ ಬೇಡಿಕೆಯಾಗಿದ್ದ ಪುತ್ತೂರು ರೈಲ್ವೆ ನಿಲ್ದಾಣ ರಸ್ತೆ ಕಾಂಕ್ರಿಟೀಕರಣವೂ ಡಬಲ್ ಇಂಜಿನ್ ಸರಕಾರ ಇದ್ದುದ್ದರಿಂದಲೇ ಸಾಧ್ಯವಾಯಿತು. ಪ್ರಧಾನಿ ನರೇಂದ್ರ ಮೋದಿಯವರು ದೇಶದ ಪ್ರತಿಯೊಬ್ಬರಿಗೂ ಭ್ರಷ್ಟಾಚಾರ ಮುಕ್ತವಾಗಿ ಸೌಲಭ್ಯ ತಲುಪಬೇಕೆಂಬ ನಿಟ್ಟಿನಲ್ಲಿ ಕಳೆದ 8 ವರ್ಷದಿಂದ ದಿನದಲ್ಲಿ 18 ಗಂಟೆ ಕೆಲಸ ಮಾಡುತ್ತಿದ್ದಾರೆ. ಎಲ್ಲಾ ರೈತರಿಗೂ ಕೇಂದ್ರದ ಸವಲತ್ತು ಸಿಗಬೇಕೆಂದು ಹತ್ತಾರು ಯೋಜನೆಯನ್ನೂ ಜಾರಿಗೆ ತಂದಿದ್ದಾರೆ. ಪ್ರಧಾನಿಯವರ ಈ ಕಾರ್ಯಕ್ರಮವನ್ನು ಶಾಸಕನಾಗಿ, ಜನಸೇವಕನಾಗಿ ಮುಟ್ಟಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದೇನೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.


ಅವರು ಬಜತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಿಜಾನ-ನಡ್ಪ ರಸ್ತೆಯ ಕುವೆಚ್ಚಾರು ಎಂಬಲ್ಲಿ 1.20 ಕೋಟಿ ರೂ.,ಅನುದಾನದಲ್ಲಿ ನಡೆಯಲಿರುವ ಸೇತುವೆ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿ ಬಳಿಕ ನಡೆದ ಸಮಾರಂಭದಲ್ಲಿ ಮಾತನಾಡಿದರು. ಬಜತ್ತೂರಿನ ಜನತೆ ಆಶೀರ್ವಾದ ಮಾಡಿರುವುದರಿಂದಲೇ ಬಜತ್ತೂರು ತಾ.ಪಂ.ಸದಸ್ಯನಾಗಿ, ಉಪ್ಪಿನಂಗಡಿ ಕ್ಷೇತ್ರದಿಂದ ಎಪಿಎಂಸಿ ಸದಸ್ಯನಾಗಿ, ಪುತ್ತೂರು ಕ್ಷೇತ್ರದ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಕಟ್ಟ ಕಡೆಯ ವ್ಯಕ್ತಿಯೂ ಸಂತೃಪ್ತನಾಗಿ ಆತನಿಗೆ ಸರಕಾರ, ಜನಪ್ರತಿನಿಧಿಯ ಮೇಲೆ ಭರವಸೆ ಮೂಡಬೇಕು. ಸರಕಾರದ ಯೋಜನೆಗಳೂ ಪ್ರಾಮಾಣಿಕವಾಗಿ ಮುಟ್ಟಬೇಕು. ಮುಂದಿನ 25 ವರ್ಷಕ್ಕೆ ಬೇಕಾದ ಯೋಜನೆ ಹಾಕಿಕೊಂಡು ಅಭಿವೃದ್ಧಿ ಕೆಲಸ ಮಾಡಲಾಗುತ್ತಿದೆ. ಜಲಜೀವನ್ ಮಿಷನ್ ಯೋಜನೆಯಡಿ 68 ಕೋಟಿ ರೂ.,ಕುಡಿಯುವ ನೀರಿಗೆ ಕೇಂದ್ರ ಸರಕಾರ ನೀಡಿದೆ. ದಿನದ 24 ಗಂಟೆಯೂ 55 ಲೀ. ನೀರು ಕೊಡಬೇಕು ಎಂಬುದು ಸರಕಾರದ ಉದ್ದೇಶವಾಗಿದೆ. ಪೆರಿಯಡ್ಕ-ಕಾಂಚನ ರಸ್ತೆ ಜಿಲ್ಲಾ ಮುಖ್ಯರಸ್ತೆಯಾಗಿ ಮೇಲ್ದರ್ಜೆಗೇರಿಸಲಾಗಿದೆ. ಪುತ್ತೂರು ಕ್ಷೇತ್ರದಲ್ಲಿ 115 ಕಿ.ಮೀ.ಗ್ರಾಮೀಣ ರಸ್ತೆಗಳನ್ನು ಪಿಡಬ್ಲ್ಯುಡಿ ರಸ್ತೆಯಾಗಿ ಮೇಲ್ದರ್ಜೆಗೇರಿಸಲಾಗಿದೆ ಎಂದು ಸಂಜೀವ ಮಠಂದೂರು ಹೇಳಿದರು.


ಬಿದಿರಾಡಿಯಲ್ಲಿ ಅಂಬೇಡ್ಕರ್ ವಸತಿ ಶಾಲೆ:
ರಾಜ್ಯ ಸರಕಾರ ಬಜೆಟ್‌ನಲ್ಲಿ 100 ಅಂಬೇಡ್ಕರ್ ವಸತಿ ಶಾಲೆ ಘೋಷಣೆ ಮಾಡಿದ್ದು ಇದರಲ್ಲಿ ಕಾಂಚನ ಬಿದಿರಾಡಿಯಲ್ಲಿ ನಿರ್ಮಾಣಗೊಳ್ಳಲಿರುವ ಅಂಬೇಡ್ಕರ್ ವಸತಿ ಶಾಲೆಯೂ ಸೇರಿದೆ. ಬಿದಿರಾಡಿಯಲ್ಲಿ 27 ಕೋಟಿ ರೂ., ವೆಚ್ಚದಲ್ಲಿ ಅಂಬೇಡ್ಕರ್ ವಸತಿ ಶಾಲೆ ನಿರ್ಮಾಣಗೊಳ್ಳಲಿದೆ. ವಸತಿ ಶಾಲೆ ಸಂಪರ್ಕಿಸುವ ರಸ್ತೆಗಳನ್ನೂ ಮೇಲ್ದರ್ಜೆಗೇರಿಸಲಾಗಿದೆ ಎಂದು ಸಂಜೀವ ಮಠಂದೂರು ಹೇಳಿದರು.


ಉದ್ಘಾಟನೆ ಭಾಗ್ಯವೂ ಮಠಂದೂರು ಅವರಿಗೆ ಸಿಗಲಿ: ಶಿವರಾಮ ಕಾರಂತ:
ಗ್ರಾಮಸ್ಥರ ಪರವಾಗಿ ಅನಿಸಿಕೆ ವ್ಯಕ್ತಪಡಿಸಿದ ಕಾಂಚನ ನಡ್ಪ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಟ್ರಸ್ಟ್‌ನ ಉಪಾಧ್ಯಕ್ಷ ಶಿವರಾಮ ಕಾರಂತ ಉರಾಬೆ ಅವರು, ಕಾಂಚನ ನಡ್ಪ ದೇವಸ್ಥಾನ ಸಂಪರ್ಕಿಸುವ ರಸ್ತೆ ಕಾಂಕ್ರಿಟೀಕರಣ ಹಾಗೂ ತಡೆಗೋಡೆಗೆ ಅನುದಾನ ಒದಗಿಸಿಕೊಟ್ಟ ಶಾಸಕರಿಗೆ ಹಾಗೂ ಇದಕ್ಕೆ ಶ್ರಮಿಸಿದ ತಾ.ಪಂ.ಮಾಜಿ ಸದಸ್ಯ ಮುಕುಂದ ಬಜತ್ತೂರು ಅವರಿಗೆ ದೇವಸ್ಥಾನದ ಪರವಾಗಿ ಅಭಿನಂದನೆಗಳು. ಸಂಜೀವ ಮಠಂದೂರು ಅವರು ಶಾಸಕರಾಗಿರುವುದು ಗ್ರಾಮಕ್ಕೆ ಹೆಮ್ಮೆ ತಂದಿದೆ. ಬಜತ್ತೂರು ಗ್ರಾಮಕ್ಕೆ 32 ಕೋಟಿ ರೂ.,ಅನುದಾನ ಒದಗಿಸಿಕೊಟ್ಟಿದ್ದಾರೆ. ಬಹುದಿನಗಳ ಬೇಡಿಕೆಯಾಗಿದ್ದ ಪುತ್ತೂರು ರೈಲ್ವೆ ನಿಲ್ದಾಣ ಸಂಪರ್ಕ ರಸ್ತೆ ಕಾಂಕ್ರಿಟೀಕರಣಗೊಳಿಸುವ ಮೂಲಕ ಜನಮನ್ನಣೆಗಳಿಸಿದ್ದಾರೆ. ಕುವೆಚ್ಚಾರು ಸೇತುವೆ ನಿರ್ಮಾಣಕ್ಕೆ ಅನುದಾನ ಒದಗಿಸಿಕೊಟ್ಟು ಶಿಲಾನ್ಯಾಸ ನೆರವೇರಿಸಿರುವ ಸಂಜೀವ ಮಠಂದೂರು ಅವರಿಗೆ ಮುಂದೆಯೂ ಶಾಸಕರಾಗಿ, ಸಚಿವರಾಗಿ ಬಂದು ಸೇತುವೆ ಉದ್ಘಾಟಿಸುವ ಭಾಗ್ಯವನ್ನು ನಡ್ಪ ಶ್ರೀ ವಿಷ್ಣುಮೂರ್ತಿ ದೇವರು ಅನುಗ್ರಹಿಸಲಿ ಎಂದರು.


ಸೇತುವೆ ನಿರ್ಮಾಣಕ್ಕೆ ಸಂಪೂರ್ಣ ಸಹಕಾರ: ರಾಧಾಕೃಷ್ಣ ಕೆ.ಎಸ್.:
ರಾಧಾಕೃಷ್ಣ ಕೆ.ಎಸ್.ಕುವೆಚ್ಚಾರು ಮಾತನಾಡಿ, ಸಂಜೀವ ಮಠಂದೂರು ಅವರು ದಕ್ಷ, ಪ್ರಾಮಾಣಿಕ ಆಡಳಿತಗಾರ, 35 ವರ್ಷಗಳಿಂದ ಅವರನ್ನು ಗಮನಿಸುತ್ತಿದ್ದೇವೆ. ಪ್ರತಿ ಮನೆ ಮನೆಗೂ ಭೇಟಿ ನೀಡಿ ಸವಲತ್ತು ನೀಡಿದ್ದಾರೆ. ಡಿ.ವಿ.ಸದಾನಂದ ಗೌಡರು ಶಾಸಕರಾಗಿದ್ದ ವೇಳೆಯಲ್ಲಿ ಕುವೆಚ್ಚಾರುಗೆ ಸೇತುವೆ ಹಾಗೂ ರಸ್ತೆ ಡಾಮರೀಕರಣಕ್ಕೆ ನಬಾರ್ಡ್‌ನಲ್ಲಿ 38 ಲಕ್ಷ ರೂ.,ಅನುದಾನ ಒದಗಿಸಿಕೊಡುವಲ್ಲಿ ಸಂಜೀವ ಮಠಂದೂರು ಕಾರಣರಾಗಿದ್ದಾರೆ. ಇದೀಗ ಅವರೇ ಶಾಸಕರಾಗಿ ಕುವೆಚ್ಚಾರುನಲ್ಲಿ ಸಂಪರ್ಕ ಸೇತುವೆಗೆ 1.20 ಕೋಟಿ ರೂ.ಅನುದಾನ ಮಂಜೂರುಗೊಳಿಸಿ ಬಹುದಿನದ ಬೇಡಿಕೆ ಈಡೇರಿಸಿದ್ದಾರೆ. ಗುತ್ತಿಗೆದಾರರು ಮಳೆಗಾಲದೊಳಗೆ ಈ ಸೇತುವೆ ನಿರ್ಮಾಣ ಪೂರ್ತಿಗೊಳಿಸಬೇಕು. ಇದಕ್ಕೆ ಬೇಕಾದ ಸಹಕಾರ ನೀಡುವುದಾಗಿ ಹೇಳಿದರು.


ಪುತ್ತೂರಿಗೆ ಸುವರ್ಣ ಯುಗ: ಮುಕುಂದ :
ಸ್ವಾಗತಿಸಿ ಮಾತನಾಡಿದ ತಾ.ಪಂ.ಮಾಜಿ ಸದಸ್ಯ, ಬಜತ್ತೂರು ಶಕ್ತಿಕೇಂದ್ರದ ಪ್ರಮುಖ್ ಮುಕುಂದ ಗೌಡ ಬಜತ್ತೂರುರವರು, ಕಿಜಾನ-ನಡ್ಪ ರಸ್ತೆಯ ಕುವೆಚ್ಚಾರು ಎಂಬಲ್ಲಿ ಸೇತುವೆ ನಿರ್ಮಾಣಕ್ಕೆ ಡಿ.ವಿ.ಸದಾನಂದ ಗೌಡರವರು ಶಾಸಕರಾಗಿದ್ದ ವೇಳೆಯೇ ಚುನಾವಣೆ ಸಂದರ್ಭದಲ್ಲಿ ಹೋರಾಟ ನಡೆದಿತ್ತು. ಆ ಸಂದರ್ಭದಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಸಂಜೀವ ಮಠಂದೂರುರವರು ಕುವೆಚ್ಚಾರುನಲ್ಲಿ ಸೇತುವೆ ನಿರ್ಮಾಣದ ಭರವಸೆ ನೀಡಿದ್ದರು. ಚುನಾವಣೆ ನಡೆದ 6 ತಿಂಗಳಿನಲ್ಲಿಯೇ ನಬಾರ್ಡ್‌ನಲ್ಲಿ 38 ಲಕ್ಷ ರೂ.ಅನುದಾನ ಮಂಜೂರುಗೊಳಿಸಿ ಇಲ್ಲಿನ ರಸ್ತೆ ಡಾಮರೀಕರಣ ಹಾಗೂ ಕಿರುಸೇತುವೆ ನಿರ್ಮಾಣ ಆಗಿದೆ. ಇದೀಗ ಸಂಜೀವ ಮಠಂದೂರುರವರೇ ಶಾಸಕರಾಗಿ ಕುವೆಚ್ಚಾರುನಲ್ಲಿ ಸೇತುವೆ ನಿರ್ಮಾಣಕ್ಕೆ 1.20 ಕೋಟಿ ರೂ.,ಅನುದಾನ ಒದಗಿಸಿಕೊಟ್ಟು ಜನರ ಬಹುದಿನಗಳ ಬೇಡಿಕೆ ಈಡೇರಿಸಿದ್ದಾರೆ ಎಂದರು. ಸಂಜೀವ ಮಠಂದೂರು ಅವರು ಶಾಸಕರಾಗಿ ಮೊದಲ 1 ವರ್ಷ ವಿಪಕ್ಷದಲ್ಲಿದ್ದರು. ಬಳಿಕ 2 ವರ್ಷ ಕೋವಿಡ್‌ನಿಂದಾಗಿ ರಾಜ್ಯದಲ್ಲಿ ಆಡಳಿತ ವ್ಯವಸ್ಥೆಯೇ ಸ್ಥಗಿತಗೊಂಡಿತ್ತು. ಬಳಿಕದ 2 ವರ್ಷದ ಅವಧಿಯಲ್ಲಿ ಬಜತ್ತೂರು ಗ್ರಾಮವೊಂದಕ್ಕೆ 32.50 ಕೋಟಿ ರೂ.ಅನುದಾನ ನೀಡಿದ್ದಾರೆ. ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ರೂ.1250 ಕೋಟಿಗೂ ಹೆಚ್ಚು ಅನುದಾನ ಬಂದಿದ್ದು ಕ್ಷೇತ್ರದಾದ್ಯಂತ ಅಭಿವೃದ್ಧಿ ಕೆಲಸ ಆಗಿದೆ. ಪುತ್ತೂರಿಗೆ ಇದೊಂದು ಸುವರ್ಣಯುಗ ಆಗಿದೆ ಎಂದು ಮುಕುಂದ ಗೌಡ ಹೇಳಿದರು.


ಬಜತ್ತೂರು ಗ್ರಾ.ಪಂ.ಅಧ್ಯಕ್ಷೆ ಪ್ರೇಮಾ, ಉಪಾಧ್ಯಕ್ಷೆ ಸ್ಮಿತಾ ಪುಯಿಲ, ಸದಸ್ಯ ಮಾಧವ ಪೂಜಾರಿ ಒರುಂಬೋಡಿ, ರಾಮಕುಂಜ ಗ್ರಾ.ಪಂ.ಉಪಾಧ್ಯಕ್ಷ ಪ್ರಶಾಂತ ಆರ್.ಕೆ., ಇಂಜಿನಿಯರ್ ಕನಿಷ್ಕ, ಗುತ್ತಿಗೆದಾರ ಕೃಷ್ಣಮೂರ್ತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗ್ರಾಮಸ್ಥರಾದ ಉಮೇಶ್ ಕಾಂಚನ, ಪುಷ್ಪಾ ಪುಯಿಲ, ಶಶಿಕಲಾ ಪದಕ, ಕೇಶವ ಗುಡ್ಡೆತ್ತಡ್ಕ, ಸುರೇಶ್ ಬಿದಿರಾಡಿ, ಗಂಗಾಧರ ಪಿ.ಎನ್., ವಾಸುದಡ್ಡು, ಜನಾರ್ದನ ಶೇಡಿ, ಯಾದವ ನೆಕ್ಕರೆ ಅತಿಥಿಗಳಿಗೆ ಕೇಸರಿ ಶಾಲು, ಪುಷ್ಪಾ ನೀಡಿ ಗೌರವಿಸಿದರು. ವಸಂತ ಗೌಡ ಪಿಜಕ್ಕಳ ವಂದಿಸಿದರು. ಬಜತ್ತೂರು ಗ್ರಾ.ಪಂ.ಸದಸ್ಯ ಸಂತೋಷ್ ಪಂರ್ದಾಜೆ ಕಾರ್ಯಕ್ರಮ ನಿರೂಪಿಸಿದರು. ಬಿಜೆಪಿ ಮುಖಂಡ ಉಮೇಶ್ ಶೆಣೈ ಉಪ್ಪಿನಂಗಡಿ, ಯಶವಂತ ಗುಂಡ್ಯ, ಬಜತ್ತೂರು ಗ್ರಾ.ಪಂ.ಸದಸ್ಯರಾದ ಉಮೇಶ್ ಓಡ್ರಪಾಲು, ಮಾಜಿ ಸದಸ್ಯ ರಾಜೇಶ್ ಪಿಜಕ್ಕಳ, ಕಾಂಚನ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಹರಿಶ್ಚಂದ್ರ ಗೌಡ ಮುದ್ಯ, ಕಾರ್ಯದರ್ಶಿ ಚಂದ್ರಶೇಖರ, ಸತೀಶ್ ಕೆ.ಎಸ್.ದುರ್ಗಾಶ್ರೀ, ಸಿದ್ದಪ್ಪ ಗೌಡ ನಡ್ಪ, ಶಿವರಾಮ ಗೌಡ ಬಜತ್ತೂರು, ರವೀಂದ್ರ ಆನ, ಲಕ್ಷ್ಮೀಶ ಅಂಬುಡೇಲು ಸೇರಿದಂತೆ ಹಲವು ಮಂದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

220 ಬೂತ್‌ಗೂ ಸಮಾನ ಅನುದಾನ:
ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 220 ಬೂತ್‌ಗಳಿಗೂ ಸಮಾನ ಅನುದಾನ ನೀಡಲಾಗಿದೆ. ಅಲ್ಪಸಂಖ್ಯಾತರಿರಲಿ, ಬಹುಸಂಖ್ಯಾತರೂ ಇರಲಿ. ಸಂಜೀವ ಮಠಂದೂರಿಗೆ ಓಟು ಹಾಕದವರೂ ಇರಲಿ. ಎಲ್ಲಾ ಗ್ರಾಮಗಳಿಗೂ ಸಾಮಾಜಿಕ ನ್ಯಾಯ, ಸಮಾನತೆಯ ನೆಲೆಯಲ್ಲಿ ಸರಕಾರದ ಅನುದಾನ ಹಂಚಿಕೆ ಮಾಡಲಾಗಿದೆ. ಆರಂಭದ 1 ವರ್ಷ 2 ತಿಂಗಳು ವಿಪಕ್ಷದಲ್ಲಿದ್ದೆ. ಆ ಬಳಿಕ 2 ವರ್ಷ ಕೋವಿಡ್ ಬಂತು. ಬಳಿಕದ ಅವಧಿಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಒಟ್ಟು 1250 ಕೋಟಿ ರೂ.,ಅನುದಾನ ಒದಗಿಸಲಾಗಿದೆ. 5 ವರ್ಷದಲ್ಲಿ ಅಭಿವೃದ್ಧಿ ಕೆಲಸಗಳಿಗೆ ಜನರು ಸಹಕಾರ ನೀಡಿದ್ದಾರೆ. ಮತ್ತೆ ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಬೇಕು. ಮತ್ತೊಮ್ಮೆ ಊರಿನ ಜನರ ಸೇವೆ ಮಾಡುವ ಅವಕಾಶ ಬರಬೇಕು.
-ಸಂಜೀವ ಮಠಂದೂರು, ಶಾಸಕರು


ಬಜತ್ತೂರು ಗ್ರಾಮಕ್ಕೆ ಅಚ್ಛೇದಿನ್
ಈ ಹಿಂದೆ ಬಜತ್ತೂರು ಗ್ರಾಮಕ್ಕೆ ಹೆಚ್ಚು ಅಂದರೆ 3 ಕೋಟಿ ರೂ.,ಅನುದಾನ ಬಂದಿರಬಹುದು. ಸಂಜೀವ ಮಠಂದೂರು ಅವರು ಶಾಸಕರಾದ ಬಳಿಕ ಬಜತ್ತೂರು ಗ್ರಾಮವೊಂದಕ್ಕೆ 32.50 ಕೋಟಿ ರೂ.,ಅನುದಾನ ಬಂದಿದೆ. ಇದು ಬಜತ್ತೂರು ಗ್ರಾಮದ ಇತಿಹಾಸದಲ್ಲಿಯೇ ಶಾಸಕರೊಬ್ಬರು ತನ್ನ ಅವಧಿಯಲ್ಲಿ ನೀಡಿದ ಅತೀ
ಹೆಚ್ಚಿನ ಅನುದಾನವಾಗಿದೆ. ಇದೊಂದು ಸುವರ್ಣ ಸಂದರ್ಭ, ನಿಜವಾಗಿಯೂ ಬಜತ್ತೂರು ಗ್ರಾಮಕ್ಕೆ ಅಚ್ಚೇದಿನ್ ಆಗಿದೆ.
-ಮುಕುಂದ ಬಜತ್ತೂರು, ಬಿಜೆಪಿ ಶಕ್ತಿಕೇಂದ್ರ ಪ್ರಮುಖ್


ಸನ್ಮಾನ:
ಅನುದಾನ ಒದಗಿಸಿಕೊಟ್ಟ ಶಾಸಕ ಸಂಜೀವ ಮಠಂದೂರು ಅವರನ್ನು ಗ್ರಾಮಸ್ಥರ ಪರವಾಗಿ ನಡ್ಪ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಟ್ರಸ್ಟ್‌ನ ಅಧ್ಯಕ್ಷ ಶ್ರೀಧರ ಗೌಡ ನಡ್ಪ, ದಾಮೋದರ ಗೌಡ ಶೇಡಿ, ರಾಧಾಕೃಷ್ಣ ಕುವೆಚ್ಚಾರು ಅವರು ಶಾಲು ಹಾಕಿ, ಫಲತಾಂಬೂಲ ನೀಡಿ ಸನ್ಮಾನಿಸಿ ಗೌರವಿಸಿದರು. ರಾಮಕುಂಜ ಗ್ರಾಮಸ್ಥರ ಪರವಾಗಿಯೂ ಶಾಸಕರನ್ನು ರಾಮಕುಂಜ ಗ್ರಾಮಸ್ಥರು ಸನ್ಮಾನಿಸಿದರು. ಬಜತ್ತೂರು ಗ್ರಾಮಕ್ಕೆ ಹೆಚ್ಚಿನ ಅನುದಾನ ಮಂಜೂರುಗೊಳಿಸುವಲ್ಲಿ ಶ್ರಮಿಸಿದ ತಾ.ಪಂ.ಮಾಜಿ ಸದಸ್ಯ, ಬಿಜೆಪಿ ಬಜತ್ತೂರು ಶಕ್ತಿಕೇಂದ್ರದ ಪ್ರಮುಖ್ ಮುಕುಂದ ಗೌಡ ಬಜತ್ತೂರು ಅವರನ್ನು ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here