ನಾಳೆಯಿಂದ (ಮಾ.25) ಮಜಲುಮಾರು ಉಮಾಮಹೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಸಂಭ್ರಮ

0

ಪುತ್ತೂರು: ಸುಮಾರು 800 ವರ್ಷಗಳ ಇತಿಹಾಸವಿರುವ ನರಿಮೊಗರು ಗ್ರಾಮದ ಮುಕ್ವೆ ಮಜಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ 7 ದಿನಗಳ ಕಾಲ ನಡೆಯಲಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವ, ಪುಷ್ಪರಥ ಸಮರ್ಪಣೆ ಹಾಗೂ ಜಾತ್ರೋತ್ಸವಗಳಿಗೆ ಮಾ.25ರಂದು ಚಾಲನೆ ದೊರೆಯಲಿದೆ. ಬೆಳಿಗ್ಗೆ ಹಸಿರು ಹೊರೆಕಾಣಿಕೆ ಸಮರ್ಪಣೆ ಹಾಗೂ ಪುಷ್ಪರಥ ಆಗಮನವಾಗಲಿದೆ.

ಸಂಭ್ರಮದ ಬ್ರಹ್ಮಕಲಶೋತ್ಸವಕ್ಕೆ ದೇವಸ್ಥಾನದಲ್ಲಿ ಸಕಲ ಸಿದ್ದತೆಗಳು ಪೂರ್ಣಗೊಂಡಿದೆ. ಕಳೆದ ಹಲವು ದಿನಗಳಿಂದ ಊರ ಯುವಕರು, ಭಕ್ತಾದಿಗಳಿಂದ ಶ್ರಮದಾನದ ಮೂಲಕ ಕೆಲಸ ಕಾರ್ಯಗಳು ನಡೆಯುತ್ತಿದೆ. ಬ್ರಹ್ಮಕಲಶೋತ್ಸವದ ಸಂಭ್ರಮಕ್ಕೆ ಸಾಟಿ ಎಂಬಂತೆ ಕಾಣಿಯೂರು-ಸುಬ್ರಹ್ಮಣ್ಯ ರಸ್ತೆಯ ಮುಕ್ವೆ ಪೇಟೆಯ ಇಕ್ಕೆಲಗಳಲ್ಲಿ ಬ್ಯಾನರ್, ಬಂಟಿಂಗ್ಸ್, ಭಗವಧ್ವಜಗಳು ರಾರಾಜಿಸುತ್ತಿವೆ. ಆಕರ್ಷಕ ದ್ವಾರಗಳು, ರಸ್ತೆ ಬದಿಯಲ್ಲಿನ ಅಲಂಕಾರ ಹಾಗೂ ವಿದ್ಯುತ್ ದೀಪಗಳಿಂದ ಶೃಂಗಾರಗೊಂಡು ಭಕ್ತರ ಕೈಬೀಸಿ ಕರೆಯುವಂತಿದೆ.

ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳು ಹಾಗೂ ಬ್ರಹ್ಮಶ್ರೀ ಕೆಮ್ಮಿಂಜೆ ಲಕ್ಷ್ಮೀಶ ತಂತ್ರಿಗಳ ನೇತೃತ್ವದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ, ಪುಷ್ಪರಥ ಸಮರ್ಪಣೆ ಹಾಗೂ ಜಾತ್ರೋತ್ಸವಗಳು ನಡೆಯಲಿದೆ. ಮಾ.25ರಂದು ಸಂಜೆ ತಂತ್ರಿಗಳಿಗೆ ಹಾಗೂ ಋತ್ವಿಜರಿಗೆ ಪೂರ್ಣಕುಂಭ ಸ್ವಾಗತ ನಡೆದ ಬಳಿಕ ಬ್ರಹ್ಮಕಲಶೋತ್ಸವದ ಅಂಗವಾಗಿ ವಿವಿಧ ವೈದಿಕ, ತಾಂತ್ರಿಕ ವಿಧಿ ವಿಧಾನಗಳು ಪ್ರಾರಂಭಗೊಳ್ಳಲಿದೆ. ವಿವಿಧ ಭಜನಾ ತಂಗಳಿಂದ ಭಜನೆ, ವಿವಿಧ ಸಾಂಸ್ಕೃತಿಕ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಮೇಳೈಸಲಿದೆ.

ಮಾ.26ರಂದು ಸಂಜೆ ನಾಟ್ಯ ರಂಜಿನಿ ಕಲಾಲಯ ಮೊಟ್ಟೆತ್ತಡ್ಕ, ಭಕ್ತಕೋಡಿ ಶ್ರೀರಾಮ ಭಜನಾ ಮಂಡಳಿ, ಪುತ್ತೂರು ಶ್ರೀ ಉಳ್ಳಾಲ್ತಿ ಭಜನಾ ಮಂಡಳಿಯವರಿಂದ ಭಜನೆ, ಸಂಜೆ ವಿದುಷಿ ಪಾರ್ವತಿ ಗಣೇಶ್ ಭಟ್ ಹೊಸಮೂಲೆ ಇವರ ಶಿಷ್ಯ ಜಾಸ್ಮಿನ್ ಗಣೇಶ ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ರಾತ್ರಿ ಬಂಗಾರ್ ಕಲಾವಿದರು ಪುರುಷರಕಟ್ಟೆ ಇವರಿಂದ ‘ನಾಡ್ಂಡಲ ತಿಕ್ಕಂದ್’ ತುಳು ಹಾಸ್ಯಮಯ ನಾಟಕ ನಡೆಯಲಿದೆ.

ಮಾ.26ರಂದು ಕ್ಷೇತ್ರದಲ್ಲಿ ವಿವಿಧ ವೈದಿಕ, ತಾಂತ್ರಿಕ ವಿಧಿ ವಿಧಾನಗಳು, ಬೆಳಿಗ್ಗೆ ಯಕ್ಷಶ್ರೀ ಹವ್ಯಾಸಿ ಬಳಗದವರಿಂದ ಯಕ್ಷಗಾನ ತಾಳಮದ್ದಳೆ, ಅಪರಾಹ್ನ ಪುರುಷರಕಟ್ಟೆ ಸರಸ್ವತಿ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ ಬ್ರಹ್ಮಕಲಶೋತ್ಸವದ ಪ್ರಥಮ ದಿನದ ಧಾರ್ಮಿಕ ಸಭಾ ಕಾರ್ಯಕ್ರಮ ಸಂಜೆ ಆರ್ಟ್ ಆಫ್ ಲಿವಿಂಗ್ ಪುತ್ತೂರು ಹಾಗೂ ಶ್ರೀದುರ್ಗಾ ಭಜನಾ ಮಂಡಳಿ ಪುರುಷರಕಟ್ಟೆ ಇವರಿಂದ ಭಜನೆ, ರಾತ್ರಿ ಸಾಯಿಲಕ್ಷ್ಮೀ ಬಳಗದವರಿಂದ ಶಾಸೀಯ ಸಂಗೀತ, ಶ್ರೀಶಾರದಾ ಕಲಾ ಕೇಂದ್ರ ಪುತ್ತೂರು ಇವರಿಂದ ಭರತನಾಟ್ಯ ಮತ್ತು ಶ್ರೀನಿವಾಸ ಕಲ್ಯಾಣ ನೃತ್ಯರೂಪಕ ನಡೆಯಲಿದೆ.‌

ಮಾ.27ರಂದು ಕ್ಷೇತ್ರದಲ್ಲಿ ವಿವಿಧ ವೈದಿಕ, ತಾಂತ್ರಿಕ ವಿಧಿ ವಿಧಾನಗಳು, ಮಹಾಪೂಜೆ, ಬೆಳಿಗ್ಗೆ ಆಂಜನೇಯ ಹವ್ಯಾಸಿ ಯಕ್ಷಗಾನ ಬಳಗದವರಿಂದ ತಾಳಮದ್ದಲೆ, ಮಧ್ಯಾಹ್ನ ವಜ್ರಮಾತಾ ಭಜನಾ ಮಂಡಳಿ ಪುತ್ತೂರು, ಸಂಜೆ ಶ್ರೀವಿಷ್ಣುಮೂರ್ತಿ ಭಜನಾ ಮಂಡಳಿ ಉದಯಗಿರಿ ಹಾಗೂ ರಾತ್ರಿ ಸೇರಾಜೆ ಶ್ರೀಶಾರದಾಂಭಾ ಭಜನಾ ಮಂಡಳಿಯವರಿಂದ ಭಜನೆ, ಸಂಜೆ ನರಿಮೊಗರು ಸಾಂದೀಪನಿ ವಿದ್ಯಾಸಂಸ್ಥೆಯವರಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ವಿಠಲ್ ನಾಯಕ್ ಕಲ್ಲಡ್ಕ ಮತ್ತು ಬಳಗದವರಿಂದ ಗೀತಾ-ಸಾಹಿತ್ಯ-ಸಂಭ್ರಮ ನಡೆಯಲಿದೆ.

ಮಾಚ್ 28ರಂದು ಕ್ಷೇತ್ರದಲ್ಲಿ ತ್ರಿಕಾಲ ಪೂಜೆ, ಅನುಜ್ಞಾ ಕಲಶಾಭಿಷೇಕ, ದೀಪಾರಾಧನೆ, ಮಹಾಪೂಜೆ, ಸಂಜೆ ಉಪ್ಪಿನಂಗಡಿ ರಾಮನಗರ ಶಾರದಾ ವನಿತಾ ಭಜನಾ ಮಂಡಳಿಯವರಿಂದ ಭಜನೆ, ಪುರುಷರಕಟ್ಟೆ ಇಂದಿರಾನಗರ ವನದುರ್ಗಾಂಬಿಕಾ ಭಜನಾ ಮಂಡಳಿಯವರಿಂದ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗುರುಪ್ರಿಯ ನಾಯಕ್ ಬಳಗ ಮತ್ತು ಅರವಿಂದ ಆಚಾರ್ಯ ಮಾಣಿಲ, ಗೀತಾ ಗಂಗಾಧರ ಆಚಾರ್ಯ ಇವರಿಂದ ಭಕ್ತಿ ರಸಧಾರೆ ನಡೆಯಲಿದೆ.

ಮಾ.29ರಂದು ಮಹಾಗಣಪತಿಹೋಮ, ತತ್ವಕಲಶಪೂಜೆ, ತತ್ವಕಲಶಾಭಿಷೇಕ, ಮಂಟಪ ನಮಸ್ಕಾರ, ಬ್ರಹ್ಮಕಲಶಪೂಜೆ, ಪರಿಕಲಶಪೂಜೆ, ಸಂಜೆ ದೀಪಾರಾಧನೆ, ಅಧಿವಾಸ ಹೋಮ, ಕಲಶಾಧಿವಾಸ, ಅಧಿವಾಸ ಬಲಿ, ಮಹಾಪೂಜೆ, ಸಂಜೆ ಪುರುಷರಕಟ್ಟೆ ಶ್ರೀದೇವಿ ಭಜನಾ ಮಂಡಳಿ ಹಾಗೂ ಪುರುಷರಕಟ್ಟೆ ದಾಬೋಲಿ ಶ್ರೀಪೂರ್ಣಾನಂದ ಭಜನಾ ಮಂಡಳಿಯವರಿಂದ ಭಜನೆ, ಧಾರ್ಮಿಕ ಸಭೆ, ಪಂಚಮಿ ಸ್ವರಾಂಜಲಿಯವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಮಾ.30 ಬ್ರಹ್ಮಕಲಶ, ಪುಷ್ಪರಥ ಸಮರ್ಪಣೆ: ಬ್ರಹ್ಮಕಲಶೋತ್ಸವದಲ್ಲಿ ಮಾ.30ರಂದು ಪೂರ್ವಾಹ್ನ 108 ಕಾಯಿ ಮಹಾಗಣಪತಿಹೋಮ, ಮೀನ ಲಗ್ನದ ಶುಭಮುಹೂರ್ತದಲ್ಲಿ ದೇವರಿಗೆ ಅಷ್ಟಬಂಧಕ್ರಿಯೆ ಬ್ರಹ್ಮಕಲಶಾಭಿಷೇಕ, ಪುಷ್ಪ ರಥ ಸಮರ್ಪಣೆ ನಡೆಯಲಿದೆ. ಕಾಸರಗೋಡು ಪದ್ಮಾಂಬಿಕ ಭಜನಾ ಮಂಡಳಿಯವರಿಂದ ಭಜನೆ, ಧಾರ್ಮಿಕ ಸಭಾ ಕಾರ್ಯಕ್ರಮ, ಸಂಜೆ ಪಿ.ಕೆ ಗಣೇಶ್ ಬಳಗದವರಿಂದ ಸ್ಯಾಕ್ಸೋ-ನ್ ವಾದನ, ಮಹಾಪೂಜೆ, ಶ್ರೀದೇವರ ಬಲಿ ಹೊರಟು ಶ್ರೀಭೂತ ಬಲಿ ಉತ್ಸವ, ದೇವರಿಗೆ ಪ್ರಥಮ ಪುಷ್ಪರಥೋತ್ಸವ ವಸಂತಕಟ್ಟೆ ಪೂಜೆ ನಡೆಯಲಿದೆ.

ಮಾ.೩೧ ದರ್ಶನ ಬಲಿ, ನೇಮೋತ್ಸವ: ಮಾ.31ರಂದು ಬೆಳಿಗ್ಗೆ ಶ್ರೀದೇವರ ಬಲಿ ಹೊರಟು ಉತ್ಸವ, ಪಲ್ಲಕ್ಕಿ ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ದೈವಗಳ ಭಂಡಾರ ತೆಗೆದು ವಾರಹಿ, ರಕ್ತೇಶ್ವರಿ, ಗುಳಿಗ ದೈವಗಳಿಗೆ ನೇಮೋತ್ಸವಗಳೊಂದಿಗೆ ಸಂಪನ್ನಗೊಳ್ಳಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.

ನಾಳೆ(ಮಾ.25) ಹೊರೆಕಾಣಿಕೆ, ಪುಷ್ಪರಥ ಆಗಮನ

ಬ್ರಹ್ಮಕಲಶೋತ್ಸವದ ಅಂಗವಾಗಿ ಮಾ.25ರಂದು ಬೆಳಿಗ್ಗೆ ದೇವಾಲಯದಲ್ಲಿ ಸಾಮೂಹಿಕ ಪ್ರಾರ್ಥನೆ, ಉಗ್ರಾಣ ಮುಹೂರ್ತ ನಡೆಯಲಿದೆ. ಬಳಿಕ ಗ್ರಾಮದ ವಿವಿಧ ಭಾಗಗಳಲ್ಲಿ ಸಂಗ್ರಹಿಸಿದ ಹಸಿರು ಹೊರೆಕಾಣಿಕೆ ಸಮರ್ಪಣೆ ಹಾಗೂ ಪುಷ್ಪರಥ ಭವ್ಯ ಮೆರವಣಿಗೆಯು ನಡೆಯಲಿದೆ. ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಬಳಿಯಿಂದ ಮೆರವಣಿಗೆಗೆ ಚಾಲನೆ ದೊರೆಯಲಿದ್ದು ಮೆರವಣಿಗೆಯು ದೇವಸ್ಥಾನದ ಬಳಿಯಿಂದ ಹೊರಟು ಮುಖ್ಯರಸ್ತೆಯ ಮೂಲಕ ದರ್ಬೆ, ಕೂರ್ನಡ್ಕ, ಮರೀಲ್, ಮುಕ್ವೆ ಮೂಲಕ ಮಜಲುಮಾರು ದೇವಸ್ಥಾನಕ್ಕೆ ಆಗಮಿಸಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.

ಇಂದು ನಗರಭಜನೆ ಮಂಗಳೋತ್ಸವ, ಪಾರ್ವತಿ ಸ್ವಯಂವರ ಪೂಜೆ
ಕ್ಷೇತ್ರದ ಭಜನಾ ಮಂಡಳಿಯ ವತಿಯಿಂದ ಪ್ರತಿವರ್ಷ ನಡೆಯುವ ನಗರ ಭಜನೆಯ ಮಂಗಳೋತ್ಸವವು ಮಾ.24ರಂದು ಸಂಜೆ ನಡೆಯಲಿದೆ. ಸಂಜೆ ಉಪ್ಪಳ ಲಕ್ಷ್ಮೀಶ ತಂತ್ರಿಯವರ ಮನೆಯಿಂದ ಭಜನಾ ಮಂಗಳೋತ್ಸವದ ಮೆರವಣಿಗೆಯು ಹೊರಟು ದೇವಸ್ಥಾನಕ್ಕೆ ಆಗಮಿಸಲಿದೆ. ಬಳಿಕ ದೇವಸ್ಥಾನದಲ್ಲಿ ಭಜನಾ ಮಂಗಳೋತ್ಸವ ಹಾಗೂ ಪ್ರತಿವರ್ಷ ನಡೆಯುವ ಪಾರ್ವತಿ ಸ್ವಯಂವರ ಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here